ವಿಮಾನದಲ್ಲಿ 2 ಬಾರಿ ಹೃದಯಾಘಾತ: ಸಹಪ್ರಯಾಣಿಕನಿಗೆ ಮರುಜೀವ ನೀಡಿದ ಭಾರತೀಯ ಮೂಲದ​ ವೈದ್ಯ

0
210

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್: ವಿಮಾನದಲ್ಲಿ ಹೃದಯಾಘಾತಕ್ಕೊಳಗಾದ ಸಹ ಪ್ರಯಾಣಿಕನಿಗೆ ಭಾರತೀಯ ಮೂಲದ ವೈದ್ಯರೊಬ್ಬರು ಮರುಜೀವ ನೀಡಿದ್ದಾರೆ. 10 ಗಂಟೆಗಳ ಸತತ ಪ್ರಯತ್ನದ ನಂತರ ಡಾ. ವಿಶ್ವರಾಜ್ ವೇಮಲ ಅವರು 43 ವರ್ಷದ ಯುವಕನಿಗೆ ಮತ್ತೆ ಜೀವ ತುಂಬಿದರು.

ಬರ್ಮಿಂಗ್‌ಹ್ಯಾಮ್‌ನಲ್ಲಿ ಕನ್ಸಲ್ಟೆಂಟ್ ಹೆಪಟಾಲಜಿಸ್ಟ್ ಆಗಿರುವ ಡಾ. ವಿಶ್ವರಾಜ್ ಯುಕೆಯಿಂದ ಭಾರತಕ್ಕೆ ಬರುತ್ತಿದ್ದ ವಿಮಾನದಲ್ಲಿ ಪ್ರಯಾಣಿಕನೊಬ್ಬನಿಗೆ ಹೃದಯಾಘಾತವಾಗಿತ್ತು. ಡಾ. ವಿಶ್ವರಾಜ್ ತಮ್ಮ ತಾಯಿಯೊಂದಿಗೆ ಬೆಂಗಳೂರಿಗೆ ಬರುತ್ತಿದ್ದರು.

ಈ ಹಿಂದೆ ಯಾವುದೇ ಹೃದಯಾಘಾತದ ಹಿನ್ನಲೆ ಇಲ್ಲದ ಯುವಕನಿಗೆ ವಿಮಾನದಲ್ಲಿ ಎರಡು ಬಾರಿ ಹೃದಯಾಘಾತವಾಗಿದ್ದು, ಆತ ವಿಮಾನದ ಸೀಟುಗಳ ನಡುವೆ ಕುಸಿದು ಬಿದಿದ್ದನು. ಸಹ ಪ್ರಯಾಣಿಕರು ಮತ್ತು ವಿಮಾನದ ವೈದ್ಯಕೀಯ ಕಿಟ್‌ನ ಸಹಾಯದಿಂದ ವಿಶ್ವರಾಜ್ ಚಿಕಿತ್ಸೆ ನೀಡಿದರು.

ಪ್ರಯಾಣಿಕನ ಬಳಿಗೆ ಧಾವಿಸಿದ ವಿಶ್ವರಾಜ್ ವಿಮಾನ ಸಿಬ್ಬಂದಿಗಳಲ್ಲಿ ಯಾವುದಾದರೂ ಔಷಧಿ ಇದೆಯೇ ಎಂದು ವಿಚಾರಿಸಿದರು. ಅದೃಷ್ಟವಶಾತ್ ವಿಮಾನದಲ್ಲಿ ಎಮರ್ಜೆನ್ಸಿ ಕಿಟ್ ಇಡಲಾಗಿತ್ತು. ವೈದ್ಯರ ಪ್ರಯತ್ನದ ನಂತರ, ಪ್ರಯಾಣಿಕನಿಗೆ ಪ್ರಜ್ಞೆ ಮರಳಿ ಬಂದಿದ್ದು ಆತ ವೈದ್ಯರೊಂದಿಗೆ ಮಾತಾಡಿದ್ದನು. ಆದರೆ ಇದ್ದಕ್ಕಿದ್ದಂತೆ ಮತ್ತೊಮ್ಮೆ ಹೃದಯಾಘಾತವಾಗಿದ್ದು ಹಲವು ಗಂಟೆಗಳ ಪ್ರಯತ್ನದ ನಂತರ ಪ್ರಯಾಣಿಕನನ್ನು ರಕ್ಷಿಸುವಲ್ಲಿ ವಿಶ್ವರಾಜ್ ಯಶಸ್ವಿಯಾದರು.

ಹಾಗಿದ್ದರೂ ಪ್ರಯಾಣಿಕನ ಆರೋಗ್ಯ ಸ್ಥಿತಿಯ ಬಗ್ಗೆ ಆತಂಕ ಹೆಚ್ಚಿದ್ದರಿಂದ  ಮುಂಬೈ ಏರ್‌ಪೋರ್ಟ್‌ನಲ್ಲಿ ಲ್ಯಾಂಡಿಗ್‍ ಮಾಡಲಾಯಿತು. ಇಲ್ಲಿಂದ ತುರ್ತು ಸೇವಾ ವಿಭಾಗದವರು ಹೃದಯಘಾತಕ್ಕೊಳಗಾದ ವ್ಯಕ್ತಿಯನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ಸಾಗಿಸಿದರು. ತನ್ನ ಜೀವನದುದ್ದಕ್ಕೂ ಈ ಘಟನೆ ಮನದಾಳದಲ್ಲಿ ಉಳಿಯಲಿದೆ ಎಂದು ಡಾ.ವಿಶ್ವರಾಜ್ ಹೇಳಿದ್ದಾರೆ. ಸಾವಿನ ಬಾಯಿಂದ ಪಾರಾಗಿ ಬಂದ ಪ್ರಯಾಣಿಕ ಡಾ.ವಿಶ್ವರಾಜ್‍‌‌ರಿಗೆ ಕಣ್ತುಂಬಿಕೊಂಡು ಕೃತಜ್ಞತೆ ಸೂಚಿಸಿದರು.