ಮುಸ್ಲಿಮ್ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಮೀಫ್)| ವಾರ್ಷಿಕ ಸಮಾವೇಶ ಮತ್ತು ಎಕ್ಸಲೆನ್ಸ್ ಅವಾರ್ಡ್ ಸಮಾರಂಭ

0
449

ಸನ್ಮಾರ್ಗ ವಾರ್ತೆ

ಮಂಗಳೂರು: ಗುರುಗಳು, ಹಿರಿಯರು, ಕಿರಿಯರನ್ನು ಗೌರವಿಸುವ ಗುಣವನ್ನು ವಿದ್ಯಾರ್ಥಿಗಳು ಬದುಕಿನಲ್ಲಿ ರೂಡಿಸಿಕೊಳ್ಳುವುದರ ಜತೆ ಕೌಶಲ್ಯ ಅಭಿವೃದ್ಧಿ ಕಡೆಗೆ ವಿದ್ಯಾರ್ಥಿಗಳು ಗಮನ ಹರಿಸಿದಾಗ ಜೀವನದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಯಶಸ್ವಿ ಸಾಧ್ಯ ಎಂದು ಸ್ಪೀಕರ್ ಯು.ಟಿ. ಖಾದರ್ ಹೇಳಿ ಅಭಿಪ್ರಾಯಪಟ್ಟರು.

ಎಲ್ಲ ರೀತಿಯ ಸಮಸ್ಯೆಗಳಿಗೆ ಶಿಕ್ಷಣದಿಂದ ಪರಿಹಾರ ಸಾಧ್ಯವಿದೆ. ಸಮುದಾಯವನ್ನು ಉನ್ನತಿಗೇರಿಸಲು ಅವರಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯಬೇಕಾಗಿದೆ. ಈ ನಿಟ್ಟಿನಲ್ಲಿ ಮೀಫ್ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಕೆಲಸ ಕಾರ್ಯಗಳು ಶ್ಲಾಘನೀಯ.

ಜೆಪ್ಪಿನಮೊಗರು ಪ್ರೆಸ್ಟೇಜ್ ಇಂಟರ್ ನ್ಯಾಶನಲ್ ಸ್ಕೂಲ್ ಆಡಿಟೋರಿಯಂನಲ್ಲಿ ಶನಿವಾರ ನಡೆದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಮುಸ್ಲಿಮ್ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಮೀಫ್) ಇದರ ವಾರ್ಷಿಕ ಸಮಾವೇಶ ಮತ್ತು ಎಕ್ಸಲೆನ್ಸ್ ಅವಾರ್ಡ್ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

‘ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧೀನದಲ್ಲಿರುವ ಶಾಲಾ ಕಾಲೇಜುಗಳ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸಲಾಗುವುದು’: ದಿನೇಶ್ ಗುಂಡೂರಾವ್

ಮುಖ್ಯ ಅತಿಥಿಯಾಗಿ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಅಲ್ಪಸಂಖ್ಯಾತರ ಶೈಕ್ಷಣಿಕ ಬೆಳವಣಿಗೆಗೆ ದಕ್ಷಿಣ ಕನ್ನಡ ಮಾದರಿಯಾಗಿದೆ. ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದಿರುವ ದ.ಕ. ಜಿಲ್ಲೆಯಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿರುವುದಕ್ಕೆ ಹೆಮ್ಮೆ ಪಡುತ್ತೇನೆ ಎಂದರು.

