ಒಂದು ವರ್ಷಕ್ಕಿಂತ ಹೆಚ್ಚು ಕಾಲ ಜಮ್ಮುವಿನಲ್ಲಿ ನೆಲೆಸಿರುವವರಿಗೂ ಮತದಾನ ಹಕ್ಕು!

0
346

ಸನ್ಮಾರ್ಗ ವಾರ್ತೆ

ಜಮ್ಮು: ಒಂದು ವರ್ಷಕ್ಕಿಂತ ಹೆಚ್ಚು ಕಾಲ ಜಮ್ಮುವಿನಲ್ಲಿ ನೆಲೆಸಿರುವವರಿಗೆ ನಿವಾಸ ಪ್ರಮಾಣಪತ್ರ ನೀಡಲು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಅರ್ಹರು ಯಾರೂ ಹೊರಗುಳಿಯದಂತೆ ನೋಡಿಕೊಳ್ಳಲು ಹೊಸ ಆದೇಶ ನೀಡಲಾಗಿದೆ ಎಂದು ವಿವರಿಸಲಾಗಿದೆ. ಜಿಲ್ಲಾಡಳಿತ ಮಂಗಳವಾರ ಬೆಳಗ್ಗೆ ತಹಸೀಲ್ದಾರ್‌ಗಳಿಗೆ ಆದೇಶ ನೀಡಿದ್ದು, ಇದರ ಪರಿಣಾಮವಾಗಿ ಹೊರ ರಾಜ್ಯದವರೂ ಮತದಾರರ ಪಟ್ಟಿಯಲ್ಲಿ ಸ್ಥಾನ ಪಡೆಯಲಿದ್ದಾರೆ.

ಆದೇಶದ ಪ್ರಕಾರ, ನಿವಾಸ ಪ್ರಮಾಣಪತ್ರ ಪಡೆಯಲು ಆಧಾರ್ ಕಾರ್ಡ್, ನೀರು, ವಿದ್ಯುತ್ ಮತ್ತು ಅಡುಗೆ ಅನಿಲ ಸಂಪರ್ಕದ ದಾಖಲೆಗಳು, ಬ್ಯಾಂಕ್ ಪಾಸ್‌ಬುಕ್‌ಗಳು, ಪಾಸ್‌ಪೋರ್ಟ್, ಭೂ ದಾಖಲೆಗಳು, ನೋಂದಾಯಿತ ದಾಖಲೆಗಳು ಇತ್ಯಾದಿಗಳನ್ನು ಸಲ್ಲಿಸಬಹುದು. ಮತದಾರರ ಪಟ್ಟಿಗೆ ಹೆಸರು ಸೇರಿಸಲು ಇತರೆ ದಾಖಲೆಗಳ ಹೊರತಾಗಿ ನಿವಾಸ ಪ್ರಮಾಣ ಪತ್ರವನ್ನೂ ಸ್ವೀಕರಿಸಬಹುದು ಎಂದು ಚುನಾವಣಾ ಆಯೋಗ ಸೂಚಿಸಿತ್ತು.

2019ರಲ್ಲಿ ವಿಶೇಷ ಸ್ಥಾನವನ್ನು ತೆರವುಗೊಳಿಸಿದ ಬಳಿಕ ಮೊದಲ ಬಾರಿ ಜಮ್ಮು ಕಾಶ್ಮೀರದಲ್ಲಿ ಮತದಾರ ಪಟ್ಟಿ ಪರಿಷ್ಕರಣೆ ನಡೆಯುತ್ತಿದೆ. ವಿಶೇಷ ಸ್ಥಾನಮಾನ ಇಲ್ಲದ್ದರಿಂದ 1950,51ರ ಪ್ರಜಾ ಪ್ರಾತಿನಿಧ್ಯ ಕಾಯಿದೆ ಜಮ್ಮು ಕಾಶ್ಮೀರಕ್ಕೂ ಅನ್ವಯವಾಗುತ್ತದೆ.

ಜಮ್ಮು ಮತ್ತು ಕಾಶ್ಮೀರದ ಹೊರಗಿನವರು ಸೇರಿದಂತೆ ಸುಮಾರು 25 ಲಕ್ಷ ಹೊಸ ಮತದಾರರು ಇರಲಿದ್ದಾರೆ ಎಂದು ಕಾಶ್ಮೀರದ ಮುಖ್ಯ ಚುನಾವಣಾಧಿಕಾರಿ ಈ ಹಿಂದೆ ಮಾಹಿತಿ ನೀಡಿದ್ದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಕೆಲಸ ಮಾಡುತ್ತಿರುವ ಮತ್ತು ವಾಸಿಸುತ್ತಿರುವ ಇತರ ರಾಜ್ಯಗಳ ಜನರು ಸಹ ಮತದಾರರ ಪಟ್ಟಿಗೆ ತಮ್ಮ ಹೆಸರನ್ನು ಸೇರಿಸಬಹುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಬೇರೆಲ್ಲೂ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರಬಾರದು ಎಂಬುದು ಒಂದೇ ಷರತ್ತು.

ಕೇಂದ್ರ ಸರ್ಕಾರ ಚುನಾವಣೆಯನ್ನು ಹಾಳು ಮಾಡಲು ಯತ್ನಿಸುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ಪ್ರಸ್ತುತ ಜಮ್ಮು ಮತ್ತು ಕಾಶ್ಮೀರದಲ್ಲಿ 76 ಲಕ್ಷ ಮತದಾರರಿದ್ದಾರೆ. 20 ರಿಂದ 25 ಲಕ್ಷ ಹೊಸ ಮತದಾರರು ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರಲಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ನಾಲ್ಕು ವರ್ಷಗಳಿಂದ ಚುನಾಯಿತ ಸರ್ಕಾರವಿಲ್ಲ. ಮುಂದಿನ ವರ್ಷ ಚುನಾವಣೆ ನಡೆಯುವ ನಿರೀಕ್ಷೆ ಇದೆ.