ಕೋಲಾರ| ಶಿಕ್ಷಕರ ಅರ್ಹತಾ ಪರೀಕ್ಷೆಗೆ ಬಿಗಿ ಬಂದೋಬಸ್ತ್: ಅಭ್ಯರ್ಥಿಗಳಿಗೆ ಎರಡು ಹಂತದ ತಪಾಸಣೆ

0
202

ಸನ್ಮಾರ್ಗ ವಾರ್ತೆ

ಕೋಲಾರ: 2022-23ನೇ ಸಾಲಿನ ಪದವೀಧರ ಪ್ರಾಥಮಿಕ ಶಾಲಾ ಹಾಗೂ 6 ರಿಂದ 8ನೇ ತರಗತಿ ಪದವೀಧರ ಶಿಕ್ಷಕ ವೃಂದದ ಹುದ್ದೆಗಳ ನೇಮಕಕ್ಕೆ ಸಂಬಂಧಿಸಿದಂತೆ ಭಾನುವಾರ ನಗರದ 23 ಕೇಂದ್ರಗಳಲ್ಲಿ ನಡೆದ ಶಿಕ್ಷಕರ ಅರ್ಹತಾ ಪರೀಕ್ಷೆ ಬಿಗಿ ಬಂದೋಬಸ್ತ್ ನಡುವೆ ಯಶಸ್ವಿಯಾಗಿ ನಡೆದಿದ್ದು, ಪರೀಕ್ಷೆಗೆ ನೋಂದಾಯಿಸಿದ್ದ 8326 ಮಂದಿ ಪೈಕಿ 701 ಮಂದಿ ಗೈರಾಗಿದ್ದಾರೆ ಎಂದು ಪರೀಕ್ಷಾ ನೋಡಲ್ ಅಧಿಕಾರಿ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ ತಿಳಿಸಿದರು.

ಈ ಕುರಿತು ಮಾಹಿತಿ ನೀಡಿರುವ ಅವರು, ಪರೀಕ್ಷೆ ನಡೆದ ಎಲ್ಲಾ 23 ಕೇಂದ್ರಗಳ ಸುತ್ತ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ಪ್ರಾಥಮಿಕ ಶಾಲಾ ಶಿಕ್ಷಕರ ಅರ್ಹತಾ ಪರೀಕ್ಷೆಗೆ ನೋಂದಾಯಿಸಿದ್ದ 3629 ಮಂದಿ ಪೈಕಿ 3266 ಮಂದಿ ಹಾಜರಾಗಿದ್ದು 363 ಮಂದಿ ಗೈರಾಗಿದ್ದರು.

ಹಾಗೆಯೇ ಪದವೀಧರ ಶಿಕ್ಷಕರ ಅರ್ಹತಾ ಪರೀಕ್ಷೆಗೆ ನೋಂದಾಯಿಸಿದ್ದ ಒಟ್ಟ 4697 ಮಂದಿ ಪೈಕಿ 4371 ಮಂದಿ ಹಾಜರಾಗಿದ್ದು, 338 ಮಂದಿ ಗೈರಾಗಿದ್ದಾರೆ. ಒಟ್ಟಾರೆ ಎರಡೂ ಪರೀಕ್ಷೆಗಳಿಗೂ ಸಂಬಂಧಿಸಿದಂತೆ ನೋಂದಾಯಿತ 8326 ಮಂದಿ ಪೈಕಿ 7637 ಮಂದಿ ಹಾಜರಾಗಿದ್ದು, 701 ಮಂದಿ ಗೈರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಕೇಂದ್ರಗಳ ಸುತ್ತಮುತ್ತಲೂ 200 ಮೀಟರ್‌ ಪ್ರದೇಶವನ್ನು ನಿಷೇದಿತ ಪ್ರದೇಶವೆಂದು ಘೋಷಿಸಿದ್ದು, ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆಯನ್ನು ಜಿಲ್ಲಾಧಿಕಾರಿಗಳು ಜಾರಿಗೊಳಿಸಿದ್ದು, ಎಲ್ಲೂ ಯಾವುದೇ ಸಣ್ಣಪುಟ್ಟ ಸಮಸ್ಯೆಗಳು ಎದುರಾಗಲಿಲ್ಲ ಎಂದು ತಿಳಿಸಿದ್ದಾರೆ.