ದ.ಕ.ಜಿಲ್ಲೆ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ. ಇಲ್ಲಿ ಅನೇಕ ಉತ್ತಮ ವಿದ್ಯಾ ಸಂಸ್ಥೆಗಳಿವೆ. ಹೀಗಾಗಿ ಶಿಕ್ಷಣಕ್ಕಾಗಿ ಹೊರಗಿನಿಂದ ವಿದ್ಯಾರ್ಥಿಗಳು ಈ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಶಿಕ್ಷಣದ ಜತೆ ಕಾನೂನು ಸುವ್ಯವಸ್ಥೆಗೂ ಹೆಚ್ಚು ಒತ್ತು ನೀಡಬೇಕಾಗಿದೆ. ವಿದ್ಯಾರ್ಥಿಗಳಿಗೆ ಜಿಲ್ಲೆಯಲ್ಲಿ ಭಯ ರಹಿತವಾದ ವಾತಾವರಣ ಅಗತ್ಯ. ಈ ನಿಟ್ಟಿನಲ್ಲಿ ನಾವು ಗಮನ ಹರಿಸಲಿದ್ದೇವೆ. ವಿದ್ಯಾರ್ಥಿಗಳ ಮೇಲಿನ ದಾಳಿಯನ್ನು ಸರಕಾರ ಸಹಿಸುವುದಿಲ್ಲ. ಅವರಿಗೆ ಜಿಲ್ಲಾಡಳಿತ ರಕ್ಷಣೆ ನೀಡಲಿದೆ ಎಂದು ಹೇಳಿದರು.

ಡ್ರಗ್ಸ್ ಸರಬರಾಜು ಮಾಡುವವರ ವಿರುದ್ಧ ಪೊಲೀಸ್ ಇಲಾಖೆ ನಿಗಾ ವಹಿಸಿದೆ. ವಿದ್ಯಾರ್ಥಿಗಳಿಗೆ ಮಾದಕ ಪದಾರ್ಥಗಳ ಸೇವೆನೆಯ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ನಡೆಯಬೇಕಾಗಿದೆ. ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಇನ್ನಷ್ಟು ಬಲಿಷ್ಠವಾಗಬೇಕಾಗಿದೆ. ಈ ಒಕ್ಕೂಟದ ವತಿಯಿಂದ ಎಲ್ಲ ಜಿಲ್ಲೆಗಳಲ್ಲೂ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಲು ಸರಕಾರ ಸಾಧ್ಯವಿರುವ ನೆರವು ನೀಡಲಿದೆ . ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧೀನದಲ್ಲಿರುವ ಶಾಲಾ ಕಾಲೇಜುಗಳ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸುವುದಾಗಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಜಿಲ್ಲೆಯಲ್ಲಿ ಇದು ನನ್ನ ಮೊದಲ ಸಮಾರಂಭ: ಮಧು ಬಂಗಾರಪ್ಪ

ಮೀಫ್ ಸ್ಥಾಪನೆಗೊಂಡು 33 ವರ್ಷಗಳು ಆಯಿತು. ಆದರೆ ನಾನು ಈ ಸ್ಥಾನಕ್ಕೆ ಬಂದು ಕೇವಲ 40 ದಿನಗಳು ಆಗಿದೆ. ಈ ಅವಧಿಯಲ್ಲಿ ಬಹಳಷ್ಟು ತೀರ್ಮಾನಗಳಾಗಿದೆ. ನಾನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೇ ಮೊದಲ ಅಧಿಕೃತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೇನೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸಂತಸ ವ್ಯಕ್ತಪಡಿಸಿದರು.

ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ಒಂದೆರಡು ಕ್ರಾಂತಿಕಾರಿ ಕೆಲಸವಾಗಲಿ: ಉಮರ್ ಟೀಕೆ

ದಿಕ್ಸೂಚಿ ಭಾಷಣ ಮಾಡಿದ ಮೀಫ್ ನ ಗೌರವಾಧ್ಯಕ್ಷರಾದ ಉಮರ್ ಟೀಕೆ, ಮುಖ್ಯಮಂತ್ರಿಯಾಗಿ ರಾಜ್ಯಾದ್ಯಂತ ಭಾರೀ ಜನಪ್ರಿಯತೆ ಗಳಿಸಿದ ಬಂಗಾರಪ್ಪನವರ ಪುತ್ರರಾದ ಶಿಕ್ಷಣ ಸಚಿವ ಮಧು ಬಂಗಾರಪ್ಪನವರ ನೇತೃತ್ವದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಒಂದೆರಡು ಕ್ರಾಂತಿಕಾರಿ ಕೆಲಸಗಳು ಆಗಲಿ ಎಂದು ಆಶಿಸುತ್ತೇವೆ, ಹಾರೈಸುತ್ತೇನೆ ಎಂದರು.

