ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, 20 ಜುಲೈ 2023: ಮಣಿಪುರದಲ್ಲಿ ನಡೆಯತ್ತಿರುವ ಭಯಾನಕ ಮತ್ತು ಶೋಚನೀಯ ಪರಿಸ್ಥಿತಿಯು ಮಾನವೀಯತೆಯ ಅತ್ಯಂತ ತಳಮಟ್ಟದ್ದಾಗಿದೆ ಎಂದು ಜಮಾತ್-ಎ-ಇಸ್ಲಾಮಿ ಹಿಂದ್ (JIH) ಹೇಳಿದೆ.
ಮೂರು ತಿಂಗಳ ಸುಧೀರ್ಗ ಕಾಲದಲ್ಲಿ ನಡೆಯುತ್ತಿರುವ ಹಿಂಸಾಚಾರವು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಆಡಳಿತದ ಸಂಪೂರ್ಣ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. ಇಂತಹ ಹಿಂಸಾಚಾರಗಳನ್ನು ಎರಡೂ ಸರ್ಕಾರಗಳ ಮಧ್ಯಸ್ಥಿಕೆಗಳಿಂದ ತಡೆಯಲು ಯಾಕೆ ಸಾಧ್ಯವಾಗಲಿಲ್ಲ ಎಂದು JIH ಟೀಕಿಸಿದೆ.
ಹೆಂಗಸರನ್ನು ಬಟ್ಟೆಯಿಲ್ಲದೆ ಮೆರವಣಿಗೆ ಮಾಡುವ ಭಯಾನಕ ದೃಶ್ಯವು ರಾಷ್ಟ್ರದ ಆತ್ಮಸಾಕ್ಷಿಯನ್ನು ಕಾಡುತ್ತದೆ ಮತ್ತು ಮಹಿಳೆಯರ ರಕ್ಷಣೆ ಮತ್ತು ಘನತೆಗೆ ಮಾರಣಾಂತಿಕ ಹೊಡೆತವನ್ನು ನೀಡುತ್ತದೆ ಎಂದು ಪ್ರತಿಪಾದಿಸಿದೆ. ಈ ಘಟನೆಯು ಕೋಮುಗಲಭೆಕೋರರ ಭಯಾನಕ ಮಹಿಳಾ ವಿರೋಧಿ ಧೋರಣೆಯನ್ನು ಮತ್ತೊಮ್ಮೆ ಬಹಿರಂಗಪಡಿಸಿದೆ.
ಎಂದಿನಂತೆ ಅಪರಾಧವನ್ನು ವ್ಯಾಪಕವಾಗಿ ಪ್ರಚಾರ ಮಾಡುವ ಸಾಮಾಜಿಕ ಮಾಧ್ಯಮಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಮೂಲಕ ಗಮನವನ್ನು ಬೇರೆಡೆಗೆ ತಿರುಗಿಸಿ ಸರ್ಕಾರವು ತನ್ನ ಆಡಳಿತದ ವೈಫಲ್ಯವನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ JIH ಹೇಳಿದೆ.
ಇಂಟರ್ನೆಟ್ ಸೇವೆಗಳನ್ನು ತಕ್ಷಣವೇ ಮರುಸ್ಥಾಪಿಸಲು ಒತ್ತಾಯಿಸಿದ JIH, ಅಗತ್ಯ ಮಾಹಿತಿಯ ಪ್ರಸಾರವನ್ನು ತಡೆಗಟ್ಟುವ ಮೂಲಕ ಇಂಟರ್ನೆಟ್ ಸ್ಥಗಿತಗೊಳಿಸುವಿಕೆಯು ಪ್ರಜಾಪ್ರಭುತ್ವವನ್ನು ನಾಶ ಮಾಡಿದೆ ಎಂದು ಕಾಮೆಂಟ್ ಮಾಡಿದೆ.
“ಇದು 2014 ರಿಂದ ಭಾರತದಲ್ಲಿ ನಡೆದ ಅಲ್ಪಸಂಖ್ಯಾತರ ವಿರುದ್ಧದ ಅಸಂಖ್ಯಾತ ದ್ವೇಷದ ಹಿಂಸಾಚಾರದ ಹೆಚ್ಚುತ್ತಿರುವ ಪಥವಾಗಿ ನೋಡಬೇಕು. ಮಣಿಪುರದಲ್ಲಿ ಗಲಭೆಗಳನ್ನು ಕೊನೆಗೊಳಿಸಲು ಸರ್ಕಾರವು ಅಪರಾಧಿಗಳಿಗೆ ಯಾವುದೇ ರಕ್ಷಣೆಯನ್ನು ನೀಡದೆ ಕಠಿಣ ಶಿಕ್ಷೆಯನ್ನು ಶೀಘ್ರವಾಗಿ ನೀಡಲು ಕ್ರಮ ತೆಗೆದುಕೊಳ್ಳ ಬೇಕು” ಎಂದು ಒತ್ತಾಯಿಸಿದೆ.












