ಸನ್ಮಾರ್ಗ ವಾರ್ತೆ
ಶಾರ್ಜಾ(ಯು.ಎ.ಇ.): ಶಾರ್ಜಾದಲ್ಲಿ ಇತ್ತೀಚಿಗೆ ಆರಂಭಗೊಂಡ ಅಂತಾರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಕನ್ನಡದ ಏಕೈಕ ಮಳಿಗೆಯಾಗಿರುವ ‘ಶಾಂತಿ ಪ್ರಕಾಶನ’ ಮಳಿಗೆಯು ಅನಿವಾಸಿ ಕನ್ನಡಿಗರ ಮನ ಸೆಳೆಯುತ್ತಿದೆ.
ಜಗತ್ತಿನ ಬೃಹತ್ ಅಂತಾರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಸತತ ಆರನೆಯ ಬಾರಿ ಕನ್ನಡ ಭಾಷೆಯನ್ನು ಪ್ರತಿನಿಧಿಸಿ ಭಾಗವಹಿಸುತ್ತಿರುವ ಕರ್ನಾಟಕದ ಏಕೈಕ ಪುಸ್ತಕ ಮಳಿಗೆ ಶಾಂತಿ ಪ್ರಕಾಶನದ ಉದ್ಘಾಟನಾ ಸಮಾರಂಭವು ನವೆಂಬರ್ 2ರಂದು ಶಾರ್ಜಾ ಎಕ್ಸ್ ಪೋ ಸೆಂಟರಿನಲ್ಲಿ ನಡೆಯಿತು.
ಮಳಿಗೆಯ ಉದ್ಘಾಟನೆಯನ್ನು ಖ್ಯಾತ ಉದ್ಯಮಿ ರಾಮಚಂದ್ರ ಹೆಗಡೆ (ವ್ಯವಸ್ಥಾಪಕರು, ಸ್ಪ್ರೇ ಟೆಕ್ ಕೋಟಿಂಗ್ ಆ್ಯಂಡ್ ಕಾಂಟ್ರಾಕ್ಟಿಂಗ್) ನಿರ್ವಹಿಸಿ ಮಾತನಾಡುತ್ತಾ, ಅಂತಾರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಕನ್ನಡದ ಪುಸ್ತಕಗಳನ್ನು ಪ್ರದರ್ಶಿಸುವ ಮೂಲಕ ಕನ್ನಡ ಭಾಷೆಯನ್ನು ಬೆಳೆಸಲು ಶ್ರಮಿಸುತ್ತಿರುವ ಶಾಂತಿ ಪ್ರಕಾಶನದ ಶ್ರಮ ಶ್ಲಾಘನೀಯವಾಗಿದೆ ಎಂದರು.
ಖ್ಯಾತ ಲೇಖಕಿ ಕುಲ್ಸುಮ್ ಅಬೂಬಕ್ಕರ್ ಬರೆದ ಶಾಂತಿ ಪ್ರಕಾಶನದ ‘ಹಿಜಾಬ್’ ಎಂಬ ಕೃತಿಯನ್ನು ತತ್ವ ಪಂಚಕರ್ಮ ಆಯುರ್ವೇದ ಕೇಂದ್ರ ದುಬೈ ಇದರ ಮೆಡಿಕಲ್ ಡೈರೆಕ್ಟರ್ ಡಾ.ಮಮತಾ ರೆಡ್ಡೆರ್ರವರು, ರೇಡಿಯೋ ಜಾಕಿ, ಕನ್ನಡ ನಿರೂಪಕಿ ಕುಮಾರಿ ಆರ್. ಜೆ. ಕೃತಿಕಾ ಅವರಿಗೆ ನೀಡುವ ಮೂಲಕ ಬಿಡುಗಡೆಗೊಳಿಸಿದರು.
