ಸುರತ್ಕಲ್ ಟೋಲ್‍ ಗೇಟ್ ವಿರುದ್ಧ ಅಹೋರಾತ್ರಿ ಧರಣಿ ನಡೆಸುತ್ತಿರುವವರ ಮೇಲೆ ಹಲ್ಲೆಗೆ ಯತ್ನ: 6 ಮಂಗಳಮುಖಿಯರ ಬಂಧನ

0
463

ಸನ್ಮಾರ್ಗ ವಾರ್ತೆ

ಮಂಗಳೂರು: ನಗರ ಸುರತ್ಕಲ್ ಎನ್.ಐ.ಟಿ.ಕೆ. ಬಳಿ ಇರುವ ಟೋಲ್‍ ಗೇಟ್ ವಿರುದ್ಧ ಕಳೆದ ಕೆಲ ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿರುವ ಮಂಗಳೂರಿನ ಸಾಮಾಜಿಕ ಕಾರ್ಯಕರ್ತ ಆಸಿಫ್‍ ಆಪತ್ಬಾಂಧವ ಎಂಬವರ ನಿನ್ನೆ ರಾತ್ರಿ ಕೆಲವು ಮಂಗಳಮುಖಿಯರು ಹಲ್ಲೆ ನಡೆಸಿದ ಬಗ್ಗೆ ವರದಿಯಾದ ಹಿನ್ನೆಲೆಯಲ್ಲಿ ತಕ್ಷಣ ಕಾರ್ಯ ಪ್ರವೃತ್ತರಾದ ಮಂಗಳೂರು ಪೊಲೀಸರು,  ೨೪ ಗಂಟೆಗಳೊಳಗೆ ಆರು ಮಂದಿಯನ್ನು ಬಂಧಿಸಲಾಗಿದೆ.

ಬಂಧಿತ ಮಂಗಳಮುಖಿಯರನ್ನು ವಾಸವಿ ಗೌಡ(32), ಲಿಪಿಕಾ(19), ಹಿಮಾ(24), ಆದ್ಯ(22), ಮಾಯಾ(28) ಹಾಗೂ ಮೈತ್ರಿ(28 ) ಎಂದು ಗುರುತಿಸಲಾಗಿದೆ. ಈ ಸಂಬಂಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ನಿನ್ನೆ ರಾತ್ರಿ ಮೊದಲಿಗೆ ಇಬ್ಬರು ಮಂಗಳಮುಖಿಯರು ಆಗಮಿಸಿ ಹಲ್ಲೆಗೆ ಯತ್ನಿಸಿದ್ದರು. ಬಳಿಕ ಸುಮಾರು 5-6 ಮಂದಿಯಷ್ಟಿದ್ದ ಮಂಗಳಮುಖಿಯರ ತಂಡ ಆಗಮಿಸಿ ಧರಣಿ ನಿರತರನ್ನು ಅವಾಚ್ಯವಾಗಿ ನಿಂದಿಸಿ, ಅಸಭ್ಯವಾಗಿ ವರ್ತಿಸಿದ್ದಲ್ಲದೆ, ಹಲ್ಲೆಗೂ ಯತ್ನಿಸಿದೆ ಎಂದು ಆರೋಪಿಸಲಾಗಿದೆ. ಕೂಡಲೇ ಆಸಿಫ್ ಆಪತ್ಬಾಂಧವ ಮಂಗಳಮುಖಿಯರ ದುರ್ವರ್ತನೆಯನ್ನು ಫೇಸ್ ಬುಕ್ ಲೈವ್ ವೀಡಿಯೋ ಮಾಡಿದ್ದರು.

ತಂಡದಲ್ಲಿದ್ದ ಹಲವು ಮಂಗಳಮುಖಿಯರು ಬಟ್ಟೆ ಎತ್ತಿ ನರ್ತಿಸುವ ಮೂಲಕ ಅಸಭ್ಯವಾಗಿ ವರ್ತಿಸಿದ್ದರು. ಪ್ರತಿಭಟನಾ ವೇದಿಕೆಯನ್ನು ಉರುಳಿಸುತ್ತೇವೆ, ನಿಮ್ಮನ್ನು ಇಲ್ಲಿಂದ ಓಡಿಸುತ್ತೇವೆ, ಪೊಲೀಸ್ ಠಾಣೆಯಲ್ಲಿ ಕೂರುವಂತೆ ಮಾಡುತ್ತೇವೆ ಎಂದೆಲ್ಲ  ಪೊಲೀಸರ ಸಮ್ಮುಖದಲ್ಲೇ ಬೆದರಿಕೆ ಹಾಕಿದ್ದಾರೆ ಎಂದು ದೂರಲಾಗಿತ್ತು.

ಘಟನೆಯ ಬಗ್ಗೆ ಆಸಿಫ್ ಆಪದ್ಬಂಧವ ಅವರು ಇಂದು ಮುಂಜಾನೆ ಘಟನಾ ಸ್ಥಳಕ್ಕೆ ಆಗಮಿಸಿದ ಮಂಗಳೂರು ಉತ್ತರ ಸಹಾಯಕ ಪೊಲೀಸ್ ಆಯುಕ್ತರು ಮಹೇಶ್ ಕುಮಾರ್ ಹಾಗೂ ಸುರತ್ಕಲ್ ಠಾಣೆಯ ವೃತ್ತ ನಿರೀಕ್ಷಕರು ಚಂದ್ರಪ್ಪ ಅವರಿಗೆ ನೀಡಿದ ದೂರನ್ನು ಆಧರಿಸಿ ಇಂದು 6 ಮಂದಿಯನ್ನು ಬಂಧಿಸಿದ್ದಾರೆ.