ಪರೀಕ್ಷೆಯಲ್ಲಿ ನಕಲು ಮಾಡಿದ ಆರೋಪ: ಅಧ್ಯಾಪಕಿ ಬಟ್ಟೆ ಬಿಚ್ಚಿಸಿದ್ದಕ್ಕೆ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ 9ನೇ ತರಗತಿ ವಿದ್ಯಾರ್ಥಿನಿ

0
381

ಸನ್ಮಾರ್ಗ ವಾರ್ತೆ

ರಾಂಚಿ: ಪರೀಕ್ಷೆಯಲ್ಲಿ ನಕಲು ಹೊಡೆದಿದ್ದಾಳೆಂದು ಆರೋಪಿಸಿ ಬಟ್ಟೆ ಬಿಚ್ಚಿಸಿದ ಅಧ್ಯಾಪಕಿಯ ನಡೆಯಿಂದ ಮನ ನೊಂದ 9ನೇ ತರಗತಿಯ ವಿದ್ಯಾರ್ಥಿನಿ ಸ್ವಯಂ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಝಾರ್ಕಂಡಿನ ಜಂಶೆಡ್‍ಪುರದಲ್ಲಿ ನಡೆದಿದೆ.

ವಿದ್ಯಾರ್ಥಿನಿ ಪರೀಕ್ಷೆಯ ವೇಳೆ ನಕಲು ಹೊಡೆಯಲು ಚೀಟಿಯನ್ನು ಯುನಿಫಾರ್ಮಿನಲ್ಲಿ ಅಡಗಿಸಿಟ್ಟಿದ್ದಾಳೆಂದು ಶಂಕಿಸಿ ಅಧ್ಯಾಪಕಿ ವಿದ್ಯಾರ್ಥಿನಿಯ ಬಟ್ಟೆ ಬಿಚ್ಚಿಸಿ ಪರಿಶೀಲನೆ ನಡೆಸಿದ್ದರು. ಶಾಲೆಯಿಂದ ಮನೆಗೆ ಬಂದ ವಿದ್ಯಾರ್ಥಿನಿ ಸ್ವಯಂ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು ಸ್ಥಿತಿ ಚಿಂತಾಜನಕವಾಗಿದೆ.

“ಅಧ್ಯಾಪಕಿ ತನ್ನನ್ನು ಅಪಾನಿಸಿದ್ದು ತರಗತಿ ಕೋಣೆಯ ಸಮೀಪದ ಕೋಣೆಯಲ್ಲಿ ಬಲವಂತವಾಗಿ ಬಟ್ಟೆ ಬಿಚ್ಚಿಸಿ ಪರಿಶೀಲಿಸಿದ್ದಾರೆಂದು” ವಿದ್ಯಾರ್ಥಿನಿ ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ. “ಮಗಳು ಅಪಮಾನ ಸಹಿಸದೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಗಿ” ಬಾಲಕಿಯ ಕುಟುಂಬ ಹೇಳಿದೆ. ಕುಟುಂಬದವರ ದೂರಿನ ಮೇರೆಗೆ ಪೊಲೀಸರು ತನಿಖೆ ಆರಂಭಿಸಿದ್ದು, ತಪ್ಪಿತಸ್ಥ ಶಿಕ್ಷಕಿಯ ವಿರುದ್ಧ ಕಠಿಣ ಕ್ರಮ ಜರಗಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.