ಸನ್ಮಾರ್ಗ ವಾರ್ತೆ
🖋ಝಿಯಾವುಲ್ಲಾ, ಕಲಬುರಗಿ
ಮೌಲಾನ ನಜ್ಮುದ್ದೀನ್ ಹುಸೇನ್ ಉಮ್ರಿ 1969ರಲ್ಲಿ ಸೇಡಂನಲ್ಲಿ ಜನಿಸಿದರು. ಆರಂಭಿಕ ವ್ಯಾಸಂಗ ಕನ್ನಡ ಮಾದ್ಯಮದಲ್ಲಿ ಕೈಗೊಂಡು ಬಳಿಕ ತಮಿಳುನಾಡಿನ ಉಮರಾಬಾದಿನಲ್ಲಿರುವ ಸುಪ್ರಸಿದ್ಧ ಆಧ್ಯಾತ್ಮಿಕ ವಿದ್ಯಾಲಯದಲ್ಲಿ ಸೇರಿದರು.
ವಿದ್ಯಾರ್ಜ ನೆಯ ನಂತರ ಕೆಲಕಾಲ ಆಂದ್ರಪ್ರದೇಶದ ಒಂದು ಮದ್ರಸಾದಲ್ಲಿ ಮತ್ತು ಇನ್ನು ಕೆಲ ಕಾಲ ಭದ್ರಾವತಿಯ ಮದ್ರಸಾದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ನಂತರ ಮೌಲಾನಾ ಎಸ್.ಐ.ಓ. ಸಂಪೂರ್ಣವಾಗಿ ತೊಡಗಿಸಿಕೊಂಡರು. ಎಸ್.ಐ.ಓ ಸದಸ್ಯರಾದ ಬಳಿಕ 1995-97 ರ ವರೆಗೆ ಶಿವಮೊಗ್ಗ ಜಿಲ್ಲಾ ಸಂಚಾಲಕರಾಗಿ, 1997-99 ರವರೆಗೆ ಎಸ್.ಐ.ಓ. ರಾಜ್ಯ ಘಟಕ ಕಾರ್ಯದರ್ಶಿಯಾಗಿ ಮತ್ತು 1999-2001ರ ವರೆಗೆ ಘಟಕಾಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ವಿದ್ಯಾರ್ಥಿ ಸಂಘಟಣೆಯಿಂದ ನಿವೃತ್ತಿ ಹೊಂದುತ್ತಿದ್ದಂತೆಯೇ ಜಮಾಅತೆ ಇಸ್ಲಾಮೀ ಹಿಂದ್ನ ಸದಸ್ಯರಾದರು. ಬಳಿಕ 2003-2007 ಅವಧಿಗೆ ಬೀದರ್ ಮತ್ತು ಕಲಬುರಗಿ ದ್ವಿಜಿಲ್ಲಾ ಸಂಚಾಲಕರಾಗಿ ನಿಯುಕ್ತಿಗೊಂಡರು. 2007-2015 ರವರೆಗೆ ಘಟಕ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. 2015-17 ರ ವರೆಗೆ ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳವನ್ನೊಳಗೊಂಡ ವಲಯದ ಸಂಚಾಲಕರಾಗಿ ತದನಂತರ ಕಲಬುರಗಿ-ಬೀದರ ಮತ್ತು ಯಾದಗಿರಿಯನ್ನೊಳಗೊಂಡ ಕಲಬುರಗಿ ವಲಯದ ಸಂಚಾಲಕರಾಗಿ ತಮ್ಮ ಜೀವನದ ಅಂತಿಮ ಘಳಿಗೆ ವರೆಗೆ ಕಾರ್ಯ ನಿರ್ವಹಿಸಿದರು. ಕೆಲಕಾಲ ಹಾಸನದ ಆಲೂರಿನಲ್ಲಿರುವ ಇಸ್ಲಾಮಿಯ ಅರೇಬಿಕ್ ಕಾಲೇಜಿನ ಆಡಳಿತಾಧಿಕಾರಿಯಾಗಿಯೂ ತಮ್ಮ ಕರ್ತವ್ಯವನ್ನು ಇವರು ನಿರ್ವಹಿಸಿರುತ್ತಾರೆ. ಹೀಗೆ ಯೌವನಾವಸ್ಥೆಯಿಂದಲೇ ತನ್ನನ್ನು ತಾನು ಇಸ್ಲಾಮೀ ಆಂದೋಲಕ್ಕಾಗಿ ಸಂಪೂರ್ಣವಾಗಿ ಮುಡಿಪಾಗಿಟ್ಟಿದ್ದರು.