ಕೋವಿಡ್ ಮಾರ್ಗಸೂಚಿ ಪಾಲನೆ

ಕೇಂದ್ರಗಳಲ್ಲೂ ಕೋವಿಡ್ ಮಾರ್ಗಸೂಚಿ ಪಾಲಿಸಲಾಗಿದ್ದು, ಎಲ್ಲಾ ಪರೀಕ್ಷಾರ್ಥಿಗಳಿಗೂ ಥರ್ಮಲ್ ಸ್ಮಿನಿಂಗ್ ಮಾಡಿ, ಸ್ಯಾನಿಟೈಸರ್‌ ನೀಡಿ ಒಳ ಬಿಡಲಾಯಿತು. ಆದರೆ ಮಾಸ್ಕ್ ಕಡ್ಡಾಯಗೊಳಿಸಿರಲಿಲ್ಲ. ಪಿಎಸ್‌ಐ ನೇಮಕಾತಿ ಪರೀಕ್ಷೆ ಅವ್ಯವಹಾರ ಬೆಳಕಿಗೆ ಬಂದ ಹಿನ್ನಲೆಯಲ್ಲಿ ಪರೀಕ್ಷೆಯನ್ನು ಅತ್ಯಂತ ಬಿಗಿ ಬಂದೋಬಸ್‌ನಡಿ ನಡೆಸಲಾಗಿದ್ದು, ಶಿಕ್ಷಣ ಇಲಾಖೆ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆಯ ಸಹಕಾರ ಪಡೆದು ಯಾವುದೇ ಗೊಂದಲಕ್ಕೆ ಅವಕಾಶವಿಲ್ಲದಂತೆ ಎಚ್ಚರಿಕೆ ವಹಿಸಿ ಪರೀಕ್ಷೆ ನಡೆಸಿದೆ.

ಅಭ್ಯರ್ಥಿಗಳು ಪರೀಕ್ಷಾ ಕೇಂದ್ರ ಪ್ರವೇಶಿಸುವ ಮುನ್ನ 2 ಹಂತದ ತಪಾಸಣೆಗೆ ಒಳಪಡಿಸಲಾಗಿತ್ತು. ಮೊದಲನೇ ಹಂತದಲ್ಲಿ ಪರೀಕ್ಷಾ ಸಿಬ್ಬಂದಿ ಅಭ್ಯರ್ಥಿಗಳನ್ನು ಗುರುತಿಸಿ ಪರೀಕ್ಷಾ ನಿಷೇದಿತ ವಸ್ತುಗಳಾದ ಮೊಬೈಲ್ ಪೋನ್ ಬ್ಲೂಟೂತ್ ಡಿವೈಸ್, ಕ್ಯಾಲ್ಕ್ಯುಲೇಟರ್ ಕೈಗಡಿಯಾರ, ಶೂ, ಬೆಲ್ಟ್, ಇತರೆ ಎಲೆಕ್ಟ್ರಾನಿಕ್ ವಸ್ತುಗಳು ಇಲ್ಲದಿರುವ ಬಗ್ಗೆ ಪರಿಶೀಲಿಸಿ ದೃಢಪಡಿಸಿಕೊಂಡೇ ಒಳಗೆ ಬಿಡಲಾಗಿದೆ ಎಂದು ತಿಳಿಸಿದ್ದಾರೆ.

2ನೇ ಹಂತದ ತಪಾಸಣೆಯಲ್ಲಿ ಪೊಲೀಸ್ ಸಿಬ್ಬಂದಿ ಮೆಟಲ್ ಡಿಟೆಕ್ಟರ್ ಮೂಲಕ ಪರೀಕ್ಷೆಗೆ ನಿಷೇದಿತ ವಸ್ತುಗಳ ತಪಾಸಣೆ ನಡೆಸಿ ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸಲು ಅನುಮತಿ ನೀಡಿ ಒಳ ಕಳುಹಿಸುವ ವ್ಯವಸ್ಥೆಯನ್ನು ಎಲ್ಲಾ ಕೇಂದ್ರಗಳಲ್ಲೂ ಮಾಡಲಾಗಿತ್ತು.

ಕೆಲವು ಕೇಂದ್ರಗಳಲ್ಲಿ ಅಭ್ಯರ್ಥಿಗಳು ಶೂ, ಬೆಲ್ಟ್ ಬಳಸಿ ಬಂದು ಕೇಂದ್ರದೊಳಕ್ಕೆ ಪ್ರವೇಶ ನಿರಾಕರಣೆಯಿಂದಾಗಿ ಮುಜುಗರಕ್ಕೊಳಗಾದ ಘಟನೆಯೂ ನಡೆಯಿತು. ಶಿಕ್ಷಕರಾಗುವ ಅರ್ಹತೆ ಗಳಸಿಕೊಳ್ಳುವ ಕಾತರದಲ್ಲಿ ಪರೀಕ್ಷೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಅಭ್ಯರ್ಥಿಗಳೇ ಹಾಜರಾಗಿದ್ದುದು ವಿಶೇಷವಾಗಿತ್ತು.

ಪರೀಕ್ಷಾ ಉಸ್ತುವಾರಿಯನ್ನು ಜಿಲ್ಲಾ ಶಿಕ್ಷಣಾಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್,  ಸಿ.ಆರ್.ಅಶೋಕ್,  ವಿಷಯ ಪರಿವೀಕ್ಷಕರಾದ ಗಾಯತ್ರಿ , ಶಶಿವಧನ,  ಶಂಕರೇಗೌಡ, ಕೃಷ್ಣಪ್ಪ ಮತ್ತಿತರರು ವಹಿಸಿದ್ದರು.