ಶಿವಮೊಗ್ಗ ಜಿಲ್ಲಾ ಸಹಕಾರಿ ಬ್ಯಾಂಕಿನ ನೇಮಕಾತಿಯಲ್ಲಿ ಹಗರಣ; ಹೋರಾಟಗಾರ ಕೆ. ಎಲ್. ಅಶೋಕ್ ಆರೋಪ

0
408

ನೇಮಕಾತಿ ಸಂಬಂಧ ಲೋಕಾಯುಕ್ತಕ್ಕೆ ದೂರು ನೀಡಲು ಚಿಂತನೆ

ಸನ್ಮಾರ್ಗ ವಾರ್ತೆ

ಶಿವಮೊಗ್ಗ : ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ನೇಮಕಾತಿಯಲ್ಲಿ ಹಗರಣ ನಡೆದಿದ್ದು, ಹುದ್ದೆಯ ಆಕಾಂಕ್ಷಿಗಳಿಂದ 50 ಲಕ್ಷದವರೆಗೆ ಹಣ ಡಿಮಾಂಡ್ ಮಾಡಲಾಗಿದೆ. ಸ್ವತಃ ಅಭ್ಯರ್ಥಿಗಳೇ ಈ ಬಗ್ಗೆ ಬಾಯಿಟ್ಟಿದ್ದು, ಮುಂದಿನ ದಿನಗಳಲ್ಲಿ ಸಮಗ್ರ ಹಗರಣವನ್ನು ಬಯಲಿಗೆಳೆಯುವುದಾಗಿ ಪ್ರಗತಿಪರ ಹೋರಾಟಗಾರ ಕೆ. ಎಲ್. ಅಶೋಕ್ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2019ರಲ್ಲಿ 14 ಸ್ಥಾನ ತುಂಬಲು ಅರ್ಜಿ ಆಹ್ವಾನಿಸಲಾಗಿತ್ತು. ಆದರೆ ಆ ವೇಳೆ ಸರಕಾರ ಬದಲಾಗಿದ್ದರಿಂದ ಈ ಆದೇಶವನ್ನು ತಡೆಹಿಡಿಯಲಾಗಿತ್ತು. ಕಳೆದ ವರ್ಷ 98 ಹುದ್ದೆಗಳಿಗೆ ಅರ್ಜಿ ಅರ್ಜಿ ಆಹ್ವಾನಿಸಲಾಗಿತ್ತು. ಅದಕ್ಕೆ 2022ರ ನ. 13ರಂದು ಲಿಖಿತ ಪರೀಕ್ಷೆ ನಡೆಸಲಾಗಿದೆ. ಈ ಪರೀಕ್ಷೆಯನ್ನು ರಿಸರ್ವ್ ಬ್ಯಾಂಕ್ ನಿಯಮದ ಪ್ರಕಾರ ಅನುಭವಿ ಸಂಸ್ಥೆಯ ಮೂಲಕ ನಡೆಸಬೇಕಿತ್ತು. ಆದರೆ ಯಾವುದೋ ಅಪರಿಚಿತ ಸಂಸ್ಥೆಯ ಜೊತೆ ಕೈ ಜೋಡಿಸಿ ನಡೆಸಲಾಗಿದೆ. ಪರೀಕ್ಷೆಯ ನಂತರ ಪ್ರಶ್ನೆ ಪತ್ರಿಕೆಯನ್ನು ಅಭ್ಯರ್ಥಿಗಳಿಂದ ಪಡೆಯುವ ಮೂಲಕ ಹಗರಣಕ್ಕೆ ನಾಂದಿ ಹಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಯಾವುದೇ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಹಿಂಪಡೆಯುವುದಿಲ್ಲ. ಆದರೆ ಓಎಂಆರ್ ಶೀಟ್‌ನಲ್ಲಿ ಉತ್ತರ ಬರೆದ ನಂತರವೂ ಇಲ್ಲಿ ಪ್ರಶ್ನೆ ಪತ್ರಿಕೆ ಹಿಂಪಡೆದಿದ್ದೇಕೆ ಎಂದು ಪ್ರಶ್ನಿಸಿರುವ ಅವರು, ಉತ್ತರ ನೀಡುವಂತೆ ಆಗ್ರಹಿಸಿದ್ದಾರೆ.

