ಸನ್ಮಾರ್ಗ ವಾರ್ತೆ
ಆರ್.ಎಮ್. ಸಿದ್ದೀಕ್, ಉಡುಪಿ
ಕುರ್ ಆನ್ ಪ್ರತಿಪಾದಿಸುವ ಇಸ್ಲಾಮ್ ಇನ್ನೊಂದು ಕೇವಲ ಸೀಮಿತ ಕಲ್ಪನೆಯ ಮತ ಅಥವಾ ಧರ್ಮ(Religion) ಅಲ್ಲ. ಅತಿ ವಿಶಾಲ ಮತ್ತು ಒಂದು ಸಮಗ್ರ ಜೀವನ ವ್ಯವಸ್ಥೆ. ಅಖಂಡ ಭೂಮಂಡಲದ ಮತ್ತು ಎಲ್ಲಾ ಸೃಷ್ಟಿಗಳ ಒಡೆಯನು ಮಾನವರಿಗಾಗಿ ನೀಡಿರುವ ಜೀವನ ಪದ್ಧತಿಯಾಗಿದೆ. ಅದರ ಶಿಕ್ಷಣಗಳನ್ನು ಅನುಷ್ಠಾನಿಸಿದರೆ, ಭೂಮಿಯಲ್ಲಿ ಶಾಂತಿ, ಮಾನವೀಯತೆ, ನ್ಯಾಯ, ಅಭಿವೃದ್ಧಿ ಮತ್ತು ಯಶಸ್ವಿ ಪಡೆಯಬಹುದೆಂದು ಕುರ್ ಆನ್ ಹೇಳುತ್ತದೆ.
ಕುರ್ ಆನ್ ನೀಡುವ ಕಲ್ಪನೆಯಂತೆ ನಮಾಝ್ ಮತ್ತು ಉಪವಾಸಗಳು ಕೇವಲ ಆರಾಧನೆ ಮಾತ್ರವಲ್ಲ, ವಿಶ್ವಾಸವಿಡುವವರಿಗೆ ತನ್ನ ಒಡೆಯನ ಸಾನಿಧ್ಯ, ಆ ಮೂಲಕ ದೇವನಿಷ್ಠೆ ಗಳಿಸಲಿಕ್ಕಾಗಿ ಕಡ್ಡಾಯ ಕಾರ್ಯಗಳಾಗಿವೆ. ದೈನಂದಿನ ಎಲ್ಲಾ ವ್ಯವಹಾರಗಳೂ ಸತ್ಯಸಂದವಾಬೇಕೆನ್ನುವುದೇ ಇದರ ಉದ್ದೇಶ; ಅದು ಕುರ್ ಆನ್ ಮಾರ್ಗದರ್ಶನದಂತೆ ನಡೆಯಬೇಕು. ಅದಕ್ಕಾಗಿ ದೇವನನ್ನು ಮರೆಯದಂತೆ ದಿನದಲ್ಲಿ 5 ಹೊತ್ತು ನಮಾಝನ್ನು ಕಡ್ಡಾಯಗೊಳಿಸಲಾಗಿದೆ.
ನಮಾಝಿನ ಹೊತ್ತಾದಾಗ ಮಸ್ಜಿದ್ ಗಳಿಂದ ಅಝಾನ್ ಕರೆಯನ್ನು ಸಾಮಾನ್ಯವಾಗಿ ಎಲ್ಲರೂ ಕೇಳುತ್ತಿರುತ್ತೇವೆ. ಅದರಲ್ಲಿ ಪ್ರಥಮವಾಗಿ ಅಖಂಡ ಭೂಮಂಡಲದ ಒಡೆಯನೇ ಅತಿ ದೊಡ್ಡವನೆಂದು ನೆನಪಿಸಲಾಗುತ್ತದೆ ಮತ್ತು ಆ ಏಕ ದೇವನಲ್ಲದೆ ಬೇರಾರೂ ಆರಾಧನೆಗೆ ಅರ್ಹರಿಲ್ಲ ಹಾಗೂ ಮುಹಮ್ಮದ್ ದೇವನ ಪೈಗಂಬರರೆಂದು ಸಾಕ್ಷ್ಯ ವಹಿಸುತ್ತೇನೆಯೆನ್ನಲಾಗುತ್ತದೆ. ಆ ಮೇಲೆ ನಮಾಝ್ ನೆಡೆಗೆ ಬನ್ನಿರಿ, ಯಶಸ್ವಿನೆಡೆಗೆ ಬನ್ನಿರಿ ಎಂದು ಕರೆಯಲಾಗುತ್ತದೆ.
