ಕೇಜ್ರಿವಾಲ್ ಪ್ರಕರಣ ಬಿಜೆಪಿಗೆ ತಿರುಗುಬಾಣವಾದೀತೆ?

0
433

ಸನ್ಮಾರ್ಗ ವಾರ್ತೆ

✍️ಅರಫಾ ಮಂಚಿ

ಕೇಜ್ರಿವಾಲ್ ಬಂಧನವಾಗಿದೆ. ಇಲೆಕ್ಟ್ರಾಲ್ ಬಾಂಡ್ ವಿವಾದದಲ್ಲಿ ಅಲ್ಫ ನ್ಯೂಮರಿಕ್ ನಂಬರ್ ಮತ್ತು ಸೀರಿಯಲ್ ನಂಬರ್ ಸಹಿತ ಎಲ್ಲ ವಿವರಗಳನ್ನು ಸ್ಟೇಟ್‌ಬ್ಯಾಂಕ್ ಬಹಿರಂಗಪಡಿಸಿದ ದಿನದಂದೇ ಕೇಜ್ರಿವಾಲ್‌ರನ್ನು ಇಡಿ ಬಂಧಿಸಿದೆ. ಏನಿದು ಕತೆ. ಲೋಕಸಭೆಯಲ್ಲಿ 400 ಸೀಟು ಗೆಲ್ಲುತ್ತೇವೆ ಎನ್ನುವ ಮೋದಿ, ಅಮಿತ್ ಶಾ ನಡ್ಡಾ ಇಲೆಕ್ಟ್ರಾಲ್ ಬಾಂಡ್ ಬಹಿರಂಗವಾಗುವುದಕ್ಕೆ ಹೆದರುತ್ತಿದ್ದಾರಾ? ಲೋಕಸಭಾ ತನ್ನ ಇಂಥ ಅಕ್ರಮಗಳು ಹೆಚ್ಚು ಪ್ರಚಾರವಾಗದಂತೆ ತಡೆಯುವುದಕ್ಕಾಗಿ ಕೇಜ್ರಿವಾಲ್‌ರನ್ನು ಇಡಿ ಬಂಧಿಸುವಂತೆ ನೋಡಿಕೊಂಡಿದೆಯಾ?

ಮೋದಿ ಸರಕಾರವನ್ನು ಉದ್ಯಮಿ ಗಳು ನಿಯಂತ್ರಿಸುತ್ತಾರೆ ಎಂದು ರಾಹುಲ್ ಗಾಂಧಿ ಬಹಿರಂಗವಾಗಿ ಹೇಳಿದ್ದಾರೆ. ಇನ್ನೊಂದು ಕಡೆ ಇವಿಎಂನಿಂದಾಗಿ ಮೋದಿ ಸರಕಾರ ಬರುತ್ತಿದೆ ಎಂದು ಘೋಷಿಸಿದ್ದಾರೆ. ರಾಹುಲ್‌ರಿಗೆ ಜನಾಕರ್ಷಣೆ ಇದೆ. ಅದು ವೋಟು ಆದರೆ ಎಂಬ ಹೆದರಿಕೆ ಬಿಜೆಪಿಯದ್ದಾಗಿರಬಹುದು. ಜೊತೆಜೊತೆಗೇ ಇಲೆಕ್ಟ್ರಾಲ್ ಬಾಂಡ್ ಬಹಿರಂಗೊಂಡ ಮೇಲೆ ಅದನ್ನು ರಾಹುಲ್ ವಿಶ್ಲೇಷಿಸಿದ್ದು ಬಿಜೆಪಿಯ ಹಫ್ತಾ ವಸೂಲಿ ಎಂಬುದಾಗಿ. ಹೀಗೆ ಬಿಜೆಪಿಗೆ 2024 ಚುನಾವಣೆ ನೆಗೆಟಿವಿಟಿ ಹೊತ್ತು ತಂದಿದೆ. ರೈತರಂತೂ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಮಾಡಿ ಎಂದು ಪ್ರತಿಭಟಿಸುತ್ತಿದ್ದಾರೆ. ಇನ್ನೊಂದು ಕಡೆ ಚುನಾವಣಾ ಆಯೋಗಕ್ಕೂ ಇವಿಎಂಗೂ ಹೋರಾಟಗಾರರು ಸವಾಲು ಹಾಕುತ್ತಿದ್ದಾರೆ. ಇವೆಲ್ಲ ಬಿಜೆಪಿ ಚಡಪಡಿಸುವ ಅಂಶಗಳು.

