ಸನ್ಮಾರ್ಗ ವಾರ್ತೆ
ಬೆಂಗಳೂರು: ಡಯಾಲಿಸಿಸ್ ಸಿಬ್ಬಂದಿಗಳು ವೇತನ ಸಿಗದ ಕಾರಣಕ್ಕೆ ಮುಷ್ಕರ ನಡೆಸಲು ಮುಂದಾಗಿದ್ದಾರೆ. ಮುಷ್ಕರದಿಂದ ಲಕ್ಷಾಂತರ ರೋಗಿಗಳು ಜೀವನ್ಮರಣ ಸ್ಥಿತಿ ಎದುರಿಸಬೇಕಾಗುತ್ತದೆ. ರೋಗಿಗಳ ಸಂಕಷ್ಟ ಅರಿತು ತಕ್ಷಣ ಡಯಾಲಿಸಿಸ್ ಸಿಬ್ಬಂದಿಗಳ ವೇತನ ನೀಡಲು ಸರಕಾರ ಮುಂದಾಗಬೇಕು. ಇಲ್ಲದಿದ್ದಲ್ಲಿ ಮುಷ್ಕರ ನಿರತ ಡಯಾಲಿಸಿಸ್ (Dialysis) ಸಿಬ್ಬಂದಿಗಳ ಜೊತೆ ಸೇರಿ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ವೆಲ್ ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯಾಧ್ಯಕ್ಷ ಅಡ್ವಕೇಟ್ ತಾಹೇರ್ ಹುಸೇನ್ ಸರಕಾರಕ್ಕೆ ತೀವ್ರ ಎಚ್ಚರಿಕೆ ನೀಡಿದ್ದಾರೆ.
“ನವೆಂಬರ್ 30 ರಿಂದ ಸಂಪೂರ್ಣ ಕೆಲಸ ಬಂದ್ ಮಾಡಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲು ಈ ನೌಕರರು ನಿರ್ಧರಿಸಿದ್ದಾರೆ. ರಾಜ್ಯಾದ್ಯಂತ 202 ಡಯಾಲಿಸಿಸ್ ಕೇಂದ್ರಗಳಿದ್ದು, ಒಂದು ವೇಳೆ ಬಂದ್ ಆದರೆ ಲಕ್ಷಾಂತರ ರೋಗಿಗಳು ಪರದಾಡಲಿದ್ದಾರೆ. ಸರ್ಕಾರ ಕೊರೊನಾ ನೆಪ ನೀಡಿ ಸಂಬಳಕ್ಕೆ ಕತ್ತರಿ ಹಾಕಿದೆ. ಈ ಹಿನ್ನೆಲೆಯಲ್ಲಿ ಕಳೆದ ಎರಡೂವರೆ ವರ್ಷಗಳಿಂದ ಸಿಬ್ಬಂದಿ ಅರ್ಧ ಸಂಬಳಕ್ಕೆ ದುಡಿಯುತ್ತಿದ್ದಾರೆ. ಕನಿಷ್ಠ ಜೀವನ ನಿರ್ವಹಣೆ ಗೆ ಇದು ಕಷ್ಟಕರವಾಗಿದೆ ಎಂದವರು ಹೇಳಿದರು.
ಮಾತ್ರವಲ್ಲ ಕಳೆದ ಎರಡೂವರೆ ತಿಂಗಳ ವೇತನ ಕೂಡ ನೀಡದೆ ತಡೆದಿದ್ದು, ಅರ್ಧ ಸಂಬಳ ಕೂಡ ಸಿಗದೆ ಸಿಬ್ಬಂದಿಗಳು ಪರದಾಡುತ್ತಿದ್ದಾರೆ. ಈ ಹಿಂದೆ ಡಯಾಲಿಸಿಸ್ ಕೇಂದ್ರ ನಿರ್ವಹಣೆ ಮಾಡುತ್ತಿದ್ದ ಬಿಆರ್ಎಸ್ ಸಂಸ್ಥೆ 2021ರಲ್ಲಿ ಸರ್ಕಾರದಿಂದ ಹಣ ಬಿಡುಗಡೆ ಆಗದ ಕಾರಣ ನಿರ್ವಹಣೆಯಿಂದ ಅದು ಹಿಂದೆ ಸರಿಯಿತು. ನಂತರದಲ್ಲಿ ಯಾವುದೇ ಟೆಂಡರ್ ಆಗದೇ ಕೋಲ್ಕತ್ತ ಮೂಲದ ESKAG ಸಂಜೀವಿನಿಗೆ ನಿರ್ವಹಣೆ ಜವಾಬ್ದಾರಿ ವಹಿಸಲಾಗಿತ್ತು.
ಈ ಹಿಂದೆ 45 ಕೇಂದ್ರಗಳ ಜವಾಬ್ದಾರಿ ಹೊತ್ತಿದ್ದ ESKAG ಸಂಜೀವಿನಿಗೆ ಈಗ 202 ಕೇಂದ್ರಗಳ ಜವಾಬ್ದಾರಿಯನ್ನು ನೀಡಲಾಗಿದೆ. ಈ ಡಯಾಲಿಸಿಸ್ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 650 ಸಿಬ್ಬಂದಿಗಳ ಸಂಬಳದ ಬಗ್ಗೆ ಸರ್ಕಾರ ತೀರಾ ಅಸಡ್ಡೆ ತೋರಿದೆ. ವೇತನ ಪಿಎಫ್, ಇಎಸ್ಐ ಇಲ್ಲದೇ 650 ಸಿಬ್ಬಂದಿಗಳು ಪರದಾಡುತ್ತಿದ್ದಾರೆ.
ಆದ್ದರಿಂದ ಸರಕಾರ ರೋಗಿಗಳ ಬದುಕಿನ ಜೊತೆ ಚೆಲ್ಲಾಟವಾಡದೆ ಈ ಬಗ್ಗೆ ಮುತುವರ್ಜಿಯಿಂದ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಬೇಕು ಎಂದು ಅವರು ಸರಕಾರವನ್ನು ಒತ್ತಾಯಿಸಿದ್ದಾರೆ.












