ಸನ್ಮಾರ್ಗ ವಾರ್ತೆ
ಮಣಿಪುರದಲ್ಲಿ ಹಿಂಸಾಚಾರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಗಡಿ ರಾಜ್ಯದಲ್ಲಿ ಪರಿಸ್ಥಿತಿ ಅನಿಶ್ಚಿತ ಮತ್ತು ಆತಂಕಕಾರಿಯಾಗಿದೆ. ನಿಮ್ಮ ಮನ್ ಕಿ ಬಾತ್ ನಲ್ಲಿ ಮಣಿಪುರದ ಬಾತನ್ನು ಸೇರಿಸಬೇಕಿತ್ತು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಮೋದಿ ಸರ್ಕಾರವನ್ನು ಟೀಕಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಖರ್ಗೆ, “ಹಿಂಸಾಚಾರ ದಿನೇ ದಿನೇ ಭುಗಿಲೇಳುತ್ತಿದೆ. ಆದರೆ ಪ್ರಧಾನಿ ಮೋದಿ ಅವರು ಮೌನಕ್ಕೆ ಶರಣಾಗಿದ್ದಾರೆ. ರಾಜ್ಯಕ್ಕೆ ಸರ್ವಪಕ್ಷ ನಿಯೋಗ ಭೇಟಿ ನೀಡಲು ಅವಕಾಶ ಕೂಡ ನೀಡಿಲ್ಲ.” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ನಿಮ್ಮ ಸರ್ಕಾರವು ಮಣಿಪುರವನ್ನು ಭಾರತದ ಭಾಗವೆಂದು ಪರಿಗಣಿಸಿದಂತೆ ಕಾಣಿಸುತ್ತಿಲ್ಲ. ಮಣಿಪುರ ರಾಜ್ಯ ಹೊತ್ತಿ ಉರಿಯುತ್ತಿರುವಾಗ ನಿಮ್ಮ ಸರ್ಕಾರ ನಿದ್ದೆ ಮಾಡುತ್ತಿದೆ. ಮಣಿಪುರದ ಬಾತ್ ಬಗ್ಗೆ ಒಂದು ಶಬ್ಧ ಎತ್ತಿಲ್ಲ. ರಾಜ ಧರ್ಮವನ್ನು ಪಾಲಿಸಿ ಶಾಂತಿ ಕದಡುವ ಎಲ್ಲ ಶಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ” ಪ್ರಧಾನಿಗೆ ಖರ್ಗೆ ಆಗ್ರಹಿಸಿದ್ದಾರೆ.
ಮಣಿಪುರವು ಕಳೆದ 40 ಕ್ಕೂ ಹೆಚ್ಚು ದಿನಗಳಿಂದ ಕುಕಿ- ಮೈತೇಯಿ ಸಮುದಾಯಗಳ ಜನಾಂಗೀಯ ಸಂಘರ್ಷದಿಂದ ನಲುಗುತ್ತಿದೆ. ಸಾವು ನೋವುಗಳು ಹೆಚ್ಚಾಗುತ್ತಿದೆ.












