ಸರಳ ಸಜ್ಜನಿಕೆಯ ಪ್ರತೀಕ ಎಂ.ಸಾದುಲ್ಲಾ ಅವರೊಂದಿಗಿನ ನನ್ನ ಅನುಭವ

0
421

ಎ.ಕೆ. ಮುಹಮ್ಮದ್ ಹನೀಫ್
ಅಡ್ಯಾರ್, ಕಣ್ಣೂರು

ಸಾದುಲ್ಲ ಎಂಬ ಪದದ ಪರ್ಯಾಯ ಅರ್ಥವನ್ನು ನಾನು ಇಲ್ಲಿ ಹೇಳ ಬಯಸುವುದಿಲ್ಲವಾದರೂ ಬ್ಯಾರಿ ಭಾಷೆಯಲ್ಲಿ ಸಾಧು ಎಂಬ ಪದದ ಅರ್ಥವೇನೋ ಅದನ್ನು ಜೀವನದುದ್ದಕ್ಕೂ ಅನ್ವರ್ಥಗೊಳಿಸಿದ ಹೃದಮಂತಿಕೆಯ ಶ್ರೇಷ್ಠ ವ್ಯಕ್ತಿತ್ವವನ್ನು ಹೊಂದಿದ ತನ್ನ ಜೀವನದುದ್ದಕ್ಕೂ ತನ್ನ ಸಂಘಟನೆಯೊಂದಿಗೆ ಪಕ್ಕಾ ನಿಷ್ಠೆಯನ್ನು ಪಾಲಿಸಿಕೊಂಡ ಅಸಾಮಾನ್ಯ ವ್ಯಕ್ತಿಯಲ್ಲೋರ್ವರಾಗಿದ್ದರು ಎಂ. ಸಾದುಲ್ಲರವರು.

ನಾನು ನನ್ನ 13ನೇ ವರ್ಷ ಪ್ರಾಯದವನಾಗಿರುವಾಗಲೇ ಎಂ. ಸಾದುಲ್ಲರವರ ಪರಿಚಯವಿರುವವನು. ಇದು ಕೇವಲ ಎಂ. ಸಾದುಲ್ಲರವರೊಂದಿಗೆ ಮಾತ್ರವಾಗಿಲ್ಲ. ಬದಲಾಗಿ ಆಗಿನ ಸನ್ಮಾರ್ಗ ವಾರಪತ್ರಿಕೆಯ ಪ್ರಧಾನ ಸಂಪಾದಕರಾದ ಮರ್ಹೂಮ್ ಇಬ್ರಾಹಿಮ್ ಸಯೀದ್ ಅವರೊಂದಿಗೂ ಅದೇ ಹೊತ್ತಿಗೆ ನನಗೆ ಒಡನಾಟವಿತ್ತು. ಹೇಗೆ ಇರದಿರಲಸಾಧ್ಯ?. ಮುಂದಿನಿಂದ ಇಬ್ರಾಹೀಂ ಸಈದ್ ನಡೆಯುತ್ತಿದ್ದರೆ ತುಸು ಹಿಂದಿನಿಂದ ಬಲಕ್ಕೆ ಎಂ. ಸಾದುಲ್ಲರವರು ಅವರನ್ನು ಅನುಗಮಿಸುತ್ತಿದ್ದರು. ಈ ಅನುಗಮನದಿಂದಲೇ ಎಂ. ಸಾದುಲ್ಲವರ ಸಾಧು ವ್ಯಕ್ತಿತ್ವವನ್ನು ಅಳೆಯಬಹುದಾಗಿತ್ತು.

