ಸನ್ಮಾರ್ಗ ವಾರ್ತೆ
ಅಲ್ಲಾಹನ ಇಚ್ಛೆಯಂತೆ ಮೌಲಾನಾ ನಜ್ಮುದ್ದೀನ್ ಉಮರಿ ನಮ್ಮಿಂದ ದೂರವಾದರು. ಕೆಲವು ದಿನಗಳ ಹಿಂದೆ ನಡೆದ ಪ್ರಾಣಾಂತಿಕ ಅಪಘಾತದಿಂದ ಗಂಭೀರ ಗಾಯಗೊಂಡಿದ್ದ ಮೌಲಾನರ ಆರೋಗ್ಯ ಮತ್ತು ಕ್ಷೇಮಕ್ಕಾಗಿ ಅವರ ಕುಟುಂಬಿಕರು, ಜಮಾಅತ್ ಬಂಧುಗಳು ಬಹಳಷ್ಟು ಪ್ರಾರ್ಥಿಸಿದ್ದರು. ಆದರೆ ವಿಧಿಯನ್ನು ಬದಲಿಸಲು ಯಾರಿಂದಲೂ ಸಾಧ್ಯವಾಗಲಿಲ್ಲ.
“ವಾಸ್ತವದಲ್ಲಿ ಒಬ್ಬನ ಕರ್ಮಾವಧಿಯು ಪೂರ್ಣಗೊಳ್ಳುವ ಸಮಯ ಬಂದುಬಿಟ್ಟರೆ ಅಲ್ಲಾಹನು ಯಾರಿಗೂ ಇನ್ನಷ್ಟು ಕಾಲಾವಧಿಯನ್ನು ಕೊಡುವುದಿಲ್ಲ.” (ಪವಿತ್ರ ಕುರ್ಆನ್: 63: 11)
ಮೌಲಾನರು ಅಲ್ಲಾಹನ ಮಾರ್ಗದಲ್ಲಿ ಸಕ್ರಿಯರಾಗಿರುತ್ತಲೇ ಅಲ್ಲಾಹನೆಡೆಗೆ ಮರಳಿ ಹೋದರು. ಮರಣವು ವಸ್ತುತಃ ಪ್ರಭುವಿನೊಡನೆ ಭೇಟಿಯಾಗುವುದರ ಆರಂಭಿಕ ಅವಸ್ಥೆಯಾಗಿದೆ. ಅಲ್ಲಾಹನ ಭೇಟಿಯ ಆಸಕ್ತಿಯನ್ನು ಹೊಂದಿರುವ ವ್ಯಕ್ತಿಯು ಸದಾ ಅಲ್ಲಾಹನ ಮಾರ್ಗದಲ್ಲಿ ಸಕ್ರಿಯರಾಗಿಯೇ ಇರುತ್ತಾರೆ. ಒಂದರ್ಥದಲ್ಲಿ ಅಲ್ಲಾಹನನ್ನು ಭೇಟಿಯಾಗುವ ಆಸಕ್ತಿಯೇ ಸಕ್ರಿಯ ವ್ಯಕ್ತಿತ್ವವನ್ನು ರೂಪಿಸುವ ಪ್ರೇರಕವಾಗಿದೆ. ಇದುವೇ ಮೌಲಾನಾ ನಜ್ಮುದ್ದೀನ್ ಹುಸೈನ್ ಉಮರಿಯವರ ಅವಸ್ಥೆಯಾಗಿತ್ತು.