ಹೀಗೆ ಹೇಳುವುದಾದರೆ ಕೇಜ್ರಿವಾಲ್ ಬಂಧನಕ್ಕೆ ಕಾರಣವಾದದ್ದು 100 ಕೋಟಿ ರೂಪಾಯಿ ಹಗರಣವಾಗಿದೆ. ಪಾರ್ಟಿ ಫಂಡ್ ಪಡೆದು ಕಾಂಟ್ರಾಕ್ಟ್ ದಾರರಿಗೆ ಗುತ್ತೆ ಸಿಗುವಂತೆ ಮದ್ಯ ನೀತಿ ರೂಪಿಸಲಾಗಿದೆ ಮತ್ತು ಈ ಹಣವನ್ನು ಗೋವಾ ಚುನಾವಣೆಯಲ್ಲಿ ಎಎಪಿ ಖರ್ಚು ಮಾಡಿದೆ ಎಂದು ಇಡಿ ಹೇಳುತ್ತಿದೆ.

ಆದರೆ ಬಿಜೆಪಿ ಇಲೆಕ್ಟ್ರಾಲ್ ಬಾಂಡಿನಲ್ಲಿ ಗುಟ್ಟಾಗಿ 6000 ಕೋಟಿಗೂ ಹೆಚ್ಚು ಹಣ ಪಡೆದಿದೆ. ಈ ಕತೆ ಏನನ್ನು ಹೇಳುತ್ತಿದೆ. ಹೌದು, ಇದರಲ್ಲಿ ಇಡಿ ಬೆಂಬತ್ತುತ್ತಿದ್ದ ಕಂಪೆನಿಗಳು ಬಿಜೆಪಿಗೆ ಗುಟ್ಟಾಗಿ ದೇಣಿಗೆ ಕೊಟ್ಟು ಪಾರಾಗುತ್ತಿತ್ತು. ಕೇಜ್ರಿವಾಲ್ ಪಾರ್ಟಿಗೆ ನೂರು ಕೋಟಿ ಕೊಟ್ಟ ಅರೋಪ ಚುನಾವಣಾ ಖರ್ಚಿಗೆ ಸಂಬಂಧಿಸಿದ್ದು. ಇಲೆಕ್ಟ್ರಾಲ್ ಬಾಂಡ್ ಮೂಲಕ ಬಿಜೆಪಿ ಪಡೆದ ಹಣ ಇಡಿ ಬೆನ್ನಟ್ಟುತ್ತಿದ್ದ ಆರ್ಥಿಕ ಅಪರಾಧಕ್ಕೆ ಸಂಬಂಧಿಸಿದ್ದು. ಇದು ಒಟ್ಟು ನಮ್ಮ ನ್ಯಾಯ ವ್ಯವಸ್ಥೆಗೆ ಸವಾಲಾಗುವಂತಹದ್ದು. ಇದೀಗ ಬಿಜೆಪಿ ತುಂಬ ಹೆದರಿಕೊಂಡಂತಿದೆ. ವಿಪಕ್ಷಗಳು ಇಡಿ ಸಿಬಿಐ ಐಟಿ ಜೈಲುಗಳಿಗೆ ಹೆದರುತ್ತಿಲ್ಲ. ಬಿಜೆಪಿ ಜನರಿಗೆ ಹೆದರುತ್ತಿದೆ. ಅವರ ಮಾನ ಮರ್ಯಾದೆ ಹರಾಜಿಗಿಡುವ ಪೇಚಿಗೆ ಹೆದರುತ್ತಿದೆ. ಇವತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಕೇಜ್ರಿವಾಲ್ ಬಂಧನವನ್ನು ಈ ಕೆಟಗಿರಿಗಿಟ್ಟು ಚರ್ಚಿಸಲಾಗುತ್ತಿದೆ.