ಜಗದೊಡೆಯನ ಮುಂದೆ ಕೈಕಟ್ಟಿ ವಿನೀತರಾಗಿ ನಿಲ್ಲುವಾಗ ಪರಿಶುದ್ಧನಾಗಬೇಕು, ಆದುದರಿಂದ ಕೈ ಬಾಯಿ, ಮುಖ, ಪಾದಗಳಂತಹ ಅಂಗಗಳನ್ನು ಶುದ್ಧ ನೀರಿನಿಂದ ಶುದ್ಧಗೊಳಿಸುವುದಕ್ಕೆ ಉಝು ಎನ್ನಲಾಗುತ್ತದೆ. ಇದು ಪಾಲಕ ಪ್ರಭುವನ್ನು ಸ್ಮರಿಸುವಾಗ, ನೇರ ಮಾರ್ಗ ತೋರಿಸೆಂದು ಬೇಡುವಾಗ ಮತ್ತು ಕುರ್ ಆನನ್ನು ಶೃದ್ಧೆಯಿಂದ ಪಠಿಸಿ ಅರಿಯಲೂ ಸಾಧ್ಯವಾಗುವಂತೆ ಒಂದು ಮಾನಸಿಕ ಸಿದ್ಧತೆಯೂ ಆಗಿದೆ. ನಮಾಝನ್ನು ಪೂರ್ಣ ಏಕಾಗ್ರತೆ ಯಿಂದ ನಿರ್ವಹಿಸಲಿಕ್ಕೂ ಸಹಕಾರಿಯಾಗವ ವುಝುವಿನ ಇತರ ಅಪಾರವಾದ ವೈಜ್ಞಾನಿಕ ಪ್ರಯೋಜನಗಳನ್ನೂ ವಿವರಿಸಲು ಇಲ್ಲಿ ಅವಕಾಶವಿಲ್ಲ.
ನಮಾಝಿಗಾಗಿ ಶಿಸ್ತುಬದ್ಧವಾಗಿ, ಗಂಭೀರವಾಗಿ ಮತ್ತು ಪಂಕ್ತಿಬದ್ಧವಾಗಿ ನಿಲ್ಲುವಾಗ, ಅಲ್ಲಾಹು ಅಕ್ಬರ್(ದೇವನೇ ಅತಿದೊಡ್ಡವನು) ಎಂದು ಕೈಗಳನ್ನು ಎರಡೂ ಕಿವಿಗಳವರೆಗೆ ಎತ್ತಿ ಎದೆ ಮೇಲೆ ಕಟ್ಟಲಾಗುತ್ತದೆ. ನಮಾಝಿನ ಪ್ರತಿ ಭಂಗಿಯ ಉಚ್ಛಾರದ ನಂತರ ಬಾಗುವುದಕ್ಕೂ ಸಾಷ್ಟಾಂಗವೆರಗುವುದಕ್ಕೂ ಕುಳಿತುಕೊಳ್ಳುವ ಪ್ರತಿಯೊಂದು ಭಂಗಿಗಾಗಿ ಇಮಾಮ್(ನಾಯಕ) ಅಲ್ಲಾಹು ಅಕ್ಬರ್ ಹೇಳುವುದರ ಮೂಲಕವೇ ಆಜ್ಞೆ ನೀಡುತ್ತಾರೆ.
ಕುರ್ ಆನ್ ಮತ್ತು ನಮಾಝ್ ನ ಸಂಬಂಧ ಅವಿಭಾಜ್ಯ ಮತ್ತು ಅತಿ ಗಾಢವಾದುದಾಗಿದೆ. ಎರಡೂ ದಾಸನ ಸಂಬಂಧ ಸೃಷ್ಟಿಕರ್ತನೊಂದಿಗೆ ವೃದ್ದಿಸುವ ಕೆಲಸವನ್ನು ಮಾಡುತ್ತವೆ. ಕುರ್ ಆನ್ ಓದದೆ ನಮಾಝ್ ಸಿಂಧುವೇ ಇಲ್ಲ. ದೇವನೊಂದಿಗಿನ ನಿಕಟತೆ ಹೆಚ್ಚಿದಷ್ಟು ಮನುಷ್ಯನ ಜೀವನ ಹೆಚ್ಚು ಪರಿಶುದ್ಧ ಮತ್ತು ಸಮಾಜಕ್ಕೆ ಉಪಯುಕ್ತನಾಗಿ ಅಭವೃದ್ಧಿಗೊಳ್ಳುತ್ತಾನೆ, ಆದ್ದರಿಂದ ಹೆಚ್ಚು ಹೆಚ್ಚು ಪ್ರಾರ್ಥನೆ ಸಲ್ಲಿಸಲು ಪ್ರೇರೇಪಿಸಲಾಗಿದೆ.