“ಆದುದರಿಂದ ತನ್ನ ಪ್ರಭುವಿನ ಭೇಟಿಯನ್ನು ನಿರೀಕ್ಷಿಸುವವನು ಸತ್ಕರ್ಮಗಳನ್ನೆಸಗಲಿ.” (ಪವಿತ್ರ ಕುರ್ಆನ್: 18: 110)
ಮೌಲಾನರ ವಿಯೋಗಕ್ಕೆ ನಾವು ಸಹನೆ ವಹಿಸಬೇಕು. ಆದರೆ ಮೌಲಾನರ ಪತ್ನಿ, ಮಾತೆ ಮತ್ತು ಕುಟುಂಬದ ಇತರರು ಹಾಗೂ ಮಕ್ಕಳ ಅವಸ್ಥೆ ಏನಾಗಬೇಡ? ಆಲೋಚಿಸುವಾಗ ಬಹಳ ಚಿಂತೆ ಕಾಡುತ್ತದೆ. ಅಲ್ಲಾಹನು ಮೌಲಾನರ ಮನೆಮಂದಿಯನ್ನು ಯಾವೆಲ್ಲ ರೀತಿಯಲ್ಲಿ ಪರೀಕ್ಷಿಸುತ್ತಿದ್ದಾನೆ! ಆ ಪರಮ ದಯಾಮಯ ಮತ್ತು ಕೃಪಾಶೀನು ಅವರೆಲ್ಲರಿಗೂ ಸಹನೆ, ಸಂಯಮದೊಂದಿಗೆ ಸಂಕಷ್ಟಗಳನ್ನು ಎದುರಿಸುವ ಶಕ್ತಿಯನ್ನು ದಯಪಾಲಿಸುವನೆಂದು ನಿರೀಕ್ಷಿಸುತ್ತೇವೆ.
“ಓ ಅಲ್ಲಾಹ್! ನಿನ್ನ ಅನುಗ್ರಹದಲ್ಲಿ ಕಡಿಮೆಯಾಗುವುದರಿಂದ, ನಿನ್ನ ಕ್ಷೇಮ ವರ್ಷವು ಕುಂದುವುದರಿಂದ, ನೀನು ಅನುಗ್ರಹಿಸಿದ ಆರೋಗ್ಯವು ಕೆಡುವುದರಿಂದ, ನಿನ್ನ ಕ್ರೋಧವು ಏಕಾಏಕಿ ನಮ್ಮ ಮೇಲೆರಗುವುದರಿಂದ ಮತ್ತು ನಿನ್ನ ಎಲ್ಲ ಪ್ರಕಾರದ ಯಾತನೆಯಿಂದ ನಾವು ನಿನ್ನ ಅಭಯ ಯಾಚಿಸುತ್ತೇವೆ.” [ವರದಿ: ಅಬ್ದುಲ್ಲಾಹ್ ಬಿನ್ ಉಮರ್(ರ) – ಸಹೀಹ್ ಮುಸ್ಲಿಮ್]
ಇಂತಹ ಸೂಕ್ಷ್ಮ ಸಂದರ್ಭದಲ್ಲಿ ಜಮಾಅತ್ ಬಾಂಧವರು, ವಿಶೇಷತಃ ಸ್ಥಾನೀಯ ಮತ್ತು ನಿಕಟ ಜಮಾಅತ್ ಬಂಧುಗಳು ಮೌಲಾನರ ಕುಟುಂಬಿಕರ ಕ್ಷೇಮ ವಿಚಾರಿಸಲಿ. ಅಲ್ಲಾಹನ ಮಾರ್ಗದಲ್ಲಿ ಹೊರಡುವವರ ಶ್ರೇಷ್ಠತೆಯನ್ನು ಅಲ್ಲಾಹನ ಸಂದೇಶವಾಹಕರು(ಸ) ಅನೇಕ ಬಾರಿ ಹೇಳಿರುವರು. ಅಂತಹವರ ಮನೆಯವರ ಸಂರಕ್ಷಣೆ ಮಾಡುವವರು ಮತ್ತು ಅವರ ಕುಟುಂಬದ ಹೊಣೆಯನ್ನು ವಹಿಸುವವರಿಗೆ ಅಪಾರ ಪ್ರತಿಫಲದ ಸುವಾರ್ತೆ ನೀಡಿರುವರು.
