ಭಾರತದ ಮೊದಲ ಮಹಿಳಾ ಮುಸ್ಲಿಂ ಶಿಕ್ಷಕಿ ಫಾತಿಮಾ ಶೇಖ್ ಕುರಿತು ಪಠ್ಯ ಅಳವಡಿಸಿದ ಆಂಧ್ರಪ್ರದೇಶ ಸರ್ಕಾರ

0
637

ಸನ್ಮಾರ್ಗ ವಾರ್ತೆ

ಅಮರಾವತಿ: ಭಾರತದ ಮೊದಲ ಮಹಿಳಾ ಮುಸ್ಲಿಂ ಶಿಕ್ಷಕಿ ಫಾತಿಮಾ ಶೇಖ್ ಅವರ ಕುರಿತ ಪಾಠವನ್ನು ಎಂಟನೇ ತರಗತಿಯ ಶಾಲಾ ಪಠ್ಯಪುಸ್ತಕಗಳಲ್ಲಿ ಅಳವಡಿಸಲು ಆಂಧ್ರಪ್ರದೇಶ ಸರ್ಕಾರ ಮುಂದಾಗಿದೆ. ಈ ಹಿಂದೆ ಮಹಾರಾಷ್ಟ್ರ ಸರ್ಕಾರ ಕೂಡ ಈ ನಿರ್ಧಾರ ಪ್ರಕಟಿಸಿತ್ತು.

ಫಾತಿಮಾ ಶೇಖ್ ಅವರು ಜನವರಿ 9, 1831ರಂದು ಜನಿಸಿದರು. 1848ರಲ್ಲಿ ಪ್ರಸಿದ್ಧ ಸಮಾಜ ಸುಧಾರಕ ದಂಪತಿಗಳಾದ ಜ್ಯೋತಿರಾವ್ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಅವರನ್ನು ಕೆಲವು ಮೇಲ್ಜಾತಿ ಜನರ ಒತ್ತಡದಿಂದಾಗಿ ಜ್ಯೋತಿರಾವ್ ಅವರ ತಂದೆ ಫುಲೆಸ್  ಭಿಡೆ ವಾಡಾದಿಂದ ಹೊರಹಾಕಿದಾಗ, ಅವರಿಗೆ ಫಾತಿಮಾ ಮತ್ತು ಅವರ ಸಹೋದರ ಉಸ್ಮಾನ್ ಶೇಖ್ ಆಶ್ರಯ ನೀಡಿದರು.

 

 

ಪೂನಾದಲ್ಲಿ ಫುಲೆ ದಂಪತಿಗಳು ಮೊದಲು ಬಾಲಕಿಯರಿಗಾಗಿ ಶಾಲೆಯನ್ನು ಆರಂಭಿಸಲು ಹೊರಟಾಗ, ತಮ್ಮ ಹಳೆಯ ಮನೆಯಲ್ಲಿ ಅದಕ್ಕೆ ಅವಕಾಶ ಮಾಡಿಕೊಟ್ಟ ಕೀರ್ತಿ ಫಾತಿಮಾ ಶೇಖ್ ಅವರಿಗೆ ಸಲ್ಲುತ್ತದೆ. ಅಲ್ಲದೇ, ಅಂದು ಫುಲೆ ದಂಪತಿ ನಡೆಸುತ್ತಿದ್ದ ಎಲ್ಲ ಐದು ಶಾಲೆಗಳಲ್ಲಿ ಫಾತಿಮಾ ಶೇಖ್ ಹೆಣ್ಣು ಮಕ್ಕಳಿಗೆ ಅದರಲ್ಲೂ ವಿಶೇಷವಾಗಿ ಮುಸ್ಲಿಂ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ಕಲಿಸಿದರು. ಅದೇ ಸಮಯದಲ್ಲಿ, 1851ರ ವೇಳೆಗೆ ಮುಂಬೈನಲ್ಲಿ ತಮ್ಮದೇ ಆದ ಎರಡು ಶಾಲೆಗಳನ್ನು ಸ್ಥಾಪಿಸಿದರು.