ಕೈ ಕಟ್ಟಿ ನಿಂತು ಪ್ರಥಮವಾಗಿ ನಮಾಝಿನಲ್ಲಿ ಕುರ್ ಆನಿನ ಪ್ರಥಮ ಸೂಕ್ತವನ್ನೇ ಪಠಿಸಲಾಗುತ್ತದೆ, ಅದು; ಪರಮ ದಯಾಮಯನೂ ಕರುಣಾಳುವೂ ಆದ ಅಲ್ಲಾಹನ ನಾಮದಿಂದ. ಸರ್ವಸ್ತುತಿ ಕೃತಜ್ಞತೆಗಳೂ ಸಕಲ ವಿಶ್ವದ ಒಡೆಯನಿಗೇ. ನಿರ್ಣಾಯಕ ದಿನದ ಅಧಿಪತಿ, ನಿನಗೆ ಮಾತ್ರ ಆರಾಧಿಸುತ್ತೇವೆ, ನಿನ್ನೋರ್ವನಿಂದಲೇ ಸಹಾಯ ಬೇಡುತ್ತೇವೆ. ನೇರ ಮಾರ್ಗ ತೋರು ಎಂದು ಒಡೆಯನ ಮುಂದೆ ನಿಂತು ಬೇಡಿದಾಗ ಪೂರ್ಣ ಕುರ್ ಆನನ್ನು ಸೃಷ್ಟಿಕರ್ತನು ನೀಡುವುದಾಗಿದೆ ಎನ್ನುತ್ತಾರೆ ಎಲ್ಲಾ ಕುರ್ ಆನ್ ವ್ಯಾಖ್ಯಾನಕಾರರು. ನಮಾಝ್ ನಲ್ಲಿ ನಿಂತಲ್ಲಿಂದಲೇ ಆ ಒಡೆಯ ಅಧಿಪತಿಗೆ ಹಾಗೂ ಆತ ನೀಡುವ ಕುರ್ ಆನ್ ನ ಪೂರ್ಣ ಶಿಕ್ಷಣಗಳಿಗೇ ಸಾಷ್ಟಾಂಗವೆರಗುವುದಾಗಿದೆ ಸಜ್ದಃ.
ಸೃಷ್ಟಿಕರ್ತನೊಂದಿಗಿನ ನೇರ ಸಂಪರ್ಕ ಮನುಷ್ಯನ ಮಟ್ಟಿಗೆ ಮಹಾ ಭಾಗ್ಯವೇ ಸರಿ. ತನ್ನನ್ನು ಸಮರ್ಪಿಸುವುದು ಮತ್ತು ಯಾವುದೇ ಆಜ್ಞೆಯ ಪಾಲನೆಗೆ ಸಿದ್ಧವೆಂದು ಅಭಿವ್ಯಕ್ತಿಸುವುದು. ಆ ಏಕ ಪರಮಾತ್ಮನೇ ನಮಗೆ ಅಸ್ತಿತ್ವ ನೀಡಿರುತ್ತಾನೆ ಮತ್ತು ನಮ್ಮ ಜೀವನದ ಯಶಸ್ವಿ ಆತನಿಂದಲೇ ಸಾಧ್ಯವೆಂಬ ಸಂದೇಶವೂ ಇದರಲ್ಲಿದೆ.