ಮೌಲಾನರ ಆಂದೋಲನಾತ್ಮಕ ಯಾತ್ರೆ
ಮೌಲಾನಾ ನಜ್ಮುದ್ದೀನ್ ಹುಸೈನಿ ಉಮರಿಯವರ ಆಂದೋಲನಾತ್ಮಕ ಪ್ರಯಾಣವು 1990ರಲ್ಲಿ ಆರಂಭ ವಾಗಿತ್ತು. ಅವರು ಅಂದು ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ನೆಲೆಸಿದ್ದರು. ಬಳಿಕ ಎಸ್.ಐ.ಓ.ನ ಸದಸ್ಯರಾದರು. 1997ರ ಮೀಕಾತ್ನಲ್ಲಿ ಅವರು ರಾಜ್ಯ ಘಟಕ ಕಾರ್ಯದರ್ಶಿಯಾಗಿ ಆಯ್ಕೆಯಾದರು. ತರುವಾಯ 1999ರ ಮೀಕಾತ್ನಲ್ಲಿ ಅವರು ರಾಜ್ಯ ಘಟಕಾಧ್ಯಕ್ಷರಾಗಿ ಆಯ್ಕೆಯಾದರು. ಅದರಿಂದ ನಿವೃತ್ತರಾದ ಮೇಲೆ ಜಮಾಅತ್ ಸೇರಿದರು ಮತ್ತು ಕಳೆದ 23 ವರ್ಷಗಳಲ್ಲಿ ಜಿಲ್ಲೆ, ವಲಯ, ಘಟಕ ಮಟ್ಟದ ಹೊಣೆಗಾರಿಕೆಗಳನ್ನು ನಿಭಾಯಿಸಿದರು.
ಮೌಲಾನರ ಪ್ರಶಂಸಿತ ಗುಣಗಳು:
1. ಜಮಾಅತ್ನಲ್ಲಿ ಮೌಲಾನರ ಹೊಣೆಗಾರಿಕೆಗಳು ಬದಲಾಗುತ್ತಾ ಇರುತ್ತಿದ್ದುವು. ಆದರೆ ಹೊಣೆಗಾರಿಕೆಯು ಘಟಕ ಅಥವಾ ವಲಯ ಅಥವಾ ಜಿಲ್ಲಾ ಮಟ್ಟದ್ದೇ ಆಗಿರಲಿ, ಅವರು ಯಾವತ್ತೂ ಅಸಂತೃಪ್ತಿಯನ್ನು ವ್ಯಕ್ತ ಪಡಿಸಿರಲಿಲ್ಲ. ವಸ್ತುತಃ ವ್ಯವಸ್ಥೆ ನಿಭಾವಣೆಯ ನೀತಿಯಂತೆ ಹೊಣೆಗಾರಿಕೆಗಳ ಪಾಲನೆಯಲ್ಲಿ ಸ್ಥಾನಗಳ ಬದಲಾಣೆಯು ಮಾನಸಿಕ ಒತ್ತಡವನ್ನು ನೀಡುತ್ತದೆ. ಇದನ್ನು ಮೆಟ್ಟಿ ನಿಂತವರು ಮೌಲಾನರಂತೆ ಸಹನಶೀಲರೂ ಸೂಕ್ಷ್ಮ ಮತಿಗಳೂ ಆಗಿ ಮಾರ್ಪಡುತ್ತಾರೆ. ಜಮಾಅತ್ ಬಾಂಧವರು ಸ್ವಯಂ ತಮ್ಮನ್ನು ಈ ಮಟ್ಟಿಗೆ ತರಬೇತುಗೊಳಿಸಲು ಪ್ರಯತ್ನಿಸಬೇಕಾಗಿದೆ.
ಸ್ಥಾನಮಾನದ ಆಗ್ರಹವನ್ನು ಜಮಾಅತ್ ಯಾವತ್ತೂ ಪ್ರೋತ್ಸಾಹಿಸುವುದಿಲ್ಲ. ಏಕೆಂದರೆ ಯಾವ ಧರ್ಮದ ಸಂಸ್ಥಾಪನೆಯನ್ನು ಜಮಾಅತ್ ಬಯಸುತ್ತದೋ ಅದರ ಮೂಲಭೂತ ಶಿಕ್ಷಣ ಅದನ್ನೇ ಕಲಿಸುತ್ತದೆ. ಅಲ್ಲಾಹನ ಸಂದೇಶವಾಹಕರು(ಸ) ಹೀಗೆ ಹೇಳಿರುವರು, “ಹೊಣೆಗಾರಿಕೆಯನ್ನು ಬಯಸುವವನನ್ನು ನಾವು ಯಾವತ್ತೂ ಹೊಣೆಗಾರನನ್ನಾಗಿ ಮಾಡುವುದಿಲ್ಲ.”
