ಪಾಕಿಸ್ತಾನ: ಮುಂಬೈ ಭಯೋತ್ಪಾದನಾ ದಾಳಿಯ ಮುಖ್ಯ ಸೂತ್ರಧಾರ ಹಾಫಿಝ್ ಸಯೀದ್‍ನ ಜಮಾಅತ್ತುದ್ದಾವ ನಿಷೇಧ

0
527

ಇಸ್ಲಾಮಾಬಾದ್,ಮಾ.6: ಮುಂಬೈ ಭಯೋತ್ಪಾದನಾ ದಾಳಿಯ ಮುಖ್ಯ ಸೂತ್ರಧಾರ ಹಾಫಿಝ್ ಸಯೀದ್‍ನ ಜಮಾಅತ್ತುದ್ದಾವ ಮತ್ತು ಅದರ ಪೋಷಕ ಸಂಘಟನೆ ಫಲಾಹೆ ಇನ್ಸಾನಿಯತ್ ಫೌಂಡೇಶನ್‍ಗೂ ಪಾಕಿಸ್ತಾನ ಸರಕಾರ ನಿಷೇಧ ಹೇರಿದೆ. ಎರಡು ಸಂಘಟನೆಗಳನ್ನು ನಿಷೇಧಿಸಲಾಗುವುದು ಎಂದು ಘೋಷಿಸಿ ಎರಡು ವಾರಗಳ ಬಳಿಕ ನಿಷೇಧವನ್ನು ಜಾರಿಗೆ ತರಲಾಗಿದೆ.

ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದು ಎರಡು ಸಂಘಟನೆಗಳ ವಿರುದ್ಧ ಪಾಕಿಸ್ತಾನ ಕ್ರಮ ಕೈಗೊಂಡಿದೆ. ಪಾಕಿಸ್ತಾನದ ಭಯೋತ್ಪಾದನ ವಿರೋಧಿ ಕಾನೂನು 1997 ಪ್ರಕಾರ ಸಂಘಟನೆಗಳಿಗೆ ನಿಷೇಧ ಹೇರಲಾಗಿದೆ. ಇದರೊಂದಿಗೆ ಪಾಕಿಸ್ತಾನದಲ್ಲಿ ನಿಷೇಧಿಸಲಾಗಿರುವ 70 ಸಂಘಟನೆಗಳ ಪಟ್ಟಿಗೆ ಇವೆರಡು ಸೇರ್ಪಡೆಯಾಗಿದೆ.

ಈ ಸಂಘಟನೆಗಳನ್ನು ನಿಷೇಧಿಸಲಾಗುವುದು ಎಂದು ಫೆಬ್ರುವರಿ 21ಕ್ಕೆ ಪಾಕಿಸ್ತಾನ ಘೋಷಿಸಿತ್ತು. ಆದರೆ ನಿರೀಕ್ಷಣಾ ಪಟ್ಟಿಯಲ್ಲಿರಿಸಲಾಗಿದೆ ಎಂದು ಭಾರತದ ಮಾಧ್ಯಮಗಳು ವರದಿ ಮಾಡಿದ್ದವು. ಇದರ ನಂತರ ಈಗ ಪಾಕಿಸ್ತಾನ ಈ ಸಂಘಟನೆಗಳಿಗೆ ನಿಷೇಧ ವಿಧಿಸಿದೆ.

;ಜಮಾಅತ್‍ದ್ದಾವಕ್ಕೆ ಪಾಕಿಸ್ತಾನದಲ್ಲಿ 300 ಸೆಮಿನರಿಗಳು, ಶಾಲೆಗಳು, ಆಸ್ಪತ್ರೆಗಳು, ಆಂಬ್ಯುಲೆನ್ಸ್ ಸೇವೆಗಳು, 50,000 ಸ್ವಯಂಸೇವಕರು, ಮಾಧ್ಯಮಗಳು ಇವೆ. ಅಮೆರಿಕ ಈ ಹಿಂದೆ ಹಾಫಿಝ್ ಸಯೀದ್‍ನನ್ನು ಜಾಗತಿಕ ಭಯೋತ್ಪಾದಕ ಪಟ್ಟಿಯಲ್ಲಿ ಸೇರಿಸಿತ್ತು. ಪಾಕಿಸ್ತಾನದಲ್ಲಿ ಗೃಹ ಬಂಧನದಲ್ಲಿದ್ದ ಸಯೀದ್‍ನನ್ನು 2017ರ ನವೆಂಬರ್‍ನಲ್ಲಿ ಬಿಡುಗಡೆಗೊಳಿಸಲಾಗಿತ್ತು.

ಇದೇವೇಳೆ ಜೈಷೆ ಮುಹಮ್ಮದ್‍ನ ಮುಖ್ಯಸ್ಥ ಮಸೂದ್ ಅಝರನ ಸಹೋದರ ಸಹಿತ ನಿಷೇಧಿ ಸಂಘಟನೆಯ 44 ಮಂದಿ ಕಾರ್ಯಕರ್ತರನ್ನು ಪಾಕಿಸ್ತಾನ ಬಂಧಿಸಿದೆ. ಪಾಕಿಸ್ತಾನದಲ್ಲಿ ಕಾರ್ಯಾಚರಿಸುತ್ತಿರುವ ಭಯೋತ್ಪಾದನಾ ಸಂಘಟನೆಗಳ ವಿರುದ್ಧ ಕ್ರಮ ಜರಗಿಸಬೇಕೆಂದು, ಅವುಗಳ ಆರ್ಥಿಕ ಮೂಲಗಳನ್ನು ಮುಟ್ಟುಗೋಲು ಹಾಕಬೇಕೆಂದು ಅಂತಾರಾಷ್ಟ್ರೀಯ ಸಮೂಹ ಒತ್ತಡ ಹೇರಿದ್ದರಿಂದ ಪಾಕಿಸ್ತಾನ ಕ್ರಮ ಜರಗಿಸಿತು ಎನ್ನಲಾಗುತ್ತಿದೆ.

ಮಸೂದ್ ಅಝರ್ ಸಹೋದರ ಮುಫ್ತಿ ಅಬ್ದುರ್ರವೂಫ್, ಇನ್ನೋರ್ವ ಪ್ರಮುಖ ವ್ಯಕ್ತಿ ಹಮ್ಮಾದ್ ಅಝರ್ ಬಂಧಿತರಲ್ಲಿ ಸೇರಿದ್ದಾರೆ ಎಂದು ಗೃಹ ಸಹಾಯಕ ಸಚಿವ ಶಹ್ರಿಯಾರ್ ಖಾನ್ ಅಫ್ರಿದಿ ಇಸ್ಲಾಮಾಬಾದಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.