ನೂತನ ಚುನಾವಣಾ ಆಯುಕ್ತರಾಗಿ ರಾಜೀವ್ ಕುಮಾರ್ ಆಯ್ಕೆ

0
292

ಸನ್ಮಾರ್ಗ ವಾರ್ತೆ

ದೇಶದ ನೂತನ ಮುಖ್ಯ ಚುನಾವಣಾ ಆಯುಕ್ತರನ್ನಾಗಿ ರಾಜೀವ್ ಕುಮಾರ್ ಅವರನ್ನು ಗುರುವಾರ ನೇಮಿಸಲಾಗಿದೆ.

ಈ ಕುರಿತು ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು, ಮೇ 14 ರಂದು ಹಾಲಿ ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಅವರ ಅಧಿಕಾರ ಕೊನೆಗೊಳ್ಳಲಿದೆ. ಅವರ ಸ್ಥಾನಕ್ಕೆ ರಾಜೀವ್ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ. ಮೇ 15 ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ” ಎಂದು ತಿಳಿಸಿದ್ದಾರೆ.

ರಾಜೀವ್ ಕುಮಾರ್ ಅವರಿಗೆ ಶುಭ ಹಾರೈಸಿರುವ ಕಿರಣ್ ರಿಜಿಜು,ಕಾನೂನು ಸಚಿವಾಲಯವು ಹೊರಡಿಸಿದ ಮೇ 12ರ ಅಧಿಸೂಚನೆಯ ಪ್ರಕಾರ ಸಂವಿಧಾನದ 324ನೇ ವಿಧಿಯ ಷರತ್ತು (2) ರ ಅನುಸಾರವಾಗಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ನೇಮಕಾತಿಯನ್ನು ಮಾಡಿದ್ದಾರೆ.

ಜಾರ್ಖಂಡ್ ಕೇಡರ್‌ನ 1984 ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ರಾಜೀವ್ ಕುಮಾರ್ ಅವರು ಸೆಪ್ಟೆಂಬರ್ 1, 2020 ರಂದು ಭಾರತದ ಚುನಾವಣಾ ಆಯೋಗದ (ಇಸಿಐ) ಚುನಾವಣಾ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದರು. ಚುನಾವಣಾ ಆಯೋಗದಲ್ಲಿ ಅಧಿಕಾರ ವಹಿಸಿಕೊಳ್ಳುವ ಮೊದಲು, ಏಪ್ರಿಲ್ 2020ರಲ್ಲಿ ಅವರು ಸಾರ್ವಜನಿಕ ಉದ್ಯಮಗಳ ಆಯ್ಕೆ ಮಂಡಳಿಯ ಅಧ್ಯಕ್ಷ ಹುದ್ದೆಯಲ್ಲಿದ್ದರು.

ಫೆಬ್ರವರಿ 19, 1960ರಂದು ಜನಿಸಿದ ಕುಮಾರ್ ಅವರು ಬಿಎಸ್ಸಿ, ಎಲ್‌ಎಲ್‌ಬಿ ಹಾಗೂ ಪಿಜಿಡಿಎಂ ಪದವಿ ಗಳಿಸಿದ್ದಾರೆ. 37 ವರ್ಷಗಳ ಸೇವೆಯಲ್ಲಿ ವ್ಯಾಪಕವಾದ ಆಡಳಿತಾತ್ಮಕ ಅನುಭವವನ್ನು ಹೊಂದಿರುವ ಕುಮಾರ್ ಅವರು, ತಮ್ಮ ತವರು ರಾಜ್ಯವಾದ ಜಾರ್ಖಂಡ್‌ನಲ್ಲಿ ಆಡಳಿತಾತ್ಮಕ ಹುದ್ದೆ ಸೇರಿದಂತೆ ವಿವಿಧ ಪ್ರಮುಖ ಕಾರ್ಯಯೋಜನೆಗಳನ್ನು ನಿರ್ವಹಿಸಿದ್ದಾರೆ. ಜೊತೆಗೆ ಕೇಂದ್ರ ಸರ್ಕಾರದಲ್ಲಿ ವಿವಿಧ ಹುದ್ದೆಗಳಲ್ಲಿಯೂ ಕೆಲಸ ಮಾಡಿದ್ದಾರೆ.