ಮುಂದುವರಿದ ‘ಹಿಂದಿ’ಕರಣ: ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಹಿಂದಿ ಆವೃತ್ತಿಯ ಪಠ್ಯಪುಸ್ತಕ

0
324

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ:ಎಂಬಿಬಿಎಸ್ 1ನೇ ವರ್ಷದ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕದ ಹಿಂದಿ ಆವೃತ್ತಿಯನ್ನು ಸಿದ್ಧಪಡಿಸಲಾಗುತ್ತಿದೆ. ಅಕ್ಟೋಬರ್ 16ರಂದು ಭೋಪಾಲ್‌ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಲಿದ್ದಾರೆ. ಇದರೊಂದಿಗೆ ಹಿಂದಿಯಲ್ಲಿ ವೈದ್ಯಕೀಯ ಶಿಕ್ಷಣ ನೀಡುವ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಮಧ್ಯಪ್ರದೇಶ ಪಾತ್ರವಾಗಲಿದೆ.

ವೈದ್ಯಕೀಯ ಬಯೋಕೆಮಿಸ್ಟ್ರಿ, ಮೆಡಿಕಲ್ ಫಿಸಿಯಾಲಜಿ ಮತ್ತು ಅನಾಟಮಿ ಪುಸ್ತಕಗಳ ಭಾಷಾಂತರಿತ ಆವೃತ್ತಿಗಳನ್ನು 97 ವೈದ್ಯರ ಸಮಿತಿಯು ಸುಮಾರು ಒಂಬತ್ತು ತಿಂಗಳಲ್ಲಿ ಸಿದ್ಧಪಡಿಸಿದೆ ಎಂದು ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ್ ಸಾರಂಗ್ ಮಾಹಿತಿ ನೀಡಿದ್ದಾರೆ. ಭೋಪಾಲದಲ್ಲಿರುವ ಗಾಂಧಿ ವೈದ್ಯಕೀಯ ಕಾಲೇಜಿನಿಂದ (ಜಿಎಂಸಿ) ಪ್ರಾರಂಭವಾಗುವ ಈ ಯೋಜನೆಯನ್ನು ಪ್ರಸ್ತುತ ಶೈಕ್ಷಣಿಕ ಅವಧಿಯಲ್ಲಿ ಎಲ್ಲಾ 13 ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ವಿಸ್ತರಿಸಲಾಗುವುದು. ಮುಂದಿನ ಕ್ರಮಗಳ ಮಾರ್ಗಸೂಚಿಗಳು ಇನ್ನೂ ಹೊರಬರಬೇಕಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಪುಸ್ತಕಗಳನ್ನು ಅನುವಾದಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ‌.

ಆಗಸ್ಟ್‌ನಲ್ಲಿ ಭೋಪಾಲ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ “ಇಂಗ್ಲಿಷ್ ಭಾಷೆಯ ಮೇಲಿನ ಭಾರತೀಯರ ವ್ಯಾಮೋಹವು ದೇಶದ ಪ್ರಗತಿಗೆ ಕೊಡುಗೆ ನೀಡುವ 95 ಪ್ರತಿಶತದಷ್ಟು ಪ್ರತಿಭೆಗಳನ್ನು ತಡೆಯುತ್ತದೆ” ಎಂದ ಅಮಿತ್ ಶಾ ಹೇಳಿದ್ದರು.

ಹಿಂದಿ ಮಾತನಾಡುವ ರಾಜ್ಯಗಳ ಪ್ರಮುಖ ಸಂಸ್ಥೆಗಳಲ್ಲಿ ಹಿಂದಿಯನ್ನು ಬೋಧನಾ ಮಾಧ್ಯಮವಾಗಿ ಬಳಸಲು ಸೂಚಿಸಿದ ಅಮಿತ್ ಶಾ ನೇತೃತ್ವದ ಅಧಿಕೃತ ಭಾಷಾ ಸಂಸದೀಯ ಸಮಿತಿಯ ಕ್ರಮದ ವಿರುದ್ಧ ದಕ್ಷಿಣ ಭಾರತದ ಎರಡು ರಾಜ್ಯಗಳ ಮುಖ್ಯಮಂತ್ರಿಗಳು ಮುಂದಡಿ ಇರಿಸಿದ್ದಾರೆ.