ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ನೀಡಿದ ‘ದೇವಿ ಪ್ರಶಸ್ತಿ’ ನಿರಾಕರಿಸಿದ ತಮಿಳು ಲೇಖಕಿ
ಸನ್ಮಾರ್ಗ ವಾರ್ತೆ
ಚೆನ್ನೈ: ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಅದಾನಿ ಗ್ರೂಪ್ ಪ್ರಮುಖ ಪ್ರಾಯೋಜಕರು ಎಂಬ ಕಾರಣಕ್ಕಾಗಿ ತಮಿಳು ದಲಿತ ಲೇಖಕಿ ಸುಕೀರ್ತರಾಣಿ ಅವರು ಸಾಹಿತ್ಯ ಪ್ರಶಸ್ತಿಯನ್ನು ನಿರಾಕರಿಸಿದ್ದಾರೆ. ಅದಾನಿ ಪ್ರಾಯೋಜಿತ ಯಾವುದೇ ಪ್ರಶಸ್ತಿಗಳನ್ನು ಸ್ವೀಕರಿಸುವುದು ತನ್ನ ಸಿದ್ಧಾಂತಕ್ಕೆ ವಿರುದ್ಧವಾಗಿದೆ ಎಂದ ಅವರು ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ನೀಡಿದ ‘ದೇವಿ ಪ್ರಶಸ್ತಿ’ಯನ್ನು ನಿರಾಕರಿಸಿದ್ದಾರೆ.
ದಲಿತ ಮಹಿಳಾ ಹಕ್ಕುಗಳ ಸಾಹಿತ್ಯ ಕೃತಿಗಳಿಗೆ ಖ್ಯಾತರಾದ ಸುಕೀರ್ತರಾಣಿಯವರು ಫೆ.4ರಂದು ದೇವಿ ಪ್ರಶಸ್ತಿಯನ್ನು ಸ್ವೀಕರಿಸುವುದಿಲ್ಲ ಎಂದು ಫೇಸ್ ಬುಕ್ನಲ್ಲಿ ಪೋಸ್ಟ್ ಮಾಡಿದ್ದರು. ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ಗ್ರೂಪ್ ಪ್ರತಿ ಕ್ಷೇತ್ರದಲ್ಲಿ ಅವರ ಕೊಡುಗೆಯ ಆಧಾರದ ಮೇಲೆ ಆಯ್ಕೆಯಾದ 12 ಮಹಿಳೆಯರಿಗೆ ದೇವಿ ಪ್ರಶಸ್ತಿಯನ್ನು ನೀಡುತ್ತದೆ. ಇದರಲ್ಲಿ ದಲಿತ ಸಾಹಿತ್ಯಕ್ಕೆ ನೀಡಿದ ಕೊಡುಗೆಗಾಗಿ ಸುಕೀರ್ತರಾಣಿ ಅವರನ್ನು ಆಯ್ಕೆ ಮಾಡಲಾಗಿತ್ತು.
“ಈ ಪ್ರಶಸ್ತಿ ಸಮಾರಂಭದ ಮುಖ್ಯಪ್ರಾಯೋಜಕ ಅದಾನಿ ಗ್ರೂಪ್ ಎಂಬುದು ನನಗೆ ನಿನ್ನೆಯಷ್ಟೇ ತಿಳಿಯಿತು. ನಾನು ಹೇಳುವ ರಾಜಕೀಯ ಮತ್ತು ನಾನು ನಂಬುವ ವಿಚಾರಗಳಿಗೆ ವಿರುದ್ಧವಾದ ಯಾವುದೇ ಸಂಸ್ಥೆಯಿಂದಲೋ ಮತ್ತು ಅದಾನಿ ಗ್ರೂಪ್ ಪ್ರಾಯೋಜಿಸುತ್ತಿರುವ ಯಾವುದೇ ಸಮಾರಂಭದಿಂದಲೋ ಪ್ರಶಸ್ತಿಯನ್ನು ಸ್ವೀಕರಿಸುವುದಕ್ಕೆ ನನ್ನ ಮನಸ್ಸು ಒಪ್ಪುತ್ತಿಲ್ಲ. ಆದ್ದರಿಂದ ಈ ಪ್ರಶಸ್ತಿ ಸಮಾರಂಭವನ್ನು ನಾನು ಬಹಿಷ್ಕರಿಸುತ್ತಿದ್ದೇನೆ” ಎಂದು ಅವರು ಫೇಸ್ಬುಕ್ ಪೋಸ್ಟ್ ಮಾಡಿದ್ದು, ಪ್ರಶಸ್ತಿ ತಿರಸ್ಕರಿಸಿರುವ ಬಗ್ಗೆ ಆಯೋಜಕರಿಗೂ ಇ-ಮೇಲ್ ಕಳುಹಿಸಿದ್ದಾಗಿ ಬಹಿರಂಗ ಪಡಿಸಿದ್ದಾರೆ.












