ಸನ್ಮಾರ್ಗ ವಾರ್ತೆ
ಮಂಗಳೂರು: ಕಳೆದ ಐದು ವರ್ಷಗಳಿಂದ ರಾಜ್ಯದ ಜನತೆಗೆ ತಾಜಾ ಆಹಾರ ಉತ್ಪನ್ನಗಳನ್ನು ಪೂರೈಸುತ್ತಿರುವ ‘ಹಮ್ದ್ ಫುಡ್ಸ್ ಹೋಮ್ ಸ್ಟೋರ್’ ಮಂಗಳೂರಿನ ಫಳ್ನೀರ್ ರಸ್ತೆಯಲ್ಲಿರುವ ಮಿಲೇನಿಯಂ ಟವರ್ಸ್ನಲ್ಲಿ ತನ್ನ ಪ್ರಥಮ ಮಳಿಗೆಯನ್ನು ಸೋಮವಾರ ಲೋಕಾರ್ಪಣೆ ಮಾಡಿದೆ.
ಯೇನಪೋಯ ಸಂಸ್ಥೆಯ ಖ್ಯಾತ ಸ್ತ್ರೀರೋಗ ಕ್ಯಾನ್ಸರ್ ತಜ್ಞೆ ಡಾ.ಮರ್ಯಮ್ ಅಂಜುಮ್ ಇಫ್ತಿಕಾರ್ ನೂತನ ಮಳಿಗೆಯನ್ನು ಉದ್ಘಾಟಿಸಿ “ಮಹಿಳೆಯರೇ ನಿರ್ವಹಿಸುತ್ತಿರುವ ಹಮ್ದ್ ಫುಡ್ಸ್ ಹೋಮ್ ಸ್ಟೋರ್ ಉತ್ತಮವಾಗಿ ಮುನ್ನಡೆಯಲಿ” ಎಂದು ಶುಭ ಹಾರೈಸಿದರು.
“ಸ್ಪರ್ಧಾತ್ಮಕ ಯುಗದಲ್ಲಿ ಮಹಿಳೆಯರು ವ್ಯಾಪಾರ ರಂಗಕ್ಕೆ ಮುಂದಡಿ ಇರಿಸಿ ಇತರ ಮಹಿಳೆಯರಿಗೆ ಮಾದರಿಯಾಗುತ್ತಿರುವುದು ಹೆಮ್ಮೆಯ ವಿಷಯ” ಎಂದು ಅನುಪಮ ಮಹಿಳಾ ಮಾಸಿಕದ ಸಂಪಾದಕಿ ಶಹನಾಝ್ ಎಂರವರು ನುಡಿದರು.
ಹಮ್ದ್ ಫುಡ್ಸ್ನ ಸಂಸ್ಥಾಪಕರು, ವ್ಯವಸ್ಥಾಪಕರು, ನೌಕರರು ಸೇರಿದಂತೆ ಇಡೀ ಸಂಸ್ಥೆಯನ್ನು ಮಹಿಳೆಯರೇ ನಿರ್ವಹಿಸುತ್ತಿರುವುದು ಇದರ ವೈಶಿಷ್ಟತೆಯಾಗಿದೆ. 2018ರಲ್ಲಿ 20 ಉತ್ಪನ್ನಗಳೊಂದಿಗೆ ಆರಂಭಗೊಂಡ ಸಣ್ಣ ಕಂಪನಿಯು ಇಂದು 75ಕ್ಕೂ ಹೆಚ್ಚು ಉತ್ಪನ್ನಗಳೊಂದಿಗೆ ಖ್ಯಾತಿ ಪಡೆದಿದ್ದು ನವೋದ್ಯಮಿಗಳಾದ ಶಾಹಿದಾ ಮತ್ತು ಶಹೀರಾ ಈ ‘ಹಮ್ದ್ ಫುಡ್ಸ್’ನ ರುವಾರಿಗಳು.
“ಆರೋಗ್ಯಕರ ಆಹಾರ, ಆರೋಗ್ಯಕರ ಜೀವನ” ಎಂಬ ಧೈಯವಾಕ್ಯದೊಂದಿಗೆ ‘ಹಮ್ದ್ ಫುಡ್ಸ್’ ಕಂಪನಿ ಆರಂಭಿಸಿರುವುದಾಗಿ ಶಾಹಿದಾ ಮತ್ತು ಶಹೀರಾರವರು ಹೇಳುತ್ತಾರೆ.
“ರಾಸಾಯನಿಕ ಮುಕ್ತ, ಸಾವಯವ ಹಾಗೂ ನೈಸರ್ಗಿಕವಾದ ರುಚಿಕರವಾದ ಆಹಾರ ಪದಾರ್ಥಗಳನ್ನು ಅಡುಗೆ ಕೋಣೆಗೆ ತಲುಪಿಸುವ ಗುರಿಯನ್ನು ಹಮ್ದ್ ಫುಡ್ಸ್ ಹೊಂದಿದೆ. ವಿವಿಧ ಮಸಾಲೆ ಪುಡಿ ಸೇರಿದಂತೆ ವಿಭಿನ್ನ ತಾಜಾ ಆಹಾರ ಪದಾರ್ಥಗಳನ್ನು ನಾಡಿನ ಜನತೆಗೆ ತಲುಪಿಸುವುದು ಹಮ್ದ್ ಫುಡ್ಸ್ನ ಧೇಯ್ಯ ಎಂದು ಅವರು ಹೇಳಿದರು.
ಮುಖ್ಯ ಅತಿಥಿಗಳಾಗಿ ಯುನಾನಿ ವೈದ್ಯೆ ಡಾ.ಆಯಿಶಾ ಸುಹಾನ, ಆಸರಾ ವುಮೆನ್ಸ್ ಫೌಂಡೇಶನ್ ಅಧ್ಯಕ್ಷೆ ಶಬೀನಾ ಅಕ್ತರ್, ಸ್ತ್ರೀರೋಗ ತಜ್ಞೆ ಡಾ.ದಿಶಾ ಅಜಿಲ, ಸಾಯಿರಾ ಲೋಬೊ, ಕಾರ್ಪೊರೇಟರ್ ಸಂಶಾದ್ ಅಬೂಬಕರ್ ಮತ್ತಿತರ ಗಣ್ಯರು ಪಾಲ್ಗೊಂಡು ಶುಭಹಾರೈಸಿದರು.
ನಸುಹಾ ಕಿರಾತ್ ಪಠಿಸಿದರು. ಆಯಿಷಾ ಆಯಾತ್ ಸ್ವಾಗತಿಸಿದರು. ಆಯಿಶಾ ಹಸನ್, ಸಾದಿಕ್ ಹಸನ್ ಮತ್ತಿತರರು ಉಪಸ್ಥಿತರಿದ್ದರು.