ಅತ್ತ ರಿಪೋರ್ಸ್ ಕಲೆಕ್ಟಿವ್ ವರದಿ ಪ್ರಕಾರ ಕೆವೆಂರ‍್ಸ್ ಗ್ರೂಪ್ ಬಿಜೆಪಿಗೆ 320 ಕೋಟಿ ರೂಪಾಯಿ ನೀಡಿದೆ. ಇಡಿ ಈ ಕಂಪೆನಿಯನ್ನು ಬೆನ್ನು ಹತ್ತುತ್ತಿದ್ದಾಗ ದೇಣಿಗೆ ಕೊಟ್ಟು ಪಾರಾದ ಕತೆ ಇದು. ಇನ್ನು ಅರಬಿಂದೋ ಫಾರ್ಮದ ಬಿನಾಕ ಶರತ್‌ಚಂದ್ರರನ್ನು 2022 ಬಂಧಿಸಲಾಗುತ್ತದೆ. ಐದು ದಿನ ನಂತರ ಅರಬಿಂದೋ ಫಾರ್ಮ ಬಿಜೆಪಿಗೆ ಇಲೆಕ್ಟಾçಲ್ ಬಾಂಡ್ ಮೂಲಕ 5 ಕೋಟಿ ಕೊಟ್ಟಿತು. ಬಳಿಕ ಇಡಿ ಶರತ್‌ಚಂದ್ರರನ್ನು ಸರಕಾರಿ ಸಾಕ್ಷಿ ಮಾಡಿತು. ನಂತರ ಇದೇ ಕಂಪೆನಿ ಇನ್ನೊಂದು ಕಂಪೆನಿಯೊಂದಿಗೆ ಸೇರಿ 35 ಕೋಟಿ ದೇಣಿಗೆ ಕೊಟ್ಟಿದೆ. ಆ ಬಳಿಕ ಇಡಿ ಬೆನ್ನು ಹತ್ತುವುದು ನಿಂತಿದೆ. ಕೇಜ್ರಿವಾಲ್‌ರನ್ನು ಜೈಲಿಗಟ್ಟಿದ ಇಡಿ ಇಲ್ಲೇಕೆ ಸುಮ್ಮನಾಗಿದೆ? ಈ ಮೊದಲು ಸಂಜಯ್ ಸಿಂಗ್, ಮನೀಷ್ ಸಿಸೋಡಿಯ, ಸತ್ಯೇಂದ್ರ ಜೈನ್‌ರನ್ನು ಇಡಿ ಬಂಧಿಸಿ ಜೈಲು ಸಲಾಕೆಯೊಳಗೆ ದೂಡಿದೆ. ಹಾಗಿದ್ದರೆ ಇಲೆಕ್ಟ್ರಾಲ್ ಬಾಂಡಿಗೆ ಬಿಜೆಪಿಯ ಯಾರ‍್ಯಾರನ್ನು ಜೈಲಿನೊಳಗೆ ದೂಡಬೇಕು? ಇಡಿ ಉತ್ತರಿಸಬೇಕಾದ ಪ್ರಶ್ನೆ ಇದು.

ಇನ್ನೊಂದು ಉದಾಹರಣೆ ಎತ್ತಿಕೊಳ್ಳಿ.
ಹೆಚ್ಚು ಕೋಲಾಹಲ ಸೃಷ್ಟಿಯಾಗಿದ್ದ ಗುಜರಾತಿನ ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಹತ್ಯೆ ಪ್ರಕರಣದಲ್ಲಿ ಖುಲಾಸೆಯಾದ ಪ್ರಕರಣದ ಆರೋಪಿಯ ಮಾಲಕತ್ವದ ಕಂಪೆನಿ ಇಲೆಕ್ಟ್ರಾಲ್ ಬಾಂಡ್ ಮೂಲಕ 20 ಕೋಟಿ ರೂಪಾಯಿ ದೇಣಿಗೆ ನೀಡಿದೆ. ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಆರೋಪಿಯಾದ ನಂತರ ವಿಮಲ್ ಪಟ್ನಾನಿಯ ಮಾಲಕತ್ವದ ವಂಡರ್ ಸಿಮೆಂಟ್ ಕಂಪೆನಿ ಇಲೆಕ್ಟ್ರಾಲ್ ಬಾಂಡ್ ಮೂಲಕ ಹಣ ಕೊಟ್ಟಿದೆ.

