ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷಗಳು “ಅಪರಾಧದ ಪಾಲುದಾರರು” ಎಂದು ಆರೋಪಿಸಿದ ಪ್ರಧಾನಿ

0
219

ಸನ್ಮಾರ್ಗ ವಾರ್ತೆ

ಚಂಡೀಗಢ: ಪಂಜಾಬ್ ಚುನಾವಣಾ ಪ್ರಚಾರ ರಾಲಿಯಲ್ಲಿ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷಗಳು “ಅಪರಾಧದ ಪಾಲುದಾರರು” ಎಂದು ಆರೋಪಿಸಿದ್ದಾರೆ.

ಎಎಪಿಯನ್ನು ಕಾಂಗ್ರೆಸ್‌ನ “ಫೋಟೋಕಾಪಿ” ಎಂದು ಕರೆದಿರುವ ಅವರು, ಅಯೋಧ್ಯೆ ದೇವಸ್ಥಾನ ಅಥವಾ ಸೇನೆಯು ಏನನ್ನಾದರೂ ಮಾಡಿದಾಗ ಈ ಎರಡು ಪಕ್ಷಗಳು ಸಂತೋಷ ಪಡಲಾರವು. ಅವರು ನಮ್ಮ ಬಳಿ ಎಲ್ಲದಕ್ಕೂ ಪುರಾವೆ ಕೇಳುತ್ತಾರೆ ಎಂದು ಸರ್ಜಿಕಲ್ ಸ್ಟ್ರೈಕ್ ಅನ್ನು ಉಲ್ಲೇಖಿಸಿ ಈ ಹೇಳಿಕೆ ನೀಡಿದ್ದಾರೆ.

ದಿಲ್ಲಿಯಲ್ಲೂ ಸರಕಾರ ರಚಿಸಲು ಎಎಪಿ, ಕಾಂಗ್ರೆಸ್‌ನ ಬೆಂಬಲವನ್ನು ಪಡೆದುಕೊಂಡಿದೆ ಎಂದು ಹೇಳಿದ ಪ್ರಧಾನಿ ಮೋದಿ “ಪಂಜಾಬ್ ನಿರ್ಧರಿಸಿದೆ. ಈ ಬಾರಿ ಖಂಡಿತವಾಗಿ ಬದಲಾವಣೆಯಾಗಲಿದೆ ಎಂದವರು ಹೇಳಿದರು.

2016ರ ಪಠಾಣ್‌ಕೋಟ್‌ ದಾಳಿಯಲ್ಲಿ ಮಡಿದ ಯೋಧರ ತ್ಯಾಗವನ್ನು ಕಾಂಗ್ರೆಸ್ ಅವಮಾನಿಸಿದೆ ಎಂದು ಪ್ರಧಾನಿ ಆರೋಪಿಸಿದ್ದಾರೆ. ದಾಳಿಗೆ ಪ್ರತಿಯಾಗಿ ನಡೆಸಿದ ಸರ್ಜಿಕಲ್ ಸ್ಟ್ರೈಕ್ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಹೊರತುಪಡಿಸಿ ದೇಶವೇ ಒಟ್ಟಾಗಿದೆ ಎಂದು ಹೇಳಿದರು.

“ಕಾಂಗ್ರೆಸ್ ಪಕ್ಷವು ಕೇಂದ್ರ ಸರಕಾರವನ್ನು ಪಂಜಾಬ್‌ನ ಜನರನ್ನು ಹಾಗೂ ನಮ್ಮ ಸೈನ್ಯವನ್ನು ಸಹ ಪ್ರಶ್ನಿಸಿದೆ. ಅವರು ಸೈನಿಕರ ತ್ಯಾಗವನ್ನು ನಿರ್ಲಕ್ಷ್ಯ ಮಾಡಿದ್ದಾರೆ” ಎಂದು ಅವರು ಹೇಳಿದರು.