ಮಂಗಳೂರು: ಹಿರಾ ವಿಮೆನ್ಸ್ ಪದವಿ ಕಾಲೇಜಿನಲ್ಲಿ ಅರಬಿಕ್ ಭಾಷಾ ದಿನಾಚರಣೆ

0
183

ಸನ್ಮಾರ್ಗ ವಾರ್ತೆ

ಮಂಗಳೂರು: ಇಲ್ಲಿಗೆ ಸಮೀಪದ ತೊಕ್ಕೋಟು ವಿಮೆನ್ಸ್ ಪದವಿ ಕಾಲೇಜಿನಲ್ಲಿ ಅರೆಬಿಕ್ ಭಾಷಾ ವಿಭಾಗದ ವತಿಯಿಂದ ಜಾಗತಿಕ ಅರಬಿ ಭಾಷಾ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಕೌನ್ಸಿಲರ್ ಹಾಗೂ ತರಬೇತುದಾರರಾದ ಮುಹಮ್ಮದ್ ಶಮೀಮ್ ಅಬೂಬಕ್ಕರ್ ರವರು ಭಾಗವಹಿಸಿದ್ದರು. ಸಭೆಯನ್ನುದ್ದೇಶಿಸಿ ಮಾತನಾಡಿ ತಾಂತ್ರಿಕತೆಯ ಅಭಿವೃದ್ಧಿಯಲ್ಲಿ ಜಗತ್ತು ಮುಂದುವರೆಯುತ್ತಿರುವಾಗ ನಾವು ನಮ್ಮನ್ನು ಅದಕ್ಕಾಗಿ ಸಜ್ಜುಗೊಳಿಸಬೇಕು, ಜ್ಞಾನ ಸಂಪಾದನೆಯ ಜೊತೆ ಜೊತೆಗೆ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುತ್ತಾ ಅದರ ಪ್ರತಿಪಾದಕರು ನಾವಾಗಬೇಕೆಂದು ವಿದ್ಯಾರ್ಥಿಗಳಿಗೆ ಕರೆಕೊಟ್ಟರು. ಇನ್ನೋರ್ವ ಅತಿಥಿ, ಇಕ್ರಾ ಅರಬಿಕ್ ಸ್ಕೂಲ್ ಪ್ರಾಂಶುಪಾಲರಾದ ಮೌಲಾನಾ ಸಾಲಿಮ್ ನದ್ವಿಯವರು ಅರಬಿ ಭಾಷೆಯ ಪ್ರಾಧಾನ್ಯತೆಯನ್ನು ವಿವರಿಸುತ್ತಾ, ಶಿಕ್ಷಕರನ್ನು ಗೌರವಿಸುವ ಸಂಸ್ಕೃತಿಯನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕೆಂದು ಸೂಚಿಸಿದರು.

ಪದವಿ ಹಾಗೂ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಅರಬಿ ಭಾಷೆಯಲ್ಲಿ ತಮ್ಮ ವಿವಿಧ ಪ್ರತಿಭೆಯನ್ನು ಅನಾವರಣಗೊಳಿಸಿದರು. ರಮ್ಲತ್ ಉಚ್ಚಿಲ್ ಅರಬಿ ಭಾಷೆಯ ಮಹತ್ವದ ಬಗ್ಗೆ ಮಾತನಾಡಿದರು. ಅರಬಿ ಭಾಷಾ ವಾರ್ಷಿಕೋತ್ಸವದ ಸಲುವಾಗಿ ನಡೆದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಮೌಲ್ಯ ಶಿಕ್ಷಣ ವಿಭಾಗದ ಮುಖ್ಯಸ್ಥರಾದ ಮೌಲಾನ ಶುಐಬ್ ಹುಸೇನ್ ನದ್ವಿ ಯವರು ಅಧ್ಯಕ್ಷೀಯ ಭಾಷಣ ಮಾಡಿದರು. ಸಭೆಯಲ್ಲಿ ಉದ್ಯಮಿ ಅಕ್ಬರ್ ಸುನ್ನದ್ ವಾಲಾ, ಸಮಾಜ ಸೇವಕರಾದ ಸಿಎಚ್ ಸಲಾಂ, ಶಾಂತಿ ಎಜುಕೇಶನ್ ಟ್ರಸ್ಟ್ ಕೋಶಾಧಿಕಾರಿ ಕೆ.ಎಂ ಶರೀಫ್ ಹಾಗೂ ಸಂಚಾಲಕರಾದ ರಹ್ಮತುಲ್ಲಾ ಉಪಸ್ಥಿತರಿದ್ದರು. ಪದವಿ ಮತ್ತು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆಯವರಾದ ಶ್ರೀಮತಿ ಭಾಗೀರಥಿ ಮತ್ತು ಶ್ರೀಮತಿ ಫಾತಿಮಾ ಮೆಹರೂನ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯವರಾದ ಖೈರುನ್ನೀಸಾ ಮತ್ತು ಹಿಬಾ ಸತ್ತಾರ್ ಕಿರಾತ್ ಪಠಿಸಿದರು. ಉಪನ್ಯಾಸಕಿ ರುಕ್ಸಾನ ಉಮರ್ ಹಾಗೂ ಫಾತಿಮಾ ತನ್ಹಾರವರು ಕಾರ್ಯಕ್ರಮ ನಿರೂಪಿಸಿದರು. ಫಾತಿಮಾ ರಮ್ಯತ್ ಬಾನು ಅತಿಥಿಗಳನ್ನು ಸ್ವಾಗತಿಸಿದರು ಮತ್ತು ಸಾರಿಯ ಅಬ್ದುಸ್ಸಮದ್ ಧನ್ಯವಾದವಿತ್ತರು.