ಜಿ.ಎನ್ ಸಾಯಿಬಾಬಾ ಬಿಡುಗಡೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ

0
511

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ರಜಾ ದಿನವಾದ ಶನಿವಾರದಂದು ಅಸಾಮಾನ್ಯ ನಡೆಯೊಂದರಲ್ಲಿ, ದಿಲ್ಲಿ ವಿವಿ ಮಾಜಿ ಪ್ರಾಧ್ಯಾಪಕ  ಜಿ‌.ಎನ್ ಸಾಯಿಬಾಬಾ ಅವರ ಬಿಡುಗಡೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ ಮತ್ತು ಮಾವೋವಾದಿ ನಂಟು ಪ್ರಕರಣದಲ್ಲಿ ಅವರನ್ನು ಖುಲಾಸೆಗೊಳಿಸಿದ ಬಾಂಬೆ ಹೈಕೋರ್ಟ್ ತೀರ್ಪನ್ನು 24 ಗಂಟೆಗಳ ಒಳಗೆ ಅಮಾನತುಗೊಳಿಸಿದೆ.  ತೀರ್ಪನ್ನು ಅಮಾನತುಗೊಳಿಸದಿರಲು ಕಾರಣಗಳನ್ನು ತೋರಿಸುವ ಪ್ರತಿ- ಅಫಿಡವಿಟ್‌ಗಳನ್ನು ಸಲ್ಲಿಸುವಂತೆ ಪ್ರಕರಣದ ಎಲ್ಲಾ ಆರೋಪಿಗಳಿಗೆ ಸುಪ್ರೀಂ ಕೋರ್ಟ್ ನೋಟಿಸ್ ನೀಡಿದೆ.

ಕೆಟ್ಟು ಹೋದ ಆರೋಗ್ಯ, ವೀಲ್‌ಚೇರ್‌ನಲ್ಲಿರುವ ಅವರನ್ನು ಪರಿಗಣಿಸಿ ಹೈಕೋರ್ಟು ಜಾಮೀನು ನೀಡಿತ್ತು.  ಗೃಹ ಬಂಧನ ವಿಧಿಸಬೇಕೆಂಬ ಸಾಯಿಬಾಬಾರ ಬೇಡಿಕೆಯನ್ನು ಸುಪ್ರೀಂ ಕೋರ್ಟು ತಳ್ಳಿ ಹಾಕಿದೆ. ಮಹಾರಾಷ್ಟ್ರ ಸರಕಾರದ ಮೇಲ್ಮನವಿಯಲ್ಲಿ ಸುಪ್ರೀಂ ಕೋರ್ಟು ಶನಿವಾರ ಬೆಳಗ್ಗೆ ಹನ್ನೊಂದು ಗಂಟೆಗೆ ಈ ತೀರ್ಪು ನೀಡಿದೆ. ಜಸ್ಟಿಸ್ ಎಂ ಆರ್. ಶಾ ಜಸ್ಟಿಸ್ ಬೇಲಾ ತ್ರಿವೇದಿಯವರಿದ್ದ ಪೀಠವು ಮಹಾರಾಷ್ಟ್ರ ಸರಕಾರದ ಮೇಲ್ಮನವಿಯನ್ನು ಪರಿಗಣಿಸಿದೆ.

ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠವು ಸಾಯಿಬಾಬಾರನ್ನು ಆರೋಪ ಮುಕ್ತಗೊಳಿಸಿತ್ತು. ಅವರನ್ನು ಕೂಡಲೇ ಬಿಡುಗಡೆಗೊಳಿಸಬೇಕೆಂದು ಸೂಚಿಸಿತ್ತು. ಸಾಯಿಬಾಬಾ ಈಗ ನಾಗ್ಪುರದ ಸೆಂಟ್ರಲ್ ಜೈಲಿನಲ್ಲಿದ್ದಾರೆ. ಈ ಪ್ರಕರಣದಲ್ಲಿ ಇತರ ಐವರು ಆರೋಪಿಗಳನ್ನು ಕೋರ್ಟು ಆರೋಪ ಮುಕ್ತಗೊಳಿಸಿದೆ. ಆರೋಪಿಗಳಲ್ಲಿ ಒಬ್ಬರು ಮೃತಪಟ್ಟಿದ್ದಾರೆ.

2017ರ ಮಾರ್ಚ್‌ನಲ್ಲಿ ಮಾವೋವಾದಿ ಆಶಯಗಳನ್ನು ಪ್ರಚಾರ ಮಾಡಿದ ಪ್ರಕರಣದಲ್ಲಿ ಮಹಾರಾಷ್ಟ್ರದ ಗುಡ್ಚರರೊಲಿ ಸೆಶನ್ಸ್ ಕೋರ್ಟು ಸಾಯಿಬಾಬಾರಿಗೆ ಜೀವಾವಧಿ ಜೈಲು ಶಿಕ್ಷೆ ವಿಧಿಸಿತ್ತು. ಯುಎಪಿಎ ಸೇರಿದಂತೆ ಕಾನೂನಿನ ವಿವಿಧ ಸೆಕ್ಷನ್‌ಗಳ ಪ್ರಕಾರ ನಿಷೇಧಿತ ಭಯೋತ್ಪಾದಕ ಸಂಘಟನೆಯ ಸದಸ್ಯತ್ವ, ನಿಷೇಧಿತ ಸಂಘಟನೆಯ ಚಟುವಟಿಕೆಗಳಿಗೆ ಸಹಾಯ ಮಾಡುವಿಕೆ, ಆಶಯಗಳನ್ನು ಪ್ರಚಾರ ಮಾಡುವಿಕೆ ಸೇರಿದಂತೆ ಇತರ ಆರೋಪಗಳನ್ನು ಇವರ ಮೇಲೆ ಹೊರಿಸಲಾಗಿದೆ. ಇದಕ್ಕೆ ಇರುವ ಗರಿಷ್ಠ ಶಿಕ್ಷೆಯನ್ನು ಸಾಯಿಬಾಬಾರಿಗೆ ಕೋರ್ಟು ನೀಡಿತ್ತು. ಸಾಯಿಬಾಬಾ ಅಲ್ಲದೆ ಜೆಎನ್‍ಯು ಮಾಜಿ ವಿದ್ಯಾರ್ಥಿ ಹೇಮ್ ಮಿಶ್ರಾ, ಪತ್ರಕರ್ತ ಪ್ರಶಾಂತ್ ರಾಯ್‍ ಸಹಿತ ಐವರಿಗೆ ಸೆಷನ್ ಕೋರ್ಟು ಶಿಕ್ಷೆ ವಿಧಿಸಿತ್ತು.