ತಲಾಖ್ ಮತ್ತು ಮರುವಿವಾಹವನ್ನು ತಡೆಯಲು ನ್ಯಾಯಾಲಯಗಳಿಗೆ ಅಧಿಕಾರವಿಲ್ಲ: ಕೇರಳ ಹೈಕೋರ್ಟ್

0
327

ಸನ್ಮಾರ್ಗ ವಾರ್ತೆ

ಮುಸ್ಲಿಂ ಪುರುಷರು ಕಾನೂನು ಪ್ರಕಾರ ತಲಾಕ್ ಹೇಳುವ ಮತ್ತು ಒಂದಕ್ಕಿಂತ ಅಧಿಕ ವಿವಾಹವಾಗುವ ಅವಕಾಶವನ್ನು ತಡೆಯಲು ನ್ಯಾಯಾಲಯಕ್ಕೆ ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ.

ವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲಿ ಅನುಮತಿಸಲಾಗಿರುವ ವಿಷಯಗಳಿಂದ ನ್ಯಾಯಾಲಯವು ಒಬ್ಬರನ್ನು ತಡೆಯುವುದು ಸಂವಿಧಾನದ 25ನೇ ಪರಿಚ್ಛೇದದ ಪ್ರಕಾರ ಹಕ್ಕು ನಿಷೇಧವಾಗುತ್ತದೆ ಎಂದು ಜಸ್ಟೀಸ್ ಮುಹಮ್ಮದ್ ಮುಸ್ತಾಕ್ ಮತ್ತು ಸೋಫಿ ಥಾಮಸ್ ಒಳಗೊಂಡ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ.

ಕೊನೆಯ ತಲಾಕ್ ಹೇಳುವುದನ್ನು ಮತ್ತು ಇನ್ನೊಂದು ಮದುವೆಯಾಗುವುದನ್ನು ತಡೆಯಬೇಕು ಎಂದು ಕೋರಿ ಮಹಿಳೆಯೋರ್ವರು ಕುಟುಂಬ ನ್ಯಾಯಾಲಯವನ್ನು ಸಂಪರ್ಕಿಸಿದ್ದರು. ಇದಕ್ಕೆ ನ್ಯಾಯಾಲಯ ಅನುಮತಿಯನ್ನು ನೀಡಿತ್ತು. ಇದನ್ನು ಪ್ರಶ್ನಿಸಿ ಮುಸ್ಲಿಂ ಯುವಕ ಸಲ್ಲಿಸಿದ ಅರ್ಜಿಯ ಮೇಲೆ ವಿಚಾರಣೆ ನಡೆಸುತ್ತಾ ಹೈಕೋರ್ಟ್ ಈ ತೀರ್ಪನ್ನು ನೀಡಿದೆ.

ಮೂರನೇ ತಲಾಕ್‌ಗೆ ಕಾಯುತ್ತಿರುವ ವೇಳೆ ಪತ್ನಿಯ ಕುಟುಂಬ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅದರಿಂದಾಗಿ ಮೂರನೇ ತಲಾಕನ್ನು ಕುಟುಂಬ ನ್ಯಾಯಾಲಯ ತಡೆದಿತ್ತು ಮಾತ್ರವಲ್ಲದೇ ಪತ್ನಿಯ ಇನ್ನೊಂದು ಅರ್ಜಿಯನ್ನು ಪರಿಗಣಿಸಿ ಇನ್ನೊಂದು ವಿವಾಹವಾಗುವುದನ್ನೂ ತಡೆದಿತ್ತು. ತನಗಿಷ್ಟ ಬಂದ ಧರ್ಮವನ್ನು ಸ್ವೀಕರಿಸುವುದು ಮಾತ್ರ ಅಲ್ಲ ಅದನ್ನು ಪ್ರಚಾರ ಮಾಡುವುದಕ್ಕೂ ಸಂವಿಧಾನ ಅನುಮತಿ ನೀಡಿದೆ ಎಂದು ಕೋರ್ಟ್ ಹೇಳಿದೆ.