ಸನ್ಮಾರ್ಗ ವಾರ್ತೆ
ಬೆಂಗಳೂರು: ಶಿವಮೊಗ್ಗ ನಗರದಲ್ಲಿ ಭಾನುವಾರ ನಡೆದ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪ್ರತ್ಯಕ್ಷ ವರದಿ ಸಾಕ್ಷಿಗಳಿಲ್ಲದೇ, ಎಫ್ ಐಆರ್ ದಾಖಲಿಸುವ ಮುನ್ನವೇ ಸಚಿವ ಈಶ್ವರಪ್ಪನವರು ಮುಸಲ್ಮಾನ ಗುಂಡಾಗಳು ಕೊಲೆ ಮಾಡಿದ್ದಾರೆ ಎಂದು ನೇರವಾಗಿ ಆರೋಪ ಮಾಡಿದ್ದು ಖಂಡನೀಯ. ಸಚಿವರ ಹೇಳಿಕೆಯಿಂದ ಕೋಮು ಸೌಹಾರ್ದಕ್ಕೆ ಧಕ್ಕೆಯಾಗಿದ್ದು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವೆಲ್ಫೇರ್ ಪಾರ್ಟಿ ರಾಜ್ಯ ಅಧ್ಯಕ್ಷ ಅಡ್ವೋಕೇಟ್ ತಾಹೇರ್ ಹುಸೇನ್ ಒತ್ತಾಯಿಸಿದ್ದಾರೆ.
ಶಿವಮೊಗ್ಗ ನಗರದಲ್ಲಿ ಯುವಕನ ಅಂತಿಮಯಾತ್ರೆ ವೇಳೆ ಕೋಮು ಘರ್ಷಣೆ ಉಂಟಾಗಿ ಹಲವರ ಮನೆ, ಅಂಗಡಿಗಳಿಗೆ ಕಲ್ಲು ತೂರಾಟ ನಡೆಸಿ ಯುವಕರ ಗುಂಪು ಧಾಂಧಲೆ ನಡೆಸಿದ್ದಾರೆ. ಅನೇಕ ವಾಹನಗಳಿಗೆ ಬೆಂಕಿಯನ್ನು ಹಚ್ಚಿ ಪುಂಡಾಟ ಮೆರೆದಿದ್ದಾರೆ. ಇದಕ್ಕೆ ಸಚಿವ ಈಶ್ವರಪ್ಪನವರೇ ನೇರ ಹೊಣೆ. ಅವರ ಹೇಳಿಕೆಯಿಂದಲೇ ಈ ದುರ್ಘಟನೆಯಾಗಿದೆ. ತಮ್ಮದೇ ಸರ್ಕಾರ ಇರುವಾಗ ಇಂತಹ ಘಟನೆಗಳು ನಡೆಯದ ಹಾಗೆ ನೋಡುವ ಬದಲು ಕೋಮು ಪ್ರಚೋದನಾತ್ಮಕ ಹೇಳಿಕೆ ನೀಡಿ ಕೋಮು ಗಲಭೆ ಮಾಡಿಸಿದ್ದು ದುರ್ದೈವ. ಈ ಕೊಲೆಯ ನಿಜವಾದ ಆರೋಪಿಗಳು ಯಾವುದೆ ಧರ್ಮದವರಾಗಲಿ ಅಂತಹವರಿಗೆ ಕಾನೂನು ಕಠಿಣವಾದ ಶಿಕ್ಷೆ ವಿಧಿಸಬೇಕಾಗಿದೆ.
ರಾಜ್ಯದಲ್ಲಿ ಮುಂದೆ ಇಂತಹ ಘಟನೆಗಳು ನಡೆಯದಂತೆ ಸರ್ಕಾರ ಕಠಿಣ ಶಿಕ್ಷೆ ವಿಧಿಸಲಿ. ಗಲಭೆಯಲ್ಲಿ ಜನರ ಆಸ್ತಿಗಳು ನಾಶವಾಗಿದ್ದು ಅಂಥವರಿಗೆ ಸರ್ಕಾರ ಪರಿಹಾರ ಹಣ ನೀಡಬೇಕು ಎಂದು ಆಗ್ರಹಿಸಿದ್ದಾರೆ.