ಇಸ್ಲಾಮೀ ವಿದ್ವಾಂಸರಾದ ಮೌಲಾನ, ಅತ್ಯಂತ ಸರಳ ಜೀವಿ. ಜನ ಸಾಮಾನ್ಯರಲ್ಲಿ ಬೆರೆಯುತ್ತಿದ್ದರು ಎಂದೂ ತನ್ನನ್ನು ತಾನು ಓರ್ವ ವಿದ್ವಾಂಸ ಎಂದು ಎತ್ತಿ ತೋರಿಸುತ್ತಿರಲಿಲ್ಲ. ಇಡೀ ಜೀವನವನ್ನು ಜನ ಸಾಮಾನ್ಯರನ್ನು ಸಂಸ್ಕರಿಸಲು, ವಿಶೇಷವಾಗಿ ಯುವಕರನ್ನು ದೇವ ಮಾರ್ಗದಲ್ಲಿ ತೊಡಗಿಸುವಂತೆ ಪ್ರೇರೇಪಿಸುವುದು, ಜನರ ಜೀವನದಲ್ಲಿ ಎದುರಾಗುವ ಸಾಮಾಜಿಕ, ಕೌಟುಂಬಿಕ ಮತ್ತು ಆರ್ಥಿಕ ಸಮಸ್ಯೆಗಳನ್ನು ಆಲಿಸಿ ಅವುಗಳಿಗೆ ಸೂಕ್ತ ಪರಿಹಾರ ತೋರುವುದು ಅವರ ಜೀವನದ ಪ್ರಮುಖ ಕಾರ್ಯಗಳಾಗಿವೆ.
ಕಾರ್ಯಕರ್ತರನ್ನು ಭೇಟಿಯಾಗುವುದಕ್ಕಾಗಿ ಅತ್ಯಂತ ಮುಂಜಾವಿನಲ್ಲಿ ಫಜರ್ ನಮಾಝ್ನಲ್ಲಿ ಆ ಕಾರ್ಯಕರ್ತರ ಮನೆಯ ಹತ್ತಿರವಿರುವ ಮಸೀದಿಗೆ ಹೋಗಿ ಅವರನ್ನು ಕಾಯುತ್ತಿದ್ದರು. ಕೆಲವೊಮ್ಮೆ ಇದಕ್ಕಾಗಿ 60-70 ಕಿಮೀ ದೂರವನ್ನು ಕ್ರಮಿಸುತ್ತಿದ್ದರು. ಅವರು ಲೌಕಿಕ ಅಮಿಷಗಳಿಗೆ ಎಂದೂ ಒಳಗಾಗಿಲ್ಲ. ಸಿಕ್ಕಿದ್ದನ್ನು ಉಣ್ಣುವುದು, ಸರಳ ಉಡುಪು ಧರಿಸುವುದು, ಆಡಂಬರವಿಲ್ಲದ ಜೀವನ ಅವರದಾಗಿತ್ತು.
