ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಋತುಮತಿಗಳಾದ ಮುಸ್ಲಿಂ ಯುವತಿಯರಿಗೆ 16 ವರ್ಷ ತುಂಬಿದರೆ ಧಾರ್ಮಿಕ ನಿಯಮ ದನ್ವಯ ವಿವಾಹವಾಗಬಹುದು ಎಂದು ಈ ಹಿಂದೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ತೀರ್ಪು ನೀಡಿತ್ತು. ಆದರೆ ಈ ತೀರ್ಪಿನ ಆಧಾರದಲ್ಲಿ ಇತರ ಪ್ರಕರಣಗಳ ಮೇಲೆ ತೀರ್ಪು ನೀಡಬಾರದು ಎಂದು ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶ ಜಸ್ಟಿಸ್ ಡಿವೈ ಚಂದ್ರಚೂಡ್ ಮತ್ತು ನ್ಯಾಯಾಧೀಶರಾದ ಪಿಎಸ್ ನರಸಿಂಹನ್ ಅವರಿದ್ದ ಪೀಠ ನಿರ್ದೇಶನ ನೀಡಿದೆ. ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ತೀರ್ಪಿನ ವಿರುದ್ಧ ಸಲ್ಲಿಸಲಾದ ಅರ್ಜಿಯ ಮೇಲೆ ಸುಪ್ರೀಂಕೋರ್ಟ್ ವಿಚಾರಣೆ ನಡೆಸುತ್ತಾ ಈ ಆದೇಶ ನೀಡಿದೆ.
ಇದೇ ವೇಳೆ ಹೈಕೋರ್ಟ್ ತೀರ್ಪಿಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಹೈಕೋರ್ಟ್ ನ ತೀರ್ಪಿನ ಆಧಾರದಲ್ಲಿ ಇಂತಹ ಇತರ ಪ್ರಕರಣಗಳ ವಿಷಯದಲ್ಲೂ ತೀರ್ಪು ನೀಡಲಾಗುತ್ತಿದೆ ಎಂದು ಸಾಲಿಸಿಟರ್ ಜನರಲ್ ಹೇಳಿದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ. ಮೋಹಮ್ಮದನ್ ಲಾ ಪ್ರಕಾರ ಋತುಮತಿಯಾದ ಹೆಣ್ಣು ಮಕ್ಕಳನ್ನು ಮದುವೆ ಮಾಡಿ ಕೊಡಬಹುದು ಎಂದು ಹೈಕೋರ್ಟ್ ತೀರ್ಪು ನೀಡಿತ್ತು. ಆದರೆ ಹದಿನೆಂಟು ವಯಸ್ಸು ಪೂರ್ತಿಯಾಗದ ಯುವತಿಯನ್ನು ಮದುವೆ ಮಾಡಿಕೊಡುವುದು ಪೋಕ್ಸೋ ಕಾಯ್ದೆ ಉಲ್ಲಂಘನೆಯಾಗುತ್ತದೆ ಎಂದು ಅರ್ಜಿದಾರರು ವಾದಿಸಿದ್ದಾರೆ.












