‘ಜಿನ್‌’‌ ಚಿನ್ನ ಕದ್ದಿರುವ ಶಂಕೆ ವ್ಯಕ್ತಪಡಿಸಿದ ಕುಟುಂಬ: ಪೊಲೀಸರಿಂದ ಸತ್ಯ ಬಯಲು

0
431

ಸನ್ಮಾರ್ಗ ವಾರ್ತೆ

ಮುಂಬೈ: ಕಳೆದ ಒಂದು ವರ್ಷದಿಂದ ಮುಂಬೈನ ಬೈಕುಲ್ಲಾದ ಒಂದು ಮನೆಯಿಂದ ನಿರಂತರ ಚಿನ್ನ ಕಳ್ಳತನವಾಗುತ್ತಿತ್ತು. ಚಿನ್ನಾಭರಣ ಕಳ್ಳತನಗೈಯ್ಯುತ್ತಿರುವುದು ಜಿನ್ನ್(ಯಕ್ಷ) ಎಂದು ಕುಟುಂಬ ನಂಬಿತ್ತು. ಹಾಗಾಗಿ ಪೊಲೀಸರಿಗೆ ದೂರು ಕೊಟ್ಟಿರಲಿಲ್ಲ. ಸಾಕ್ಷಾತ್ ಜಿನ್ ಇದೊಂದು ಅವಕಾಶವೆಂದು ತಿಳಿದುಕೊಂಡು ಹಲವು ಬಾರಿ ಲಕ್ಷಾಂತರ ರೂಪಾಯಿಯ ಚಿನ್ನ ಎಗರಿಸುತ್ತಿತ್ತು. ಜಿನ್‍ಗೆ ಹೆದರಿ 3.75 ಕೋಟಿ ರೂಪಾಯಿ ಮೌಲ್ಯದ ತಮ್ಮ ಮನೆಯನ್ನು ಕೇವಲ 1.5 ಕೋಟಿ ರೂಪಾಯಿಗೆ ಮಾರಲು ಮನೆಯವರು ತಯಾರಾಗಿದ್ದರು.

ಆ ನಂತರವೇ ನಿಜವಾದ ಮಾಹಿತಿ ಹೊರ ಬೀಳಲು ಆರಂಭಿಸಿತ್ತು. ಕೊನೆಗೆ ಕಳ್ಳನ ಪತ್ತೆಗೆ ಪೊಲೀಸರನ್ನೇ ಅವಲಂಬಿಸಬೇಕಾಯಿತು.

ಅಬ್ದುಲ್ ಖಾದರ್ ಘೋಡಾವಾಲಾ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಸುಮಾರು ಒಂದು ವರ್ಷದಿಂದ ಅಬ್ದುಲ್ ಖಾದರ್ ಅವರ ಮನೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ ಮತ್ತು ಬೆಲೆಬಾಳುವ ವಸ್ತುಗಳು ಕಳೆದುಹೋಗಿದ್ದವು. ಆದರೆ, ಕಳೆದ ಸೆ.24ರಂದು ಮನೆಯಲ್ಲಿದ್ದ 10 ಲಕ್ಷ ರೂ. ಹಣವನ್ನು ಜಿನ್‌ಗಳು ಕದಿಯುವ ಸಾಧ್ಯತೆ ಇಲ್ಲ ಎಂದು ಅರಿತ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರಕರಣದಲ್ಲಿ ಬೈಕುಲ್ಲಾ ಪೊಲೀಸರು ದೂರುದಾರರ ಸೋದರಳಿಯ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಗುಜರಾತ್‌ನ ಸೂರತ್‌ನಿಂದ 40ಲಕ್ಷ ರೂಪಾಯಿ ಮೌಲ್ಯದ ನಗದು ಮತ್ತು ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ಅಪ್ರಾಪ್ತರ ಪಾತ್ರ ಕಂಡು ಬಂದರೂ ಎಚ್ಚರಿಕೆ ನೀಡಿ ಬಿಡುಗಡೆಗೊಳಿಸಲಾಗಿತ್ತು.

ದೂರುದಾರ ಅಬ್ದುಲ್ ಖಾದರ್ ಘೋಡಾವಾಲಾ ಎಂಬಾತ ತನ್ನ ಮನೆಯಿಂದ 10 ಲಕ್ಷ ರೂಪಾಯಿ ಹಾಗೂ 4 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದೆ ಎಂದು ನಮ್ಮ ಬಳಿಗೆ ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸೆಪ್ಟೆಂಬರ್ 26ರಂದು ಬೈಕುಲ್ಲಾ ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದರು.

“ನಾವು ದೂರು ಸ್ವೀಕರಿಸಿದಾಗ ದೂರುದಾರರು ತಮ್ಮ ಮನೆಯಿಂದ 14 ಲಕ್ಷ ರೂಪಾಯಿ ಮೌಲ್ಯದ ನಗದು ಮತ್ತು ಚಿನ್ನಾಭರಣಗಳನ್ನು ಕಳವು ಮಾಡಲಾಗಿದೆ. ಇದಲ್ಲದೇ, ಈ ಹಿಂದೆಯೂ ಹಲವು ಬಾರಿ ಕಳ್ಳತನವಾಗಿದೆ” ಎಂದು ತಿಳಿಸಿದ್ದರು. ಪೊಲೀಸರನ್ನು ಏಕೆ ಸಂಪರ್ಕಿಸಲಿಲ್ಲ ಎಂದು ನಾವು ಕೇಳಿದಾಗ, ಮನೆಯಲ್ಲಿ ಜಿನ್ ಚಿನ್ನ ಕಳ್ಳತನ ಮಾಡುತ್ತಿದೆ ಎಂದು ನಂಬಿದ್ದೆವು ಎಂದು ಹೇಳಿದ್ದರು. ಹಿಂದಿನ ಕಳ್ಳತನದ ಘಟನೆಗಳನ್ನು ಪರಿಗಣಿಸಿ ಒಳಗಿನವರೇ ಯಾರಾದರೂ ಅಪರಾಧಿಗಳಾಗಿರಬಹುದು ಎಂಬ ತೀರ್ಮಾನಕ್ಕೆ ಬಂದಿದ್ದೆವು” ಎಂದು ತನಿಖಾಧಿಕಾರಿ ಸುಹಾಸ್ ಮಾನೆ ತಿಳಿಸಿದ್ದಾರೆ.