ಫಾತಿಮಾ ಶೇಖ್ ಅವರು ಅಮೆರಿಕದ ಮಿಷನರಿ ಸಿಂಥಿಯಾ ಫರಾರ್ ನಡೆಸುತ್ತಿದ್ದ ಸಂಸ್ಥೆಯಲ್ಲಿ ಸಾವಿತ್ರಿಬಾಯಿ ಫುಲೆ ಅವರೊಂದಿಗೆ ಶಿಕ್ಷಕಿಯಾಗುವ ತರಬೇತಿಯನ್ನು ಪಡೆಡಿದ್ದರು.

“ಒಂದು ಕಾಲದಲ್ಲಿ, ಮಹಿಳೆಯರು ಮನೆಯಿಂದ ಹೊರಗೆ ಹೋಗುವುದು ಪಾಪವೆಂದು ಪರಿಗಣಿಸಲಾಗಿತ್ತು, ಫುಲೆಯವರೊಂದಿಗೆ ಫಾತಿಮಾ ಶೇಖ್ ಅವರಿಗೆ ಸಂಪ್ರದಾಯವಾದಿ, ಜಾತಿವಾದಿ ಮತ್ತು ಮತಾಂಧ ಸಂಘಟನೆಗಳಿಂದ ಅಂದು ಪ್ರಾಣ ಬೆದರಿಕೆಗಳು ಬಂದಿದ್ದರೂ ಅದನ್ನು ಲೆಕ್ಕಿಸದೆ ದಲಿತ ಮತ್ತು ಮುಸ್ಲಿಂ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ಕಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು”ಎಂದು ಆಂಧ್ರಪ್ರದೇಶ ಯುನೈಟೆಡ್ ಟೀಚರ್ಸ್ ಫೆಡರೇಶನ್ ಮುಖಂಡ ರಾಮು, ರಾಜ್ಯ ಸರ್ಕಾರದ ಕ್ರಮವನ್ನು ಶ್ಲಾಘಿಸಿದ್ದಾರೆ.

“ದೇಶದ ಭವಿಷ್ಯವಾಗಿರುವ ಮಕ್ಕಳು, ಸಮಾಜ ಸುಧಾರಕರು, ಸ್ವಾತಂತ್ರ್ಯ ಹೋರಾಟಗಾರರು ಮತ್ತು ರಾಷ್ಟ್ರವನ್ನು ನಿರ್ಮಿಸಲು ಗಣನೀಯ ಕೊಡುಗೆ ನೀಡಿದ ಇತರರ ಬಗ್ಗೆ ತಿಳಿದುಕೊಳ್ಳಬೇಕು ಎಂದು ನಾವು ಬಯಸುತ್ತೇವೆ. ಫಾತಿಮಾರಿಗೆ ದೇಶದ ಇತಿಹಾಸದಲ್ಲಿ ಅರ್ಹವಾದ ಮನ್ನಣೆ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಎಂಟನೇ ತರಗತಿಯ ಪುಸ್ತಕದಲ್ಲಿ ಪಾಠವನ್ನು ಪರಿಚಯಿಸಿರುವುದು ನಮಗೆ ತುಂಬಾ ಸಂತೋಷವಾಗಿದೆ. ಫಾತಿಮಾ ಶೇಖ್ ಅವರ ಕೊಡುಗೆಯ ಕುರಿತು ಹೆಚ್ಚಿನ ಜಾಗೃತಿ ಅಗತ್ಯ ಎಂದು ಆಂಧ್ರಪ್ರದೇಶ ಪ್ರಾಥಮಿಕ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕಾಕಿ ಪ್ರಕಾಶ್ ರಾವ್ ತಿಳಿಸಿದರು.

ಫಾತಿಮಾ ಶೇಖ್ ಅವರ 191ನೇ ಜನ್ಮ ವಾರ್ಷಿಕೋತ್ಸವದ ವೇಳೆ ಗೂಗಲ್ ಸಂಸ್ಥೆ ತನ್ನ ಸರ್ಚ್ ಎಂಜಿನ್‌ನ ಮುಖಪುಟದಲ್ಲಿ ಡೂಡಲ್‌ನೊಂದಿಗೆ ಗೌರವಿಸಿತ್ತು.