ನಾವು ಮುಸ್ಲಿಮರು ಎನ್ನುವುದಕ್ಕೆ ಅಭಿಮಾನವಿದೆ. ಅದರಲ್ಲೂ ವಿಶೇಷವಾಗಿ ನಾವು ತುಳುನಾಡಿನ ಮಣ್ಣಿನ ಮಕ್ಕಳು ಎನ್ನುವುದಕ್ಕೆ ಬಹಳಷ್ಟು ಅಭಿಮಾನವಿದೆ. 18ನೇ ಶತಮಾನದ ಅಂತ್ಯದವರೆಗೆ ಮುಸ್ಲಿಂ ವರ್ತಕರು ಸಮಾಜ ಪ್ರಭಾವಿಯಾಗಿದ್ದರು. ಬಂಟರೊಂದಿಗೆ ವ್ಯವಸಾಯಗಾರರಾಗಿ, ಬಿಲ್ಲವ, ಬ್ರಾಹ್ಮಣರೊಂದಿಗೆ ತೋಟಗಾರರಾಗಿ, ಮೊಗವೀರರೊಂದಿಗೆ ಮೀನುಗಾರರಾಗಿ, ಕೊಂಕಣರೊಂದಿಗೆ ವರ್ತಕರಾಗಿ ಒಂದೇ ತಾಯಿ ಮಕ್ಕಳಂತೆ ಬಾಳಿದವರು. ಆದರೆ 150 ವರ್ಷಗಳ ಹಿಂದೆ ನಮ್ಮ ಸಮುದಾಯ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದುಳಿಯಿತು.

ಒಂದು ಸಮುದಾಯ ತನ್ನ ಸ್ಥಿತಿಯನ್ನು ಬದಲಾಯಿಸಲು ಪ್ರಯತ್ನಿಸುವುದಿಲ್ಲವೋ ಅಲ್ಲಾಹನು ಆ ಸಮುದಾಯದ ಸ್ಥಿತಿಯನ್ನು ಬದಲಾಯಿಸುವುದಿಲ್ಲ ಎಂದು ಕು‌ರ್ ಆನ್‌ನಲ್ಲಿ ಅರ್ಥಗರ್ಭಿತವಾದ ವಾಕ್ಯ ಇದೆ. 35-40 ವರ್ಷಗಳ ಹಿಂದೆ ಇದ್ದ ನಮ್ಮ ಸ್ಥಿತಿಯನ್ನು ಬದಲಾಯಿಸಲು ನಮ್ಮಸಮುದಾಯದವರು ಮುಂದಾದರು.

ಇದರ ನೇತೃತ್ವವನ್ನು ಮಾಜಿ ಸಚಿವ ಬಿ.ಎ. ಮೊಯ್ದಿನ್ ಸಾಹೇಬರು ವಹಿಸಿದವರು. ಅವರು ಊರೂರು ತಿರುಗಿ ಜಾಗೃತಿ ಮೂಡಿಸಿದ ಫಲವಾಗಿ ಹುಟ್ಟಿಕೊಂಡ ಶಾಲೆಗಳ ಸಂಖ್ಯೆ ಇಂದು 175ಕ್ಕೆ ಏರಿದೆ. ಹಲವು ಪದವಿ ಕಾಲೇಜುಗಳು, ಇಂಜಿನಿಯರಿಂಗ್ ಕಾಲೇಜುಗಳು ಪ್ರಾರಂಭಗೊಂಡವು. ಬೆಂಗಳೂರಿನಲ್ಲಿ ಪ್ರೆಸಿಡೆನ್ಸಿ ಮತ್ತು ಮಂಗಳೂರಿನಲ್ಲಿ ಯೆನೆಪೋಯ ವಿವಿ ಸ್ಥಾಪನೆಗೊಂಡಿತು. ಇವು ಸಮುದಾಯದ ಎರಡು ಪ್ರತಿಷ್ಠಿತ ವಿವಿಗಳಾಗಿವೆ. ಮುಸ್ಲಿಂ ಶಿಕ್ಷಣ ಸಂಸ್ಥೆಗಳಲ್ಲಿ ಶೇ95ರಷ್ಟು ಶಿಕ್ಷಕರು ಇತರ ಸಮುದಾಯದವರು. ಅವರು ಬೇರೆ ಎಲ್ಲಿಯೂ ಕೆಲಸ ಸಿಗದ ಕಾರಣಕ್ಕಾಗಿ ಮೀಫ್ ಸಂಸ್ಥೆಗಳಿಗೆ ಸೇರಿದವರಲ್ಲ. ಕಳೆದ 25-35 ವರ್ಷಗಳಿಂದ ನಮ್ಮೊಂದಿಗಿದ್ದಾರೆ. ಅವರಿಗೆ ನಮ್ಮ ಮಕ್ಕಳ ಮೇಲೆ ಇರುವ ಕಾಳಜಿಯಿಂದಾಗಿ ನಮ್ಮೊಂದಿಗೆ ಇದ್ದಾರೆ. ಇದಕ್ಕೆ ನಾವು ಎಲ್ಲಾ ಶಿಕ್ಷಕರಿಗೂ ಅಭಾರಿಯಾಗಿದ್ದೇವೆ ಎಂದು ಉಮ‌ರ್ ಟೀಕೆ ವಿವರಿಸಿದರು.

