ವಿಶ್ವಸಂಸ್ಥೆಯ ಕಪ್ಪುಪಟ್ಟಿಯಲ್ಲಿ ಲಾದೆನ್ ಪುತ್ರ: ಪೌರತ್ವ ರದ್ದುಪಡಿಸಿದ ಸೌದಿಅರೇಬಿಯಾ

0
1752

ಯುನೈಟೆಡ್ ನ್ಯಾಶನ್ಸ್,ಮಾ.4: ಹಂಝ ಬಿನ್ ಲಾದೆನ್(ಅಲ್‍ಕಾಯಿದ ಮುಖ್ಯಸ್ಥ ಉಸಾವ ಬಿನ್ ಲಾದೆನ್ ಪುತ್ರ) ವಿಶ್ವಸಂಸ್ಥೆ ಭದ್ರತಾ ಸಮಿತಿ ಕಪ್ಪು ಪಟ್ಟಿಗೆ  ಸೇರಿಸಿದ್ದು ಐಎಸ್-ಅಲ್‍ಕಾಯಿದಾ ನಿರ್ಬಂಧ ಸಮಿತಿ  29 ವರ್ಷದ ಹಂಝನನ್ನು ಕಳೆದ ಗುರುವಾರ ಕಪ್ಪು ಯಾದಿಯಲ್ಲಿರಿಸಿತು. ಇದಲ್ಲದೇ ಸೌದಿಅರೇಬಿಯ ಆತನ ಪೌರತ್ವವನ್ನು ರದ್ದುಪಡಿಸಿದೆ. ಬಿನ್ ಲಾದೆನ್ ಪುತ್ರನ ಆಸ್ತಿ ಮುಟ್ಟುಗೋಲು ಹಾಕುವುದು, ಆಯುಧ ನೀಡುವುದಕ್ಕೆ ನಿರ್ಬಂಧ, ಪ್ರಯಾಣಕ್ಕೆ ನಿಷೇಧ ಹೇರುವುದು ಇತ್ಯಾದಿ ಕ್ರಮಗಳ ಆತನ ವಿರುದ್ಧ ಜರಗಲಿದೆ ಎಂದು ವರದಿ ತಿಳಿಸಿದೆ.

ಇತರ ದೇಶಗಳಿಂದ ನೇರ ಅಥವಾ ಮಧ್ಯಸ್ಥಿಕೆದಾರರ  ಮೂಲಕ ಕಪ್ಪುಪಟ್ಟಿಯಲ್ಲಿರಿಸಲಾದ ಭಯೋತ್ಪಾದಕ ಸಂಘಟನೆಗಳಿಗೆ ಆಯುಧಗಳನ್ನು ನೀಡದಂತೆ ನಿಷೇಧ ಬೀಳುತ್ತದೆ. ಇಂತಹವರ ಆಸ್ತಿ ಮುಟ್ಟುಗೋಲಿಗೆ ಇತರ ದೇಶಗಳು ಮುಂದಾಗಬೇಕು. ಸೌದಿ ಅರೇಬಿಯಾದಲ್ಲಿ ಜನಿಸಿದ ಹಂಝ ಅಲ್‍ಕಾಯಿದಾದ ಸದಸ್ಯ ಎಂದು ವಿಶ್ವಸಂಸ್ಥೆಯ ಭದ್ರತಾ ಸಮಿತಿ ಹೊರಡಿಸಿದ ಹೇಳಿಕೆಯಲ್ಲಿ ದೃಢೀಕರಿಸಿದೆ.

ಹಂಝ ಅಲ್‍ಝವಾಹಿರಿಯ ನಂತರ ಬಲಶಾಲಿ ನಾಯಕನಾಗಿದ್ದು, ಅನುಯಾಯಿಗಳಿಗೆ ದಾಳಿ ನಡೆಸಲು ಈತ ಆದೇಶ ಹೊರಡಿಸಿದ್ದಾನೆಂದು ಭದ್ರತಾ ಸಮಿತಿ ಹೇಳಿಕೊಂಡಿದೆ. ಹಂಝನ ಕುರಿತು ವಿವರ ನೀಡಿದವರಿಗೆ ಅಮೆರಿಕಾ ಹತ್ತು ಲಕ್ಷ ಡಾಲರ್ ಬಹುಮಾನ ನೀಡುವುದಾಗಿ ಘೋಷಿಸಿದೆ.