ಕುರ್ ಆನ್ ನೀಡುವ ಮಾನವೀಯ ಜೀವನ ಪದ್ದತಿಯನ್ನು ಸಮಾಜದಲ್ಲಿ ಸ್ಥಾಪಿಸಲು ಶ್ರಮಿಸುವಾಗ ಬರುವ ಸಂಕಷ್ಟಗಳನ್ನು ಎದುರಿಸಲು ಐಚ್ಛಿಕ ನಮಾಝ್ ಗಳು ಸಹಾಯ ಮಾಡುವುದೆಂದು ಕುರ್ ಆನ್ ಹೇಳುತ್ತದೆ. ನಾವು ನಮಾಝ್ ಉಪವಾಸ ಎಷ್ಟು ಆಚರಿಸುತ್ತೇವೆಯೆಂಬುವುದು ಸಾಧನೆಯಲ್ಲ; ಅವುಗಳಿಂದ ಜೀವನದಲ್ಲಿ ಆಗುವ ಪರಿವರ್ತನೆಯಿಂದ, ವ್ಯಕ್ತಿತ್ವದ ನಿರ್ಮಾಣದಿಂದ ಸಮಾಜ ಜೀವನದಲ್ಲಿ ಎಷ್ಟು ಸತ್ಯಸಂಧ ಮತ್ತು ಸಮಾಜ ಮುಖೀಯಾಗಿದ್ದಾನೆಯೆಂಬುದೇ ಮುಖ್ಯ; ಇದುವೇ ಆರಾಧನೆ/ ಉಪಾಸನೆಯಾಗಿದೆ. ಸಮಾಜದ ನಿರ್ಮಾಣ ಮಾನವನ ಕರ್ತವ್ಯವಾಗಿದೆ. ಅದು ಪರಿಣಾಮಕಾರಿಯಾಗಿ ನಡೆಯಲ್ಲಿಕ್ಕೇ ಆಗಾಗ ದೇವನನ್ನು ಸ್ಮರಿಸುವುದಾಗಿದೆ.
ಯಾವುದೇ ಕಾರ್ಯವು ಪ್ರಭಾವಪೂರ್ಣವೂ, ಹೆಚ್ಚು ಫಲಪ್ರದವೂ ಆಗಬೇಕಾದರೆ ಅದು ಸಾಮೂಹಿಕವಾಗಿ ಆಗಬೇಕೆಂದು ಇಸ್ಲಾಮ್ ಕಲಿಸುತ್ತದೆ. ಸಮಾಜದಲ್ಲಿ ಇರುವ ಇತರರ ಭಾಗಿತ್ವದಿಂದ ಸಮಗ್ರತೆ ಸಾಧ್ಯ ಸಾಮೂಹಿಕ ಕಾರ್ಯಗಳಿಗೆ ಇಸ್ಲಾಮ್ ಅತಿ ಮಹತ್ವ ಕೊಡುವುದನ್ನು ಗಮನಿಸಬಹುದು. ಎರಡು ವ್ಯಕ್ತಿಗಳೂ ಯಾವುದೇ ಕೆಲಸ ಕೈಗೊಳ್ಳುವುದಾದರೂ ಒಬ್ಬನನ್ನು ನಾಯಕನನ್ನಾಗಿ ಮಾಡಿರೆಂದು ಆಜ್ಞಾಪಿಸುತ್ತದೆ.
ಯುದ್ಧ ಭೂಮಿಯಲ್ಲೂ ಸಾಮೂಹಿಕ ನಮಾಝ್ ಮತ್ತು ಅದು ಹೇಗಿರಬೇಕೆಂದು ಕುರ್ ಆನ್ ನಲ್ಲೇ ತಿಳಿಸಲಾಗಿದೆ. ಯಾವುದೇ ಉದ್ದೇಶ ಸಾಧನೆಗೆ, ಒಗ್ಗಟ್ಟು ಮತ್ತು ನಾಯಕನ ಅನುಸರಣೆ ದೊಡ್ಡ ಶಕ್ತಿಯೆಂದು ಇಲ್ಲೇ ಕಲಿಸಲಾಗುತ್ತದೆ. ನಮಾಝಿನ ಮುಖ್ಯ ಉದ್ದೇಶವೇ ದೇವನಿಷ್ಠೆ ವೃದ್ಧಿಸಿ ಸುಭಿಕ್ಷ ಸಮಾಜ ನಿರ್ಮಾಣ ಆಗಿದೆ.
