ಹರ್ಷ ಕೊಲೆ ಪ್ರಕರಣ: ನಿಷ್ಪಕ್ಷಪಾತ ತನಿಖೆಯ ಮೂಲಕ ಶಾಂತಿ ಸುವ್ಯವಸ್ಥೆ ಸ್ಥಾಪಿಸಲು ಮುಸ್ಲಿಮ್ ಒಕ್ಕೂಟದಿಂದ ಆಗ್ರಹ

0
412

ಮತೀಯ ಗಲಭೆ ಸೃಷ್ಟಿಸಲು ಸರಕಾರದಿಂದ ಹುನ್ನಾರ!

ಸನ್ಮಾರ್ಗ ವಾರ್ತೆ

ದಕ್ಷಿಣ ಕನ್ನಡ: ಶಿವಮೊಗ್ಗ ಜಿಲ್ಲೆಯಲ್ಲಿ ಹರ್ಷ  ಎಂಬ ಯುವಕನ ಹತ್ಯೆ ನಡೆದಿರುವುದು ಖಂಡನೀಯ. ಈ ಹತ್ಯೆಯ ಹಿಂದಿರುವ ನೈಜ ಆರೋಪಿಗಳನ್ನು ಪೊಲೀಸರು ಅತೀ ಶೀಘ್ರದಲ್ಲಿ ಬಂಧಿಸಿ ಹತ್ಯೆಯ ನೈಜ ಉದ್ದೇಶವನ್ನು ಬಹಿರಂಗ ಪಡಿಸಬೇಕು ಎಂದು ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್ ಆಗ್ರಹಿಸಿದ್ದಾರೆ.

ರಾಜ್ಯದ ಪೊಲೀಸ್ ಇಲಾಖೆ ಈ ಪ್ರಕರಣದಲ್ಲಿ ನಿಷ್ಪಕ್ಷಾತವಾಗಿ ತನಿಖೆ ನಡೆಸಿದರೆ ಮಾತ್ರ ಶಾಂತಿ ಸುವ್ಯವಸ್ಥೆಯನ್ನು ಪಾಲಿಸಲು ಮುಂದಾಗಬೇಕು. ಈ ಹತ್ಯೆಯ ಹಿಂದೆ ಪಟ್ಟ ಭದ್ರ ಹಿತಾಸಕ್ತಿಗಳ ಕೈವಾಡವಿದೆಯೆಂದು ಸಾಂದರ್ಭಿಕ ವಿಷಯಗಳು ಮತ್ತು ಹೇಳಿಕೆಗಳಿಂದ ವ್ಯಕ್ತವಾಗುತ್ತಿದೆ. ರಾಜ್ಯದಲ್ಲಿ ಈ ಹಿಂದೆ ನಡೆದ ಚುನಾವಣಾ ಪೂರ್ವ ಹತ್ಯಾ ಘಟನೆಗಳ ಇತಿಹಾಸವನ್ನು ಅವಲೋಕಿಸಿದರೆ ಈ ಹತ್ಯೆ ಪರೇಶ್ ಮೆಸ್ತಾ ಹತ್ಯೆಯನ್ನು ಹೋಲುತ್ತದೆ. ರಾಜ್ಯದ ಆಡಳಿತ ಪಕ್ಷದ ಸಚಿವರು ಈ ಹತ್ಯೆಯ ಆರೋಪವನ್ನು ತನಿಖೆಯ ಮುಂಚಿತವಾಗಿಯೇ ಪೊಲೀಸರ ಹೇಳಿಕೆಗಳನ್ನು ಮೀರಿ ಒಂದು ನಿರ್ದಿಷ್ಟ ಸಮುದಾಯದ ಗೂಂಡಾಗಳು ನಡೆಸಿದ್ದಾರೆಂದು ಹೇಳಿಕೆ ನೀಡಿರುವುದರ ಹಿಂದೆ ಮತೀಯ ಗಲಭೆ ಸೃಷ್ಟಿಸುವ ಸ್ಪಷ್ಟ ಉದ್ದೇಶ ಎದ್ದು ಕಾಣುತ್ತಿದೆ.

