ಹೊಸದಿಲ್ಲಿ,ಎ.8: ನೌಕಾ ಸೇನೆಯ ಮುಖ್ಯಸ್ಥರಾಗಿ ವಐಸ್ ಅಡ್ಮಿರಲ್ ಕರಂಬೀರ್ ಸಿಂಗ್ರನ್ನು ನೇಮಕಗೊಳಿಸಿರುವುದನ್ನು ಪ್ರಶ್ನಿಸಿ ವೈಸ್ ಅಡ್ಮಿರಲ್ ಬಿಮಲ್ ವರ್ಮ ಕೋರ್ಟಿನ ಕಟ್ಟೆಯೇರಿದ್ದಾರೆ. ಸಶಸ್ತ್ರ ಸೇನೆ ಟ್ರಿಬ್ಯೂನಲ್ನಲ್ಲಿ ಬಿಮಲ್ ವರ್ಮ ದೂರು ಸಲ್ಲಿಸಿದ್ದಾರೆ.
ನೌಕಾ ಸೇನೆಯ ಮುಖ್ಯಸ್ಥ ಸ್ಥಾನಕ್ಕೆ ಹಿರಿತನದ ಆಧಾರದಲ್ಲಿ ಪರಿಗಣಿಸಬೇಕಾಗಿದ್ದ ತನ್ನನ್ನು ಕಡೆಗಣಿಸಿ ತನಗಿಂತ ಜ್ಯೂನಿಯರ್ರನ್ನು ಸರಕಾರ ನೇಮಿಸಿದೆ. ಇದು ಶಿಷ್ಟಾಚಾರದ ಉಲ್ಲಂಘನೆಯಾಗಿದೆ ಎಂದು ಬಿಮಲ್ ವರ್ಮ ದೂರಿನಲ್ಲಿ ಆರೋಪಿಸಿದ್ದಾರೆ. ನೌಕಾ ಸೇನಾ ಮುಖ್ಯಸ್ಥ ಅಡ್ಮಿರಲ್ ಸುನೀಲ್ ಲಾಂಬಾ ನಿವೃತ್ತಿಯಾದ ಬಳಿಕ ಸರಕಾರ ಕರಣ್ಬೀರ್ ಸಿಂಗ್ರನ್ನು ಮುಖ್ಯಸ್ಥನಾಗಿ ನೇಮಕಗೊಳಿಸಿತ್ತು.
ಸೇನೆಯ ಮುಖ್ಯಸ್ಥನಾಗಿ ನೇಮಕಗೊಂಡ ಮೊದಲ ಹೆಲಿಕಾಪ್ಟರ್ ಪೈಲಟ್ ಎಂಬ ಗೌರವವೂ ಕರಣ್ಬೀರ್ಸಿಂಗ್ರ ಪಾಲಾಗಿತ್ತು. ಈ ಹಿಂದೆ ಭೂಸೇನೆ ಮುಖ್ಯಸ್ಥ ಬಿಪಿನ್ ರಾವತ್ರ ನೇಮಕದಲ್ಲಿಯೂ ಸೀನಿರಿಯಾಟಿ ವಿವಾದ ತಲೆದೋರಿತ್ತು.
ಕರಣ್ ಬೀರ್ ಸಿಂಗ್ ನೌಕಾ ಸೇನೆಯ ಪೂರ್ವ ವಲಯದ ಕಮಾಂಡರಾಗಿದ್ದರು. ಪಂಜಾಬ್ನ ಜಲಂಧರ್ ನಿವಾಸಿಯಾಗಿರುವ ಇವರು ಚೇತಕ್ ಕಮೋವ್ ಹೆಲಿಕಾಪ್ಟರ್ಗಳನ್ನು ನೌಕಾ ಸೇನೆಗಾಗಿ ಹಾರಿಸಿದ್ದರು. ನಂತರ ಇವರು ನಾಲ್ಕು ಯುದ್ಧ ಹಡಗುಗಳ ಕಮಾಂಡರ್ ಆಗಿಯೂ ಸೇವೆ ಸಲ್ಲಿಸಿದರು.












