ಸನ್ಮಾರ್ಗ ವಾರ್ತೆ
ಬೆಂಗಳೂರು: ‘ಅನ್ನ ಭಾಗ್ಯ’ ಯೋಜನೆಯಡಿ ಪ್ರತಿ ತಿಂಗಳು ತಲಾ ಹತ್ತು ಕೆ.ಜಿ. ಅಕ್ಕಿ ವಿತರಿಸುವ ‘ಗ್ಯಾರಂಟಿ’ ಅನುಷ್ಠಾನ ಸರ್ಕಾರಕ್ಕೆ ಕಗ್ಗಂಟಾಗಿ ಪರಿಣಮಿಸಿದೆ. ಈ ಹಿಂದೆ ಘೋಷಿಸಿದಂತೆ ಜುಲೈ 1ರಿಂದಲೇ ಈ ಯೋಜನೆಗೆ ಚಾಲನೆ ನೀಡಬೇಕು. ಆದರೆ ಸಧ್ಯ ಸರ್ಕಾರದ ಮಧ್ಯದಲ್ಲಿಯೇ ಈ ಬಗ್ಗೆ ಸಂಶಯ ಶುರುವಾಗಿದೆ.
ಅಂತ್ಯೋದಯ ಮತ್ತು ಆದ್ಯತಾ (ಬಿಪಿಎಲ್) ಪಡಿತರ ಚೀಟಿ ಹೊಂದಿರುವ ಕುಟುಂಬಗಳ ಎಲ್ಲ ಸದಸ್ಯರಿಗೆ ಪ್ರತಿ ತಿಂಗಳಿಗೆ ತಲಾ 10 ಕೆ.ಜಿ. ಅಕ್ಕಿ ವಿತರಿಸಲು ರಾಜ್ಯ ಸರ್ಕಾರ ಸಿದ್ಧತೆಯಲ್ಲಿದೆ. ಈ ಯೋಜನೆ ಜಾರಿಗೆ ಪ್ರತಿ ತಿಂಗಳು 2.28 ಲಕ್ಷ ಟನ್ ಅಕ್ಕಿಯನ್ನು ಖರೀದಿಸಬೇಕಿದೆ. ಭಾರತೀಯ ಆಹಾರ ನಿಗಮ (ಎಫ್ಸಿಐ) ಅಕ್ಕಿ ಪೂರೈಕೆಗೆ ನಿರಾಕರಿಸಿರುವುದರಿಂದ ಕಾಂಗ್ರೆಸ್ ಪಕ್ಷವು ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದಂತೆ, ಅನ್ನ ಭಾಗ್ಯ’ ಯೋಜನೆಯ ‘ಗ್ಯಾರಂಟಿ ಅನುಷ್ಠಾನದ ದಿನಾಂಕ ನಿಗದಿ ಮಾಡುವುದು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಮೂಲಗಳು ಹೇಳಿವೆ.
ಮುಕ್ತ ಮಾರುಕಟ್ಟೆ ವ್ಯಾಪಾರ ಯೋಜನೆ (ಒಎಂಎಸ್ಎಸ್) ಅಡಿಯಲ್ಲಿ ಎಫ್ಸಿಐನಿಂದ ಪ್ರತಿ ತಿಂಗಳು 2.28 ಲಕ್ಷ ಟನ್ ಅಕ್ಕಿಯನ್ನು ಖರೀದಿಸಿ, ಪಡಿತರ ಚೀಟಿದಾರರಿಗೆ ವಿತರಿಸುವ ಯೋಜನೆಯಿತ್ತು. ಅದೇ ನಿರೀಕ್ಷೆಯಲ್ಲಿ ಜುಲೈ 1ರಿಂದಲೇ ಯೋಜನೆಗೆ ಚಾಲನೆ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಸಂಪುಟದ ಸದಸ್ಯರು ಘೋಷಣೆ ಮಾಡಿದ್ದರು.
ಛತ್ತೀಸಗಢ ಸರ್ಕಾರದ ಬಳಿ 1.5 ಲಕ್ಷ ಟನ್ ಅಕ್ಕಿ ದಾಸ್ತಾನು ಇರುವುದು ಮಾತ್ರ ಖಾತರಿಯಾಗಿದೆ. ಆದರೆ, ದರ ಮತ್ತು ಸಾಗಾಣಿಕೆ ವೆಚ್ಚದ ವಿಚಾರದಲ್ಲಿ ಇನ್ನೂ ಅಂತಿಮ ನಿರ್ಧಾರವಾಗಿಲ್ಲ. ದಾಸ್ತಾನಿನಲ್ಲಿರುವ ಅಕ್ಕಿಯನ್ನು ಕರ್ನಾಟಕ ಸರ್ಕಾರಕ್ಕೆ ಮಾರಾಟ ಮಾಡುವ ಕುರಿತು ಛತ್ತೀಸಗಢ ಸರ್ಕಾರ ಈ ವರೆಗೂ ಖಾತರಿ ನೀಡಿಲ್ಲ.
