ಸನ್ಮಾರ್ಗ ವಾರ್ತೆ
ಸುರತ್ಕಲ್: ಟೋಲ್ ಗೇಟ್ ತೆರವಿಗೆ ಸಂಬಂಧಿಸಿ ಹೆದ್ದಾರಿ ಪ್ರಾಧಿಕಾರ ಹಾಗೂ ರಾಜ್ಯ ಸರಕಾರ ದಿನಾಂಕ ಪ್ರಕಟಿಸಲು ಮುಂದಾಗದಿರುವುದನ್ನು ಖಂಡಿಸಿ ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯು ಅಕ್ಟೋಬರ್ 18ರಂದು ಸುರತ್ಕಲ್ ಟೋಲ್ ಗೇಟ್ ತೆರವುಗೊಳಿಸಲು ನೇರ ಕಾರ್ಯಾಚರಣೆಗೆ ದಿನಾಂಕವನ್ನು ನಿಗದಿ ಪಡಿಸಿದೆ.
ಈ ಬಗ್ಗೆ ಸುರತ್ಕಲ್ನ ಸ್ನೇಹ ಹೊಟೇಲ್ ಸಭಾಂಗಣದಲ್ಲಿ ಸಭೆ ನಡೆಸಿದ ಸಮಿತಿಯು, ಟೋಲ್ ಗೇಟ್ ತೆರವಿಗೆ ಸಂಬಂಧಿಸಿ ಹೆದ್ದಾರಿ ಪ್ರಾಧಿಕಾರ, ರಾಜ್ಯ ಸರಕಾರ ದಿನಾಂಕ ಪ್ರಕಟಿಸಲು ಮುಂದಾಗದಿರುವುದನ್ನು ಗಮನಿಸಿದ್ದು, ಕೊಟ್ಟ ಮಾತಿನಂತೆ ತಕ್ಷಣ ಟೋಲ್ ಸಂಗ್ರಹ ಸ್ಥಗಿತಗೊಳ್ಳಿಸುವಂತೆ ರಾಜ್ಯ ಸರಕಾರ ಹಾಗೂ ಹೆದ್ದಾರಿ ಪ್ರಾಧಿಕಾರಕ್ಕೆ ಎಚ್ಚರಿಕೆ ನೀಡಿದೆ. ಇಲ್ಲದಿದ್ದರೇ ಸಾಮೂಹಿಕ ಧರಣಿಯ ಘೋಷಣೆಯಂತೆ ಅಕ್ಟೋಬರ್ 18ರಂದು ಸುರತ್ಕಲ್ ಟೋಲ್ ಗೇಟ್ ತೆರವುಗೊಳಿಸಲು ನೇರ ಕಾರ್ಯಾಚರಣೆ ನಡೆಸುವುದಾಗಿ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.
ಸಭೆಯ ಅಧ್ಯಕ್ಷತೆಯನ್ನು ಖ್ಯಾತ ನ್ಯಾಯವಾದಿ ದಿನೇಶ್ ಹೆಗ್ಡೆ ಉಳೆಪಾಡಿ ವಹಿಸಿದ್ದರು. ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ, ಮಾಜಿ ಉಪ ಮೇಯರ್ ಪುರುಷೋತ್ತಮ ಚಿತ್ರಾಪುರ, ಹಿರಿಯ ದಲಿತ ನಾಯಕ ಎಂ. ದೇವದಾಸ್, ಮಾಜಿ ಕಾರ್ಪೊರೇಟರ್ ರೇವತಿ ಪುತ್ರನ್, ಸಾಮಾಜಿಕ ಮುಂದಾಳು ಎಮ್ ಜಿ ಹೆಗ್ಡೆ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ರಾಲ್ಪಿ ಡಿ ಕೋಸ್ತ ಹೆಜಮಾಡಿ, ದಲಿತ ಸಂಘರ್ಷ ಸಮಿತಿಯ ರಘು ಎಕ್ಕಾರು, ಕುಳಾಯಿ ನಾಗರಿಕ ಸಮಿತಿಯ ಗಂಗಾಧರ ಬಂಜನ್, ಡಿವೈಎಫ್ಐ ನ ಬಿ ಕೆ ಇಮ್ತಿಯಾಜ್, ಶ್ರೀನಾಥ್ ಕುಲಾಲ್, ಮಕ್ಸೂದ್ ಬಿಕೆ, ಕಾಂಗ್ರೆಸ್ ಮುಂದಾಳು ವಸಂತ ಬರ್ನಾಡ್, ಮೂಲ್ಕಿ ನಗರ ಪಂಚಾಯತ್ ಸದಸ್ಯ ಯೋಗೀಶ್ ಕೋಟ್ಯಾನ್, ಗ್ರಾಪಂ ಸದಸ್ಯರಾದ ಸತೀಶ್ ಕೋಟ್ಯಾನ್, ಅಬ್ದುಲ್ ಅಜೀಜ್, ನಿಸಾರ್ ಬಜ್ಪೆ, ಸಿರಾಜ್ ಬಜ್ಪೆ, ಹೋರಾಟ ಸಮಿತಿಯ ಹರೀಶ್ ಪೇಜಾವರ, ರಾಜೇಶ್ ಶೆಟ್ಟಿ ಪಡ್ರೆ, ರಮೇಶ್ ಟಿ ಎನ್, ರಾಜೇಶ್ ಪೂಜಾರಿ ಕುಳಾಯಿ, ಸತೀಶ್ ಕರ್ಕೇರ ಹೆಜಮಾಡಿ ಮತ್ತಿತರರು ಉಪಸ್ಥಿತರಿದ್ದರು.












