ಅವಧಿಗಿಂತ ಮೊದಲೇ ಪಾರ್ಲಿಮೆಂಟ್ ಚುನಾವಣೆ ನಡೆಯುತ್ತಾ?

0
113

ಸನ್ಮಾರ್ಗ ವಾರ್ತೆ

✍️ ಅರಫಾ ಮಂಚಿ

ಪಾರ್ಲಿಮೆಂಟು ಚುನಾವಣೆಗೆ ಬಿಜೆಪಿ ತಯಾರಿ ನಡೆಸತೊಡಗಿದೆ. ಪಾರ್ಲಿಮೆಂಟು ದಾಳಿಗೆ ಇಬ್ಬರು ನಡೆಸಿದ ರಿಹರ್ಸಲ್‌ಗೂ ಚುನಾವಣೆಗೂ ಸಂಬಂಧ ಇಲ್ಲ. ಅವರು ಕಾನೂನು ಕ್ರಮ ಎದುರಿಸುತ್ತಿದ್ದಾರೆ. ಜೈಲು ಪಾಲಾಗಿದ್ದಾರೆ. ಬಿಜೆಪಿ ದೃಷ್ಟಿಯಲ್ಲಿ ಇದು ಗಂಭೀರ ಘಟನೆ. ಸಚಿವ ಪ್ರಹ್ಲಾದ್ ಜೋಷಿಯ ಮಾತಿನಲ್ಲಿ ಹೇಳುವುದಾದರೆ ಘಟನೆಯನ್ನು ರಾಜಕೀಯಗೊಳಿಸಬಾರದು.

ಪ್ರಹ್ಲಾದ್ ಜೋಷಿಯವರೇ ಅದು ಅರಾಜಕೀಯವಾಗುವುದು ಹೇಗೆ? ಹುಡುಗರಿಗೆ ಪಾಸ್ ಕೊಟ್ಟ ನಿಮ್ಮ ಮೈಸೂರಿನ ಸಂಸದ ಪ್ರತಾಪ ಸಿಂಹ ರಾಜಕಾರಣಿ. ಮನೋರಂಜನ್ ತಂದೆ ದೇವರಾಜ್ ಬಿಜೆಪಿ ವ್ಯಕ್ತಿ. ಇಲ್ಲೆಲ್ಲ ಒಂದು ಪಾಸು ರಾಜಕೀಯದ ಸುತ್ತಲೇ ಸುತ್ತುತ್ತಿದೆ. ಪ್ರತಾಪ್ ಸಿಂಹ ಬದಲು ಮಲ್ಲಿಕಾರ್ಜುನ ಖರ್ಗೆ ಪಾಸು ಕೊಟ್ಟಿದ್ದರೆ ನಿಮ್ಮ ಮಾತು ಇದೇ ಆಗಿರುತ್ತಿತ್ತೋ

ಹೌದು, ಇದು ಸ್ಪೀಕರ್ ವ್ಯಾಪ್ತಿಗೆ ಮಾತ್ರ ಸೀಮಿತ ಘಟನೆಯೂ ಅಲ್ಲ. ಅರಾಜಕೀಯ ಘಟನೆಯೂ ಅಲ್ಲ. ಇರಲಿ, ಪಾರ್ಲಿಮೆಂಟ್ ಚುನಾವಣೆಗೆ ಬಿಜೆಪಿ ತಯಾರಿ ಹೇಗಿರುತ್ತದೆ ಎಂಬುದಕ್ಕೆ ಸಂಬಂಧಿಸಿ ಮಧ್ಯಪ್ರದೇಶದದಿಂದ ತಾಜಾ ಉದಾಹರಣೆ ಎತ್ತಿಕೊಳ್ಳಬಹುದು.