ಹೆಚ್ಚಿನ ಪ್ರಮಾಣದ ಭತ್ತ ಬೆಳೆಯುವ ತೆಲಂಗಾಣ, ಪಂಜಾಬ್ ಸೇರಿದಂತೆ ಕೆಲವು ರಾಜ್ಯಗಳು ‘ಅನ್ನ ಭಾಗ್ಯ’ ಯೋಜನೆಗೆ ಅಕ್ಕಿ ಪೂರೈಸಲು ನಿರಾಕರಿಸಿದೆ.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಹಣಕಾಸು ಹಾಗೂ ಆಹಾರ ಇಲಾಖೆ ಹಿರಿಯ ಅಧಿಕಾರಿಗಳ ಜತೆ ಶನಿವಾರ ಸಭೆ ನಡೆಸಿದ್ದ ಮುಖ್ಯಮಂತ್ರಿ, ಅಕ್ಕಿ ಲಭ್ಯತೆಯನ್ನು ಸೋಮವಾರದೊಳಗೆ ಖಚಿತಪಡಿಸಿಕೊಳ್ಳುವಂತೆ ನಿರ್ದೇಶನ ನೀಡಿದ್ದರು. ಆದರೆ, ಯಾವುದೇ ರಾಜ್ಯಗಳಿಂದಲೂ ನಿಖರವಾದ ಪ್ರತಿಕ್ರಿಯೆ ಬಾರದ ಕಾರಣ ಖಾತರಿಪಡಿಸುವುದು ಕಷ್ಟಸಾಧ್ಯ ಎಂದು ತಿಳಿದು ಬಂದಿದೆ.
‘ಅಕ್ಕಿಯ ಲಭ್ಯತೆಗಾಗಿ ಪ್ರಯತ್ನ ಮುಂದುವರಿದಿದೆ. ಒಂದು ತಿಂಗಳಿಗೆ ಸೀಮಿತವಾಗಿ ಅಕ್ಕಿಯ ಲಭ್ಯತೆ ಕಂಡುಕೊಂಡರೆ ಭವಿಷ್ಯದಲ್ಲಿ ಸಮಸ್ಯೆಯಾಗುತ್ತದೆ. ಆದ್ದರಿಂದ ಜುಲೈ 1ರಿಂದಲೇ ಯೋಜನೆಗೆ ಚಾಲನೆ ನೀಡುವ ಸಾಧ್ಯತೆ ಕಡಿಮೆ ಇದೆ. ಒಂದರಿಂದ ಎರಡು ವಾರಗಳಷ್ಟು ವಿಳಂಬವಾಗುವ ಸಾಧ್ಯತೆ ಇದೆ’ ಎಂದು ಮೂಲಗಳು ತಿಳಿಸಿವೆ.
‘ಒಎಂಎಸ್ಎಸ್ ಅಡಿಯಲ್ಲಿ ಎಫ್ಸಿಐ ಅಕ್ಕಿ ಪೂರೈಸದಿದ್ದರೆ ‘ಅನ್ನ ಭಾಗ್ಯ’ ಗ್ಯಾರಂಟಿ ಯೋಜನೆಯ ಅನುಷ್ಠಾನದಲ್ಲಿ ರಾಜ್ಯ ಸರ್ಕಾರ ಸಂಕಷ್ಟಕ್ಕೆ ಸಿಲುಕಬಹುದು’ ಎಂಬ ಆತಂಕವಿದೆ.
ಹೊರ ರಾಜ್ಯಗಳಿಂದ ಅಕ್ಕಿ ಖರೀದಿಸಿದರೆ ಸಾಗಣೆ ವೆಚ್ಚವೇ ಹತ್ತಾರು ಪಟ್ಟು ಹೆಚ್ಚಬಹುದು. ಖಾಸಗಿಯವರಿಂದ ಖರೀದಿಸಿದರೂ ದುಬಾರಿಯಾಗುತ್ತದೆ. ಎಫ್ಸಿಐನಿಂದ ಅಕ್ಕಿ ಖರೀದಿಸಿದರೆ ಸಾಗಾಣಿಕೆ ವೆಚ್ಚ ಕಡಿಮೆಯಿರುತ್ತದೆ. ಎಫ್ಸಿಐ ಗೋದಾಮಿನಿಂದ ರಾಜ್ಯ ಸರ್ಕಾರದ ಸಗಟು ಗೋದಾಮಿಗೆ ಸಾಗಿಸುವ ವೆಚ್ಚ ಮಾತ್ರ ಇರುತ್ತದೆ. ಎನ್ನುತ್ತವೆ’ ಮೂಲಗಳು.
‘ಖಾಸಗಿಯವರಿಂದ ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಖರೀದಿಸಲು ಟೆಂಡರ್ ಪ್ರಕ್ರಿಯೆ ನಡೆಸಬೇಕಾಗುತ್ತದೆ. ಪ್ರತಿ ತಿಂಗಳು 2.28 ಲಕ್ಷ ಟನ್ನಷ್ಟು ಅಕ್ಕಿ ಪೂರೈಸುವ ಸಾಮರ್ಥ್ಯ ಒಬ್ಬರಿಗೇ ಇರುವುದಿಲ್ಲ. ಪೂರೈಕೆದಾರರನ್ನು ಗುರುತಿಸಿ, ಗುಣಮಟ್ಟದ ಅಕ್ಕಿ ಖರೀದಿಯೇ ಸವಾಲಿನ ಕೆಲಸ’ ಎಂದು ಅಧಿಕಾರಿಗಳು ಹೇಳುತ್ತಾರೆ.