ರಾಜ್ಯದಲ್ಲಿ ಹಿಜಾಬ್ ನಿಷೇಧ, ಕೆಂಪು ಕೋಟೆಯ ಮೇಲೆ ಕೇಸರಿ ಧ್ವಜ ಹಾರಿಸುವಿಕೆಯ ಹೇಳಿಕೆಯಿಂದ ಸದನದಲ್ಲಿ ತೀವ್ರ ಪ್ರತಿರೋಧ, ಡಾ. ಬಿ.ಆರ್ ಅಂಬೇಡ್ಕರ್ ರವರ ಭಾವಚಿತ್ರ ತೆರವು ವಿರೋಧಿಸಿ ಬೆಂಗಳೂರಿನಲ್ಲಿ ನಡೆದ ದಲಿತ ಪ್ರತಿಭಟನೆ, ಸರ್ಕಾರದ ಆಡಳಿತ ವೈಫಲ್ಯ, ಮೇಕೆ ದಾಟು ಯೋಜನೆಗೆ ಜನಬೆಂಬಲ, ಇತ್ಯಾದಿ ವಿಷಯಗಳನ್ನು ಜನರ ಮನಸ್ಸಿನಿಂದ ಮರೆಮಾಚಲು ಮತ್ತು ಜನರ ಗಮನವನ್ನು ಇತರೆಡೆಗೆ ವಾಲಿಸಲು ಹೆಣೆದ ಷಡ್ಯಂತ್ರದ ಫಲವೆಂಬಂತೆ ಹರ್ಷ ಎಂಬ ಯುವಕನ ಹತ್ಯೆ ನಡೆದಿದೆ. ಈ ಮೂಲಕ ಗಲಭೆ ಸೃಷ್ಟಿಸಿ ಮತೀಯ ಧೃವೀಕರಣಕ್ಕೆ ಪ್ರಯತ್ನಿಸಲಾಗಿದೆ. ರಾಜ್ಯದ ಗೃಹ ಮಂತ್ರಿ ಅರಗ ಜ್ಞಾನೇಂದ್ರ, ಸಚಿವ ಈಶ್ವರಪ್ಪ, ಯಡಿಯೂರಪ್ಪ ಜಿಲ್ಲೆಯಿಂದ ಈ ಹತ್ಯೆ ಸಂಭವಿಸಿರುವುದು ನೋಡಿದರೆ, ಆಡಳಿತ ಪಕ್ಷದ ಷಡ್ಯಂತ್ರ ಎದ್ದು ಕಾಣುತ್ತದೆ. ಗುಪ್ತಚರ ಇಲಾಖೆ ರಾಜ್ಯದಲ್ಲಿ ಏನು ಮಾಡುತ್ತಿದೆ ಎಂಬುದನ್ನು ರಾಜ್ಯ ಪೊಲೀಸ್ ವರಿಷ್ಠರು ಜನತೆಗೆ ವಿವರಿಸಬೇಕಿದೆ.

ಈ ಪ್ರಕರಣದಲ್ಲಿ ಆರೋಪಿಗಳ ನೈಜತೆ ಹೆಚ್ಚು ಮಹತ್ವ ಪಡೆಯಬೇಕಿದೆ. ಈ ಘಟನೆಯಿಂದ ರಾಜ್ಯದ ಇತರ ಕಡೆಗಳಲ್ಲಿ ಯಾವುದೇ ಕಾರಣಕ್ಕೂ ಕಾನೂನು ಸುವ್ಯವಸ್ಥೆ ಭಂಗ ಉಂಟಾದರೆ ಪೊಲೀಸು ಇಲಾಖೆಯ ನಿಷ್ಟತೆ ಮತ್ತು ಕಾರ್ಯ ವೈಖರಿಯ ಕುರಿತು ರಾಜ್ಯದ ಜನತೆಗೆ ಉತ್ತರಿಸಬೇಕಾದೀತು ಎಂದು ಅವರು ಹೇಳಿದರು.