ರೈತರ ಸಮಸ್ಯೆಗಳ ಪರಿಹಾರಕ್ಕೆ ಮದ್ಯಪ್ರವೇಶಿಸುವಂತೆ ವೆಲ್ಫೇರ್ ಪಾರ್ಟಿಯಿಂದ ರಾಷ್ಟ್ರಪತಿಗಳಿಗೆ ಮನವಿ

0
379

ಸನ್ಮಾರ್ಗ ವಾರ್ತೆ

ಬೆಂಗಳೂರು: ದೇಶದಲ್ಲಿ ರೈತರ ಸ್ಥಿತಿ ಚಿಂತಾಜನಕವಾಗಿದೆ. ಸಾಲದ ಹೊರೆಯು ರೈತರನ್ನು ಆತ್ಮಹತ್ಯೆಯ ಅಂಚಿಗೆ ತಳ್ಳುತ್ತಿದೆ. ಬರದಿಂದ ಕಂಗಾಲಾಗಿದ್ದು ಬೆಳೆಗೂ ಸರಿಯಾದ ಬೆಲೆ ಸಿಗುತ್ತಿಲ್ಲ. ಜೊತೆಗೆ ಸರಕಾರ ಕೂಡ ರೈತ ಕಾಯ್ದೆಯ ಹೆಸರಿನಲ್ಲಿ ರೈತ ವಿರೋಧಿ ಕಾಯ್ದೆ ತಂದು ರೈತರ ಬದುಕು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಸುತ್ತಿದೆ. ಈ ಗಂಭೀರ ಸಮಸ್ಯೆಗಳನ್ನು ಬಗೆಹರಿಸಲು ಮಾನ್ಯ ರಾಷ್ಟ್ರಪತಿಗಳು ಹಸ್ತಕ್ಷೇಪ ಮಾಡಬೇಕೆಂದು ರೈತರ ರಾಷ್ಟ್ರೀಯ ದಿನವಾದ ಇಂದು ಡಿಸೆಂಬರ್ 23ರಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ಕರ್ನಾಟಕ ರಾಜ್ಯ ಘಟಕ ಜಿಲ್ಲೆಯ ಎಲ್ಲಾ ಕೇಂದ್ರಗಳಲ್ಲಿ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಿದೆ” ಎಂದು ವೆಲ್ಫೇರ್ ಪಾರ್ಟಿಯ ರಾಜ್ಯಾಧ್ಯಕ್ಷರಾದ ಅಡ್ವಕೇಟ್ ತಾಹೇರ್ ಹುಸೇನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

“ನಮ್ಮ ದೇಶ ಕೃಷಿ ಪ್ರಧಾನವಾದ ದೇಶ, ದೇಶದ 80% ರಷ್ಟು ಜನಸಂಖ್ಯೆ ಈಗಲೂ ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ವರದಿಯ ಪ್ರಕಾರ ಇಂದು ದೇಶದಲ್ಲಿ ದಿನಕ್ಕೆ 30 ಜನ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. 2104 ರಿಂದ 2022ರ ಅವಧಿಯಲ್ಲಿ ಸುಮಾರು 1,4074 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಅತ್ಯಂತ ಗಂಭೀರವಾದ ವಿಚಾರವಾದರೂ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸುತಿಲ್ಲ. ಹಾಗಾಗಿ ಮಾನ್ಯ ರಾಷ್ಟಪತಿಗಳು ಕೂಡಲೇ ಹಸ್ತಕ್ಷೇಪ ಮಾಡಿ ರೈತರ ಈ ಸಮಸ್ಯೆಗಳು ಬಗೆಹರಿಸುವಲ್ಲಿ ನೇರವಾಗಬೇಕು ಎಂದು ಮನವಿ ಪತ್ರದಲ್ಲಿ ಹೇಳಲಾಗಿದೆ ” ಎಂದೂ ಅವರು ಹೇಳಿದರು.