ಮಸೀದಿಯ ಕಲ್ಪನೆಯೂ ಮೂಲವಾಗಿ ಸಾಮೂಹಿಕ ನಮಾಝ್ ನದ್ದೇ ಆಗಿರುತ್ತದೆ. ಮಸ್ಜಿದ್ ಶಬ್ದದ ಅರ್ಥವೂ ಸಜ್ದ ( ಸಾಷ್ಟಾಂಗ ಎರಗುವುದು) ಮಾಡುವ ಸ್ಥಳ. ಮಸ್ಜಿದ್ ಎಂಬ ಶಬ್ದವು ಸಜ್ದದ ಮೂಲ ಶಬ್ದದಿಂದ ಉದ್ಭವಿಸಿದೆ;
5 ಹೊತ್ತಿನ ಸಾಮೂಹಿಕ ನಮಾಝ್ ಅಲ್ಲದೆ ಶುಕ್ರವಾರದ ವಿಶೇಷ ನಮಾಝ್ ಗಾಗಿ ಅಕ್ಕಪಕ್ಕದ ಪ್ರದೇಶದ ಸರ್ವ ಮುಸ್ಲಿಮರು ಒಟ್ಟುಗೂಡುತ್ತಾರೆ. ಮಸೀದಿಯ ವಿನಹ ಶುಕ್ರವಾರದ ನಮಾಝ್ ನ ಕಲ್ಪನೆಯೇ ಇಲ್ಲ. ಖತೀಬ್ (ಪ್ರವಚನಕಾರ)ರು ವೇದಿಕೆ ಮೇಲಿಂದ ಕುರ್ ಆನ್ ನ ಶಿಕ್ಷಣವನ್ನು ಜನರಿಗೆ ತಿಳಿಸಿ, ಸಮಾಜದ ನಿರ್ಮಾಣ ಕಾರ್ಯಕ್ಕಾಗಿ ಪ್ರೇರೇಪಿಸುತ್ತಾರೆ. ಕುರ್ ಆನ್ ಪ್ರತಿಪಾದಿಸುವ ಮಾನವೀಯತೆ, ಶಾಂತಿ ಮತ್ತು ನ್ಯಾಯದ ವ್ಯವಸ್ಥೆಯ ಶಿಕ್ಷಣಗಳಿಂದ ಸಮಾಜದ ಸುಧಾರಣೆ ಮತ್ತು ರಾಷ್ಟ್ರದ ನಿರ್ಮಾಣ ವೈಯಕ್ತಿಕವಾಗಿಯೂ, ಸಾಮೂಹಿಕವಾಗಿಯೂ ಮಾನವನ ಬಾಧ್ಯತೆಯಾಗಿದೆಯೆಂಬುದರ ಕಡೆಗೆ ಗಮನ ಕೊಡಿಸಲಾಗುತ್ತದೆ.
ಮಸೀದಿಯ ಇನ್ನೊಂದು ವೈಶಿಷ್ಟ್ಯಯೆಂದರೆ ತೀರಾ ಸರಳ, ವಿಶಾಲ, ಪ್ರಶಾಂತ ಮತ್ತು ಪರಿಶುದ್ಧ ಗಂಬೀರ ಹಾಗೂ ಘನತೆಯ ಆಧ್ಯಾತ್ಮಿಕ, ದೇವನ ಸ್ಮರಣೆ ಬರುವ ವಾತಾವರಣ. ನಾಯಕನ ಹಿಂದೆ ಎಲ್ಲಾ ವಿಧದ ಜನರೂ ಪರಸ್ಪರ ಭುಜ ತಾಗಿಸಿ ಪಂಕ್ತಿ ಬದ್ಧವಾಗಿ ನಿಂತು ಯಾವುದೇ ಭೇದವಿಲ್ಲದೇ ನಾಯಕನನ್ನು ಅನುಸರಿಸಿ ನಮಾಝ್ ಮಾಡುವುದರ ಮೂಲಕ ಸಮಾನತೆಯನ್ನು ಕಲಿಸುತ್ತದೆ. ದೇವನೊಂದಿಗಿನ ನಿಕಟತೆ ಹೆಚ್ಚಿದಷ್ಟು ಮನುಷ್ಯನ ಜೀವನ ಹೆಚ್ಚು ಪರಿಶುದ್ಧ ಮತ್ತು ಸಮಾಜಕ್ಕೆ ಉಪಯುಕ್ತನಾಗಿ ಅಭವೃದ್ಧಿಗೊಳ್ಳುತ್ತಾನೆ, ಆದ್ದರಿಂದ ಹೆಚ್ಚು ಹೆಚ್ಚು ಪ್ರಾರ್ಥನೆ ಸಲ್ಲಿಸಲು ಪ್ರೇರೇಪಿಸಲಾಗಿದೆ.
