ಶ್ರೀನಗರದ ಎನ್ ಐ ಟಿ ಕಾಲೇಜ್ ಮುಚ್ಚಿಸಿದ ಪ್ರವಾದಿ ನಿಂದನೆ ವಿಡಿಯೋ…

0
616

ಸನ್ಮಾರ್ಗ ವಾರ್ತೆ

ಪ್ರವಾದಿ ಮುಹಮ್ಮದರನ್ನು ನಿಂದಿಸುವ ವಿಡಿಯೋವನ್ನು instagram ನಲ್ಲಿ ಹಂಚಿಕೊಂಡ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರಗೊಂಡಿದ್ದು ಶ್ರೀನಗರದ ಎನ್‌ಐಟಿ ಕಾಲೇಜನ್ನು ಮುಚ್ಚಲಾಗಿದೆ. ಚಳಿಗಾಲದ ರಜಾವಧಿಗೆ ಇನ್ನೂ 10 ದಿನಗಳು ಇದ್ದು, ಅದಕ್ಕಿಂತ ಮೊದಲೇ ಎನ್ ಎ ಟಿ ಯನ್ನು ಮುಚ್ಚಲಾಗಿದೆ.

ವಿದ್ಯಾರ್ಥಿಗಳ ನಡುವೆ ಸಂಘರ್ಷಮಯ ವಾತಾವರಣ ಇರುವುದರಿಂದ ವಿದ್ಯಾರ್ಥಿಗಳು ಕ್ಯಾಂಪಸ್ ಮತ್ತು ಹಾಸ್ಟೆಲ್ ಅನ್ನು ಬಿಟ್ಟು ತೆರಳಬೇಕು ಎಂದು ವಿನಂತಿಸಲಾಗಿದೆ. ಈ ನಡುವೆ ಪ್ರತಿಭಟನೆಗೆ ಹೆದರಿ ಕಾಶ್ಮೀರದ ಇತರ ಕಾಲೇಜಿನ ಕಲಿಕೆಯನ್ನು ಕೂಡ ಆನ್ಲೈನ್ ಗೆ ಸೀಮಿತಗೊಳಿಸಲಾಗಿದೆ.

ಕಳೆದ ಮಂಗಳವಾರ ಕಾಶ್ಮೀರಿ ಅಲ್ಲದ ವಿದ್ಯಾರ್ಥಿಯೊಬ್ಬ ಪ್ರವಾದಿ ಅವರ ಅವಹೇಳನ ಮಾಡುವ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದ. ಆ ಬಳಿಕ ಈ ವಿದ್ಯಾರ್ಥಿಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಎನ್‌ಐಟಿಯಲ್ಲಿ ಪ್ರತಿಭಟನೆ ನಡೆಸಲಾಗಿತ್ತು.

ಬುಧವಾರದಂದು ಶ್ರೀನಗರದ ಇತರ ಕಾಲೇಜುಗಳಿಗೂ ಈ ಪ್ರತಿಭಟನೆ ವ್ಯಾಪಿಸಿತು. ಆ ಬಳಿಕ ಎನ್ಐಟಿ ಮುಖ್ಯಸ್ಥರು ಈ ವಿದ್ಯಾರ್ಥಿಯ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ. instagram ನಲ್ಲಿ ಪ್ರವಾದಿ ವಿರೋಧಿ ವಿಡಿಯೋ ಹಂಚಿಕೊಂಡ ಬಳಿಕ ಆ ವಿದ್ಯಾರ್ಥಿ ಕ್ಯಾಂಪಸ್ ಬಿಟ್ಟು ತೆರಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಯೂಟ್ಯೂಬ್ ನಲ್ಲಿದ್ದ ವಿಡಿಯೋವನ್ನು ಈ ವಿದ್ಯಾರ್ಥಿ ತನ್ನ ಇನ್‌ಸ್ಟಾಗ್ರಾಮ್ ಗೆ ಹಂಚಿಕೊಂಡಿದ್ದ.