2. ಮೌಲಾನರಲ್ಲಿದ್ದ ನಿಸ್ವಾರ್ಥ ಭಾವನೆಯಿದೆಯಲ್ಲ, ಅದು ಎಲ್ಲರ ಮೆಚ್ಚುಗೆ, ಹೊಗಳಿಕೆಯನ್ನು ನಿರ್ಲಕ್ಷಿಸಿ ದೇವ ಮಾರ್ಗದಲ್ಲಿ ಮುಂದುವರಿಯುವಂತೆ ಮಾಡುತ್ತಿತ್ತು. ಅಂದರೆ ತನ್ನ ಕೆಲಸದಲ್ಲಿ ಮಗ್ನತೆ! ಯಾರದೇ ಹೊಗಳಿಕೆಯ ಚಿಂತೆಯಿಲ್ಲ, ಯಾವುದೇ ಸ್ಥಾನಮಾನದ ಕಡೆಗೆ ಗಮನವಿಲ್ಲ. ಹೊಣೆಗಾರಿಕೆಯ ಪಾಲನೆಗೆ ಭಾಷಣವು ಬಹಳ ಅಗತ್ಯವೆಂದು ಸಾಧಾರಣವಾಗಿ ಹೇಳಲಾಗುತ್ತದೆ. ಆದರೆ ಹಾಗಲ್ಲ; ಅನ್ಯಥಾ ಜಮಾಅತ್ನ ಸಂವಿಧಾನದಲ್ಲಿ ಪ್ರಸ್ತುತ ಗುಣದ ಬಗ್ಗೆಯೂ ಪ್ರಸ್ತಾಪ ಇರುತ್ತಿತ್ತು. ವಸ್ತುತಃ ಭಾಷಣವು ಕೇವಲ ಅದರ ಒಂದು ಮಾಧ್ಯಮವಾಗಿದೆ. ಈ ನಿಟ್ಟಿನಲ್ಲಿ ಸೂಕ್ಷ್ಮ ನಿಲುವು ಅನುಸರಿಸದಿದ್ದರೆ, ಬಾಹ್ಯ ಸಮಸ್ಯೆಗಳು ಮತ್ತು ಜಡತೆಗೆ ಕಾರಣವಾಗುತ್ತದೆ. ಸೂಕ್ಷ್ಮ ನಿಲುವು ಅನುಸರಿಸುವುದೆಂದರೆ, ಅನುಸರಿಸದಿದ್ದರೆ, ಬಾಹ್ಯ ಸಮಸ್ಯೆಗಳು ಮತ್ತು ಜಡತೆಗೆ ಕಾರಣವಾಗುತ್ತದೆ. ಸೂಕ್ಷ್ಮ ನಿಲುವು ಅನುಸರಿಸುವುದೆಂದರೆ, ಸಂಘಟನಾ ಹೊಣೆಗಾರಿಕೆಗಳನ್ನು ಪಾಲಿಸುವಲ್ಲಿ ಇರಬೇಕಾದ ಹತ್ತಾರು ಗುಣಗಳ ಪೈಕಿ ಒಂದಾಗಿ ಭಾಷಣವನ್ನು ಪರಿಗಣಿಸಬೇಕು. ಭಾಷಣವನ್ನೇ ಸಂಘಟನಾ ಕಾರ್ಯದ ಮೂಲ ಮತ್ತು ಹೊಣೆಗಾರಿಕೆಗಳ ಪಾಲನೆಗೆ ಅಗತ್ಯವೆಂದು ಭಾವಿಸಿದರೆ ಅದು ಅಜಾಗರೂಕತಾ ನಿಲುವಾಗಿದೆ. ಮೌಲಾನರ ವ್ಯಕ್ತಿತ್ವವು ಈ ನಿಟ್ಟಿನಲ್ಲಿ ಒಂದು ಮಾದರಿಯಾಗಿದೆ. ಅವರ ವಿಭಿನ್ನ ಸ್ಥಳಗಳಲ್ಲಿ ನಡೆದಿದ್ದಂತಹ ಪ್ರವಾಸ ಕಾರ್ಯಕ್ರಮಗಳಲ್ಲಿ ಭೇಟಿ ಮತ್ತು ಸಂಭಾಷಣೆ/ಚರ್ಚೆಯ ಹೊರತು ಭಾಷಣದ ವಿಶೇಷ ವ್ಯವಸ್ಥೆ ಆಗುತ್ತಿರಲಿಲ್ಲ.