ವಂಡರ್ ಸಿಮೆಂಟ್ ಮತ್ತು ಸೊಹ್ರಬುದ್ದೀನ್ ಶೇಕ್ ಎನ್‌ಕೌಂಟರ್ ಪ್ರಕರಣದ ನಡುವೆ ಇರುವ ಸಂಬಂಧವನ್ನು ದ ರಿಪೋರ್ಟರ್ ಕಲೆಕ್ಟೀವ್ ಬಹಿರಂಗಕ್ಕೆ ತಂದಿದೆ. ಅಂದರೆ 2005ರಲ್ಲಿ ಸೊಹ್ರಾಬುದ್ದೀನ್ ಹತ್ಯೆಯಾಗಿದ್ದು ನಂತರ ಗುಜರಾತಿನ ಆಗಿನ ಗೃಹ ಸಚಿವ ಮತ್ತು ಈಗಿನ ದೇಶದ ಗೃಹ ಸಚಿವ ಅಮಿತ್ ಶಾ, ಹಾಗೂ ಈಗ ರಾಜಸ್ತಾನದ ಗೃಹ ಸಚಿವರಾಗಿರುವ ಗುಲಾಬ್ ಚಂದ್ ಕಟಾರಿಯ, ಹಿರಿಯ ಐಪಿಎಸ್ ಅಧಿಕಾರಿ ವಂಜಾರ, ಪಿಸಿ ಪಾಂಡೆ ಸಹಿತ 38 ಆರೋಪಿಗಳ ಮೇಲೆ ಸಿಬಿಐ ಆರಂಭದಲ್ಲಿ ಆರೋಪ ಪಟ್ಟಿ ಸೇರಿಸಿತ್ತು. ಅಮಿತ್ ಶಾ ಬಂಧನಕ್ಕೊಳಗಾದರೂ 2014ರಲ್ಲಿ ಸಿಬಿಐ ಕೋರ್ಟು ಅವರನ್ನು ಆರೋಪ ಮುಕ್ತ ಮಾಡಿತು. ವಿಮಲ್ ಪಟ್ನಾನಿ ಸಹಿತ ಉಳಿದ ಆರೋಪಿಗಳನ್ನು ವಿಚಾರಣಾ ಕೋರ್ಟು ವಿವಿಧ ಹಂತದಲ್ಲಿ ಆರೋಪ ಮುಕ್ತಗೊಳಿಸಿ ಬಿಡುಗಡೆಗೊಳಿಸಿತ್ತು.

ಹಾಗಿದ್ದರೆ ಇಲೆಕ್ಟ್ರಾಲ್ ಬಾಂಡ್ ಮೂಲಕ ಲಂಚ ನೀಡಿ ಅಪರಾಧ ಪ್ರಕರಣಗಳಿಂದಲೂ ಬಿಡುಗಡೆಗೊಳ್ಳಬಹುದು ಎಂಬ ಕತೆ ಈಗ ಬಿಚ್ಚಿ ಕೊಳ್ಳುತ್ತಿದೆ. ಕೈ ಬಾಯಿ ಬಡಿದುಕೊಂಡವರ ಬಾಯಿ ಬಚ್ಚಿಕೊಳ್ಳುತ್ತಿದೆ.

ಹೌದು, ಇಡಿ ಭಯದಿಂದಲೇ ಶಿವಸೇನೆ, ಎನ್‌ಸಿಪಿಗಳು ಹೋಳಾಗಿವೆ ಎಂದು ಮಹಾರಾಷ್ಟ್ರೀಯನ್ನರೇ ಹೇಳುತ್ತಾರೆ. ಈಗ ಕೇಜ್ರಿವಾಲ್ ಇಡಿಯಿಂದ ಬಂಧಿಸಲ್ಪಟ್ಟ ಮೊದಲ ಮುಖ್ಯಮಂತ್ರಿಯಾಗಿ ದಾಖಲೆಗೆ ಸೇರಿದ್ದಾರೆ. ಸ್ವತಂತ್ರ ಭಾರತದ 75 ವರ್ಷಗಳಲ್ಲಿ ಮುಖ್ಯ ಮಂತ್ರಿಯನ್ನು ಇಡಿ ಬಂದಿಸಿದ್ದಿಲ್ಲ. ಇದೇ ಇಡಿಗೆ ಮಣಿಯದ ಝಾರ್ಕಂಡಿನ ಮುಖ್ಯಮಂತ್ರಿ ಹೇಮಂತ್ ಸೊರೆನ್ ರಾಜ್ಯಪಾಲರನ್ನು ಭೇಟಿಯಾದರು. ರಾಜೀನಾಮೆ ಕೊಟ್ಟು ಇಡಿಯ ಜೊತೆ ಹೊರಟು ಹೋಗಿ ಗತ್ತಿನಲ್ಲಿಯೇ ಜೈಲಿನೊಳಗಿದ್ದಾರೆ.