ಕಳೆದ 30 ವರ್ಷಗಳಲ್ಲಿ ಸರಕಾರದಿಂದ ಯಾವುದೇ ಸವಲತ್ತು ಬಂದಿಲ್ಲ. ದೇಶದಲ್ಲಿ ಉದ್ಯಮ ಬರುವಾಗ, ಉದ್ಯೋಗ ಸೃಷ್ಟಿಸುತ್ತಾರೆ ಎಂಬ ಕಾರಣಕ್ಕೆ ಉಚಿತ ವಿದ್ಯುತ್, ಜಾಗ, ರಿಯಾಯತಿ ಕೊಡುತ್ತೇವೆ. ಆ ಬಗ್ಗೆ ನಮಗೆ ಆಕ್ಷೇಪವಿಲ್ಲ. ಆದರೆ ಮೂಲಭೂತ ಆವಶ್ಯಕತೆಯಾದ ಶಾಲೆಗಳನ್ನು ಸ್ಥಾಪಿಸುವಾಗ ಏನನ್ನೂ ಕೊಡುವುದಿಲ್ಲ. ಬಿಸಿಯೂಟ, ಅನುದಾನ ಯಾವುದೂ ನಮಗೆ ಸಿಗುತ್ತಿಲ್ಲ. ಕನಿಷ್ಠ ಸರಕಾರಿ ಶಾಲೆಗಳಿಗೆ ನೀಡುವ ತರಬೇತಿಯಲ್ಲಿ ನಮ್ಮ ಶಾಲೆಗಳ ಶಿಕ್ಷಕರನ್ನು ಸೇರಿಸುವುದಿಲ್ಲ ಎಂದು ಉಮರ್ ಟೀಕೆ ಅವರು ಸರಕಾರದ ಗಮನ ಸೆಳೆದರು.

ಶಾಲೆಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಸರಕಾರವು ಅನುದಾನ ನೀಡಲಿ: ಸೈಯದ್ ಮುಹಮ್ಮದ್ ಬ್ಯಾರಿ

ಮೀಫ್‌ನ ಅಧೀನ 175 ಶಾಲೆಗಳಿದ್ದು, ಅದರಲ್ಲಿ 100 ಶಾಲೆಗಳು ಕಷ್ಟದಲ್ಲಿವೆ. ಇದಕ್ಕೆ ಸರಕಾರದ ಸಹಾಯ ಹಸ್ತ ಅತ್ಯಗತ್ಯ. 60,000 ಸಾವಿರ ಮಕ್ಕಳು ಮೀಫ್ ನ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುತ್ತಿದ್ದು, 6000 ಸಾವಿರ ಶಿಕ್ಷಕರಿದ್ದಾರೆ. ಒಂದು ದೊಡ್ಡ ವ್ಯವಸ್ಥೆಯನ್ನು ನಾವು ಸಜ್ಜುಗೊಳಿಸಿದ್ದೇವೆ. ಇದು ಮಾಜಿ ಉನ್ನತ ಶಿಕ್ಷಣ ಸಚಿವ ದಿವಂಗತ ಬಿ ಎ ಮೊಯ್ದಿನ್ ಅವರ ಕನಸೂ ಆಗಿತ್ತು. ಕೇವಲ ಈ ಶಾಲೆಗಳ ಮೂಲಭೂತ ಸೌಲಭ್ಯ ಅಭಿವೃದ್ಧಿ ಪಡಿಸಲು 100 ಕೋಟಿ ರೂ. ಒನ್ ಟೈಮ್ ಗ್ರಾಂಟ್ ನೀಡಿ ಸಹಕರಿಸುವಂತೆ ಮೀಫ್ ಗೌರವ ಸಲಹೆಗಾರ ಸಯ್ಯದ್ ಮೊಹಮ್ಮದ್ ಬ್ಯಾರಿ ಅವರು ಸರಕಾರವನ್ನು ಆಗ್ರಹಿಸಿದ್ದು, ಸಮಾರಂಭದಲ್ಲಿ ಉಪಸ್ಥಿತರಿದ್ದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಮಾಡಿದರು.