ಶಾಂತಿ ಪ್ರಕಾಶನ ಪ್ರಕಟಿತ ಇನ್ನೊಂದು ಕೃತಿ ‘ಪ್ರವಾದಿ ಮುಹಮ್ಮದ್ (ಸ)ರವರ ವಿವಾಹಗಳು ಮತ್ತು ವಿಮರ್ಶೆಗಳು’ ಎಂಬ ಪುಸ್ತಕವನ್ನು ನಮ್ಮ ನಾಡ ಒಕ್ಕೂಟ ಇದರ ಅಧ್ಯಕ್ಷರಾದ ಮುಹಮ್ಮದ್ ಸಲೀಮ್ ಅವರು ಬಿಡುಗಡೆಗೊಳಿಸಿ ದುಬೈ ಹೆಮ್ಮೆಯ ಕನ್ನಡಿಗರು ಇದರ ಸದಸ್ಯರಾದ ಹಾದಿಯ ಮಂಡ್ಯರವರಿಗೆ ನೀಡಿದರು.
ಸಭೆಯನ್ನುದ್ದೇಶಿಸಿ ಡಾ ಮಮತಾ ರೆಡ್ಡೆರ್, ಆರ್.ಜೆ. ಕೃತಿಕ, ನೋಯೆಲ್ ಡಿ. ಅಲ್ಮೇಡ ಮಾತನಾಡಿದರು. ಸಮಾರಂಭದ ಆರಂಭದಲ್ಲಿ ಅಬ್ದುಲ್ ಸಲಾಂ ದೇರಳಕಟ್ಟೆ ಕುರ್ ಆನಿನ ಸೂಕ್ತವನ್ನು ಪಠಿಸಿ ಅದರ ಕನ್ನಡ ವ್ಯಾಖ್ಯಾನವನ್ನು ನೀಡಿದರು. ಆಸಿಫ್ ಮಲ್ಪೆ ಪ್ರಾಸ್ತಾವಿಕ ಭಾಷಣವನ್ನು ಮಾಡಿದರು. ಕಾರ್ಯಕ್ರವನ್ನು ನಿರೂಪಿಸಿದ ಅಬ್ದುಲ್ ಖಾದರ್ ಕುಕ್ಕಾಜೆಯವರು ಅತಿಥಿಗಳನ್ನು ಸ್ವಾಗತಿಸಿದರು. ಮುಹಮ್ಮದ್ ನಿಸಾರ್ ಧನ್ಯವಾದವಿತ್ತರು.
ನವೆಂಬರ್ ಎರಡರಂದು ಆರಂಭವಾದ ಈ ಪುಸ್ತಕ ಮೇಳವು ನವಂಬರ್ 13 ರವರೆಗೂ ವೈವಿಧ್ಯ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಆದ್ದರಿಂದ ಶಾರ್ಜಾ ಎಕ್ಸ್ಪೋ ಸೆಂಟರ್ ನಲ್ಲಿನ ಕ್ರಮಾಂಕ ಏಳನೇ ಸಭಾಂಗಣದಲ್ಲಿನ ZA-10 ಮಳಿಗೆಗೆ ಎಲ್ಲಾ ಅನಿವಾಸಿ ಕನ್ನಡಿಗರು ಭೇಟಿ ನೀಡುವುದಲ್ಲದೆ (ಯು. ಎ. ಇ.ಯಾದ್ಯಂತವಿರುವ ಕನ್ನಡ ಸಂಘಗಳು 13.11.2022ರ ಭಾನುವಾರದಂದು ಕನ್ನಡ ರಾಜ್ಯೋತ್ಸವ ಪ್ರಯುಕ್ತ ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿರುವ ಕಾರಣ) ದಿನಾಂಕ 12.11.2022 ರ ಶನಿವಾರದಂದು ನಡೆಯಲಿರುವ ನಮ್ಮ ಕನ್ನಡ ಮಳಿಗೆಯ ಸಮಾರೋಪ ಸಮಾರಂಭದಲ್ಲಿ ಕೂಡಾ ತಾವೆಲ್ಲರೂ ಭಾಗವಹಿಸಿ ಸಹಕರಿಸುವಂತೆ ಶಾಂತಿ ಪ್ರಕಾಶನ ಪುಸ್ತಕ ಮಳಿಗೆಯ ಅನಿವಾಸಿ ಕನ್ನಡಿಗ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.