ವೇದಿಕೆ ಹತ್ತಿ ಭಾಷಣ ಮಾಡಲು ಎಂದೂ ಆಸಕ್ತಿ ತೋರದೆ, ಜನರನ್ನು ವೈಯಕ್ತಿಕವಾಗಿ ಭೇಟಿಯಾಗಿ ಮತ್ತು ಅವರ ಸಮಸ್ಯೆಗಳ ಪರಿಹಾರದ ಮೂಲಕ ಮಾರ್ಪಾಡು ತರುವಲ್ಲಿ ಹೆಚ್ಚಿನ ವಿಶ್ವಾಸ ಹೊಂದಿದ್ದರು. ಹೀಗಾಗಿ ಅವರು ಕೇವಲ ಓರ್ವ ವ್ಯಕ್ತಿಯ ಜೊತೆಗಲ್ಲದೆ ಆ ವ್ಯಕ್ತಿಯ ಕುಟುಂಬದ ಎಲ್ಲಾ ಸದಸ್ಯರೊಂದಿಗೆ ನಿಕಟ ಸಂಬಂಧ ಬೆಳಿಸುತ್ತಿದ್ದರು.
ದೇವನು ಅವರಿಗೆ ಜನರ ಹೆಸರು ನೆನಪಿಟ್ಟುಕೊಳ್ಳುವ ಅಸಾಮಾನ್ಯ ಸಾಮರ್ಥ್ಯ ನೀಡಿದ್ದನು. ಇದರಿಂದ ಹಲವಾರು ವರ್ಷಗಳ ನಂತರ ಬೇಟಿಯಾದ ವ್ಯಕ್ತಿಯನ್ನು ಅವರ ಹೆಸರಿನಿಂದ ಕರೆಯುವುದು ಮತ್ತು ಆ ವ್ಯಕ್ತಿ ಸಂಪೂರ್ಣವಾಗಿ ಬೆಚ್ಚಿ ಬೀಳುವುದನ್ನು ಕಂಡಿರುತ್ತೇನೆ. ಜನರ ದುಃಖಗಳನ್ನು ನಿವಾರಿಸುವ ಉದ್ದೇಶದಿಂದ ಅವರು ಕಾರ್ಯಕ್ಷೇತ್ರ ಮರೆತು ರಾಜ್ಯಾದ್ಯಂತ ಮತ್ತು ನೆರೆಹೊರೆಯ ರಾಜ್ಯಗಳಿಗೆ ಪ್ರಯಾಣ ಬೆಳೆಸುತ್ತಿದ್ದರು.
ದೈನಂದಿನ ಜೀವನದಲ್ಲಿ ಆರ್ಥಿಕ ತೊಂದರೆಯಲ್ಲಿರುವರನ್ನು ಸಬಲಗೊಳಿಸಲು, ಸಾಲದ ಹೊರೆಯಿಂದ ಮುಕ್ತಿ ಗೊಳಿಸಲು ಬಡ್ಡಿ ರಹಿತ ಸಾಲ ಕೊಡಿಸುವ ವ್ಯವಸ್ಥೆ ಮಾಡುವುದು, ಒಂದು ವೇಳೆ ಆ ವ್ಯಕ್ತಿ ಸಮಯಕ್ಕೆ ಸರಿಯಾಗಿ ಸಾಲ ತೀರಿಸದೇ ಇದ್ದಲ್ಲಿ ಸಾಲ ನೀಡುವವರಲ್ಲಿ ತಾವೇ ಕ್ಷಮೆಯಾಚಿಸಿ ಸಮಯಾವಕಾಶ ಹೆಚ್ಚಿಸುವಂತೆ ಮಾಡುವುದು ಅಥವಾ ಪರ್ಯಾಯ ವ್ಯವಸ್ಥೆ ಮಾಡಿ ಅವರ ಪರವಾಗಿ ಸಾಲ ತೀರಿಸುವುದು ಇವರ ಜೀವನದ ಒಂದು ಪ್ರಮುಖ ಕಾರ್ಯವಾಗಿತ್ತು.