ಶಿಕಾರಿಪುರದ ಜಿ.ಕೆ. ಆಕಾಶ್ ಮತ್ತು ಹರಗುವಳ್ಳಿಯ ಮಂಜುನಾಥ್ ಎನ್ನುವವರು ನ 16ರಂದೇ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರಿಗೆ ದೂರು ನೀಡಿದ್ದರು. ಆದರೆ ಈ ದೂರು ಇಲ್ಲಿಯವರೆಗೆ ಏಕೆ ತನಿಖೆ ಆಗಿಲ್ಲ. ಯಾರ ಮೇಲೂ ಯಾಕೆ ಕ್ರಮ ಕೈಗೊಳ್ಳಲಿಲ್ಲ ಎಂದು ಪ್ರಶ್ನಿಸಿದ್ದಾರೆ.

ಪ್ರತಿ ಹುದ್ದೆಗೆ 40ರಿಂದ 50 ಲಕ್ಷ ರೂ. ವರೆಗೆ ಹಣ ಡಿಮಾಂಡ್ ಮಾಡಿದ ಬಗ್ಗೆ ದಾಖಲೆ ಇದೆ. ಫೆ. 5ರಂದು ಸಂದರ್ಶನ ಹಮ್ಮಿಕೊಳ್ಳಲಾಗಿದೆ.. ಇಷ್ಟೆಲ್ಲ ಹಗರಣ ನಡೆದಿರುವುದರಿಂದ ಇದಕ್ಕೆ ತಡೆ ನೀಡಬೇಕೆಂದು ಸ್ಥಾನಾಕಾಂಕ್ಷಿಗಳು ಹೈಕೋರ್ಟ್ ಮೊರೆ ಹೋಗಿದ್ದಾರೆ. ನ್ಯಾಯಾಲಯದಲ್ಲಿ ಅದರ ವಿಚಾರಣೆ ನಡೆಯಲಿದೆ. ಈ ಅಕ್ರಮ ನೇಮಕಾತಿ ವಿರುದ್ಧ ಈ ಬಾರಿ ಅಭ್ಯರ್ಥಿಗಳೇ ತಿರುಗಿ ಬಿದ್ದಿದ್ದಾರೆ. ನೇಮಕಾತಿ ವಿರುದ್ಧ ಚಳವಳಿ ರೂಪದಲ್ಲಿ ಪ್ರತಿಭಟನೆ, ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಡಿಸಿಸಿ ಬ್ಯಾಂಕ್‌ ವ್ಯವಸ್ಥಾಪಕ ನಿರ್ದೇಶಕರನ್ನು ಅಮಾನತು ಮಾಡಿ ಬಂಧಿಸಬೇಕು, ಒಂದೇ ಸಮುಯದಾಯದ ಅತಿ ಹೆಚ್ಚು ಜನರು ಸಂದರ್ಶನಕ್ಕೆ ಆಯ್ಕೆಯಾಗಿದ್ದಾರೆ, ಈ ರೀತಿ ಆಯ್ಕೆ ಮಾಡಿರುವುದರ ಗುಟ್ಟೇನು? ಇದಕ್ಕೆಲ್ಲ ಸಂಬಂಧಿತ ಬ್ಯಾಂಕ್‌ ಮತ್ತು ಎಂಡಿಯವರು ಉತ್ತರ ಕೊಡಬೇಕು. ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದ ಅವರು, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನೇಮಕಾತಿ ಸಂಬಂಧ ಲೋಕಾಯುಕ್ತಕ್ಕೆ ದೂರು ನೀಡುವುದಾಗಿ ಕೆ.ಎಲ್.ಅಶೋಕ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಅನನ್ಯ ಶಿವ, ಆರ್. ಕುಮಾರ್ ಇದ್ದರು.