ಮೇಲೆ ತಿಳಿಸಿದಂತೆ ಚಿಕ್ಕನಂದಿರುವಾಗಲೇ ನಗರದ ಬೀಬಿ ಅಲಾಬಿ ರಸ್ತೆಯಲ್ಲಿಯಿದ್ಧ ಜಮಾಅತೆ ಇಸ್ಲಾಮಿ ಹಿಂದ್ ನ ಒಂದೇ ಅಂತಸ್ತಿನ ಹಳೇ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗಲೇ ನಾನು ಹೋಗುತ್ತಿದ್ದೆ. ಆಗ ನನಗೆ ಸುನ್ನೀ ಆದರ್ಶದಲ್ಲಿನ ವಿಷಯಕ್ಕೆ ಸಂಬಂಧಿಸಿ ಪುರಾವೆಗಳ ಕುರಿತಂತೆ ಹೆಚ್ಚಿನ ಹಿಡಿತವಿರಲಿಲ್ಲದಿದ್ದರೂ ಆದರ್ಶ ನಿಷ್ಠೆಯಲ್ಲಿ ಒಂದಿಂಚೂ ಬಿಡದಂತೆ ಸಾದುಲ್ಲಾ ಹಾಗೂ ಇಬ್ರಾಹಿಮ್ ಸಈದರಲ್ಲಿ ಆದರ್ಶ ಸಂಬಂಧಿ ವಿಷಯದಲ್ಲಿ ಗಂಟೆಗಟ್ಟಲೆ ಸಂವಾದಿಸುತ್ತಿದ್ದೆ. ಮಿತಿ ಮೀರುವಾಗ ಸಈದರು ಒಂದಷ್ಟು ಕೋಪಗೊಳ್ಳುತ್ತಿದ್ದರೂ ಸಾದುಲ್ಲಾ ಕಡೆಯ ತನಕ ತನ್ನ ನಗೆಯ ಹನಿಯನ್ನೇ ಬೀರುತ್ತಿದ್ದುದು ಈಗಲೂ ಕಂಡಂತೆ ಭಾಸವಾಗುತ್ತಿದೆ. ಆಗಿನ್ನೂ ಜಿಲ್ಲೆಯಲ್ಲಿ ಸಲಫೀ ಆದರ್ಶದವರು ಇರಲಿಲ್ಲ. ಸುನ್ನೀಯೇತರರೆಂದರೆ ಜಮಾಅತೆ ಇಸ್ಲಾಮೀ ಮಾತ್ರವಾಗಿತ್ತು. ಆ ಹೊತ್ತಿನಲ್ಲಿ ಜಮಾಅತೆ ಇಸ್ಲಾಮೀ ರಂಝಾನ್ ಮಾಸದಲ್ಲಿ ಇಫ್ತಾರ್ ಕೂಟವೆಂಬ ಕಾರ್ಯಕ್ರಮ ಸಂಘಟಿಸುತ್ತಿತ್ತು. ನನ್ನೂರಾದ ಅಡ್ಯಾರ್ ಕಣ್ಣೂರಿನಲ್ಲಿ ಕೆಲವು ಮಂದಿ ಜಮಾಅತೆ ಇಸ್ಲಾಮೀ ಬೆಂಬಲಿಗರಿದ್ದರು. (ಈಗ ಬಂದಿಬ್ಬರನ್ನು ಬಿಟ್ಟರೆ ಉಳಿದೆಲ್ಲರೂ ಸಲಫಿ ಚಿಂತನೆ ಅನುಕರಿಸುವವರು) ಇವರು ಈ ಇಫ್ತಾರ್ ಕೂಟವನ್ನು ಸಂಘಟಿಸುತ್ತಿದ್ದರು. ಅಲ್ಲಿಗೆ ಇಬ್ರಾಹಿಂ ಸಈದರ ಜೊತೆ ಸಾದುಲ್ಲಾರವರು ಬರುತ್ತಿದ್ದರು. ಆ ಹೊತ್ತಿಗೆ ನಾನು ಮಸೀದಿಗೆ ನಮಾಝ್ ನಿರ್ವಹಿಸಲು ಹೋದಾಗ ನನ್ನನ್ನು ಕಂಡ ಕೂಡಲೇ ಸಈದರು ಹಾಗೂ ಸಾದುಲ್ಲಾರವರು ಗುಂಪಿನ ಮಧ್ಯೆದಿಂದ ಎದ್ದು ಬಂದು ನನಗೆ ಶೇಕ್ ಹ್ಯಾಂಡ್ ನೀಡುತ್ತಿದ್ದುದು ಸ್ಥಳೀಯ ಜಮಾಅತ್ ಬೆಂಬಲಿಗರನ್ನು ಬೆಚ್ಚಿ ಬೀಳಿಸುತ್ತಿದ್ದುದು ಸುಳ್ಳಲ್ಲ. ಆವಾಗ ನಾನಿನ್ನೂ15ರ ಹರೆಯದ ಬಾಲಕ. ಇವನ ಪರಿಚಯ ನಿಮಗೇ ಹೇಗೆ ಬಂತು ಎಂಬ ಅತಿಶಯೋಕ್ತಿ ಇವರದ್ದಾಗಿದರೆ ಅವರ ಸಂಶಯವನ್ನು ಎಂದಿನ ನಗೆಯಹನಿಯೊಂದಿಗೆ ನಿವಾರಿಸಲು ಮಂದೆ ಬರುತ್ತಿದ್ದುದು ಸಾದುಲ್ಲಾರವರಾಗಿದ್ದರು. ನಗರದ ಬಂದರಿಗೆ ಹೋಗಲಿದ್ದರೆ ಹಿದಾಯತ್ ಸೆಂಟರ್ ಗೆ ಹೋಗಿ ಸಾದುಲ್ಲಾರವರನ್ನು ಭೇಟಿಯಾಗಿ ಮಾತನಾಡದೆ ಬರುತ್ತಿರಲಿಲ್ಲ. ಕೆಲವೊಮ್ಮೆ ಅವರು ಹೇಳುವುದುಂಟು ನಮ್ಮಿಬ್ಬರ ಬಾಂಧವ್ಯ ಇಂದು ನಿನ್ನೆಯದ್ದಲ್ಲ. ಆದರೂ ನಿಮ್ಮನ್ನು ಜಮಾಅತೆ ಇಸ್ಲಾಮಿಯ ಕಾರ್ಕೂನ್‌(ಕಾರ್ಯಕರ್ತ) ಮಾಡಲು ನನಗೆ ಸಾಧ್ಯವಾಗಿಲ್ಲವಲ್ಲವೆಂದು ಮಾತಿನ ಮಧ್ಯೆ ಚಟಾಕಿ ಹಾರಿಸುತ್ತಿದ್ದರು.

