ಸನ್ಮಾರ್ಗ ವಾರ್ತೆ
ಮುಂಬೈ: ತನ್ನನ್ನು ಕತ್ತಲೆಯ ಕೋಣೆಯಲ್ಲಿ ಕೂಡಿ ಹಾಕಲಾಗಿತ್ತು. ಹದಿನೈದು ದಿನಗಳ ಕಾಲ ಸೂರ್ಯನ ಬೆಳಕನ್ನು ನಾನು ಕಂಡೇ ಇರಲಿಲ್ಲ. ಆ ಬಳಿಕ ತಾನು ಸೂರ್ಯನ ಬೆಳಕನ್ನು ಕಂಡಾಗ ಕಣ್ಣಿಗೂ ಸಮಸ್ಯೆ ಉಂಟಾಯಿತು ಎಂದು ಸಂಜಯ್ ರಾವತ್ ಹೇಳಿದ್ದಾರೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲಿನಿಂದ ಜಾಮೀನು ಮೇರೆಗೆ ಬಿಡುಗಡೆಯಾದ ಮಹಾರಾಷ್ಟ್ರದ ಉದ್ಧವ್ ಠಾಕ್ರೆ ಬಣದ ಮುಖಂಡ ಸಂಜಯ್ ರಾವತ್ ಜೈಲಿನಲ್ಲಿ ತನಗಾದ ಕರಾಳ ಅನುಭವಗಳನ್ನು ಅವರು ಎನ್ಡಿಟಿವಿಯೊಂದಿಗೆ ಹಂಚಿಕೊಂಡಿದ್ದು, 10ಕೆಜಿ ತೂಕ ಕಳೆದುಕೊಂಡಿರುವುದಾಗಿ ಹೇಳಿದ್ದಾರೆ.
ಬಿಜೆಪಿಗೆ ಶರಣಾಗಿರುತ್ತಿದ್ದರೆ ತಾನೆಂದೂ ಬಂಧನಕ್ಕೆ ಒಳಗಾಗುತ್ತಿರಲಿಲ್ಲ. ನಾನೊರ್ವ ಜೈಲ್ ಹೋರಾಟಗಾರ. ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್ಮುಖ್ ಅವರನ್ನು ನಾನು ಜೈಲಿನಲ್ಲಿ ಭೇಟಿಯಾಗಿದ್ದೆ.ಅವರ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿದೆ. ಭ್ರಷ್ಟಾಚಾರದ ಆರೋಪದಲ್ಲಿ ಅವರನ್ನು ಜೈಲಿಗಟ್ಟಲಾಗಿದೆ ಎಂದು ರಾವತ್ ಹೇಳಿದ್ದಾರೆ
ವಿರೋಧ ಪಕ್ಷದ ನಾಯಕರನ್ನು ಮಾತ್ರ ಈ ಸರ್ಕಾರ ಟಾರ್ಗೆಟ್ ಮಾಡಿ ಜೈಲಿಗೆ ಹಾಕುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ.
ತಾನು ಈ ಹಂತಕ್ಕೆ ಏರಿದ್ದರೆ ಅದಕ್ಕೆ ಠಾಕ್ರೇ ಕುಟುಂಬ ಕಾರಣ. ಉದ್ಧವ್ ಠಾಕ್ರೆ ಅವರನ್ನು ತ್ಯಜಿಸಿ ಅನೇಕ ನಾಯಕರು ಇನ್ನೊಂದು ಭಾಗಕ್ಕೆ ಜಿಗಿದರು. ಪಕ್ಷವನ್ನು ತ್ಯಜಿಸಲು ಬಯಸುವವರಿಗೆ ಬಾಗಿಲು ಮುಕ್ತ ಇದೆ. ಆದರೆ ಪಕ್ಷ ಖಂಡಿತ ಹಿನ್ನಡೆಯಿಂದ ಮೇಲೆದ್ದು ಬರಲಿದೆ ಎಂದವರು ನಿರೀಕ್ಷಿಸಿದ್ದಾರೆ.