ಜಮಾಅತ್ನ ಇತಿಹಾಸದಲ್ಲಿ ಇಂತಹ ಅನೇಕ ಹೊಣೆಗಾರರು ಆಗಿ ಹೋಗಿದ್ದಾರೆ. ಅವರು ಅತ್ಯುತ್ತಮ ವಾಗ್ಮಿಗಳಲ್ಲದಿದ್ದರೂ ತಮ್ಮ ತಮ್ಮ ನಿಷ್ಕಳಂಕ ಪರಿಶ್ರಮದಿಂದ ಅಸಾಧಾರಣವಾದ ಪ್ರಭಾವವನ್ನು ಬಿಟ್ಟು ಹೋಗಿದ್ದಾರೆ. ಅವರನ್ನು ನಾವು ಇಂದೂ ಸ್ಮರಿಸುತ್ತಿರುತ್ತೇವೆ. ಮೌಲಾನಾ ಅಬುಲ್ಲೈಸ್ ಇಸ್ಲಾಹೀ ಸಾಹಬ್, ಮೌಲಾನಾ ಶಫೀ ಮೂನಿಸ್ ಸಾಹಬ್, ಮೌಲಾನಾ ಜಅïಫರ್ ಮಣಿಯಾರ್ ಸಾಹಬ್ ಮುಂತಾದವರು. ವಾಸ್ತವದಲ್ಲಿ ಜಮಾಅತ್ನೊಂದಿಗೆ ಒಬ್ಬರು ಸಂಬಂಧವನ್ನು ಹೊಂದುವಾಗ, ಅವರು ಜಮಾಅತ್ನೊಂದಿಗೆ ನಿರಂತರವಾಗಿ ಸಂಬಂಧವಿರಿಸಿಕೊಂಡಿರಲು ಅನೇಕ ಕಾರಣಗಳಿರುತ್ತವೆ. ಆ ಪೈಕಿ ಒಂದು ಪ್ರಬಲ ಕಾರಣ ಅವರ ಶಾಂತ ಸ್ವಭಾವಾಗಿರುತ್ತದೆ. ಅಂದರೆ ತಾನು ನೆಚ್ಚಿಕೊಂಡಿರುವ ಸಂಘಟನೆಯು ಬಹಳ ಉನ್ನತವಾದ ಗುರಿಯನ್ನು ಹೊಂದಿದೆ ಎಂಬ ಸಮಾಧಾನ ಒಬ್ಬರಲ್ಲಿ ಇದ್ದರೆ, ಅವರು ಸಂಘಟನೆಯೊಂದಿಗೆ ಸದಾ ಜೋಡಿಕೊಂಡಿರುತ್ತಾರೆ. ಅವರು ಒಂದು ವ್ಯವಸ್ಥೆಯೊಂದಿಗೆ ಜೋಡಿಕೊಂಡು ಒಂದು ಅಥವಾ ಒಂದಕ್ಕಿಂತ ಹೆಚ್ಚು ರಂಗಗಳಲ್ಲಿ ನಿರಂತರ ಸಹಕರಿಸುತ್ತಿರುವವರಾಗಿದ್ದರೆ ಅದು ಸಾಧ್ಯವಾಗುತ್ತದೆ. ಅವರು ಚಟುವಟಿಕೆಯಿಂದಿರುತ್ತಾ ಸಹಕರಿಸುತ್ತಿದ್ದರೆ, ಸಮಾಧಾನದ ಸ್ಥಿತಿಯಲ್ಲಿರುತ್ತಾರೆ. ಬಳಿಕ ಜನರು ತನ್ನೊಡನೆ ಯಾವ ರೀತಿ ವ್ಯವಹರಿಸುತ್ತಾರೆ, ಯಾವ ಮಟ್ಟಿಗೆ ತನ್ನನ್ನು ನಂಬುತ್ತಾರೆ ಮತ್ತು ಯಾವ ಮಟ್ಟದಲ್ಲಿ ನಂಬುವುದಿಲ್ಲ, ಯಾವ ಹೊಣೆಗಾರಿಕೆ ನೀಡಲಾಗುತ್ತದೆ ಮತ್ತು ಏನನ್ನು ನೀಡಲಾಗುವುದಿಲ್ಲ ಇವ್ಯಾವುದರ ಪರಿವೆಯೂ ಅವರಿಗಿರುವುದಿಲ್ಲ. ಈ ನಿಟ್ಟಿನಲ್ಲಿ ಮೌಲಾನದ ಜೀವನದಲ್ಲಿ ಅತ್ಯುತ್ತಮ ಮಾದರಿ ಇದೆ. ಇಂದು ನಾವು ಅವರನ್ನು ಅವರ ಭಾಷಣಗಳಿಂದಲ್ಲ, ಬದಲಾಗಿ ಅವರ ಜನಸ್ನೇಹಿ ಗುಣ, ದೇವಮಾರ್ಗದಲ್ಲಿ ದಣಿವರಿಯದೆ ಚಟುವಟಿಕೆಯಿಂದಿರುವುದು ಇತ್ಯಾದಿಗಳಿಂದಾಗಿ ಅರಿಯುತ್ತೇವೆ.
3. ಮೌಲಾನರ ಸಾಮಾಜಿಕ ಸಂಬಂಧಗಳು ಬಹಳ ಉತ್ತಮವಾಗಿದ್ದುವು. ಕರ್ನಾಟಕ ಘಟಕ ಮಾತ್ರವಲ್ಲ, ತೆಲಂಗಾಣ, ಆಂಧ್ರ ಮತ್ತು ಮಹಾರಾಷ್ಟ್ರಗಳ ಜನರೊಂದಿಗೂ ಅವರಿಗೆ ಅತ್ಯುತ್ತಮ ಬಾಂಧವ್ಯವಿತ್ತು. ಅವರು ಇತ್ತೀಚೆಗೆ ಗುಲ್ಬರ್ಗಾದ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವೇಳೆ ಓರ್ವ ವ್ಯಕ್ತಿಯು ಟಾಂಡೋರ್ನಿಂದ ಆಗಮಿಸಿದರು. ವಿಚಾರಿಸಿದಾಗ, ಆ ಪ್ರದೇಶದ ಓರ್ವ ಹೊಣೆಗಾರರ ಹೆಸರೆತ್ತಿ ಹೇಳಿದರು, “ಅವರು ನನ್ನನ್ನು ಇಲ್ಲಿಗೆ ಕಳುಹಿಸಿದ್ದಾರೆ ಮತ್ತು ಮೌಲಾನರ ಆರೋಗ್ಯದ ಬಗ್ಗೆ ಅವರಿಗೆ ಮಾಹಿತಿ ನೀಡುತ್ತಲಿರಬೇಕೆಂದು ಆದೇಶಿಸಿರುವರು.” ಇದಲ್ಲದೆ ನೆಂಟಸ್ತಿಕೆ ಸಂಬಂಧ, ಕೌಟುಂಬಿಕ ಸಮಸ್ಯೆಗಳನ್ನು ಪರಿಹರಿಸುವುದರಲ್ಲಿಯೂ ಅವರ ಹೆಚ್ಚಿನ ಸಮಯ ವ್ಯಯವಾಗುತ್ತಿತ್ತು.
