ಉತ್ತರ ಪ್ರದೇಶ: ಪೊಲೀಸ್ ಮುಖ್ಯಸ್ಥರನ್ನು ಹುದ್ದೆಯಿಂದ ತೆಗೆದುಹಾಕಿದ ಯೋಗಿ ಆದಿತ್ಯನಾಥ್ ಸರಕಾರ

0
342

ಸನ್ಮಾರ್ಗ ವಾರ್ತೆ

ದಿಢೀರ್ ಬೆಳವಣಿಗೆಯೊಂದರಲ್ಲಿ ಬುಧವಾರ ಉತ್ತರ ಪ್ರದೇಶದ ಪೊಲೀಸ್ ಮುಖ್ಯಸ್ಥ ಮುಕುಲ್ ಗೋಯೆಲ್ ಅವರನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ರಾಜ್ಯ ಸರ್ಕಾರ ಅವರ ಹುದ್ದೆಯಿಂದ ತೆಗೆದು ಹಾಕಿದೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಉತ್ತರ ಪ್ರದೇಶ ಸರ್ಕಾರ, “ಕೆಲಸದಲ್ಲಿ ಆಸಕ್ತಿ ವಹಿಸುತ್ತಿಲ್ಲ” ಮತ್ತು “ಆದೇಶಗಳನ್ನು ಪಾಲಿಸುತ್ತಿಲ್ಲ” ಎಂದು ತಿಳಿಸಿದೆ.

ಪೊಲೀಸ್ ಮಹಾನಿರ್ದೇಶಕರಾಗಿದ್ದ ಮುಕುಲ್ ಗೋಯೆಲ್ ಅವರನ್ನು ಅತ್ಯಲ್ಪ ಹುದ್ದೆಗೆ ಇಳಿಸಿ ಹಿಂಭಡ್ತಿ ನೀಡಲಾಗಿದೆ. ನಾಗರಿಕ ರಕ್ಷಣಾ ಇಲಾಖೆಯ ನಿರ್ದೇಶಕರಾಗಿ ನಿಯೋಜಿಸಿದೆ. ಇವರ ಸ್ಥಾನಕ್ಕೆ ಸದ್ಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿದ್ದ ಪ್ರಶಾಂತ್ ಕುಮಾರ್ ಅವರನ್ನು ನೇಮಕ ಮಾಡಿ ಉತ್ತರ ಪ್ರದೇಶ ಸರ್ಕಾರ ಆದೇಶಿಸಿದೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಈ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ‘ಎನ್‌ಡಿಟಿವಿ’ ವರದಿ ಮಾಡಿದೆ. ಜೊತೆಗೆ ಉತ್ತರ ಪ್ರದೇಶದ ಕಾನೂನು ಸುವ್ಯವಸ್ಥೆ ಬಗ್ಗೆ ತಿಳಿಯಲು ಕಳೆದ ತಿಂಗಳು ಮುಖ್ಯಮಂತ್ರಿಯೊಂದಿಗೆ ನಿಗದಿಯಾಗಿದ್ದ ಪ್ರಮುಖ ಸಭೆಯೊಂದರಲ್ಲಿ ಭಾಗವಹಿಸದೆ ಗೈರು ಹಾಜರಾಗಿದ್ದರು.

ಮುಕುಲ್ ಗೋಯೆಲ್ ಅವರು 1987 ರ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿದ್ದು, ಜುಲೈ 2021 ರಲ್ಲಿ ರಾಜ್ಯದ ಉನ್ನತ ಪೋಲೀಸ್ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಅಪರಾಧ ನಿಯಂತ್ರಣದ ಮೇಲೆ ಕೇಂದ್ರೀಕರಿಸುವುದಾಗಿ ಮತ್ತು ಪೊಲೀಸರು ಸೂಕ್ಷ್ಮ ಮತ್ತು ರಾಜ್ಯದ ಜನರೊಂದಿಗೆ ಉತ್ತಮ ಸಂಪರ್ಕ ಹೊಂದುವುದಕ್ಕೆ ಕ್ರಮ ಕೈಗೊಳ್ಳುವುದಾಗಿ ಸಾರ್ವಜನಿಕರಿಗೆ ಭರವಸೆ ನೀಡಿದ್ದರು.

ಅವರು ಈ ಹಿಂದೆ ಅಲ್ಮೋರಾ, ಜಲೌನ್, ಮೈನ್‌ಪುರಿ, ಹತ್ರಾಸ್, ಅಜಮ್‌ಗಢ್, ಗೋರಖ್‌ಪುರ, ವಾರಣಾಸಿ, ಸಹರಾನ್‌ಪುರ ಮತ್ತು ಮೀರತ್ ಜಿಲ್ಲೆಗಳಲ್ಲಿ ಎಸ್‌ಪಿ ಮತ್ತು ಎಸ್‌ಎಸ್‌ಪಿಯಾಗಿ ಕೆಲಸ ಮಾಡಿದ್ದರು.