ಆಧ್ಯಾತ್ಮಿಕತೆಯ ಉಥ್ಥಾನಕ್ಕೆ ವಿಶೇಷವಾಗಿರುವ ರಮಝಾನ್ ತಿಂಗಳ ಕೊನೆಯ ದಿನಗಳಲ್ಲಿ ತಂಗಿ ಗರಿಷ್ಠ ದೇವನಿಷ್ಠೆ ಪಡೆಯಲು ಏಕಾಗ್ರತೆಯ ತಪಸ್ಯೆ, ನೈಜವಾಗಿ ದೇವನಿಷ್ಠೆ ಗಾಢಗೊಳಿಸುವ ಆಧ್ಯಾತ್ಮಿಕ ಕೇಂದ್ರ, ಗಾಢಗೊಳಿಸುವ ಇದರ ಹೊರತಾಗಿ ಮಕ್ಕಳಿಗೆ ದೈನಂದಿನ ಕುರ್ ಆನ್ ಪಾಠದ ವ್ಯವಸ್ಥೆ. ಸಂದರ್ಭಾನುಸಾರ ಹಿರಿಯರಿಗಾಗಿ ಮಾನವೀಯತೆಯ ಗ್ರಂಥವಾಗಿರುವ ಕುರ್ ಆನ್ ಶಿಕ್ಷಣಗಳ ಸಭೆ ನಡೆಸಲಾಗುತ್ತದೆ. ಸಾಮೂಹಿಕವಾಗಿ ಕುರ್ ಆನ್ ಅಧ್ಯಯನ ವರ್ತುಲ, ಉಪಸ್ಥಿತರಿರುವಲ್ಲಿ ಹೆಚ್ಚಿನವರು ಭಾಗವಹಿಸುವಂತೆ ನಿಕಾಹ್ (ವಿವಾಹ ಒಪ್ಪಂದ) ಏರ್ಪಡಿಸವುದು. ಆಧ್ಯಾತ್ಮಿಕ, ದೇವನ ಸ್ಮರಣೆ ಗದ್ದಲಗಳಿಗೆ ಅವಕಾಶವಿಲ್ಲ ಅವುಗಳಲ್ಲಿ ಮಾನವನಲ್ಲಿ ದೇವನ ಇಂತಹ ಆಧ್ಯಾತ್ಮಿಕ ಕೇಂದ್ರದಿಂದ ಸಮಾಜಕ್ಕಾಗಿ ಉತ್ತಮ ಮಾನವನಾಗಿ ಅಭಿವೃದ್ದಿಗೊಳಿಸುತ್ತದೆ.
ಮಸೀದಿ ಕಂಪೌಂಡ್ ನೊಳಗೆ ವಿಶಾಲವಾದ ನಿವೇಶನವಿದ್ದಲ್ಲಿ ಮಸೀದಿಗೆ ಹೊಂದಿ ಕೆಲೆವೆಡೆ ಸೌಲಭ್ಯಾನುಸಾರ ಸಾಮುದಾಯಿಕ ಕೇಂದ್ರಗಳನ್ನು ನಿರ್ಮಿಸಿರುತ್ತಾರೆ. ಅವುಗಳಲ್ಲಿ ಗ್ರಂಥಾಲಯ, ಹೊಲಿಗೆ, ಕಸೂತಿಯಂತಹ ಉದ್ಯೋಗ ಸಂಬಂಧಿ ತರಬೇತಿ ತರಗತಿಗಳು, ರಕ್ತದಾನ ಶಿಬಿರಗಳು. ಆರೋಗ್ಯ-ಶೈಕ್ಶಣಿಕ, ಉದ್ಯೋಗ ಮಾಹಿತಿ ಶಿಬಿರಗಳು ಆರ್ಥಿಕ ದುರ್ಬಲರಿಗೆ ಸಹಾಯ, ರಮಝಾನ್ ಉಪವಾಸಗಳ ಅಂತ್ಯದೊಂದಿಗೆ, ಬಡವರೂ ಹಬ್ಬ ಮತ್ತು ಎಲ್ಲರೂ ಹಬ್ಬ ಆಚರಿಸಲಿಕ್ಕಾಗಿ ಫಿತ್ರ್ ಝಕಾತ್ ಎಂಬ ವಿಶೇಷ ದಾನ ಪ್ರತಿಯೋಬ್ಬ ಉಪವಾಸಿಗನ ಮೇಲೆ ಕಡ್ಡಾಯ. ಅದನ್ನು