ಲೇಖಕಿ: ನುಸ್ರತ್ ಖದೀಜ ಅಬುಧಾಬಿ
ವಿವಾಹ ಎಂಬುದು ಒಂದು ಪವಿತ್ರವಾದ ಧಾರ್ಮಿಕ ಕರ್ಮವಾಗಿದೆ. ಇದು ಒಂದು ಸತ್ಕರ್ಮ ಮತ್ತು ಆರಾಧನೆ ಮಾತ್ರವಲ್ಲ ಸತ್ಯವಿಶ್ವಾಸದ ಅರ್ಧಾಂಶವಾಗಿದೆ. ವಿವಾಹವು ಹಲವಾರು ಕನಸುಗಳು ನನಸಾಗುವ ಹಾಗೂ ಭಾವನಾತ್ಮಕ ಅಗತ್ಯಗಳನ್ನು ಪೂರೈಸುವ ದಿನವಾಗಿರುತ್ತದೆ. ಸ್ತ್ರೀ ಪುರುಷನ ಮಧ್ಯೆ ಪ್ರಬಲ ಕರಾರು ಮಾಡುವ, ಘನ ಜವಾಬ್ದಾರಿಯನ್ನು ಸ್ವೀಕರಿಸುವ ಹಾಗೂ ಕುಟುಂಬ ಜೀವನವನ್ನು ಆರಂಭಿಸುವ ಘಳಿಗೆಯಾಗಿದೆ. ಈ ವಿವಾಹದ ನಿಕಾಹ್ ನ ಅಂತ್ಯದಲ್ಲಿ ಕೇವಲ ಅಲ್ಲಿರುವ ಜನರು ಮಾತ್ರವಲ್ಲ ದೇವಚರರು ಕೂಡಾ ಪ್ರಾರ್ಥಿಸುತ್ತಾರೆ. ಅದು ಅಲ್ಲಾಹನ ಕರುಣೆಯು ವರ್ಷಿಸುವ ಸಮಯವಾಗಿರುತ್ತದೆ.
ಕೆಲವು ವರ್ಷಗಳ ಹಿಂದಿನ ಇತಿಹಾಸವನ್ನು ನೋಡಿದರೆ ಅಂದು ತಂದೆತಾಯಿಯರು ತಮ್ಮ ಹೆಣ್ಣು ಮಕ್ಕಳ ವಿವಾಹಕ್ಕಾಗಿ ಹಣವನ್ನು ಉಳಿತಾಯ ಮಾಡಿ ಇಡುತ್ತಿದ್ದರು. ಆ ಕಾಲದಲ್ಲಿ ಕುಟುಂಬ ನಿರ್ವಹಣೆಗಳಂತ ಎಲ್ಲಾ ಖರ್ಚು ವೆಚ್ಚಗಳು ಕಡಿಮೆಯಾಗಿತ್ತು. ಆದರೆ ಇಂದಿನ ಕಾಲದಲ್ಲಿ ಉಳಿತಾಯವೆಂಬುದು ಹೆಚ್ಚಿನ ಕುಟುಂಬಗಳಿಗೆ ಮರೀಚಿಕೆಯಾಗಿದ್ದು ಕೆಲವು ಬೆರಳೆಣಿಕೆಯಷ್ಟು ಮಂದಿಗೆ ಮಾತ್ರ ಸಾಧ್ಯ. ಉಪ್ಪಿನಿಂದ ಹಿಡಿದು ಕರ್ಪೂರದವರೆಗಿನ ಎಲ್ಲಾ ದಿನಬಳಕೆಯ ವಸ್ತುಗಳೆಲ್ಲವೂ ದುಬಾರಿಯಾಗಿದ್ದು ಮನೆ ನಿರ್ಮಾಣ ಮತ್ತು ನವೀರಕರಣ, ಸ್ವಂತ ವಾಹನ, ಮಕ್ಕಳ ವಿದ್ಯಾಭ್ಯಾಸ ಹೀಗೆ ಎಲ್ಲಾ ಖರ್ಚು ವೆಚ್ಚಗಳು ದಿನದಿಂದ ದಿನಕ್ಕೆ ದುಬಾರಿಯಾಗುತ್ತಿದೆ. ಹೆಣ್ಣು ಮಕ್ಕಳ ವಿವಾಹದ ಖರ್ಚಿಗೆ ಎಂದು ಹಣ ಉಳಿತಾಯಮಾಡಿ ಕಟ್ಟಿಟ್ಟವರು ಬಹಳ ವಿರಳ. ಕೊರೊನಾ ಎಂಬ ಸಾಂಕ್ರಮಿಕ ರೋಗದ ಲಾಕ್ ಡೌನ್ ನಿಂದ ಎಲ್ಲರ ವ್ಯವಹಾರಗಳು ಅಸ್ತವ್ಯಸ್ತವಾಗಿ ಚೇತರಿಸಿಕೊಳ್ಳುತ್ತಿದೆ. ಅನಿರೀಕ್ಷತ ಲಾಕ್ ಡೌನ್ ನಿಂದ ಹೆಚ್ಚಿನವರ ಉಳಿತಾಯ ಖಾಲಿಯಾಗಿದೆ. ಕೆಲವರು ವ್ಯವಹಾರದ ಹೂಡಿಕೆಯ ಹಣದ ಲಾಭ ಸಿಗುವ ನಿರೀಕ್ಷೆಯಲ್ಲಿದ್ದಾರೆ. ಇನ್ನು ಕೆಲವರು ಹೆಣ್ಣು ಮಕ್ಕಳ ವಿವಾಹಕ್ಕಾಗಿ ತಮ್ಮ ಆಸ್ತಿಯನ್ನು ಮಾರುವ ಯೋಜನೆಯಲ್ಲಿದ್ದಾರೆ. ಮತ್ತೆ ಕೆಲವರು ತಮ್ಮ ಬಂಧು ಮಿತ್ರರಿಂದ ದಾನಧರ್ಮ ಅಥವಾ ಉಡುಗೊರೆಯ ರೂಪದಲ್ಲಿ ಹಣ ಅಥವಾ ಚಿನ್ನ ಸಿಗುವ ಭರವಸೆಯಲ್ಲಿದ್ದಾರೆ. ಇನ್ನು ಕೆಲವರು ಯಾರು ಯಾರಿಂದ ಎಷ್ಟು ಸಾಲ ಪಡೆಯುವುದೆಂದು ಪಟ್ಟಿ ಮಾಡಿ ನಿರೀಕ್ಷೆಯಲ್ಲಿದ್ದಾರೆ. ಕೆಲವೊಮ್ಮೆ ಸಂಬಂಧಿಕರು ಸಾಲ ನೀಡುವುದಾದರೂ ಒಲ್ಲದ ಮನಸ್ಸಿನಿಂದಲೇ ನೀಡುತ್ತಾರೆ. ಕೆಲವು ಮಧ್ಯಮ ವರ್ಗದವರು ಸ್ವಾಭಿಮಾನದಿಂದ ಬೇಡಲೂ, ಸಾಲ ಪಡೆಯಲೂ ಸಾಧ್ಯವಾಗದೆ ಕಷ್ಟ ಪಡುತ್ತಾರೆ.
ಮದುವೆಯ ದಿನಗಳು ಹತ್ತಿರವಾಗುತಿದ್ದಂತೆ ಹೆಣ್ಣು ಹೆತ್ತ ತಂದೆ ತಾಯಿಯರು ನಿರೀಕ್ಷಿಸುವಂತಹ ಹಣ ಸಮಯಕ್ಕೆ ಸಿಗದಿದ್ದಾಗ ಅವರು ಅನುಭವಿಸುವ ಮಾನಸಿಕ ಸಂಘರ್ಷ, ನಿರಾಶೆ, ದುಃಖ ವಿವರಿಸಲಸಾಧ್ಯ. ನಮ್ಮ ನಿರೀಕ್ಷೆಯಂತೆ ಸಂಬಂಧಿಕರಿಂದ ಯಾವುದೇ ಸಹಾಯ ಸಿಗದಿದ್ದಾಗ ಯಾವುದೇ ಕಾರಣಗಳಿಲ್ಲದೆ ಅವರ ಬಗ್ಗೆ ಮನಸ್ಸಿನಲ್ಲಿ ದ್ವೇಷವುಂಟಾಗುತ್ತದೆ. ಹೇಗಾದರೂ ಸಾಲ ಮಾಡಿ ಮಕ್ಕಳ ಮದುವೆಯನ್ನು ಮಾಡುತ್ತಾರೆ. ಸಾಲವನ್ನು ಯಾವ ರೀತಿ ತೀರಿಸುವುದು ಎಂಬ ಬಗ್ಗೆ ಆಲೋಚಿಸುವುದಿಲ್ಲ. ಸರಿಯಾದ ಸಮಯದಲ್ಲಿ ಸಾಲವನ್ನು ಮರುಪಾವತಿಸದಿದ್ದರೆ ಸಾಲ ನೀಡಿದ ಸಂಬಂಧಿಕರ ಮನಸ್ಸಿನಲ್ಲಿ ದ್ವೇಷವುಂಟಾಗುವ ಸಾಧ್ಯತೆಗಳಿರುತ್ತದೆ. ನಮ್ಮ ಸಮುದಾಯುದ ಜನರು ಅನುಭವಿಸುವ ಈ ಸಂಕಷ್ಟಗಳಿಗೆ ಶಾಶ್ವತವಾದ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ. ಶ್ರೀಮಂತರು, ಸಮುದಾಯದ ನಾಯಕರು ಮತ್ತು ವಿದ್ವಾಂಸರು ಸೇರಿ ಚರ್ಚಿಸಿ ವಿವಾಹದ ವಿಷಯದಲ್ಲಿ ಶಾಶ್ವತವಾದ ಬದಲಾವಣೆಯನ್ನು ತರುವ ಅಗತ್ಯವಿದೆ.
