ಗುಜರಾತ್‌ನಲ್ಲೂ ನರಬಲಿ| ಹೆತ್ತವರೇ ಮಗಳನ್ನು ಬಲಿ ನೀಡಿರುವ ಶಂಕೆ: ಗ್ರಾಮಸ್ಥರಿಂದ ದೂರು ದಾಖಲು

0
324

ಸನ್ಮಾರ್ಗ ವಾರ್ತೆ

ಗುಜರಾತಿನಲ್ಲಿ ಹೆತ್ತವರೇ ಮಗಳನ್ನು ಬಲಿ ನೀಡಿರುವ ಸಂದೇಹವನ್ನು ಪೊಲೀಸರು ವ್ಯಕ್ತಪಡಿಸಿದ್ದು, ತನಿಖೆ ಆರಂಭಿಸಿದ್ದಾರೆ. ಗುಜರಾತಿನ ಸೊಮನಾಥ ಜಿಲ್ಲೆಯ ಧಾರಗಿರ್ ಗ್ರಾಮದಲ್ಲಿ ಈ ಘಟನೆ ವರದಿಯಾಗಿದೆ. ಗ್ರಾಮಸ್ಥರ ದೂರಿನ ಮೇರೆಗೆ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ‌. ಅಕ್ಟೋಬರ್ 3ರ ನವರಾತ್ರಿಯಂದು ಹೆತ್ತವರೇ ತಮ್ಮ ಹದಿನಾಲ್ಕು ವರ್ಷದ ಮಗಳನ್ನು ನರಬಲಿ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಮಗಳ ಸಾವಿನ ಕುರಿತು ಪಂಚಾಯತ್‍ನಲ್ಲಿಯೂ ನೋಂದಾಯಿಸಿಲ್ಲ. ಆರ್ಥಿಕ ಸಮೃದ್ಧಿಗಾಗಿ ಮಗಳನ್ನು ಹತ್ತವರೇ ಬಲಿ ನೀಡಿರುವ ಶಂಕೆ ಇದೆ‌.

ಬಾಲಕಿಯ ತಂದೆ ಸೂರತ್‍ನಲ್ಲಿ ವ್ಯಾಪಾರಿಯಾಗಿದ್ದು, ಇಲ್ಲಿ ಆರು ತಿಂಗಳ ಕಾಲ ಬಾಲಕಿ ವ್ಯಾಸಂಗ ಮಾಡುತ್ತಿದ್ದಳು. ಹಠಾತ್ತಾಗಿ ಒಂದು ದಿವಸ ತಂದೆ-ತಾಯಿ ಶಾಲೆಯಿಂದ ಮಗಳ ಟಿಸಿ ತೆಗೆದುಕೊಂಡು ಹೋಗಿದ್ದಾರೆ. ನಂತರ ಊರಿಗೆ ಕರೆದುಕೊಂಡು ಹೋಗಿ ತಮ್ಮ ಮಾಲಕತ್ವದ ಫಾರ್ಮ್‌ ಮನಲ್ಲಿ ಇರಿಸಿದ್ದಾರೆ. ತದನಂತರ ಬಾಲಕಿ ಮೃತ ಪಟ್ಟಿದ್ದಾಳೆ. ಅಕ್ಟೋಬರ್ ಮೂರರಂದು ಇದೇ ಫಾರ್ಮ್‌ನಲ್ಲಿ ಬಾಲಕಿಯನ್ನು ಬಲಿ ನೀಡಿದ್ದಾಗಿ ಊರವರು ಆರೋಪಿಸುತ್ತಿದ್ದಾರೆ. ಯಾರಿಗೂ ತಿಳಿಯದಂತೆ ಮಧ್ಯರಾತ್ರಿಯೇ ಕುಟುಂಬದವರು ತೋಟದಲ್ಲಿಯೇ ಬಾಲಕಿಯ ಅಂತ್ಯಸಂಸ್ಕಾರ ಮಾಡಿದ್ದಾರೆ ಎಂದೂ ಗ್ರಾಮಸ್ಥರು ಹೇಳುತ್ತಿದ್ದಾರೆ.

ಸುಮಾರು ನಾಲ್ಕು ದಿನಗಳ ಕಾಲ ಬಾಲಕಿಯ ಮೃತ ಶರೀರವನ್ನು ಹಾಗೆಯೇ ಇಟ್ಟಿದ್ದರು. ಬಳಿಕ ಕೆಲವೇ ಕೆಲವು ಸಂಬಂಧಿಕರ ಮುಂದೆ ಶವಸಂಸ್ಕಾರ ನಡೆಸಿದ್ದಾರೆ. ಫಾರ್ಮ್‌ನಲ್ಲಿಯೇ ಅಂತ್ಯಸಂಸ್ಕಾರ ಮಾಡಿರುವುದು ಊರವರಲ್ಲಿ ಸಂದೇಹಕ್ಕೂ ಭೀತಿಗೂ ಕಾರಣವಾಗಿದೆ.

ಮಗಳ ಬಲಿಯಿಂದ ಆರ್ಥಿಕ ಸಮೃದ್ಧಿ ಆಗುತ್ತದೆ. ಮಗಳು ಸತ್ತರೂ ಮರು ಜನ್ಮ ಪಡೆಯುತ್ತಾಳೆ ಎಂದು ಇವರು ತಿಳಿದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಬಾಲಕಿ ಸಾವು ನಿಗೂಢವಾಗಿದ್ದು, ತಂದೆ-ತಾಯಿಯ ಮೇಲೆಯೇ ಸಂದೇಹ ಇದೆ ಎಂದು ಗಿರ್ಸೋಮನಾಥ್ ಜಿಲ್ಲಾ ಪೊಲೀಸ್ ಸೂಪರಿಡೆಂಟೆಂಟ್ ಮನೋಹರ್ ಸಿಂಗ್ ಜಡೇಜಾ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.