ಸಾಮೂಹಿಕವಾಗಿ ಸಂಗ್ರಹಿಸಿ ಬಡವರಿಗೆ ವಿತರಿಸಲಾಗುತ್ತದೆ. ಝಕಾತ್ ಸಾಮೂಹಿಕ, ಸಂಗ್ರಹ ಮತ್ತು ಅದರಿಂದ ನಿರುದ್ಯೋಗಿಗಳಿಗೆ ಸ್ವದ್ಯೋಗದ ವ್ಯವಸ್ಥೆ, ಕೌಟಂಬಿಕ ಸಮಸ್ಯೆಗಳ ಪರಿಹಾರ ಇತ್ಯಾದಿಗಳು ಕೆಲ ಪ್ರದೇಶಗಳಲ್ಲಿ ನಿರ್ವಹಿಸಲಾಗುತ್ತಿದೆ. ವಿವಾಹ ಪೂರ್ವವೂ,ವಿವಾಹ ನಂತರದ ಕೌನ್ಸಿಲಿಂಗ್, ಕೆಲವೇ ಕಡೆಗಳಲ್ಲಿವೆ, ಇದು ವ್ಯಾಪಕಗೊಳ್ಳಬೇಕಾಗಿದೆ. ಕೆಲ ಮಸೀದಿ ಸಮಿತಿಗಳು ಸಾರ್ವಜನಿಕ ಆಸ್ಪತ್ರೆ ನಡೆಸುತ್ತವೆ ಇತರ ಧರ್ಮೀಯರೊಂದಿಗಿನ ಸೌಹಾರ್ಧ ಸಭೆಗಳನ್ನು ನಡೆಸುತ್ತದೆ.
ಮಸೀದಿ ಅತಿ ಪ್ರಧಾನವಾದ ಕೇಂದ್ರವಷ್ಟೇ ಅಲ್ಲ, ಇಸ್ಲಾಮಿನ ಲಾಂಛನವೂ ಆಗಿದೆ. ಮಸೀದಿ ಸರ್ವರೂಪದಲ್ಲಿ ಸಮುದಾಯದ ಎಲ್ಲಾ ಸಾಮೂಹಿಕ ಚಟುವಟಿಕೆಗಳ ಕೇಂದ್ರವೂ ಆಗಿರುತ್ತದೆ.
ನಿನ್ನ ಆರಾಧನೆಯನ್ನೇ ಮಾಡುತೇವೆ, ನಿನ್ನೋರ್ವನಿಂದಲೇ ಸಹಾಯ ಯಾಚಿಸುತ್ತೇವೆ. ಸನ್ಮಾರ್ಗವನ್ನು ತೋರಿಸು – ಕುರ್ ಆನ್.
ಪ್ರಜಾಪ್ರಭುತ್ವವನ್ನು ಬೋಧಿಸಿ ಆಚರಣೆಗೆ ತಂದ ಪ್ರಪ್ರಥಮ ಧರ್ಮ ಇಸ್ಲಾಮ್. ಮಸೀದಿಯಿಂದ ಪ್ರಾರ್ಥನೆಗೆ ಕರೆದಾಗ ಭಕ್ತರೆಲ್ಲರೂ ಸಾಲುಸಾಲಾಗಿ ರೈತ-ರಾಜನೆಂಬ ಭೇದವಿಲ್ಲದೆ ಭುಜಕ್ಕೆ ಭುಜ ತಾಗಿಸಿ ನಿಂತು, ದೇವನೊಬ್ಬನೇ ದೊಡ್ಡವನು ಎನ್ನುವಾಗ ಇಸ್ಲಾಮಿನ ಪ್ರಜಾಪ್ರಭುತ್ವ ದಿನಕ್ಕೆ 5 ಬಾರಿ ಗೋಚರಿಸುತ್ತದೆ. ಮನುಷ್ಯನು ಜನ್ಮತಃ ಸಹೋದರನೆಂದು ಪರಿಗಣಿಸುವ ಇಸ್ಲಾಮಿನ ಈ ಅವಿಭಾಜತೆಯ ಐಕ್ಯತೆಯು ಬಾರಿಬಾರಿಗೂ ನನ್ನನ್ನು ದಿಗ್ಭ್ರಮೆಗೊಳಿಸಿದೆ. –ಸರೋಜಿನಿ ನಾಯ್ಡು