ಇಸ್ಲಾಮಿನಲ್ಲಿ ವಿವಾಹಕಾರ್ಯವು ಅತ್ಯಂತ ಸರಳವಾಗಿದೆ. ಇಂದು ಹೆಚ್ಚಿನವರೆಲ್ಲರೂ ಇಸ್ಲಾಮಿ ಸಾಹಿತ್ಯಗಳನ್ನು ಓದಿ, ಇಸ್ಲಾಮೀ ಶಿಕ್ಷಣ ಸಂಸ್ಥೆಗಳಲ್ಲಿ ಕಲಿತು, ಪ್ರವಚನ ಕಾರ್ಯಕ್ರಮಗಳಿಂದ ಹೆಚ್ಚಿನ ಧಾರ್ಮಿಕ ಜ್ಞಾನ ಪಡೆದಿರುತ್ತಾರೆ. ವಿವಾಹದ ಸಮಯದಲ್ಲಿ ಮಹ್ರ್ ನೀಡುವುದಕ್ಕೆ ಮಾತ್ರ ಇಸ್ಲಾಮಿನಲ್ಲಿ ಮಹತ್ವವಿದೆ ಎಂಬ ವಿಷಯ ತಿಳಿದವರಾಗಿರುತ್ತಾರೆ. ವಿವಾಹವನ್ನು ಅತ್ಯಂತ ಸರಳವಾಗಿ ನಡೆಸಲು ನಮ್ಮ ಸಮುದಾಯದ ಮಹಿಳೆಯರ ಸಹಕಾರ ಅಗತ್ಯವಾಗಿದೆ. ಮದುಮಗಳು ಸುಂದರವಾದ ವಸ್ತ್ರ ಧರಿಸುವ ದಿನವಾದರೂ ವಸ್ತ್ರಾಭರಣಗಳ ಖರೀದಿಯಲ್ಲಿ ದುಂದುವೆಚ್ಚವಾಗದಂತೆ ಜಾಗರೂಕತೆ ವಹಿಸಬೇಕು. ವಿವಾಹವಾಗುವ ಮದುಮಗಳು ಸಿನಿಮಾ, ಧಾರಾವಾಹಿ ಅಥವಾ ಚಿನ್ನ, ಸೀರೆಯ ಮಳಿಗೆಯ ಜಾಹೀರಾತುಗಳಲ್ಲಿ ನೋಡಿದ ಅದೇ ವಿನ್ಯಾಸದ ವಸ್ತ್ರಾಭರಣಗಳು ಧರಿಸಬೇಕೆಂದಿಲ್ಲ. ನಮ್ಮ ಮನೆಗೆ ಬರುವ ಮದುಮಗಳು ತವರು ಮನೆಯಿಂದ ಚಿನ್ನವನ್ನು ತರಬೇಕಾಗಿಲ್ಲ, ಮದುವೆಯ ಖರ್ಚನ್ನು ನಾವೇ ಭರಿಸುತ್ತೇವೆಂಬ ಮಾತಿನಿಂದ ಸಾಂತ್ವನದ ಮಾತುಗಳೊಂದಿಗೆ ವರನ ತಾಯಿ ಮತ್ತು ಸಹೋದರಿಯರು ತೀರ್ಮಾನಿಸಿದರೆ ವಿವಾಹದ ಹೆಚ್ಚಿನ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತದೆ.