ಸಾಮಾನ್ಯವಾಗಿ ಯಾವುದೇ ಸರಕಾರ ಇತರ ಪಕ್ಷಗಳ ರಾಜಕಾರಣಿಗಳ ಬಗ್ಗೆ ಬಿಜೆಪಿಯಷ್ಟು ಕಠೋರವಾಗಿ ವರ್ತಿಸಿದ್ದಿಲ್ಲ. ಒಮ್ಮೆ ಇವರಾದರೆ ಇನ್ನೊಮ್ಮೆ ಅವರು ಅಧಿಕಾರದಲ್ಲಿ ಕೂತಿರುತ್ತಾರೆ. ಇವೆಲ್ಲ ನಮ್ಮ ಭಾರತದಲ್ಲಂಥಲ್ಲ. ಪ್ರಜಾಪ್ರಭುತ್ವ ಇರುವಲ್ಲಿ ಸಾಮಾನ್ಯ. ಬಿಜೆಪಿ ಪ್ರತಿಪಕ್ಷಿಗಳ ಕುರಿತಂತೆ ಇಷ್ಟು ಸಂಭಾವಿತತೆಯಿಂದ ವರ್ತಿಸುವುದಿಲ್ಲ. ಅಂದರೆ ಅದು ಮುಂದಕ್ಕೆ ಭಾರತದ ಅಧಿಕಾರವನ್ನು ತಮ್ಮ ಬಳಿಯೇ ಶಾಶ್ವತವಾಗಿ ಇಟ್ಟುಕೊಳ್ಳುತ್ತದೆ ಎಂಬ ಊಹೆ ಇಲ್ಲಿಂದ ಸಿಗುತ್ತದೆ.

ಇರಲಿ,
ಹಣಕಾಸು ಅವ್ಯವಹಾರದ ಮೂಲಕ ಬಂಧಿಸಿ ರಾಜಕಾರಣಿಗಳನ್ನು ವಿಚಾರಣಾಧೀನ ಕೈದಿಗಳಾಗಿ ಜೈಲಿನೊಳಗೆ ವರ್ಷಗಟ್ಟಲೆ ಇಡಿ ಕೊಳೆಯಿಸುತ್ತಿದೆ ಎಂದು ಈಗ ಜನರೂ ಅರಿತಿದ್ದಾರೆ. ಇರಲಿ,

ಅಷ್ಟು ಹೆದರಿತಾ ಬಿಜೆಪಿ? ಅದರ ಮುಂದಿನ ಕಾರ್ಯಾಚರಣೆ ಏನು? ಈಗಾಗಲೇ ಕಾಂಗ್ರೆಸ್ ಹಣ ಇದ್ದೂ ಚುನಾವಣೆಯಲ್ಲಿ ಖರ್ಚು ಮಾಡದ ಸ್ಥಿತಿಯಲ್ಲಿದೆ. ಹೌದು, ಟ್ಯಾಕ್ಸ್ ಕೊಟ್ಟಿಲ್ಲ ಅಂತ ಐಟಿ ವಿಭಾಗ ಕಾಂಗ್ರೆಸ್ಸಿನ ಬ್ಯಾಂಕ್ ಖಾತೆಯನ್ನು ಬ್ಲಾಕ್ ಮಾಡಿಟ್ಟಿದೆ. ಚುನಾವಣೆಯ ಫಂಡ್‌ಗೆ ಟ್ಯಾಕ್ಸ್ ಅನ್ವಯ ಆಗುವುದಿಲ್ಲ. ಕಾಂಗ್ರೆಸ್ ಇದನ್ನು ಹೇಳಿದರೂ ಐಟಿ ಚುನಾವಣಾ ಮುಗಿಯದೆ ಬ್ಲಾಕ್ ತೆರವು ಮಾಡುವುದಿಲ್ಲ. ಕಾಂಗ್ರೆಸ್‌ಗೆ ಚುನಾವಣೆ ಸ್ಪರ್ಧಿಸಲು ಕಷ್ಟವಾಗಬೇಕೆಂದು ಹಣ ಬ್ಲಾಕ್ ಮಾಡಲಾಗಿದೆ. ಹೀಗಾಗಿ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಚುನಾವಣಾ ನೀತಿ ಸಂಹಿತೆ ಜಾರಿ ಆದ ಮೇಲೆ ರಾಜಕಾರಣಿಗಳ ಮೇಲೆ ಹಠಾತ್ತಾಗಿ ಕ್ರಮ ಜರಗಿಸುವಂತಿಲ್ಲ. ಆದರೆ ಚುನಾವಣಾ ಆಚಾರ ಸಂಹಿತೆ ಜಾರಿಯಾದ ಮೇಲೆ ಇಡಿ ಕೇಜ್ರಿವಾಲ್‌ರನ್ನು ಬಂಧಿಸಿದೆ. ಹೀಗಾಗಿ ಬಿಜೆಪಿಯು ತನ್ನ ಗುರಿ ಸಾಧನೆಗೆ ಯಾವ ಮಟ್ಟಕ್ಕೂ ಹೋಗಬಹುದು.

