ಸನ್ಮಾರ್ಗ ವಾರ್ತೆ
ರಾಮನಗರ: ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿ ಕರ್ನಾಟಕ ರಾಮನಗರ ರಿಲೀಫ್ ಸೆಲ್ ವತಿಯಿಂದ ರಾಮನಗರ ಪ್ರವಾಹ ಸಂತ್ರಸ್ತರಿಗೆ ಪರಿಹಾರ ಸಾಮಾಗ್ರಿಗಳ ವಿತರಣಾ ಕಾರ್ಯಕ್ರಮ ಎಂ.ಡಿ.ಆರ್ ಕನ್ವೆನ್ಶನ್ ಹಾಲ್ ರಾಮನಗರದಲ್ಲಿ ನಡೆಯಿತು.
ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಮರಕಡ ರಾಮನಗರ ಪ್ರವಾಹ ನಿರ್ವಹಣೆಯ ವಿವರಗಳನ್ನು ಮಂಡಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ರಾಮನಗರ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷೆ ದೀಪಾ ಮುನಿರಾಜು ಮಾತನಾಡಿ, “ರಾಮನಗರದಲ್ಲಿ ಹಿಂದೆಂದೂ ಕಂಡು ಕೇಳರಿಯದ ಪ್ರವಾಹ ಬಂದಿದೆ. ಅನಿರೀಕ್ಷಿತವಾಗಿ ದೇವನು ಕೊಟ್ಟಂತಹ ಪರೀಕ್ಷೆಯಲ್ಲಿ ನಮ್ಮವರೂ ಕೂಡಾ ಕೈ ಚೆಲ್ಲಿ ಕೂತ ಸಂದರ್ಭದಲ್ಲಿ ನಿಸ್ವಾರ್ಥ ಸೇವೆಯೊಂದಿಗೆ ಹೆಚ್.ಆರ್.ಎಸ್ ಸಂಸ್ಥೆ ನಮ್ಮೊಂದಿಗೆ ಬಲವಾಗಿ ನಿಂತು ಕಾರ್ಯನಿರ್ವಹಿಸಿದ್ದು ಶ್ಲಾಘನೀಯ ಎಂದರು.
ರಾಮನಗರ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಇಕ್ಬಲ್ ಹುಸೈನ್ ಮಾತನಾಡಿ, “ರಾಮನಗರದ ಪ್ರವಾಹದಲ್ಲಿ ಜೀವವೊಂದನ್ನು ಬಿಟ್ಟು ಜನರ ಎಲ್ಲಾ ಅಗತ್ಯ ಸಾಮಾಗ್ರಿಗಳು ನಾಶಹೊಂದಿದೆ. ಈ ಸಂದರ್ಭದಲ್ಲಿ ಹಲವು NGOಗಳು ಜಾತಿ ಭೇದವನ್ನು ನೋಡದೆ ಈ ಜಿಲ್ಲೆಯಲ್ಲಿ ಪರಿಹಾರ ಕಾರ್ಯಗಳನ್ನು ಮಾಡಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿ ರಾಜ್ಯ ಮಾಜಿ ಪ್ರಧಾನ ಕಾರ್ಯದರ್ಶಿಯಾದ ಅಕ್ಬರ್ ಅಲಿ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, “ರಾಮನಗರದಲ್ಲಿ ಮಳೆ ಬಂದು ಪ್ರವಾಹ ಸೃಷ್ಟಿಯಾಗಿದ್ದು ದೇವನ ತಪ್ಪಿನಿಂದಲ್ಲ ಬದಲಾಗಿ ಸರಕಾರದ ತಪ್ಪಿನಿಂದ ಈ ಅಪಾರ ನಷ್ಟ ಸಂಭವಿಸಿದೆ. ನಾವು ನಿಮ್ಮಿಂದ ಯಾವುದೇ ಹೊಗಳಿಕೆಯನ್ನು ಬಯಸುವುದಿಲ್ಲ, ನಾವು ನಿಮ್ಮ ಮೊಹಲ್ಲಾಗಳ ಕೇರಿಗಳ ಅಭಿವೃದ್ಧಿ ಮತ್ತು ಶುಚಿತ್ವವನ್ನು ಬಯಸುತ್ತೇವೆ, ಸರಕಾರ ರಾಮನಗರದಲ್ಲಿನ ರಸ್ತೆಗಳನ್ನು ಮತ್ತು ದಾರಿದೀಪಗಳನ್ನು ಸರಿಪಡಿಸಬೇಕು ಮತ್ತು ಇಲ್ಲಿಗೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ನೀಡಬೇಕು. ಅನಿವಾರ್ಯತೆ ಬಂದರೆ ಈ ಜನರ ಸಮಸ್ಯೆಗಳಿಗಾಗಿ ಸರಕಾರದ ಮುಂದೆ ಧರಣಿ ಕೂರುವುದಕ್ಕೂ ಸಿದ್ಧ ಎಂದರು.
ಈ ಕಾರ್ಯಕ್ರಮದಲ್ಲಿ ಪ್ರವಾಹದಿಂದ ಸಂತ್ರಸ್ತರಿಗೆ 10 ತಳ್ಳುಗಾಡಿ, 8 ಹೊಲಿಗೆ ಯಂತ್ರ, 2 ವೀಲ್ಚೇರ್, 130 ಅವಶ್ಯ ಪಾತ್ರೆಗಳ ಕಿಟ್, 80 ಬ್ಲಾಂಕೆಟ್ ಗಳನ್ನು ವಿತರಿಸಲಾಯಿತು.
ವೇದಿಕೆಯಲ್ಲಿ ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿ ರಾಜ್ಯ ಜೊತೆ ಕಾರ್ಯದರ್ಶಿ ಫಾರೂಕ್ ನಶ್ತರ್, ಜಮಾಅತೆ ಇಸ್ಲಾಮಿ ಹಿಂದ್ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಂಚಾಲಕರಾದ ಅಸ್ಲಂ ಪಾಶಾ, ರಾಮನಗರ ಕೌನ್ಸಿಲರ್ಗಳಾದ ಗಿರಿಜಾ, ವಿಜಯ ಕುಮಾರಿ, ಆಯಿಶಾ ಬಾನು, ಎಂ.ಕೆ ಅಝ್ಮತ್ ಖಾನ್, ನಿಝಾಮ್ ಶರೀಫ್, ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ನಾಗಮ್ಮ, ಎಂ.ಡಿ.ಆರ್ ಕನ್ವೆನ್ಶನ್ ಹಾಲ್ ಮಾಲಕರಾದ ಅಲ್ ಹಾಜ್ ಸೈಯದ್ ದಸ್ತಗಿರ್, ಲಯನ್ಸ್ ಕ್ಲಬ್ ಹೆಲ್ತ್ ಚೇರ್ಮೆನ್ ವಾಹಿದ್ ಪಾಶಾ, ರಾಮನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚೇತನ್ ಕುಮಾರ್ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಸುಮಾರು 450 ಫಲಾನುಭವಿಗಳು ಭಾಗವಹಿಸಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಮೌಲಾನಾ ಇಝ್ಹಾರ್ ಅಸ್ರಾರ್ ಉಮರಿ ಪ್ರಾರ್ಥನೆ ನೆರವೇರಿಸಿದರು. ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿ ಬೆಂಗಳೂರು ಝೋನಲ್ ಲೀಡರ್ ಅಬ್ರಾರ್ ಅಹ್ಮದ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುನೀರ್ ಪದ್ರೆಂಗಿ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು.



