ದುಡಿಯಲು ಆರಂಭಿಸುವ ಯುವಕರಿಗೆ ದೊಡ್ಡ ಮೊತ್ತದ ಮಹ್ರ್ ಮತ್ತು ಹಲವು ದಿನಗಳ ಔತಣಕೂಟಗಳ ಹಣ ಒಟ್ಟುಗೂಡಿಸಲಿಕ್ಕಾಗಿ ವಿವಾಹವನ್ನು ಮುಂದೂಡಬೇಡಿರಿ. ಅವರ ಜೀವನದಲ್ಲಿ ಕಳೆದು ಹೋಗುವ ಎರಡು ಮೂರು ವರ್ಷಗಳ ಯೌವನ ಅತ್ಯಂತ ದೊಡ್ಡ ನಷ್ಟವಾಗಿದೆ. ಚಿನ್ನದ ಬೆಲೆಯು ದುಬಾರಿಯಾಗಿದೆ. ಬಡ ಹಾಗೂ ಮಧ್ಯಮವರ್ಗದವರು ತಮ್ಮ ಮೂಲಭೂತ ಬೇಡಿಕೆಗಳನ್ನು ಪೂರೈಸಲು ಕಷ್ಟಪಡುತ್ತಿದ್ದಾರೆ. ವಿವಾಹಗಳಲ್ಲಿ ಚಿನ್ನವನ್ನು ಒಂದು ಮುಖ್ಯ ವಸ್ತುವನ್ನಾಗಿ ಪರಿಗಣಿಸಬೇಡಿರಿ. ಯುವ ವಧು ವರರು ಇದಕ್ಕೆ ತಯಾರಾಗಬೇಕು. ಚಿನ್ನ ಧರಿಸದವರನ್ನು ವಿಮರ್ಷಿಸಬೇಡಿರಿ. ಚಿನ್ನಾಭರಣಗಳನ್ನು ಮದುವೆಯ ಸಮಯದಲ್ಲಿಯೇ ಖರೀದಿಸಬೇಕೆಂದಿಲ್ಲ. ಹಣ ಲಭ್ಯತೆಗನುಸಾರವಾಗಿ ಯಾವಾಗ ಬೇಕಾದರೂ ಖರೀದಿಸಬಹುದಾಗಿದೆ.
ಚಿನ್ನ ಮತ್ತು ವಿವಾಹ ಹೆಚ್ಚಿನ ಹೆಣ್ಣು ಹೆತ್ತವರನ್ನು ಹಲವು ಕಾಲದವರೆಗೆ ಸಾಲ ಮತ್ತು ದಾರಿದ್ರ್ಯದಲ್ಲಿ ಸಿಲುಕಿಸುತ್ತದೆ. ಎಷ್ಟೋ ಮಂದಿ ತಮ್ಮ ಯೌವನದ ಉಳಿತಾಯವನ್ನು ಮಕ್ಕಳ ಮದುವೆಗೆ ಖರ್ಚು ಮಾಡಿ ಹಜ್ಜ್ ಮಾಡುವ ಮಹಾ ಸೌಭಾಗ್ಯವನ್ನು ಕೂಡಾ ಕಳೆದುಕೊಳ್ಳುತ್ತಾರೆ. ಒಬ್ಬ ವ್ಯಕ್ತಿಯು ಉಳಿತಾಯವನ್ನು ತನ್ನ ಜೀವಮಾನದಲ್ಲಿ ತನ್ನ ಒಡೆತನದಲ್ಲೇ ಇಟ್ಟು ಮರಣಾನಂತರವೇ ವಾರೀಸುದಾರರ ಮಧ್ಯೆ ವಿತರಿಸಬೇಕೆಂಬ ಪವಿತ್ರ ಕುರ್ ಆನ್ ನ ಆಜ್ಞೆಯು ಯುಕ್ತಿಪೂರ್ಣವಾಗಿದೆ. ತಮ್ಮ ಉಳಿತಾಯದ ದೊಡ್ಡ ಪಾಲನ್ನೇ ವಿವಾಹ, ಚಿನ್ನ, ಉಡುಗೊರೆ ಎಂದು ಖರ್ಚು ಮಾಡಿದ ಎಷ್ಟೋ ಜನರು ತಮ್ಮ ಜೀವಮಾನದಲ್ಲಿ ಮೂಲಭೂತ ಅಗತ್ಯಗಳನ್ನು ಪೂರೈಸಲು ಕಷ್ಟಪಡುತ್ತಾರೆ. ಕಳೆದ ಹಲವಾರು ವರ್ಷಗಳಲ್ಲಿ ನಾವು ಯಾರದೆಲ್ಲ ವಿವಾಹಕ್ಕೆ ಹೋಗಿದ್ದೇವೆಯೋ ಅವರ ಮನೆಯವರನ್ನೆಲ್ಲ ಪಟ್ಟಿ ಮಾಡಿ ಆಮಂತ್ರಿಸಬೇಕೆಂದಿಲ್ಲ. ಹಣವಿಲ್ಲದವರಿಗೆ ಮನೆಯಲ್ಲಿ ಅಥವಾ ಮಸೀದಿಯಲ್ಲಿ ಚಹಾ, ಸಿಹಿ ತಿಂಡಿ ನೀಡಿ ಸರಳ ವಿವಾಹವಾದರೂ ಸಾಕಾಗುತ್ತದೆ.
