ರಾಯಚೂರಿನಲ್ಲಿ ಈದ್ ಸೌಹಾರ್ದ ಕೂಟ| “ಸಾಮರಸ್ಯವೇ ಧರ್ಮಗಳ ಮೂಲ ತತ್ವ”: ಪ್ರವಚನಕಾರ ಲಾಲ್ ಹುಸೇನ್ ಕಂದಗಲ್

0
231

ಸನ್ಮಾರ್ಗ ವಾರ್ತೆ

ರಾಯಚೂರು: ಎಲ್ಲ ಧರ್ಮಗಳ ಮೂಲ ಸಿದ್ಧಾಂತ, ತತ್ವವು ಸಾಮರಸ್ಯ, ಧರ್ಮಗಳ ಆಚರಣೆಯಲ್ಲಿಯೇ ಮಾನವರ ಕಲ್ಯಾಣವಿದೆ ಎಂದು ಪ್ರವಚನಕಾರ ಲಾಲ್ ಹುಸೇನ್ ಕಂದಗಲ್ ಹೇಳಿದರು.

ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಸಂಘಟನೆಯು ರಮಝಾನ್ ಪ್ರಯುಕ್ತ ಸೋಮವಾರ ಆಯೋಜಿಸಿದ್ದ ‘ಈದ್ ಸೌಹಾರ್ದ ಕೂಟ’ದಲ್ಲಿ ಮಾತನಾಡಿದರು.

ಮಾನ್ವಿ ಕಲ್ಮಠದ ಪಂಡಿತಾರಾಧ್ಯ ಶಿವಾಚಾರ್ಯ ಮಾತನಾಡಿ, ಮನುಷ್ಯರಾಗಿ ಹುಟ್ಟಿದ ಮೇಲೆ ಧರ್ಮಾಚರಣೆ, ತಪಸ್ಸು, ಪ್ರಾರ್ಥನೆಗಳನ್ನು ರೂಢಿಸಿಕೊಳ್ಳಬೇಕು. ಇದರಿಂದ ಸ್ವಂತಕ್ಕೆ ಒಳ್ಳೆಯದಾಗುವ ಜೊತೆಗೆ ಇತರರಿಗೂ ಒಳ್ಳೆಯದಾಗಲಿ ಎನ್ನುವ ಮನೋಭಾವ ಬೇರೂರುತ್ತದೆ ಎಂದರು.

ಎಐಸಿಸಿ ಕಾರ್ಯದರ್ಶಿ ಎನ್.ಎಸ್.ಬೋಸರಾಜು ಮಾತನಾಡಿ, ಪ್ರತಿಯೊಂದು ಜಾತಿ, ಧರ್ಮಗಳಲ್ಲಿ ಒಳ್ಳೆಯವರು ಕೆಟ್ಟವರು ಇದ್ದೇ ಇರುತ್ತಾರೆ. ಬರೀ ಕೆಟ್ಟದ್ದನ್ನೇ ಮುಂದೆ ಮಾಡಿ ಒಂದು ಸಮುದಾಯವನ್ನು ಕೀಳಾಗಿ ಕಾಣುವ ಕ್ರಮ ಸರಿಯಾದುದಲ್ಲ. ನಾವೆಲ್ಲ ಭಾರತೀಯರಾಗಿದ್ದು, ಸಂವಿಧಾನದಡಿ ಒಂದಾಗಿ ಜೀವನ ನಡೆಸಬೇಕು ಎಂದು ತಿಳಿಸಿದರು.

ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎಂ.ವಿರೂಪಾಕ್ಷಿ ಮಾತನಾಡಿ, ದೇಶದಲ್ಲಿ ಸಂವಿಧಾನ ವಿರೋಧಿ ಚಟುವಟಿಕೆಗಳು ಅವ್ಯಾಹತವಾಗಿ ನಡೆಯುತ್ತಿದ್ದು, ಕೇವಲ ಒಂದು ಧರ್ಮವನ್ನು ಗುರಿಯಾಗಿಟ್ಟುಕೊಂಡು ಅಶಾಂತಿ ಹರಡುವ ಕಾರ್ಯ ವ್ಯವಸ್ಥಿತವಾಗಿ ನಡೆಯುತ್ತಿದೆ. ಈ ಬಗ್ಗೆ ಜನರು ಜಾಗೃತರಾಗಿ ಇರುವುದು ತುಂಬಾ ಮುಖ್ಯವಾಗಿದೆ ಎಂದು ಹೇಳಿದರು.

ಮುಸ್ಲಿಮರು ಶಾಂತಿಪ್ರಿಯರಾಗಿದ್ದು, ಎಲ್ಲರೊಂದಿಗೆ ಸಾಮರಸ್ಯರಿಂದಲೇ ಬದುಕುತ್ತಿದ್ದಾರೆ. ಆದರೆ, ಧರ್ಮ, ಜಾತಿಗಳ ಹೆಸರಿನಲ್ಲಿ ಭೇದ ಹರಡುತ್ತಿರುವವರಿಗೆ ಸಮಾಜವೇ ಪಾಠ ಕಲಿಸಬೇಕಾಗುತ್ತದೆ ಎಂದರು.

ಎ.ಜೆ ಅಕಾಡೆಮಿ ನಿರ್ದೇಶಕರಾದ ಜನಾಬ್ ಅಬ್ದುಲ್ಲಾ ಜಾವೀದ್ ರವರು ನಾವು ಹಬ್ಬದ ಸಂದರ್ಭದಲ್ಲಿ ಕೂಡಿದ್ದೇವೆ. ಇದು ಬಹಳ ಸಂತೋಷದ ವಿಷಯ. ಆದರೆ ನಾವೆಲ್ಲಾ ಸೇರಿ ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸಬೇಕು. ಅಲ್ಲದೆ ನಮ್ಮ ನಗರದ ಅಭಿವೃದ್ಧಿಯ ಯೋಜನೆಗಳನ್ನು ರೂಪಿಸಬೇಕೆಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮೊಹಮ್ಮದ್ ಆಸೀಮುದ್ದೀನ್ ಅಖ್ತರ್‌ರವರು ಮಾತನಾಡಿ ನಮ್ಮ ದೇಶ, ನಮ್ಮ ನಾಡು, ನಮ್ಮ ನಗರದಲ್ಲಿ ಹಲವು ಜಾತಿ, ಧರ್ಮದ ಜನರು ಇದ್ದಾರೆ ನಾವೆಲ್ಲಾ ಒಂದೇ ನಾಡಿನ ಪ್ರಜೆಗಳು: ಪರಸ್ಪರ ನಾವು ಸಹೋದರರಾಗಿ ಬಾಳೋಣ.ಐಕ್ಯತೆ ಮೂಡಿಸೋಣ ಎಂದು ತಮ್ಮ ಸಂದೇಶ ನೀಡಿದರು.

ಮುಜಮ್ಮಿಲ್ ಹುಸೇನ್ ರವರ ಕುರ್‌ಆನ್ ಪಠಣದೊಂದಿದೆ ಕಾರ್ಯಕ್ರಮ ಪ್ರಾರಂಭವಾಯಿತು. ಜನಾಬ್ ಸಲೀಂ ಪಾಷಾ ರವರು ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತ ಕೋರಿದರು. ಹಾಗೂ ಜನಾಬ್ ಅಬ್ದುಸ್ಸಮದ್ ಕಾರ್ಯಕ್ರಮ ನಿರೂಪಿಸಿ, ಧನ್ಯವಾದವಿತ್ತರು.