4. ಅವರು ವ್ಯಕ್ತಿಯ ಸ್ವಭಾವವನ್ನು ಚೆನ್ನಾಗಿ ಅರಿಯುವವರಾಗಿದ್ದರು. ಘಟಕದ ಯಾವ ಪ್ರದೇಶದ ಯಾವ ವ್ಯಕ್ತಿಯಿಂದ ಎಂತಹ ಕೆಲಸ ಮಾಡಿಸಬಹುದೆಂದು ಅವರು ಚೆನ್ನಾಗಿ ಬಲ್ಲವರಾಗಿದ್ದರು. ಇನ್ನು ಯಾರಾದರೂ ಜಮಾಅತ್ ಬಾಂಧವನ ಕುರಿತು ಏನಾದರೂ ಅಭಿಪ್ರಾಯವನ್ನು ಪಡೆಯಬೇಕಿದ್ದರೆ, ಆ ವ್ಯಕ್ತಿಯ ಬಗ್ಗೆ ಮೌಲಾನರ ಮಾತುಕತೆಯು ಬಹಳ ಸಹಕಾರಿಯಾಗಿರುತ್ತದೆ. ಜನರನ್ನು ಅವರ ಪರಿಸ್ಥಿತಿಗೆ ತಕ್ಕಂತೆ ಗುರುತಿಸುವುದು ಅವರ ದೇವದತ್ತ ಪ್ರತಿಭೆಯಾಗಿದೆ. ಇಂತಹ ಪ್ರತಿಭಾವಂತ ಜನರು ಜಮಾಅತ್ನ ಬಂಡವಾಳವಾಗಿರುತ್ತಾರೆ. ಏಕೆಂದರೆ ಜನರಿಂದ ಕೆಲಸ ಮಾಡಿಸುವುದು, ಅವರಿಗೆ ವಿವಿಧ ಹೊಣೆಗಾರಿಕೆಗಳನ್ನು ನೀಡುವುದು ಎಲ್ಲ ಪ್ರದೇಶಗಳಲ್ಲೂ ನಡೆಯುವಂತಹುದೇ. ಆದ್ದರಿಂದ ಜನರ ಬಗ್ಗೆ ಸರಿಯಾದ ಮಾಹಿತಿ ಮತ್ತು ವಾಸ್ತವಿಕ ಅವಲೋಕನ ನಡೆಸುವವರು ಇಲ್ಲದೆ ಹೋದರೆ ಆ ಕೆಲಸಗಳು ಸರಿಯಾಗಿ ವಿಂಗಡನೆಯಾಗಲಾರವು; ಕೆಲಸಗಳು ಸರಿಯಾದ ನಿಟ್ಟಿನಲ್ಲಿ ಜಾರಿಯೂ ಆಗಲಾರವು.
5. ಮೌಲಾನರ ಭೌಗೋಳಿಕ ಜ್ಞಾನವೂ ಅಪ್ರತಿಮವಾದುದು. ಯಾವುದೇ ಪ್ರದೇಶಕ್ಕೆ ಒಂದು ಬಾರಿ ಭೇಟಿ ನೀಡಿದರೂ ಎರಡನೆಯ ಬಾರಿ ದಾರಿ ಹುಡುಕುವುದು ಬಹಳ ಸುಲಭ ಅವರಿಗೆ. ಅದು ಅವರದೇ ಊರೋ ಎಂಬಂತೆ! ಅದಲ್ಲದೆ ರಾಜ್ಯದ ಯಾವ ಪ್ರದೇಶಕ್ಕೆ ಯಾವ ರೀತಿಯಲ್ಲಿ ಪ್ರಯಾಣ ನಡೆಸಬಹುದು, ಯಾವ ದಾರಿಯು ಸುಲಭ ಮತ್ತು ಯಾವುದು ಕಷ್ಟಕರ ಎಂಬುದನ್ನು ಮೌಲಾನರು ಕುಳಿತಲ್ಲಿಂದಲೇ ಎಲ್ಲವನ್ನೂ ತಿಳಿಸಿ ಬಿಡುವಂತಹ ಸಾಮರ್ಥ್ಯವನ್ನು ಹೊಂದಿದ್ದರು. ಯಾವುದಾದರೂ ಅಭಿಯಾನ ಅಥವಾ ಪ್ರವಾಸ ಕಾರ್ಯಕ್ರಮಕ್ಕಾಗಿ ಹೊರಟು ನಿಂತರೆ, ಮೌಲಾನರ ಈ ಜ್ಞಾನವು ಬಹಳ ಪ್ರಯೋಜನಕಾರಿಯಾಗಿ ಪರಿಣಮಿಸುತ್ತಿತ್ತು. ಪ್ರವಾಸ ಕಾರ್ಯಕ್ರಮಕ್ಕಾಗಿ ಯಾವುದೇ ನಕ್ಷೆಯ ಸಹಾಯವಿಲ್ಲದೆಯೇ ಅವರು ಪ್ರದೇಶಗಳ ಯಾದಿಯನ್ನು ನೀಡಬಲ್ಲರು.
