ನದಿ ದಾಟಲು ದಲಿತ ಯುವಕನ ಹೆಗಲೇರಿದ ಆರ್‌ಜೆಡಿ ಶಾಸಕ; ವಿಡಿಯೋ ವೈರಲ್

0
4

ಸನ್ಮಾರ್ಗ ವಾರ್ತೆ

ರಾಂಚಿ: ನದಿ ದಾಟಲು ಆರ್‌ಜೆಡಿ ಶಾಸಕ ನರೇಶ್ ಪ್ರಸಾದ್ ಸಿಂಗ್ ಅವರು ದಲಿತ ಯುವಕನ ಹೆಗಲೇರಿದ್ದಾರೆ. ಜಾರ್ಖಂಡ್‌ನ ಪಲಾಮು ಜಿಲ್ಲೆಯಲ್ಲಿ ನಿನ್ನೆ ಈ ಘಟನೆ ನಡೆದಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಈ ದೃಶ್ಯಾವಳಿ ವೈರಲ್ ಆದ ಬೆನ್ನಲ್ಲೇ ತೀವ್ರ ಟೀಕೆ ವ್ಯಕ್ತವಾಗಿದೆ. ವಿಡಿಯೋದಲ್ಲಿ ದಲಿತ ಯುವಕ ಶಾಸಕರನ್ನು ತನ್ನ ಬೆನ್ನಿನ ಮೇಲೆ ಹೊತ್ತುಕೊಂಡು ನದಿ ದಾಟುವಾಗ ಆಯತಪ್ಪಿ ನೀರಿಗೆ ಬೀಳುವುದು ಹಾಗೂ ಮತ್ತೊಬ್ಬ ಯುವಕ ಶಾಸಕರ ಶೂವನ್ನು ಕೈಯಲ್ಲಿ ಹಿಡಿದುಕೊಂಡು ಹೋಗುವುದು ಕಂಡುಬಂದಿದೆ.

ನರೇಶ್ ಪ್ರಸಾದ್ ಸಿಂಗ್ ಅವರು ವಿಶ್ರಾಂಪುರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಶಾಸಕರಾಗಿದ್ದಾರೆ. ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಅವರು ಗ್ರಾಮಕ್ಕೆ ತೆರಳಿದ್ದಾಗ ಈ ಘಟನೆ ನಡೆದಿದೆ. ನದಿಯಲ್ಲಿ ಕೇವಲ ಮೊಣಕಾಲುದ್ದ ಮಾತ್ರ ನೀರಿದ್ದರೂ ಶಾಸಕರು ದಲಿತ ಯುವಕನ ಸಹಾಯದಿಂದ ನದಿ ದಾಟಿದ್ದಾರೆ. ಈ ನಡುವೆ ಯುವಕ ಎಡವಿ ಬಿದ್ದಿದ್ದು, ಇಬ್ಬರೂ ನೀರಿಗೆ ಬಿದ್ದಿದ್ದಾರೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲವಾದರೂ, ಶಾಸಕರ ಅಧಿಕಾರದ ದುರುಪಯೋಗಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಸ್ಥಳೀಯ ಪಂಚಾಯತ್ ಸದಸ್ಯೆ ಅಂಜು ದೇವಿ ಅವರು ಶಾಸಕರ ಈ ಕೃತ್ಯವನ್ನು ಟೀಕಿಸಿದ್ದು, ಇದು ಅವರ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ. ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಈಗಾಗಲೇ ಹಲವು ಬಾರಿ ಪ್ರತಿಭಟನೆ ನಡೆಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಬೆಟ್ಟು ಮಾಡಿ ತೋರಿಸಿದ್ದಾರೆ.

ಜನಪ್ರತಿನಿಧಿಗಳು ಸಾಮಾನ್ಯ ಜನರ ಕಷ್ಟಗಳನ್ನು ಅರ್ಥಮಾಡಿಕೊಳ್ಳಬೇಕು ಎಂದು ಬಿಎಸ್‌ಪಿ ನಾಯಕ ರಾಹುಲ್ ದುಬೆ ಕೂಡ ಪ್ರತಿಕ್ರಿಯಿಸಿದ್ದಾರೆ. ಆಡಳಿತಾರೂಢ ಆರ್‌ಜೆಡಿ ಪಕ್ಷಕ್ಕೆ ಒಂದೇ ಒಂದು ಸೇತುವೆಯನ್ನೂ ನಿರ್ಮಿಸಲು ಸಾಧ್ಯವಾಗಿಲ್ಲ ಎಂದು ಬಿಜೆಪಿ ಕೂಡ ಆರೋಪಿಸಿದೆ.