ಲಖೀಂಪುರ ಖೇರಿ ಪ್ರಕರಣ: ಆಶಿಶ್ ಮಿಶ್ರಾ ಜಾಮೀನು ಅರ್ಜಿಗೆ ಸುಪ್ರೀಂ ಕೋರ್ಟಿನಲ್ಲಿ ವಿರೋಧ ವ್ಯಕ್ತಪಡಿಸಿದ ಉ.ಪ್ರದೇಶ ಸರಕಾರ

0
214

ಸನ್ಮಾರ್ಗ ವಾರ್ತೆ

ಲಕ್ನೋ: ಲಖೀಂಪುರ ಖೇರಿ ಹಿಂಸಾಚಾರ ಪ್ರಕರಣದ ಪ್ರಮುಖ ಆರೋಪಿ ಕೇಂದ್ರ ಸಚಿವ ಅಜಯ್ ಕುಮಾರ್ ಮಿಶ್ರರವರ ಪುತ್ರ ಆಶಿಶ್ ಮಿಶ್ರ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ಉತ್ತರಪ್ರದೇಶ ಸರಕಾರ ಸುಪ್ರೀಂ ಕೋರ್ಟಿನಲ್ಲಿ ವಿರೋಧಿಸುವ ಮೂಲಕ ಅಚ್ಚರಿಯನ್ನುಂಟು ಮಾಡಿದೆ. ಆಶಿಶ್ ಮಿಶ್ರಾ ಎಸಗಿದ ಅಪರಾಧ ಗಂಭೀರವಾಗಿದೆ ಮತ್ತು ಸಮಾಜಕ್ಕೆ ತಪ್ಪು ಸಂಕೇತವನ್ನು ನೀಡುತ್ತದೆ ಎಂದು ಉತ್ತರ ಪ್ರದೇಶದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಗರಿಮಾ ಪ್ರಸಾದ್ ಅವರು ಸುಪ್ರೀಂ ಕೋರ್ಟಿನಲ್ಲಿ ವಾದಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ಜಾಮೀನು ನಿರಾಕರಿಸಿರುವುದನ್ನು ಪ್ರಶ್ನಿಸಿ ಆಶಿಶ್ ಮಿಶ್ರ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದ. 2021ರ ಅಕ್ಟೋಬರ್ 3ರಂದು ಉತ್ತರ ಪ್ರದೇಶದ ಲಖಿಕಂಪುರ ಖೇರಿ ಜಿಲ್ಲೆಯ ಟಿಕುನಿಯಾದಲ್ಲಿ ನಡೆದ ಹಿಂಸಾಚಾರದಲ್ಲಿ ಎಂಟು ಜನರು ಸಾವನ್ನಪ್ಪಿದ್ದರು.

ಉತ್ತರ ಪ್ರದೇಶದ ಪೊಲೀಸ್ ಎಫ್ಐಆರ್ ಪ್ರಕಾರ, ಆಶಿಶ್ ಮಿಶ್ರ ಕುಳಿತಿದ್ದ ಎಸ್‌ಯುವಿ ಕಾರು ಹರಿದು ನಾಲ್ವರು ರೈತರು ಸಾವನ್ನಪ್ಪಿದ್ದಾರೆ. ಘಟನೆಯ ನಂತರ ಉದ್ರಿಕ್ತಗೊಂಡ ರೈತರು ಚಾಲಕ ಹಾಗೂ ಇಬ್ಬರು ಬಿಜೆಪಿ ಕಾರ್ಯಕರ್ತರನ್ನು ಥಳಿಸಿ ಕೊಂದಿದ್ದರು. ಹಿಂಸಾಚಾರದಲ್ಲಿ ಒಬ್ಬ ಪತ್ರಕರ್ತನೂ ಸಾವನ್ನಪ್ಪಿದ್ದನು. ಕೃಷಿ ಕಾಯ್ದೆಯನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಆಶಿಶ್ ಮಿಶ್ರಾ ರೈತರ ಮೇಲೆ ಹಿಂಬದಿಯಿಂದ ಕಾರು ಹರಿಸಿ ಹತ್ಯೆಗೈದಿದ್ದ ಪ್ರಕರಣವಿದು.