ಅಲ್ಲಿ ಹೊಸ ಮುಖ್ಯಮಂತ್ರಿ ಮೋಹನ್ ಯಾದವ್ ಮುಸ್ಲಿಮರ ಮನೆಗಳನ್ನು ಹುಡುಕಿ ಬುಲ್ಡೋಝರ್ ಕಳುಹಿಸುತ್ತಿದ್ದಾರೆ. ಮಸೀದಿಯ ಧ್ವನಿವರ್ಧಕ ಕೆಳಗಿಳಿಸಬೇಕು, ಧಾರ್ಮಿಕ ಸ್ಥಳದಲ್ಲಿ ಲೌಡ್ ಸ್ಪೀಕರ್ ಬಳಸುವಂತಿಲ್ಲ ಮತ್ತು ಅನುಮತಿಯಿಲ್ಲದೆ ಮೀನು, ಮಾಂಸ ಮಾರುವಂತಿಲ್ಲ ಎಂದು ಅವರು ಆದೇಶ ಹೊರಡಿಸಿದ್ದಾರೆ. ಇದು ಚುನಾವಣೆ ಎದುರಿಸಲು ಬಿಜೆಪಿ ನಡೆಸುತ್ತಿರುವ ತಯಾರಿಯ ಒಂದು ಸ್ಯಾಂಪಲ್. ಮೀನು ಮಾರಾಟಗಾರರು, ಮಾಂಸ ಮಾರಾಟಗಾರರು ಯಾರು ಎಂದು ಗೊತ್ತೇ ಇರುವಂಥಹದ್ದು. ಬಿಜೆಪಿ ಮಟ್ಟಿಗೆ ಚುನಾವಣೆ ಗೆಲ್ಲುವುದಕ್ಕೆ ಏನೂ ಆಗಬಹುದು. ಶಿವರಾಜ್ ಸಿಂಗ್ ಮುಖ್ಯಮಂತ್ರಿಯಾಗಿದ್ದಾಗ ಮಧ್ಯಪ್ರದೇಶದ ಗಂಗಾ ಜಮುನ ಸ್ಕೂಲಿನ ಮೇಲೆ ಬುಲ್ಡೋಝರ್ ಹರಿಸಿದ್ದನ್ನು ಸಾಂದರ್ಭಿಕವಾಗಿ ನೀವು ಸ್ಮರಿಸಿಕೊಳ್ಳಬಹುದು.

ಹಾಗಿದ್ದರೆ ಈ ಘಟನೆಗಳು ಪಾರ್ಲಿಮೆಂಟಿಗೆ ಅವಧಿಗಿಂತ ಮುಂಚೆ ಚುನಾವಣೆ ನಡೆಯುತ್ತದೆ ಎಂಬುದಕ್ಕೆ ಕನ್ನಡಿ ಹಿಡಿಯುತ್ತವಾ? ಹೌದು, ರಾಷ್ಟ್ರೀಯ ಮಾಧ್ಯಮಗಳು ಕೂಡ ಚುನಾವಣೆ ಎಂಬುದನ್ನೇ ಚರ್ಚಿಸುತ್ತಿವೆ. ವರದಿಗಳ ಪ್ರಕಾರ ಬಿಜೆಪಿ ಅಧ್ಯಕ್ಷ ನಡ್ಡ ಅವರು ಮುಂದಿನ 45 ದಿನಗಳಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗುತ್ತದೆ ತಯಾರಿರಿ ಎಂದು ಬಿಜೆಪಿ ಜನಪ್ರತಿನಿಧಿಗಳಿಗೆ ಆದೇಶಿಸಿದ್ದಾರೆ ಎಂಬ ವರದಿಗಳಿವೆ. ಬಿಜೆಪಿಯ ಟ್ರಂಡ್ ಈಗ ಇದೆ ಎಂದು ಮೋದಿ, ಶಾ ನಿರ್ಧರಿಸಿರಬಹುದು. ಕಾರಣವೂ ಇದೆ. ಹಿಂದಿ ಬೆಲ್ಟಿನ ಮೂರು ವಿಧಾನಸಭೆಗಳ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದೆ. ಇದೇ ಉತ್ಸಾಹದಿಂದ ಈ ತಯಾರಿ ನಡೆಯುತ್ತಿರಬಹುದು.

ಸರಿ ಈ ಹಿಂದಿ ಬೆಲ್ಟಿನ ಗೆಲುವನ್ನು ಪಾರ್ಲಿಮೆಂಟಿನ ಗೆಲುವಿನ ಮಾನದಂಡವಾಗಿಟ್ಟು ಅವಧಿಗೆ ಮುಂಚೆ ಬಿಜೆಪಿ ಚುನಾವಣೆಗ ಹೊರಟಿದ್ದರೆ ಲೆಕ್ಕ ತಪ್ಪಬಹುದು. ಭಾರತ ಅಂದರೆ ಕೇವಲ ಉತ್ತರ ಭಾರತ ಅಲ್ಲ. ದಕ್ಷಿಣ ಭಾರತವೂ ಇದೆ. ದಕ್ಷಿಣ ಭಾರತದಲ್ಲಿ ಎರಡು ಪ್ರಮುಖ ರಾಜ್ಯಗಳಲ್ಲಿ ಇತ್ತೀಚೆಗೆ ಕಾಂಗ್ರೆಸ್ ಗೆದ್ದಿದೆ. ಇನ್ನು ಹಿಮಾಚಲ ಪ್ರದೇಶವನ್ನು ಸೇರಿಸಿದರೆ ಕಾಂಗ್ರೆಸ್ ಇತ್ತೀಚೆಗೆ ಮೂರು ರಾಜ್ಯಗಳಲ್ಲಿ ಗೆದ್ದಂತಾಗಿದೆ. ಬಿಜೆಪಿ ಒಟ್ಟೊಟ್ಟಿಗೆ ಮೂರು ರಾಜ್ಯಗಳನ್ನು ಗೆದ್ದರೆ ಕಾಂಗ್ರೆಸ್ಸೂ ಬೇರೆ ಬೇರೆ ಸಮಯಗಳಲ್ಲಿ ಮೂರು ರಾಜ್ಯಗಳನ್ನು ಗೆದ್ದಿದೆ. ಹೀಗಾಗಿ ಅವಧಿಗೆ ಮುಂಚೆ ಮಾಡಲಿ, ಸರಿಯಾದ ಅವಧಿಯಲ್ಲೇ ಚುನಾವಣೆ ನಡೆಸಲಿ ಬಿಜೆಪಿ ಸಲೀಸಾಗಿ 2019ರ ಲೋಕಸಭೆ ಚುನಾವಣೆಯಂತೆ ಮುನ್ನೂರಕ್ಕೂ ಮಿಕ್ಕಿ ಎಂಪಿಗಳನ್ನು ಗೆದ್ದು ತರುತ್ತದೆ ಎಂಬ ನಂಬಿಕೆ ನಿಜವಾಗದು. ಕರ್ನಾಟಕವನ್ನೇ ನೋಡಿ, ಇಲ್ಲಿನ ಬಿಜೆಪಿಯವರು ವಿಧಾನಸಭಾ ಚುನಾವಣೆಯಿಂದ ಇನ್ನೂ ಚೇತರಿಸಿಯೇ ಇಲ್ಲ. ಬಿಜೆಪಿಯ ಹೈಕಮಾಂಡಿಗೆ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಎರಡು ಮೂರು ತಿಂಗಳುಗಳೇ ಹಿಡಿಯಿತು. ಇನ್ನೊಂದು ಕಡೆ ಬಿಜೆಪಿಯ ಮಿತ್ರ ಪಕ್ಷ ಜೆಡಿಎಸ್ ಇಲ್ಲಿ ಅಸ್ತಿತ್ವವನ್ನೆ ಕಳಕೊಳ್ಳುವ ಸ್ಥಿತಿಯಲ್ಲಿದೆ. ಕುಮಾರ ಸ್ವಾಮಿ ಬಿಜೆಪಿ ಸಖ್ಯ ಬೆಳೆಸಿಕೊಂಡ ಮೇಲೆ ಜೆಡಿಎಸ್ ವೋಟು ಇಬ್ಭಾಗವಾಗಿದೆ. ಜೆಡಿಎಸ್ ಕೂಡ ಇಬ್ಭಾಗವಾಗಿದೆ. ಕುಮಾರ ಸ್ವಾಮಿ ವಿರುದ್ಧ ಬಣದಲ್ಲಿ ಸಿಎಂ ಇಬ್ರಾಹೀಂ ಇದ್ದಾರೆ. ಇಬ್ರಾಹೀಂ ಬಣ ಇಂಡಿಯ ಕೂಟದೊಂದಿಗೆ ಸೇರುವ ಘೋಷಣೆ ಮಾಡಿದ್ದರಿಂದ ಅರ್ಧಕ್ಕರ್ಧ ಜೆಡಿಎಸ್ ವೋಟುಗಳು ಕಾಂಗ್ರೆಸ್‌ಗೆ ಹೊರಟು ಹೋಗುತ್ತದೆ. ಇದು ಕರ್ನಾಟಕದ ಲೆಕ್ಕ. ಅಂದರೆ ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ಸಿಗರು ಮಧ್ಯಪ್ರದೇಶದ ಕಾಂಗ್ರೆಸ್ ಅಧ್ಯಕ್ಷ ಕಮಲ್‌ನಾಥ್‌ರಂತೆ ಶಸ್ತ್ರ ಒಪ್ಪಿಸಿ ಶರಣಾಗತರಾಗುವವರಲ್ಲ. ಇಲ್ಲಿ ಕಾಂಗ್ರೆಸ್‌ನ ಚಾಣಕ್ಯನಾಗಿ ಡಿಕೆ ಶಿವಕುಮಾರ್ ಇದ್ದಾರೆ. ಅವರಿಗೆ ಇತ್ತೀಚೆಗೆ ತೆಲಂಗಾಣದಲ್ಲಿ ಕಾಂಗ್ರೆಸ್ ಅನ್ನು ಗೆಲ್ಲಿಸಿದ ಗರಿಯೂ ಸೇರಿಕೊಂಡಿದೆ. ಜೊತೆಗೆ ಸಿದ್ದರಾಮಯ್ಯರಂತಹ ಅನುಭವಿ ಮುಖ್ಯಮಂತ್ರಿಯಿದ್ದಾರೆ.

