ಸನ್ಮಾರ್ಗ ವಾರ್ತೆ
ರಾಮನಗರ: ಸೋಷಿಯಲ್ ಮೀಡಿಯಾ ಮೂಲಕ ಪರಿಚಿತರಾಗಿದ್ದ ಅಪ್ರಾಪ್ತೆಯು, ತನ್ನ ಪ್ರೀತಿ ನಿರಾಕರಿಸಿದ್ದಕ್ಕೆ ಆಕೆಯ ಮುಖಕ್ಕೆ ಯುವಕನೋರ್ವ ಆ್ಯಸಿಡ್ ಎರಚಿರುವ ಘಟನೆ ರಾಮನಗರ ಜಿಲ್ಲೆಯ ಕನಕಪುರದ ಬೈಪಾಸ್ ರಸ್ತೆ ಬಳಿ ನಡೆದಿದೆ.
ಕನಕಪುರ ನಗರದ ಬೈಪಾಸ್ ರಸ್ತೆ ಬಳಿ ಶುಕ್ರವಾರ ಪ್ರೀತಿಯನ್ನು ನಿರಾಕರಿಸಿದಳೆಂದು ಕೋಪಗೊಂಡ ಯುವಕನೊಬ್ಬ 17 ವರ್ಷದ ವಿದ್ಯಾರ್ಥಿನಿಯ ಮುಖದ ಮೇಲೆ ಆ್ಯಸಿಡ್ ಎರಚಿದ್ದಾನೆ.
ಆ್ಯಸಿಡ್ ದಾಳಿಯಲ್ಲಿ ಅಪ್ರಾಪ್ತೆಯ ಕಣ್ಣಿಗೆ ಗಾಯಗಳಾಗಿದ್ದು, ಕೂಡಲೇ ಕನಕಪುರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ವರದಿಯಾಗಿದೆ.
ಕುರುಪೇಟೆಯಲ್ಲಿ ಮೆಕ್ಯಾನಿಕ್ ಕೆಲಸ ಮಾಡುತ್ತಿದ್ದ 22 ವರ್ಷ ವಯಸ್ಸಿನ ಆರೋಪಿ ಯುವಕ ಸುಮಂತ್ ಮತ್ತು ವಿದ್ಯಾರ್ಥಿನಿ ನಡುವೆ ಕಳೆದ ಒಂದು ವರ್ಷದಿಂದಲೂ ಸಲುಗೆ ಇತ್ತು. ಸಾಮಾಜಿಕ ಮಾಧ್ಯಮದ ಮೂಲಕ ಇಬ್ಬರು ಪರಿಚಿತರಾಗಿದ್ದರು. ಈ ವೇಳೆ ಯುವಕ ತನ್ನನ್ನು ಪ್ರೀತಿಸುವಂತೆ ಕೇಳಿಕೊಂಡಿದ್ದಾನೆ. ಇದಕ್ಕೆ ನಿರಾಕರಿಸಿದ್ದ ಬಾಲಕಿ, ಇತ್ತೀಚೆಗಷ್ಟೇ ಮಾತನಾಡುವುದನ್ನು ನಿಲ್ಲಿಸಿದ್ದಳು.
ಈ ವಿಚಾರವಾಗಿ ಸಿಟ್ಟಿಗೆದ್ದಿದ್ದ ಯುವಕ, ಬಾಲಕಿಗೆ ಕರೆ ಮಾಡಿ ಮಾತನಾಡಲು ಬೈಪಾಸ್ ರಸ್ತೆಗೆ ಬರಬೇಕೆಂದು ವಿನಂತಿಸಿದ್ದಕ್ಕೆ, ಬಾಲಕಿ ತನ್ನ ತಮ್ಮನ ಜೊತೆ ತೆರಳಿ ಆತನನ್ನು ಭೇಟಿಯಾಗಿದ್ದಾಳೆ. ಈ ವೇಳೆ ಯುವಕ ಆಕೆಯ ಮನವೊಲಿಸಲು ಯತ್ನಿಸಿದಾಗಲೂ, ಆಕೆ ಒಪ್ಪದಿದ್ದಾಗ ಕಾರ್ ಎಂಜಿನ್ ಶುಚಿಗೊಳಿಸಲು ಬಳಸುವ ಆ್ಯಸಿಡ್ ಅನ್ನು ಮುಖದ ಮೇಲೆ ಎರಚಿ, ಸ್ಥಳದಿಂದ ಪರಾರಿಯಾಗಿದ್ದ ಎಂದು ತಿಳಿದು ಬಂದಿದೆ.
ಈ ಸಂಬಂಧ ಕನಕಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಯುವಕನನ್ನು ವಿಚಾರಣೆ ನಡೆಸಲು ವಶಕ್ಕೆ ತೆಗೆದುಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.