ಇನ್ನು 2ಜಿ ಸ್ಪೆಕ್ಟ್ರಮ್ ಭ್ರಷ್ಟಾಚಾರ ಪ್ರಕರಣವನ್ನು ಕೋರ್ಟು ಮುಗಿಸಿತ್ತು. ಆದರೆ ಈಗ ಸಿಬಿಐ ಮತ್ತೆ ಅದನ್ನು ಮುನ್ನೆಲೆಗೆ ತರಲು ದಿಲ್ಲಿ ಹೈಕೋರ್ಟಿನಲ್ಲಿ ಮತ್ತೆ ರೀ ಓಪೆನ್‌ಗೆ ಅರ್ಜಿ ಹಾಕಿದೆ.

ವಿಷಯ ಬದಲಿಸೋಣ:
ಯುನೈಟ್ ಕ್ರಿಸ್ಚಿಯನ್ ಫಾರಂ ವರದಿ ಪ್ರಕಾರ ಭಾರತದಲ್ಲಿ ಬಿಜೆಪಿ ಆಡಳಿತದಲ್ಲಿ ಕ್ರೈಸ್ತರ ಮೇಲಿನ ದೌರ್ಜನ್ಯದಲ್ಲಿ ಹೆಚ್ಚಳವಾಗಿದೆ. ಕಳೆದ 75 ದಿವಸಗಳಲ್ಲಿ 161 ಕೇಸುಗಳು ಕ್ರೈಸ್ತರ ವಿರುದ್ಧ ದಾಖಲಾಗಿದ್ದು ಮತಾಂತರ ವಿರುದ್ಧ ಕಾನೂನು ಉಲ್ಲಂಘಿಸಿದ್ದಾರೆ ಎಂಬುದು ಇವುಗಳಲ್ಲಿ ಪ್ರಮುಖ ಕೇಸುಗಳು ಎಂದಿದೆ ಅದು.

ಕ್ರೈಸ್ತ ಫಾರಂ ಲೆಕ್ಕ ಪ್ರಕಾರ ಉತ್ತರ ಪ್ರದೇಶದಲ್ಲಿ ಕ್ರೈಸ್ತರ ವಿರುದ್ಧ ಸರಕಾರವೇ ದೌರ್ಜನ್ಯವನ್ನು ಪ್ರಾಯೋಜಿಸುತ್ತಿದೆ. ಛತ್ತೀಸ್‌ಗಡದಲ್ಲಿ ಕುಡಿಯುವ ನೀರು ಕೂಡ ಕ್ರೈಸ್ತರಿಗೆ ನಿಷೇಧಿಸಲಾಗುತ್ತಿದೆ. ಸಾರ್ವಜನಿಕ ನಳ್ಳಿಯಿಂದ ನೀರು ತೆಗೆಯಲು ಕೂಡ ಬಿಡುವುದಿಲ್ಲ. ಕ್ರೈಸ್ತರನ್ನು ಮತ್ತೆ ಹಿಂದೂಗಳಾಗಲು ಘರ್‌ವಾಪಸಿಗೆ ಬಲವಂತ ಪಡಿಸಲಾಗುತ್ತಿದೆ. ಮಧ್ಯಪ್ರದೇಶದಲ್ಲಿ ಹದಿನಾಲ್ಕು. ಹರಿಯಾಣದಲ್ಲಿ ಹತ್ತು, ರಾಜಸ್ತಾನದಲ್ಲಿ ಎಂಟು, ಕರ್ನಾಟಕದಲ್ಲಿ ಎಂಟು ದೌರ್ಜನ್ಯ ಪ್ರಕರಣಗಳು ಕ್ರೈಸ್ತರ ಮೇಲೆ ನಡೆದಿದೆ.

ಉಡುಪಿಯ ಕಾಲೇಜಿನಲ್ಲಿ ರಹಸ್ಯ ಕೆಮರಾ ಇರಿಸಿದ್ದಕ್ಕೆ ಸಾಕ್ಷ್ಯವೇ ಇಲ್ಲ ಎಂದು ಸಿಒಡಿ ವರದಿ ನೀಡಿದೆ. ಇಲ್ಲಿ ರಹಸ್ಯ ಕ್ಯಾಮರ ಇಟ್ಟಿಲ್ಲ ಎಂದು ಕಾಲೇಜು ಸಂದರ್ಶಿಸಿದ ರಾಷ್ಟ್ರೀಯ ಮಹಿಳಾ ಆಯೋಗ ಸದಸ್ಯೆ ಖುಶ್ಬು ಸುಂದರ್ ಈ ಹಿಂದೆಯೇ ಹೇಳಿದ್ದರು.