ವಿಷಯ ಬದಲಿಸೋಣ:
ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕೇಂದ್ರ ರದ್ದು ಮಾಡಿರುವುದನ್ನು ಸುಪ್ರೀಮ್ ಕೋರ್ಟು ಎತ್ತಿ ಹಿಡಿದಿದೆ. ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಫಾರೂಕ್ ಅಬ್ದುಲ್ಲ, ಉಮರ್ ಅಬ್ದುಲ್ಲ, ಮೆಹಬೂಬ ಮುಫ್ತಿ ಸಹಿತ ಹಲವರು ತಮ್ಮ ಹೋರಾಟ ಮುಗಿದಿಲ್ಲ ಎಂದಿದ್ದಾರೆ. ಇಲ್ಲೂ ಮುಸ್ಲಿಮರನ್ನು ಸತಾಯಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಹೇಗೂ ಜಮ್ಮು ಕಾಶ್ಮೀರ ಮುಸ್ಲಿಮರು ಹೆಚ್ಚಿರುವ ನಾಡು.

ಸಂಸದೆ ಮಹುವಾ ಮೊಯಿತ್ರಾ ಸುಪ್ರೀಂಕೋರ್ಟಿನ ಮೊರೆ ಹೋಗಿದ್ದಾರೆ. ಪಾರ್ಲಿಮೆಂಟಿನಲ್ಲಿ ಹಣ ಪಡೆದು ಪ್ರಶ್ನೆ ಕೇಳಿದ ಆರೋಪದಲ್ಲಿ ವಜಾಗೊಂಡದ್ದನ್ನು ಅವರು ಪ್ರಶ್ನಿಸಿದ್ದಾರೆ. ಪಾರ್ಲಿಮೆಂಟಿನ ಎತಿಕ್ಸ್ ಸಿಸ್ಟಂ ಎಂತಹದ್ದು ಅಂದರೆ ಮಹುವಾ ಮೊಯಿತ್ರಾ ಪಾಸ್‌ವರ್ಡ್ ಕೊಟ್ಟುದಕ್ಕೆ ಸಂಸತ್ಸದಸ್ಯತ್ವ ಕಳಕೊಂಡರು. ಅಲ್ಲಿ ಪಾರ್ಲಿಮೆಂಟಿಗೆ ದಾಳಿ ಮಾಡಿದ ಹುಡುಗರಿಗೆ ಪಾಸು ಕೊಟ್ಟ ಸಂಸದ ಪ್ರತಾಪ ಸಿಂಹ ವಿರುದ್ಧ ಯಾವ ಕ್ರಮವೂ ಆಗಿಲ್ಲ. ಅವರು ಬಿಜೆಪಿಯವರು. ಮಹುವಾ ಮಮತಾ ಬ್ಯಾನರ್ಜಿ ಪಾರ್ಟಿಯವರು. ಇದು ಪಾರ್ಲಿಮೆಂಟಿನ ಎತಿಕ್ ಸಿಸ್ಟಂ.
ಈಗ ಪಾರ್ಲಿಮೆಂಟಿಗೆ ನುಗ್ಗಿದ ಹುಡುಗರು ಸ್ಮಾಕ್ ಕ್ರಾಕರ್ ಬದಲು ವೆಫನ್ಸ್ ಕೊಂಡು ಹೋಗಿದ್ದರೇ. ವಿಷಾನಿಲದ ಡಬ್ಬ ಅಲ್ಲಿ ತೆರೆದಿದ್ದರೆ ಸಂಸದರ ಅವಸ್ಥೆ ಹೇಗಿರುತ್ತಿತ್ತು? ಇಷ್ಟು ಘೋರ ತಪ್ಪು ನಡೆದೂ ಅದಕ್ಕೆ ಪಾಸ್ ಕೊಟ್ಟು ಸಹಕರಿಸಿದ ಮೈಸೂರಿನ ಸಂಸದ ಹಾಯಾಗಿದ್ದಾರೆ. ಮಹುವಾ ಸ್ಥಾನ ಕಳಕೊಂಡಿದ್ದಾರೆ. ಇಷ್ಟು ಭದ್ರತಾ ಲೋಪದ ಹೊಣೆ ಹೊತ್ತು ಗೃಹ ಸಚಿವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ ವಿಪಕ್ಷಗಳ ಸಂಸದರು ಮುಂದಿನ ಅಧಿವೇಶನ ಮುಗಿಯುವರೆಗೆ ಅಮಾನತುಗೊಂಡಿದ್ದಾರೆ. ಇದು ಬಿಜೆಪಿ ಪ್ರತಿಪಾದಿಸುವ ಪ್ರಜಾಪ್ರಭುತ್ವದ ಎತಿಕ್ಸ್. ಇಂತಹ ಕುಲಗೆಟ್ಟ ನೀತಿಯನ್ನು ಜನರು ಬೆಂಬಲಿಸುತ್ತಾರೆ ಎಂದಿರುವಾಗ ಬಿಜೆಪಿ ಆಡಿದ್ದೇ ಆಟ. ಒಂದು ಕಡೆ ಉಗ್ರ ಹಿಂದುತ್ವದವರಿಂದ ಮುಸ್ಲಿಮರ ಮೇಲೆ ದಾಳಿ. ಇನ್ನೊಂದು ಕಡೆ ಪ್ರತಿಪಕ್ಷದವರ ಮೇಲೆ ಇಡಿ ಐಟಿ ಸಿಬಿಐ ದಾಳಿ.