ವಿವಾಹವೆಂಬುದು ಶ್ರೀಮಂತರಿಗೆ ತಮ್ಮ ಸಂಪತ್ತು , ಕಾರು, ವಸ್ತ್ರಾಭರಣ ಪ್ರದರ್ಶನ ಮಾಡುವಂತಹ, ಅನ್ನಪಾನೀಯಗಳ, ಹೂ ದೀಪಗಳ ಅಲಂಕಾರಗಳ ಬಗ್ಗೆ ಹೆಮ್ಮೆ ಪಡುವಂತಹ, ಪಟಾಕಿಯಿಂದ ಹಣವನ್ನು ಸುಡುವಂತಹ ದುಂದುವೆಚ್ಚದ ಒಂದು ಭೀಕರ ಹಾಗೂ ದುರಂತ ಅವಸ್ಥೆಗೆ ತಲುಪಿದೆ. ಈ ದುಬಾರಿ ಬೆಲೆಯ ವಸ್ತ್ರಾಭರಣ, ಅಲಂಕಾರ, ನಾಲ್ಕು- ಐದು ದಿನಗಳ ಔತಣಕೂಟ ಎಲ್ಲವೂ ಜನರನ್ನು ತೃಪ್ತಿಪಡಿಸಲು ಮಾತ್ರ. ಸಾವಿರಾರು ಜನರನ್ನು ಆಹ್ವಾನಿಸುವ ವಿವಾಹ ಸಮಾರಂಭ ಕುಟುಂಬ ಸಂಬಂಧವನ್ನು ಸುದೃಢಗೊಳಿಸುತ್ತದೆಯಾದರೂ ಬೇರೆ ಹಲವು ರೀತಿಯ ಸಮಸ್ಯೆಗಳನ್ನುಂಟು ಮಾಡುತ್ತದೆ. ಹೂ ದೀಪಗಳಿಂದ ಅಲಂಕೃತವಾದ ವೇದಿಕೆಗಳಿಲ್ಲದ ಸರಳ ವಿವಾಹವನ್ನು ಪ್ರೋತ್ಸಾಹಿಸಬೇಕು. ಸುಂದರವಾದ ಹೂವಿನ ಅಲಂಕಾರದ ವೇದಿಕೆಯಲ್ಲಿ ಕುಳಿತುಕೊಳ್ಳುವಾಗ ಅದೇ ರೀತಿ ದುಬಾರಿ ವಸ್ತ್ರ, ಮೈತುಂಬಾ ಆಭರಣಗಳಿರಬೇಕಾಗುತ್ತದೆ. ವಿವಾಹಕ್ಕೆ ಬರುವವರೆಲ್ಲರೂ ನೋಡುವುದೆಲ್ಲವೂ ಸುಂದರವಾಗಿ ಕಾಣಬೇಕೆಂದು ನಿರೀಕ್ಷಿಸುತ್ತಾರೆ. ಕೆಲವು ಗಂಟೆಗಳ ಸೌಂದರ್ಯಕ್ಕಾಗಿ ಕೇವಲ ಮೇಕಪ್ ಮಾಡಲು ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ಅದನ್ನು ತೊಳೆದು ಸಮಯಕ್ಕೆ ಸರಿಯಾಗಿ ವುಝೂ ಮಾಡಲು ಅಸಾಧ್ಯ. ವಿವಾಹ ಜೀವನದ ಆರಂಭದಲ್ಲಿ ನಮಾಝ್ ಗೆ ಮಹತ್ವ ನೀಡದಿದ್ದರೆ ಅವರ ದಾಂಪತ್ಯ ಜೀವನದಲ್ಲಿ ಸಮೃದ್ಧಿಯಿರಲಾರದು. ಮದುವೆಯ ದಿನ ಕೂಡಾ ಮದುಮಗಳು ಮತ್ತು ಇತರ ಸ್ತ್ರೀಯರು ತಮ್ಮ ಸೌಂದರ್ಯವನ್ನು ಪರಪುರುಷರಿಂದ ಕಡ್ಡಾಯವಾಗಿ ಮರೆಸಬೇಕು.