ಅವರು ತಮ್ಮ ಈ ಜ್ಞಾನವನ್ನು ಸ್ವಯಂ ಬಹಳ ಚೆನ್ನಾಗಿ ಬಳಸಿಕೊಂಡಿದ್ದಾರೆ. ಮೌಲಾನಾ ಮುಹಮ್ಮದ್ ಸಿರಾಜುಲ್ ಹಸನ್ರವರ ನಿಧನದ ವೇಳೆ ಲಾಕ್ ಡೌನ್ ಇದ್ದ ಕಾರಣ, ಸುತ್ತಮುತ್ತಲ ಪ್ರದೇಶಗಳ ಜಮಾಅತ್ ಬಂಧುಗಳಿಗೂ ಪ್ರಯಾಣ ಕೈಗೊಳ್ಳುವುದು ಕಷ್ಟವಾಗಿತ್ತು. ಆದರೆ ಮೌಲಾನಾ ನಜ್ಮುದ್ದೀನ್ರವರು ತಮ್ಮ ದ್ವಿಚಕ್ರ ವಾಹನದಲ್ಲಿ 130 ಕಿಲೋ ಮೀಟರ್ ದಾರಿಯನ್ನು ಕ್ರಮಿಸಿ, ಒಳಾಂಗಣ ದಾರಿಗಳಲ್ಲೆಲ್ಲ ಸಾಗಿ ಸೇಡಮ್ನಿಂದ ರಾಯಚೂರಿಗೆ ತಲುಪಿದ್ದರು ಮತ್ತು ಮೌಲಾನಾ ಸಿರಾಜುಲ್ ಹಸನ್ರವರ ತದ್ಫೀ ನ್ನಲ್ಲಿ ಪಾಲ್ಗೊಂಡಿದ್ದರು.
6. ಮೌಲಾನಾ ನಜ್ಮುದ್ದೀನ್ ಹುಸೈನ್ ಉಮರಿಯವರ ಧರ್ಮ ನಿಷ್ಠ ಜೀವನವೂ ಅನುಕರಣೀಯವಾಗಿದೆ. ನಿರಪೇಕ್ಷತೆಯು ಅವರ ವಿಶಿಷ್ಟ ಗುಣವಾಗಿದೆ. ಯಾರದೇ ಉಪಕಾರ ಪಡೆಯುವುದು, ಇನ್ನೊಬ್ಬರ ಮೇಲೆ ಕೆಲಸಗಳ ಒತ್ತಡವನ್ನು ಹೇರುವುದು, ಪ್ರಯಾಣ ಮತ್ತು ತಂಗುವಿಕೆಯಲ್ಲಿ ವಿಶ್ರಾಂತಿಗೆ ಆದ್ಯತೆ ನೀಡುವುದು, ತಂಗುವಿಕೆಯ ವೇಳೆ ಆಹಾರ ಇತ್ಯಾದಿಗಳ ವಿಶೇಷ ವ್ಯವಸ್ಥೆ ಮಾಡುವುದು ಇವೆಲ್ಲವನ್ನೂ ಮಾಡುತ್ತಿರಲಿಲ್ಲ. ಸಿಕ್ಕಿದುದರಲ್ಲಿ ಸಂತೃಪ್ತಿಯನ್ನು ಹೊಂದುತ್ತಿದ್ದರು. ಇಂತಹ ನಿರಪೇಕ್ಷ ಗುಣವು ಆಂದೋಲನ ಮಂದಿಯಲ್ಲಿ ಇರಬೇಕಾದುದು ಅಗತ್ಯ. ಇಂತಹ ಗುಣವಿದ್ದರೆ, ಯಾವುದೇ ಸವಲತ್ತುಗಳ ಹೊರತಾಗಿಯೂ ಸಕ್ರಿಯರಾಗಿರುವುದು ಸಾಧ್ಯ.
(ಅನುವಾದ: ಎಂ. ಅಶ್ರಫ್)