ಕೇರಳದ ರಾಜ್ಯಪಾಲರ ವಿರುದ್ಧ ಇತ್ತೀಚೆಗೆ ಕಪ್ಪು ಬಾವುಟ ಹಿಡಿದ ಎಸ್‌ಎಫ್‌ಐ ಕಾರ್ಯಕರ್ತರನ್ನು ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಬ್ಲಡಿ ಫೂಲ್, ರಾಸ್ಕಲ್ ಎಂದು ಬೈದಿದ್ದಾರೆ. ಈ ಹುಡುಗರು ತಮ್ಮ ಶೈಕ್ಷಣಿಕ ಕಾರಣಗಳಿಗಾಗಿ ರಾಜ್ಯಪಾಲರ ಕಾರಿಗೆ ಕಪ್ಪುಬಾವುಟ ಹಿಡಿದಿದ್ದರು. ಆದರೆ ಸಂಯಮ ಕಳಕೊಂಡ ಆರಿಫ್ ಖಾನ್ ವಾಚಾಮಗೋಚರವಾಗಿ ಬೈದಿದ್ದಾರೆ. ಇನ್ನೊಂದು ನೀತಿ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರದ್ದು. ಅವರು ತನ್ನ ಡೈರಿಯಲ್ಲಿ ಹೀಗೆ ಬರೆಯುತ್ತಾರೆ: ಕಾಂಗ್ರೆಸ್‌ನ ಇಂದಿನ ಶಿಥಿಲತೆಗೆ ತಾನು ಮತ್ತು ತನ್ನಂತಹವರು ಎಷ್ಟು ಹೊಣೆಗಾರರು ಎಂದು ಅವಲೋಕನ ನಡೆಸಿದ್ದಾರೆ. 1970 ಮತ್ತು 80ರಲ್ಲಿ ಇಂದಿರಾಗಾಂಧಿಯ ಹಿಂದೆ ಮತ್ತು ನಂತರ ಸೋನಿಯಾ ಗಾಂಧಿಯವರ ಜತೆ ತೋರಿಸಿದ ಅಂಧವಾದ ವಿಧೇಯತೆ ಪಾರ್ಟಿಯನ್ನು ಕುಟುಂಬ ಆಳ್ವಿಕೆಗೆ ಅಡವಿಡುವುದರಲ್ಲಿ ದೊಡ್ಡ ಪಾತ್ರ ವಹಿಸಿತು ಎಂದು ಅವರ ಸ್ವಯಂ ಆತ್ಮ ವಿಮರ್ಶೆ ಮಾಡಿಕೊಂಡಿದ್ದಾರೆ. ಚುನಾವಣೆ ನಡೆಸಿ ಪ್ರಜಾಪ್ರಭುತ್ವದ ಮಾರ್ಗದಲ್ಲಿ ನಾಯಕನನ್ನು ಆಯ್ಕೆ ಮಾಡುವುದು ಇಲ್ಲದಾಗಿಸಿದ್ದಕ್ಕೆ ನಾವು ಕಾರಣರೇ ಎಂದು 2020 ಜುಲೈ 28ಕ್ಕೆ ಬರೆದ ತಮ್ಮ ಡೈರಿಯಲ್ಲಿ ಬರೆದಿದ್ದಾರೆ. ಪ್ರಣವ್ ಮುಖರ್ಜಿಯವರ ಪುತ್ರಿ ಶರ್ಮಿಷ್ಟಾ ಮುಖರ್ಜಿಯವರ ಪ್ರಣವ್ ಮೈ ಫಾದರ್ ಎಂಬ ಪುಸ್ತಕದಲ್ಲಿ ಈ ಮಾತುಗಳಿವೆ. ಇವರನ್ನು ಕೆಲವರು ಆರೆಸ್ಸೆಸ್ ಪರ ಒಲವಿನ ವ್ಯಕ್ತಿ ಎಂದು ಹೇಳುತ್ತಿದ್ದರು. ಮಾತ್ರವಲ್ಲ ನಾಗಪುರದ ಆರೆಸ್ಸೆಸ್ ಸಮ್ಮೇಳನಕ್ಕೆ ಹೋದಾಗಲೇ ಈ ವಾದಕ್ಕೆ ಬಲಬಂದಿತ್ತು. ಅದರ ನಂತರ ಅವರಿಗೆ ಭಾರತ ರತ್ನವೂ ಸಿಕ್ಕಿತ್ತು. ಕಾಂಗ್ರೆಸ್ಸ್ ಗೆ ಪ್ರಣವ ಮುಖರ್ಜಿ ಹೀಗೆ ಎತಿಕ್ಸ್ ಬಿಟ್ಟು ಹೋಗಿದ್ದಾರೆ. ಇರಲಿ,

