ಸನ್ಮಾರ್ಗ ವಾರ್ತೆ
ಲಾಹೋರ್: ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವುದರ ನಡುವೆಯೇ ಪಾಕ್ ಪ್ರಧಾನಿ ಶಹಬಾಝ್ ಶರೀಫ್ ಅವರು ಭಾರತದತ್ತ ಶಾಂತಿಯ ಹಸ್ತ ಚಾಚಿದ್ದಾರೆ. ಕಾಶ್ಮೀರ ಸಹಿತ ವಿವಿಧ ಸಮಸ್ಯೆಗಳನ್ನು ಚರ್ಚಿಸುವುದಕ್ಕೆ ಅವರು ಪ್ರಧಾನಿ ನರೇಂದ್ರ ಮೋದಿ ಯವರನ್ನು ಆಹ್ವಾನಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ನೆರೆಹೊರೆಯ ರಾಷ್ಟ್ರಗಳಾಗಿವೆ. ನಾವು ಪರಸ್ಪರ ಸಹಕಾರದೊಂದಿಗೆ ಬದುಕ ಬೇಕಾದವರು. ಶಾಂತಿಯೊಂದಿಗೆ ಅಭಿವೃದ್ಧಿಯನ್ನು ಹೊಂದ ಬೇಕಾದವರೇ ಹೊರತು ಪರಸ್ಪರ ಜಗಳವಾಡಿಕೊಂಡು ಸಂಪತ್ತನ್ನು ವ್ಯಯ ಮಾಡಬೇಕಾದವರಲ್ಲ. ಎರಡೂ ರಾಷ್ಟ್ರಗಳ ನಡುವೆ ಮೂರು ಯುದ್ಧ ಗಳಾಗಿವೆ. ಇದರಿಂದಾಗಿ ಜನರಿಗೆ ಇನ್ನಷ್ಟು ಬಡತನ ಸಂಕಷ್ಟಗಳಷ್ಟೇ ದೊರೆತಿವೆ. ನಾವು ಪಾಠ ಕಲಿತಿದ್ದೇವೆ. ನಾವು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಮತ್ತು ಶಾಂತಿಯಿಂದ ಜೀವಿಸಲು ಬಯಸುತ್ತೇವೆ. ಬಡತನ ನಿರ್ಮೂಲನೆಯ ಜೊತೆಗೆ ಅಭಿವೃದ್ಧಿ ಸಾಧಿಸಲು ಮತ್ತು ಶಿಕ್ಷಣ, ಆರೋಗ್ಯ ಸೌಲಭ್ಯಗಳನ್ನು ಉತ್ತಮಪಡಿಸಲು ಮತ್ತು ಜನರಿಗೆ ಉದ್ಯೋಗ ನೀಡಲು ನಾವು ಬಯಸುತ್ತೇವೆ. ಬಾಂಬುಗಳಿಗೆ ಮತ್ತು ಬಂದೂಕುಗಳಿಗೆ ನಮ್ಮ ಸಂಪತ್ತು ವ್ಯಯ ಆಗಬಾರದು ಎಂಬುದು ನಾನು ನರೇಂದ್ರ ಮೋದಿಯವರಿಗೆ ನೀಡುವ ಸಂದೇಶ ಎಂದು ಶಹಬಾಝ್ ಶರೀಫ್ ಹೇಳಿದ್ದಾರೆ.
ಯುಎಇ ಪ್ರವಾಸದಲ್ಲಿರುವ ಅವರು ಅಲ್ಲಿನ ಅರಬ್ ನ್ಯೂಸ್ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ಈ ಮಾತುಗಳನ್ನಾಡಿದ್ದಾರೆ. ಇದೇ ವೇಳೆ ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಪ್ರತಿದಿನವೂ ನಡೆಯುತ್ತಿದೆ. ಭಾರತದ ಅಲ್ಪಸಂಖ್ಯಾತರು ಹಿಂಸೆಗೆ ಒಳಗಾಗುತ್ತಿದ್ದಾರೆ, ಇದು ನಿಲ್ಲಬೇಕು ಎಂದು ಕೂಡ ಅವರು ಹೇಳಿದ್ದಾರೆ.