ಇಸ್ಲಾಮೀ ಆಂದೋಲನದ ಜೊತೆಗೂಡುವಂತೆ ಯುವಕರನ್ನು ಪ್ರೇರೇಪಿಸಲು ಗಂಟೆಗಟ್ಟಲೆ ಅವರೊಂದಿಗೆ ಸಮಯ ಕಳೆಯುವುದು, ಚರ್ಚೆ, ವಿಮರ್ಶೆ ಮಾಡುವುದು, ಇಸ್ಲಾಮೀ ಸಾಹಿತ್ಯದ ಅಧ್ಯಯನ ನಡೆಸಲು ಪ್ರೇರೇಪಿಸುವುದನ್ನು ಮಾಡುತ್ತಿದ್ದರು.
ಭಿನ್ನಾಭಿಪ್ರಾಯವುಳ್ಳ ಇಸ್ಲಾಮೀ ವಿದ್ವಾಂಸರೊಂದಿಗೆ ಸಂಪರ್ಕ ಬೆಳೆಸಲು ಅವರಿಗೆ ಇಸ್ಲಾಮೀ ಆಂದೋಲನದ ಸಿದ್ಧಾಂತ, ಧ್ಯೇಯೋದ್ದೇಶ ಮತ್ತು ಕಾರ್ಯ ವಿಧಾನವನ್ನು ಮನದಟ್ಟು ಮಾಡುತ್ತಿದ್ದರು. ವಿದ್ವಾಂಸರುಗಳ ಮನೆ, ಮದ್ರಸ ಮತ್ತು ಮಸ್ಜಿದ್ಗೆ ತೆರಳಿ ಅವರನ್ನೂ ಹೆಚ್ಚು ಆಲಿಸುತ್ತ ಅವರ ಮನ ಗೆದ್ದು ಅವರಲ್ಲಿರುವ ಭಿನ್ನಾಭಿಪ್ರಾಯಗಳನ್ನು ಕಡಿಮೆಗೊಳಿಸುವಲ್ಲಿ ಬಹುತೇಕ ಸಫಲರಾಗಿದ್ದರು. ಇವರು ಶಿಸ್ತಿನ ಸಿಪಾಯಿಯಾಗಿದ್ದರು. ನೀಡಲಾದ ಹೊಣೆಗಾರಿಕೆಯನ್ನು ಯಾವ ರೀತಿಯ ಅಸಮ್ಮತಿಯನ್ನೂ ವ್ಯಕ್ತಪಡಿಸದೆ, ಎಷ್ಟೇ ತೊಂದರೆಗಳು ಇದ್ದರೂ ಅದನ್ನು ವ್ಯಕ್ತಪಡಿಸದೆ ಅತ್ಯಂತ ಸಮರ್ಪಕವಾಗಿ ನಿರ್ವಹಿಸುತ್ತಿದ್ದರು.
ಇಸ್ಲಾಮೀ ಆಂದೋಲನವು ವಿಶೇಷವಾಗಿ ಕರ್ನಾಟಕದಲ್ಲಿ ಓರ್ವ ನೈಜ ಕಾರ್ಯಕರ್ತನನ್ನು ಕಳೆದು ಕೊಂಡಿದೆ. ಅವರ ಕುಟುಂಬಕ್ಕೆ ಅವರ ಅನುಪಸ್ಥಿತಿಯ ದುಃಖವನ್ನು ಸಹಿಸಿ ಕೊಳ್ಳುವ ಶಕ್ತಿಯನ್ನು ಅಲ್ಲಾಹನು ನೀಡಲಿ ಎಂದು ಪ್ರಾರ್ಥಿಸುವೆ.
(ಲೇಖಕರು, ಜ.ಇ. ಹಿಂದ್ನ ನಿಕಟ ಪೂರ್ವ ರಾಜ್ಯ ಸಲಹಾ ಸಮಿತಿ ಸದಸ್ಯರು)