ದೇಶದಲ್ಲಿ ಚುನಾವಣೆಯ ಹೊತ್ತಿಗೆ ಬಿಜೆಪಿ ಸರಕಾರ ಸಿಎಎ ಜಾರಿಗೆ ತಂದಿದೆ. ಆದರೆ ಮುಸ್ಲಿಮರು ಮೊದಲೇ ಬಿಜೆಪಿಯ ತಂತ್ರವನ್ನು ಅರಿತಿದ್ದರಿಂದ ಸುಮ್ಮನಿದ್ದಾರೆ. ವಿವಾದವೂ ಇಲ್ಲ ಗಲಾಟೆಯೂ ಇಲ್ಲ. ಬಿಜೆಪಿ ತನ್ನ ರಣತಂತ್ರದಲ್ಲಿ ವಿಫಲವಾದದ್ದು ಹೀಗೆ.

ಆದರೆ ಸಿಎಎ ಪ್ರಶ್ನಿಸಿ 237 ಅರ್ಜಿಗಳು, 20 ತಡೆಯಾಜ್ಞೆ ಮನವಿಗಳು ಸುಪ್ರೀಂಕೋರ್ಟಿನ ಮುಂದಿದೆ. ಉತ್ತರಿಸಲು ಕೇಂದ್ರ ಸರಕಾರಕ್ಕೆ ಚೀಫ್ ಜಸ್ಟಿಸ್ ಚಂದ್ರಚೂಡರು, ಜಸ್ಟಿಸ್ ಜೆಬಿರ್ ದವಾಲ, ಮನೋಜ್ ಮಿಶ್ರ ಪೀಠ ಮೂರು ವಾರಗಳ ಸಮಯ ಕೊಟ್ಟಿದೆ. ಸಿಎಎ ಕಾನೂನು ಜಾರಿಗೊಳಿಸಲು ಸರಕಾರ ಬಯಸಿಲ್ಲ ಎಂದು ನಾಲ್ಕುವರೆ ವರ್ಷದ ಹಿಂದೆ ಕೇಂದ್ರ ಸರ್ಕಾರ ಸುಪ್ರೀಂಕೋರ್ಟಿಗೆ ಹೇಳಿತು. ಅದೇ ಸರಕಾರ ಯಾರಿಗೂ ಗೊತ್ತಾಗದಂತೆ ರಾತ್ರೊರಾತ್ರಿ ಸಿಎಎ ಜಾರಿಗೆ ತಂದಿದೆ. ಸರಕಾರದಲ್ಲಿ ನಂಬಿಕೆ ಕಳಕೊಳ್ಳುವುದಕ್ಕೆ ಇನ್ನೇನು ಬೇಕು?

ಇನ್ನೊಂದು ಸುದ್ದಿಯನ್ನು ಚರ್ಚಿಸುವುದಾದರೆ, ಕೇಂದ್ರ ಸರಕಾರಕ್ಕೆ ಸಂಬಂಧಿಸಿದ ಸುದ್ದಿ ಸುಳ್ಳು ಎಂದು ತೀರ್ಮಾನಿಸುವ ಅಧಿಕಾರವನ್ನು ವಾರ್ತಾ ಪ್ರಸಾರ ಸಚಿವಾಲಯದ ಫ್ಯಾಕ್ಟ್ ಚೆಕ್ ಯುನಿಟ್ ಕುರಿತ ಪ್ರಕಟಣೆಗೆ ಸುಪ್ರೀಂಕೋರ್ಟು 24 ಗಂಟೆಗಳೊಳಗೆ ತಡೆಯಾಜ್ಞೆ ನೀಡಿದೆ. ಸ್ಟಾಂಡ್ ಬೈ ಕಮೆಡಿಯನ್ ಕುನಾಲ್ ಕಮ್ರ ಮತ್ತು ಎಡಿಟರ್ಸ್ ಗಿಲ್ಡ್ ಅಸೋಸಿಯೇಶನ್ ಫಾರ್ ಇಂಡಿಯನ್ ಮ್ಯಾಗಝಿನ್ ಸುಪ್ರೀಂಕೋರ್ಟಿನಲ್ಲಿ ಸಲ್ಲಿಸಿದ ಅರ್ಜಿಯಲ್ಲಿ ಈ ನಿರ್ಣಾಯಕ ಕ್ರಮ ನಡೆದಿದೆ. ಅಂದರೆ ಸರಕಾರಕ್ಕೆ ಇಷ್ಟವಿಲ್ಲದ ಸುದ್ದಿಗಳನ್ನು ನಿಷೇಧಿಸುವುದು. ಸರಕಾರದ ಈ ಫ್ಯಾಕ್ಟ್ ಚೆಕ್ ಯುನಿಟ್‌ನ ಕೆಲಸ ಯಾವುದೇ ಸುದ್ದಿಯನ್ನು ಸುಳ್ಳು ಎಂದು ಸೂಚಿಸಿ ಇಂಟರ್‌ನೆಟ್ ಫ್ಲಾಟ್‌ಫಾರ್ಮ್ ಗೆ ತಿಳಿಸುವುದು ಮತ್ತು ಆ ಫ್ಲಾಟ್ ಫಾರ್ಮ್ ಗಳಲ್ಲಿ ಆ ವಿಷಯವನ್ನು ತೆಗೆದು ಹಾಕುವುದು ಆಗಿದೆ. ಅಂದರೆ ಅಂತಹ ಸುದ್ದಿ, ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳಿಂದ ತೆಗೆದು ಹಾಕುವುದು.

