ಕೇಂದ್ರದ ‘ಹಿಂದಿ ಹೇರಿಕೆ ನೀತಿ’ ವಿರುದ್ಧ ತಮಿಳುನಾಡು ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ

0
378

ಸನ್ಮಾರ್ಗ ವಾರ್ತೆ

ಚೆನ್ನೈ: ಕೇಂದ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದಿಯನ್ನು ಬೋಧನಾ ಮಾಧ್ಯಮವನ್ನಾಗಿ ಮಾಡುವ ಸಂಸದೀಯ ಸಮಿತಿಯ ಶಿಫಾರಸಿನ ವಿರುದ್ಧ ಆಡಳಿತಾರೂಢ ಡಿಎಂಕೆಯ ಯುವ ಮತ್ತು ವಿದ್ಯಾರ್ಥಿಗಳ ವಿಭಾಗ ತಮಿಳುನಾಡಿನಲ್ಲಿ ರಾಜ್ಯಾದ್ಯಂತ ಪ್ರತಿಭಟನೆಯನ್ನು ಘೋಷಿಸಿದೆ.

ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ) ಯುವ ಘಟಕದ ಕಾರ್ಯದರ್ಶಿ ಉದ್ಯನಿತಿ ಸ್ಟಾಲಿನ್ ಮತ್ತು ವಿದ್ಯಾರ್ಥಿ ಘಟಕದ ಕಾರ್ಯದರ್ಶಿ ಸಿವಿಎಂಪಿ ಎಜಿಲರಸನ್ ಅವರು ಬುಧವಾರ ಜಂಟಿಯಾಗಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಕೇಂದ್ರ ಸರ್ಕಾರದ “ಹಿಂದಿ ಹೇರಿಕೆ ನೀತಿ” ವಿರುದ್ಧ ಪ್ರತಿಭಟನೆಯನ್ನು ಘೋಷಿಸಿದ್ದಾರೆ.

ಅಕ್ಟೋಬರ್ 15 ರಂದು ತಮಿಳುನಾಡಿನಾದ್ಯಂತ ಪ್ರತಿಭಟನೆ ನಡೆಸಲು ಡಿಎಂಕೆ ಯೋಜಿಸಿದೆ.

ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ‘ಹಿಂದಿ ಭಾಷಾ ಹೇರಿಕೆ’ಯ ವಿರುದ್ಧ ಕೇಂದ್ರವನ್ನು ಖಂಡಿಸಿದ ನಂತರ ರಾಜ್ಯದಲ್ಲಿ ಈ ಬೆಳವಣಿಗೆ ಕಂಡು ಬಂದಿದೆ. ಸ್ಟಾಲಿನ್ ಅವರು ತಮ್ಮ ಹೇಳಿಕೆಯಲ್ಲಿ “ಹಿಂದಿ ಹೇರಿಕೆ” ವಿರುದ್ಧ ಇತಿಹಾಸದಲ್ಲಿ ಯುವಕರು ಮಾಡಿದ ತ್ಯಾಗವನ್ನು ಪಟ್ಟಿ ಮಾಡಿದ್ದಾರೆ ಮತ್ತು “ನಮ್ಮ ಮೇಲೆ ಇನ್ನೊಂದು ಭಾಷಾ ಯುದ್ಧವನ್ನು ಹೇರಬೇಡಿ” ಎಂದು ಕೇಂದ್ರ ಸರಕಾರಕ್ಕೆ ಎಚ್ಚರಿಕೆ ನೀಡಿದ್ದರು.

“ಒಂದು ವೇಳೆ ಈ ಶಿಫಾರಸು ಅನುಷ್ಠಾನಗೊಂಡರೆ, ಹಿಂದಿಯೇತರ ಜನರು ಅವರ ಸ್ವಂತ ನೆಲದಲ್ಲಿಯೇ ದ್ವಿತೀಯ ದರ್ಜೆಯ ನಾಗರಿಕರಾಗಿ ಪರಿಗಣಿಸಲ್ಪಡುವರು. ಹಿಂದಿಯನ್ನು ಹೇರುವುದು ಭಾರತದ ಅಖಂಡತೆಗೆ ವಿರುದ್ಧವಾಗಿದೆ. ಬಿಜೆಪಿ ಸರ್ಕಾರವು ಹಿಂದಿ ವಿರೋಧಿ ಆಂದೋಲನಗಳಿಂದ ಪಾಠ ಕಲಿಯುವುದು ಒಳಿತು” ಎಂದು ಸ್ಟಾಲಿನ್ ಟ್ವೀಟ್‌ ಮಾಡಿದ್ದರು.