ಕೊರೊನಾ ಕಾಲದ ವಿವಾಹವು ಹಣವಿಲ್ಲದವರ ಪಾಲಿಗೆ ಒಂದು ದೊಡ್ಡ ಅನುಗ್ರಹವಾಗಿತ್ತು. ಯಾರಿಗೂ ನಿಯಂತ್ರಿಸಲು ಅಸಾಧ್ಯವಾಗಿದ್ದ ವಿವಾಹದ ರೀತಿಗಳನ್ನು ರಾತ್ರಿ ಹಗಲಾಗುವುದರಲ್ಲಿ ಕೊರೊನಾವೆಂಬ ಕಣ್ಣಿಗೆ ಕಾಣದ ವೈರಸ್ ನಿಯಂತ್ರಿಸಿತ್ತು. ಇಸಾಮ್ ಧರ್ಮದ ಆದರ್ಶದಂತೆ ಸರಳ ವಿವಾಹಗಳು ಜಾರಿಯಾಗಿತ್ತು. ಸೀಮಿತ ಜನರ ವಿವಾಹವಾದುದರಿಂದ ಹೆಚ್ಚಿನ ವಿವಾಹಗಳು ವರನ ಕಡೆಯಿಂದ ವಲೀಮ ನೀಡುವ ಆದರ್ಶವನ್ನು ತೋರಿಸಿದ್ದವು. ಆದರೆ ಕೊರೊನಾದ ಶಕ್ತಿ ಕಡಿಮೆಯಾಗುತ್ತಲೇ ಮತ್ತೆ ಅದೇ ವಿವಾಹದ ಹೆಸರಿನಲ್ಲಿ ದುಂದುವೆಚ್ಚ ಪುನಃ ಆರಂಭವಾಗಿದೆ.
ಇಂದು ನಾವು ಕಾಣುತ್ತಿರುವ ವಿವಾಹಗಳು ಬಹಳ ಸುಂದರವಾಗಿ, ಅತ್ಯಾಕರ್ಷಕವಾಗಿ, ಸುಸಜ್ಜಿತವಾಗಿ ಕಂಡರೂ ಅದರ ಹಿಂದೆ ಹಣವನ್ನು ಒಟ್ಟುಗೂಡಿಸುವ ಪರಿಶ್ರಮ, ಕಷ್ಟ, ನೋವು ವಿವರಿಸಲು ಅಸಾಧ್ಯ. ವಿವಾಹವೆಂಬುದು ಎರಡೂ ಕುಟುಂಬದವರಿಗೂ ಉತ್ಸಾಹ ಹಾಗೂ ಸಂತೋಷದ ಸಂಭ್ರಮವಾಗಲಿ. ತಮಗೆ ಸಾಧ್ಯವಿಲ್ಲದಷ್ಟು ಹಣ ಒಟ್ಟುಗೂಡಿಸುವ ಮಾನಸಿಕ ಸಂಘರ್ಷವನ್ನುಂಟು ಮಾಡುವ ಸಂದರ್ಭವಾಗಿ ಮಾರ್ಪಡದಿರಲಿ. ವಿವಾಹವೆಂಬುದು ಅಲ್ಲಾಹನನ್ನು ಸಂತೃಪ್ತಿಪಡಿಸುವ, ಕೃತಜ್ಞತೆ ಸಲ್ಲಿಸುವ ದಿನವಾಗಲಿ.