ಇರಲಿ,
ವಿಷಯಕ್ಕೆ ಬರೋಣ:
ದಿಲ್ಲಿ ಮದ್ಯ ನೀತಿ ಪ್ರಕರಣದಲ್ಲಿ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ರ ಬಂಧನ ಅವರ ಸ್ವಂತ ಕರ್ಮಗಳಿಗಾಗಿದೆ ಎಂದು ಅಣ್ಣಾ ಹಝಾರೆ ಹೇಳಿದ್ದಾರೆ. ಮಹಾರಾಷ್ಟ್ರದ ಈ ವ್ಯಕ್ತಿ 2010ರಲ್ಲಿ ಭ್ರಷ್ಟಾಚಾರ ವಿರುದ್ಧ ಮತ್ತು ಲೋಕ್ ಪಾಲ್‌ಗಾಗಿ ಪ್ರತಿಭಟನೆ ನಡೆಸಿದ್ದರು. ಆದರೆ ಬಿಜೆಪಿಯ ಬ್ರಹ್ಮಾಂಡ ಭ್ರಷ್ಟಾಚಾರ ಹೊರಬಿದ್ದಾಗಲೂ ಅವರು ಕೇಜ್ರಿವಾಲ್ ವಿರುದ್ಧ ಮಾತಾಡುತ್ತಿದ್ದಾರೆ. ಆದರೆ ಬಿಜೆಪಿಯ ವಿರುದ್ಧ ಧ್ವನಿ ಎತ್ತುತ್ತಿಲ್ಲ.

ಏನೇ ಆದರೂ,
ಕೇಜ್ರಿವಾಲ್ ಬಂಧನಕ್ಕೆ ಆಮ್ ಆದ್ಮಿ ಪಾರ್ಟಿ, ಪ್ರತಿಪಕ್ಷಗಳು ಇಡೀ ದೇಶದಲ್ಲಿ ಪ್ರತಿಭಟನೆಗೆ ಕರೆ ನೀಡಿವೆ. ಕೇಜ್ರಿವಾಲ್‌ಗೆ ಪ್ರಮುಖ ರಾಜಕೀಯ ನಾಯಕರು ಬೆಂಬಲ ಸೂಚಿಸಿದ್ದಾರೆ. ಜನರ ಆಕ್ರೋಶ ಎದುರಿಸಲು ಬಿಜೆಪಿ ಸಿದ್ಧವಾಗಲಿ ಎಂದು ತಮಿಳ್ನಾಡಿನ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಮುನ್ನೆಚ್ಚರಿಕೆ ನೀಡಿದ್ದಾರೆ. ಸಂಘರ್ಷ ಭರಿತವಾದ ದಿಲ್ಲಿಯಲ್ಲಿ ಕೇಜ್ರಿವಾಲ್ ಬಂಧನ ವಿರೋಧಿಸಿ ಪ್ರತಿಭಟನೆ ಜೋರಾಗಿದೆ. ಇವೆಲ್ಲ ಸರಿ, ಇಲೆಕ್ಟ್ರಾಲ್ ಬಾಂಡಿನಲ್ಲಿ ಬಿಜೆಪಿ ಮೋಸ ಜಗಜ್ಜಾಹೀರಾಗಿದೆಯಲ್ಲ. ಇದನ್ನು ಇಡಿ ಹೇಗೆ ತನಿಖೆ ಮಾಡುತ್ತದೆ? ಒಂದು ವೇಳೆ ಈ ವಿಚಾರದಲ್ಲಿ ಇಡಿ ತನಿಖೆಯ ಗೋಜಿಗೆ ಹೋಗದೆ ಇಲ್ಲಿ ಸುಮ್ಮನಿದ್ದರೆ ಅದಕ್ಕಿಂತ ಭ್ರಷ್ಟ ಒಂದು ಸಂಸ್ಥೆ ಬೇರೆ ಇಲ್ಲ.