ಪ್ರಶಸ್ತಿ ಪ್ರಧಾನ

SSLC ಮತ್ತು PUCಯಲ್ಲಿ ಶೇ 100 ಫಲಿತಾಂಶ ದಾಖಲಿಸಿರುವ ಶಿಕ್ಷಣ ಸಂಸ್ಥೆಗಳು, ಅತ್ಯಧಿಕ ಡಿಸ್ಟಿಂಕ್ಷನ್ ಪಡೆದ ಶಾಲಾ ಕಾಲೇಜುಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. SSLC ಮತ್ತು PUCಯಲ್ಲಿ ಗರಿಷ್ಠ ಅಂಕ ಪಡೆದಿರುವ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಅದೇ ರೀತಿ ವರ್ಷದ Best School, Best College, ಅವಾರ್ಡ್ ನೀಡಿ ಗೌರವಿಸಲಾಯಿತು.

ಮೀಫ್ ವಾರ್ಷಿಕ ಪ್ರಶಸ್ತಿ ವಿಜೇತರ ವಿವರವನ್ನು ರಿಯಾಝ್ ಅಹ್ಮದ್ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೀಫ್ ಅಧ್ಯಕ್ಷ ಮೂಸಬ್ಬ ಪಿ ಬ್ಯಾರಿ ಸ್ವಾಗತಿಸಿದರು. ಉಪಾಧ್ಯಕ್ಷ ಬಿ.ಎ. ಮುಮ್ತಾಝ್ ಅಲಿ ವಂದಿಸಿದರು. ಉಪನ್ಯಾಸಕರಾದ ಅಬ್ದುಲ್ ರಝಾಕ್ ಅನಂತಾಡಿ ಕಾರ್ಯಕ್ರಮ ನಿರೂಪಿಸಿದರು.

ಬೆಂಗಳೂರು ಪ್ರೆಸಿಡೆನ್ಸಿ ವಿವಿ ಕುಲಪತಿ ಡಾ.ನಿಸ್ಸಾರ್ ಅಹ್ಮದ್, ಕಣಚೂರು ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಸಂಸ್ಥೆಯ ಸ್ಥಾಪಕರು ಮತ್ತು ಆಡಳಿತ ನಿರ್ದೇಶಕ ಡಾ.ಯು.ಕೆ.ಮೋನು, ಪ್ರೆಸ್ಟೀಜ್ ಇಂಟರ್ ನ್ಯಾಶನಲ್ ಸ್ಕೂಲ್ ಮತ್ತು ಪಿಯು ಕಾಲೇಜಿನ ಚೇರ್ಮನ್ ಹೈದರ್ ಅಲಿ ಕೆ, ನ್ಯಾಷನಲ್ ಟ್ರೈನರ್ ಪ್ರೊ. ರಾಜೇಂದ್ರ ಭಟ್ ಕಾರ್ಕಳ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಮೀಫ್ ನ ಪ್ರಧಾನ ಕಾರ್ಯದರ್ಶಿ ಬಿ.ಎ.ನಝೀರ್, ಕೋಶಾಧಿಕಾರಿ ಅಬ್ದುಲ್ ರಹಿಮಾನ್, ಶಬೀ ಅಹ್ಮದ್ ಖಾಝಿ , ಮುಸ್ತಫಾ ಸುಳ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.