ನಾನು 90 ದಶಕದಲ್ಲಿ ಕಾಲೇಜಿನಲ್ಲಿ ಕಲಿಯುತ್ತಿದ್ದಾಗ ಸನ್ಮಾರ್ಗ ವಾರಪತ್ರಿಕೆಯನ್ನು ಉಚಿತವಾಗಿ ಕಾಲೇಜಿನ ಹೆಸರಿನಲ್ಲಿ ಅಂಚೆ ಮುಖಾಂತರ ಕಳುಹಿಸುತ್ತಿದ್ದುದು ನನ್ನೊಂದಿಗಿದ್ದ ಅವರಿಗಿರುವ ಬಾಂಧವ್ಯದ ಭಾಗವಾಗಿತ್ತು. ನಾನು ಕಾಲೇಜ್ ಬಿಟ್ಟರೂ ಪತ್ರಿಕೆ ಸರಾಗವಾಗಿ ಕಾಲೇಜಿಗೆ ಕಳುಹಿಸುತ್ತಿದ್ದರು. ಬಳಿಕ ನಾನೇ ಅವರಲ್ಲಿ ಕಳುಹಿಸುವುದನ್ನು ನಿಲ್ಲಿಸಲು ಹೇಳಿದಾಗ ಬೇಡಪ್ಪ ಪತ್ರಿಕೆ ಹೋಗಲಿ ಅದರಲ್ಲೇನಿದೆ? ಎಂದವರು ಹೇಳಿದರೂ ನನ್ನ ಒತ್ತಾಯದ ಅಸಮ್ಮತಿಯನ್ನು ಒಪ್ಪಿಕೊಂಡು ಮತ್ತೆ ಕಳುಹಿಸುವುದನ್ನು ನಿಲ್ಲಿಸಿಬಿಟ್ಟಿರು. ಹಾಗೇನೇ ಸ್ವಹೀಹುಲ್ ಬುಖಾರಿ ಕನ್ನಾಡಾನುವಾದವನ್ನು ನನಗೆ ಉಚಿತವಾಗಿ ನೀಡಿದ್ದರು. ನಾನು ಕನ್ನಡಕ್ಕೆ ಅನುವಾದಿಸಿದ ಫತ್ಹುಲ್ ಮುಹೀನ್ ಉಚಿತವಾಗಿ ಅವರಿಗೂ ನೀಡಿದ್ದೇ. ಸನ್ಮಾರ್ಗ ವಾರಪತ್ರಿಕೆಯ ಕೇಳಿನೋಡಿ ವಿಭಾಗದಲ್ಲಿ ಮದ್ಹಬ್ ಸಂಬಂಧಿ ಮಸ್ಅಲಃಗಳಲ್ಲಿ ಅವರಿಗೆ ಸಂಶಯ ಎದುರಾದರೆ ಕೆಲವೊಮ್ಮೆ ನನ್ನನ್ನು ಸಂಪರ್ಕಿಸುತ್ತಿದ್ದರು.