ವಿಷಯಕ್ಕೆ ಬರೋಣ:
ಅವಧಿಗೆ ಮುಂಚೆ ಚುನಾವಣೆ ಎಂಬ ವಿಷಯವನ್ನೇ ಎತ್ತಿಕೊಳ್ಳುವುದಾದರೂ ಅರ್ಧ ಭಾರತ ಬೇರೆ ಅರ್ಧ ಭಾರತ ಬೇರೆ ಎಂದು ಲೆಕ್ಕ ಹಾಕಬೇಕಾಗುತ್ತದೆ. ಉತ್ತರದ ಕೆಲವು ರಾಜ್ಯಗಳನ್ನು ಹೊರತು ಪಡಿಸಿ ನೋಡಿದರೆ ದಕ್ಷಿಣ ಭಾರತ, ಈಶಾನ್ಯ ಭಾರತದಲ್ಲಿ ಬಿಜೆಪಿ ಗಟ್ಟಿಯಿಲ್ಲ. ಅಲ್ಲಿ ಎಲ್ಲ ಕಡೆ ಕಾಂಗ್ರೆಸ್ ಅಧಿಕಾರದಲ್ಲಿ ಇಲ್ಲದಿರಬಹುದು. ಆದರೆ ಪ್ರತಿಪಕ್ಷಗಳ ಇಂಡಿಯಾ ಕೂಟ ಇದೆ. ಈ ಸಲ ಮಣಿಪುರ ಕೂಡ ಬಿಜೆಪಿಗೆ ದುಃಸ್ವಪ್ನವಾಗಿ ಕಾಡಬಹುದು. ಮಣಿಪುರ ದಂಗೆಯನ್ನು ನಿಭಾಯಿಸಿದ ರೀತಿಯಲ್ಲಿ ಮಣಿಪುರಿಗಳಲ್ಲಿ ಮಾತ್ರ ಅಲ್ಲ ಈಶಾನ್ಯ ಭಾರತದಲ್ಲಿಯೇ ಅಸಮಾಧಾನ ಇದೆ. ಹೀಗಾಗಿ ಮುಂಬರುವ ಲೋಕಸಭಾ ಚುನಾವಣೆಯನ್ನು ಬಿಜೆಪಿ ಬೇಗನೆ ಮಾಡಲಿ ಅಥವಾ ಸಮಯಕ್ಕೆ ಸರಿಯಾಗಿ ಮಾಡಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಸಲೀಸಾಗಿ ಸಾಧ್ಯವಿಲ್ಲ.

ಮುಖ್ಯವಾಗಿ ಚುನಾವಣೆಯ ವೇಳೆ ಹಿಂದಿನಂತೆ ಮೋದಿ ಪ್ಯಾಕ್ಟರ್ ಸೃಷ್ಟಿಸುವ ಪ್ರಯತ್ನವೂ ಆಗುತ್ತಿದೆ. ಜ. 22ಕ್ಕೆ ರಾಮ ಮಂದಿರ ಉದ್ಘಾಟಿಸಿ ಅದನ್ನು ಚುನಾವಣಾ ಪ್ರಚಾರಕ್ಕೆ ಬಳಸಿ ಇಡೀ ದೇಶವನ್ನು ಕೇಸರಿಮಯ ಗೊಳಿಸುವ ತಂತ್ರ ಇದ್ದರೂ ಇರಬಹುದು. ಜೊತೆಗೆ ಮಧ್ಯಪ್ರದೇಶದಲ್ಲಿ ಮುಸ್ಲಿಮರ ವಿರುದ್ಧ ಪ್ರತೀಕಾರವೂ ನಡೆಯುತ್ತಿದೆ.

