ಸನ್ಮಾರ್ಗ ವಾರ್ತೆ
ಬೆಂಗಳೂರು: ಪ್ರಖ್ಯಾತ ಏಷಿಯಾ ಟುಡೇ ರೀಸರ್ಚ್ ಮತ್ತು ಮೀಡಿಯಾ ಸಂಸ್ಥೆ ವತಿಯಿಂದ ಕರ್ನಾಟಕ ಪ್ರೈಡ್ ಪ್ರಶಸ್ತಿ ಸಮಾರಂಭವು ಮಾರ್ಚ್ 25 ರಂದು ಬೆಂಗಳೂರಿನ ತಾಜ್ ಹೋಟೆಲ್ ನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ರಾಷ್ಟ್ರದ ಹಲವಾರು ವಿದ್ಯಾಸಂಸ್ಥೆಗಳನ್ನು ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಕರ್ನಾಟಕದಲ್ಲಿ ಸಾಧನೆಗೈದ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಮುಂತಾದವರ ಜೊತೆಯಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ರಹೀಂ ಉಚ್ಚಿಲ್ ರವರಿಗೆ ಕರ್ನಾಟಕದ ರಾಜ್ಯಪಾಲರಾದ ತಾವರ್ ಚಂದ್ ಗೆಹಲೋಟ್ ರವರು ಪ್ರತಿಷ್ಠಿತ ಕರ್ನಾಟಕ ಪ್ರೈಡ್ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ವಿಧಾನ ಪರಿಷತ್ ಸ್ಪೀಕರ್ ಶ್ರೀ ಬಸವರಾಜ್ ಹೊರಟ್ಟಿ, ಖ್ಯಾತ ಚಲನಚಿತ್ರ ನಟ ಅಜಯ್ ರಾವ್, ಕೇಂದ್ರ ಹಾಗೂ ರಾಜ್ಯದ ಸಚಿವರು ಉಪಸ್ಥಿತರಿದ್ದರು. ಪ್ರಶಸ್ತಿಯನ್ನು ಸ್ವೀಕರಿಸಿದ ರಹೀಂ ಉಚ್ಚಿಲ್ ರವರು ಮಾತನಾಡಿ ಸಾಹಿತ್ಯ, ಸಾಂಸ್ಕೃತಿಕ, ರಾಜಕೀಯ ಮತ್ತು ಸಾಮಾಜಿಕ ರಂಗದಲ್ಲಿ ಮಾಡಿದ ಸೇವೆಯನ್ನು ಗುರುತಿಸಿಕೊಂಡು ರಾಜ್ಯಪಾಲರಿಂದ ಈ ಪ್ರಶಸ್ತಿಯನ್ನು ಸ್ವೀಕರಿಸಿರುವುದು ನನಗೆ ಅತ್ಯಂತ ಸಂತಸ ತಂದಿದೆ ಮತ್ತು ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ. ಮುಂದಿನ ದಿನಗಳಲ್ಲಿ ಸಮಾಜದ ಸೇವೆಯನ್ನು ಇದೇ ರೀತಿ ಮುಂದುವರೆಸುತ್ತೇನೆ ಎಂದು ಈ ಕುರಿತು ಪ್ರತಿಕ್ರಿಯೆಯನ್ನು ನೀಡಿದರು.