ಉರ್ದುವಿನಲ್ಲಿ ಅಗಾಧ ಪಾಂಡಿತ್ಯವಿದ್ದ ಜಿಲ್ಲೆಯ ಅಪೂರ್ವ ವ್ಯಕ್ತಿಗಳಲ್ಲಿ ಸಾದುಲ್ಲಾರವರು ಒಬ್ಬರು. ನಾನು ಬಿಬಿಸಿ ಉರ್ದು ಹಾಗೂ ಹಿಂದಿ ವಾರ್ತೆ ದಿನಾಲೂ ಕೇಳುವ ಪರಿಪಾಠ ರೂಢಿಸಿಕೊಂಡ ಬಂದವನಾಗಿದ್ದೆ. ಇದು ರೇಡಿಯೋ ಚಾಲ್ತಿಯಲ್ಲಿರುವ ಕಾಲದಿಂದಲೇ ನನ್ನದೊಂದು ಅಭ್ಯಾಸವಾಗಿತ್ತು. ಇಲ್ಲಿಯೂ ಕೆಲವೊಂದು ಪದಗಳ ಅನುವಾದ ಬೇಕಿದ್ದರೆ ನನಗೆ ಸಾದುಲ್ಲಾರವರೇ ಬೇಕಿತ್ತು. ಮೊಬೈಲ್ ಫೋನು ಬರುವ ಮೊದಲೇ ಬೆಳ್ಳಿಗಿನ ಹೊತ್ತಾದರೆ ಅವರ ಕಛೇರಿಯ ಲ್ಯಾಂಡ್ ಫೋನಿಗೂ ರಾತ್ರಿಯಾದರೆ ಅವರ ಮನೆಯ ಲ್ಯಾಂಡ್ ಫೋನಿಗೂ ಕರೆ ಮಾಡಿ ತಿಳಿಯದ ಪದಗಳ ಅರ್ಥವನ್ನು ಕೇಳುತ್ತಿದ್ದೆ. ಈ ಒಂದು ಪರಿಪಾಠ ಕೇವಲ ಉರ್ದು ವಾರ್ತೆಗೆ ಮಾತ್ರ ಸೀಮಿತವಾಗಿರಲಿಲ್ಲ. ಫತುಹುಲ್ ಮುಈನ್ ಅನುವಾದ ಮಾಡುತ್ತಿದ್ದಾಗ ಕೆಲವೊಂದು ಕನ್ನಡ ಪದಗಳಿಗಾಗಿಯೂ, ಕನ್ನಡ ಅರ್ಥಗಳಿಗಾಗಿಯೂ ಅವರನ್ನು ಸಂಪರ್ಕಿಸುತ್ತಿದ್ದೆ. ಇದು ಮೊಬೈಲ್ ಫೋನ್ ಲ್ಲಿಯೂ ಮುಂದುವರಿದಿತ್ತು. ಅನುವಾದ ಸಂಬಂಧಿ ನಾನೊಮ್ಮೆ ಸಂಪರ್ಕಿಸುವಾಗ ಜಮಾಅತೇ ಇಸ್ಲಾಮೀ ಹಿಂದ್ ಮೀಟಿಂಗ್ ನಿಮಿತ್ತ ದೆಹಲಿ ಪ್ರವಾಸದಲ್ಲಿದ್ದರು. ತತ್‍ಕ್ಷಣ ಮಂಗಳೂರಿನ ಹಿದಾಯತ್ ಸೆಂಟರ್ ನ ತನ್ನ ಕಛೇರಿಯ ಯಾರೋ ಒಬ್ಬರನ್ನು ಸಂಪರ್ಕಿಸಿ ನನಗೆ ಅದರ ಸರಿಯಾದ ಮಾಹಿತಿ ನೀಡಿ ನನ್ನನ್ನು ಸಹಾಯ ಮಾಡಿದ ಆ ವ್ಯಕ್ತಿಯೊಂದಿಗಿನ ನನಗಿರುವ ಹಕ್ಕು ಮುಗಿಯದ್ದಾಗಿದೆ.

ಇನ್ನೂ ಅವರ ಕುರಿತು ಬರೆಯಲು ಬೇಕಾದಷ್ಟಿದೆ. ಕಳೆದ 36 ವರ್ಷಗಳಲ್ಲಿ ನನ್ನ ಹಾಗೂ ಇಬ್ರಾಹಿಂ ಸಹೀದ್ ಸೇರಿದಂತೆ ಸಾದುಲ್ಲಾರವರೊಂದಿಗಿದ್ದ ಬಾಂಧವ್ಯ ಜಮಾಅತ್ ಕಛೇರಿಯಲ್ಲಿರುವ ಹಲವು ಹಿರಿಯ ಹಾಗೂ ಕಿರಿಯರಿಗೂ ಗೊತ್ತಿರುವ ವಿಚಾರವಾಗಿದೆ. ಏನೇ ಇರಲಿ. ಆ ಸರಳ ಸಜ್ಜನಿಗೆ ನಮ್ಮಗಲಿದ್ದಾರೆ. ಅಲ್ಲಾಹನು ಅವರ ಪಾರತ್ರಿಕ ಜೀವನ ಸಂತೋಷಮಯವಾಗಿ ಅನುಗ್ರಹಿಸಲಿ. ಅವರ ಪ್ರವೃತಿಗಳಲ್ಲಿ ಸಂಭವಿಸಿರಬಹುದಾದ ದೋಷಗಳನ್ನು ಅವನ ಅಪಾರವಾದ ಮಗ್ಫಿರತ್ ನೀಡಿ ಸ್ವರ್ಗ ನೀಡಿ ಅನುಗ್ರಹಿಸಲಿ ಎಂದು ಪ್ರಾರ್ಥನೆ.