ಬಿಜೆಪಿ ನಾಯಕನೊಬ್ಬ ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಮುಸ್ಲಿಮರ ವಿರುದ್ಧ ದೂರು ಕೊಡುತ್ತಾರೆ. ಇಷ್ಟೇ ಸಾಲುತ್ತದೆ. ಆರೋಪಿಗಳೆಂದು ಹೆಸರಿಸಿ ಮೂವರು ಮುಸ್ಲಿಮರು ಅನಧಿಕೃತವಾಗಿ ಅನುಮತಿ ಪಡೆಯದೆ ಮನೆ ಕಟ್ಟಿರುವುದು ಎಂದು ಪೊಲೀಸರು ಬುಲ್ಡೋಝರ್‌ನಿಂದ ಕೆಡವಿ ಹಾಕುತ್ತಾರೆ. ಇದು ಬಿಜೆಪಿಯ ಎತಿಕ್ಸ್. ಚುನಾವಣೆ ಗೆಲ್ಲುವುದಕ್ಕೆ ಇವರು ಯಾವ ಮಟ್ಟಕ್ಕೂ ಇಳಿಯಬಹುದು. ಇನ್ನು ಅನುಮತಿ ಪಡೆಯದೆ ಅನಧಿಕೃತವಾಗಿ ಮೀನು ಮಾಂಸ ಮಾರಿದ್ದೆಂದು ಹೇಳಿ ಹದಿನೈದು ಅಂಗಡಿಗಳನ್ನು ಮೋಹನ್ ಯಾದವ್‌ರ ಪೊಲೀಸರು ಬುಲ್ಡೋಝರಿನಿಂದ ಕೆಡವಿದ್ದಾರೆ.

ಆದರೆ ಎಲ್ಲದಕ್ಕೂ ಒಂದು ಪ್ರತಿರೋಧ ಇದ್ದೇ ಇರುತ್ತದೆ. ರಾಜಕೀಯವಾಗಿ ಇವತ್ತು ಗುಜರಾತ್ ಮತ್ತು ಉತ್ತರ ಭಾರತದವರ ರಾಜತಂತ್ರವನ್ನು ದಕ್ಷಿಣ ಭಾರತೀಯರು ಸ್ಪಷ್ಟವಾಗಿ ತಿರಸ್ಕರಿಸಿದ್ದು ಕಂಡು ಬರುತ್ತದೆ. ಮಹಾರಾಷ್ಟ್ರದ 48 ಎಂಪಿ ಸೀಟುಗಳಲ್ಲಿ ಕಳೆದ ಸಲ ಎನ್‌ಡಿಎ 41 ಸೀಟು ಗೆದ್ದಿತ್ತು. ಆಗ ಉದ್ಧವ್ ಠಾಕ್ರೆ ಎನ್‌ಡಿಎಯಲ್ಲಿದ್ದರು. ಈಗ ಇಲ್ಲ, ಇಂಡಿಯ ಕೂಟದಲ್ಲಿದ್ದಾರೆ. ಕರ್ನಾಟಕದ 28 ಸೀಟುಗಳಲ್ಲಿ 24 ಸೀಟು ಎನ್‌ಡಿಎ ಗೆದ್ದಿತ್ತು. ಈಗ ಅಧಿಕಾರದಲ್ಲಿ ಕಾಂಗ್ರೆಸ್ ಇದೆ. ಬಿಹಾರದಲ್ಲಿ ಹಿಂದೆ ನಿತೀಶ್ ಕುಮಾರ್ ಎನ್‌ಡಿಎ ಯಲ್ಲಿದ್ದಾಗ 39 ಸೀಟುಗಳನ್ನು ಗೆದ್ದಿತ್ತು. ನಿತೀಶ್ ಈಗ ಇಂಡಿಯ ಕೂಟದಲ್ಲಿದ್ದಾರೆ. ಕೊಲ್ಕತಾದಲ್ಲಿ ಬಿಜೆಪಿ 42ರಲ್ಲಿ 18 ಸೀಟು ಗೆದ್ದಿತ್ತು. ಈಗ ಪರಿಸ್ಥಿತಿ ಬದಲಾಗಿದೆ. ಮಮತಾ ಇಂಡಿಯ ಕೂಟದಲ್ಲಿದ್ದಾರೆ. ಬಿಜೆಪಿ ಲೆಕ್ಕಗಳು ಸಂಸತ್ತಿನ ಭದ್ರತೆ ನೀಡುವಲ್ಲಿ ಹೇಗೆ ವಿಫಲವಾಯಿತೋ ಲೋಕಸಭಾ ಚುನಾವಣೆಯಲ್ಲಿಯೂ ವಿಫಲವಾಗುವ ಸಾಧ್ಯತೆಯೇ ಎದ್ದು ಕಾಣಿಸುತ್ತಿದೆ.