ಸನ್ಮಾರ್ಗ ವಾರ್ತೆ
ಪ್ರಶ್ನೆ: ನಮ್ಮ ಊರಿನಲ್ಲಿ 150 ಕುಟುಂಬಗಳು ವಾಸಿಸುತ್ತಿವೆ. ಈ ಕುಟುಂಬಗಳಿಂದ ಫಿತ್ರ್ ಝಕಾತನ್ನು ಶೇಖರಿಸಿ ಆ ಊರಿನಲ್ಲೇ ವಿತರಣೆ ಮಾಡುವುದು ವಾಡಿಕೆ. ನಮ್ಮ ಊರಿನಲ್ಲಿ 20ರಷ್ಟು ಕುಟುಂಬಗಳನ್ನು ಬಡವರು ಎಂದು ಹೇಳಬಹುದಾಗಿದೆ. ಆದರೆ ನೂರಕ್ಕಿಂತ ಹೆಚ್ಚು ಕುಟುಂಬಗಳಿಗೆ ಫಿತ್ರ್ ಝಕಾತ್ ನೀಡಲಾಗುತ್ತದೆ. ಹೀಗೆ ಫಿತ್ರ್ ಝಕಾತ್ ಪಡೆಯುವವರಿಗಿಂತ ಹೆಚ್ಚಿನ ಕಷ್ಟ ಅನುಭವಿಸುವವರು ನೆರೆಯ ಮೊಹಲ್ಲಗಳಲ್ಲೂ ಪ್ರದೇಶಗಳಲ್ಲೂ ಇದ್ದಾರೆ. ಫಿತ್ರ್ ಝಕಾತನ್ನು ಮೊಹಲ್ಲಗಳ ಹೊರಗಿರುವ ಬಡವರಿಗೆ ವಿತರಿಸಬಹುದೇ?
ಉತ್ತರ: ಫಿತ್ರ್ ಝಕಾತನ್ನು ತನ್ನ ಪ್ರದೇಶಗಳಲ್ಲಿ ಜೀವಿಸುವವರ ಮಧ್ಯೆಯೇ ವಿತರಣೆ ಮಾಡಬೇಕು. ಈ ವಿಷಯದಲ್ಲಿ ಯಾರಿಗೂ ಭಿನ್ನಾಭಿಪ್ರಾಯವಿಲ್ಲ. ಫಿತ್ರ್ ಝಕಾತ್ನ ಮುಖ್ಯ ಗುರಿಯು ಈದ್ನ ದಿನ ಅಲೆದಾಡಿ ಬೇಡುವುದನ್ನು ತಪ್ಪಿಸಿ, ಪ್ರತಿಯೋರ್ವರು ತಂತಮ್ಮ ಮನೆಯಲ್ಲಿ ಅಡುಗೆ ತಯಾರಿಸಿ ಅತಿಥಿಗಳನ್ನು ಸತ್ಕರಿಸಲು ಸಾಧ್ಯವಾಗುವ ರೀತಿಯಲ್ಲಿ ಸುಭಿಕ್ಷೆ ಉಂಟು ಮಾಡಲಿಕ್ಕಾಗಿದೆ ಎಂದು ಪ್ರವಾದಿ(ಸ) ಸ್ಪಷ್ಟಪಡಿಸಿದ್ದಾರೆ.
ಇಬ್ನು ಅಬ್ಬಾಸ್ರಿಂದ ವರದಿಯಾಗಿದೆ. ಅವರು ಹೇಳಿದರು, “ಉಪವಾಸಿಗನಿಗೆ ಅನಗತ್ಯ ವಿಚಾರಗಳಿಂದಲೂ ದುಷ್ಕರ್ಮಗಳಿಂದಲೂ ಶುದ್ಧೀಕರಣ ಹಾಗೂ ಬಡವರಿಗೆ ಆಹಾರ ಎಂಬ ನೆಲೆಯಲ್ಲೂ ಪ್ರವಾದಿ(ಸ) ಫಿತ್ರ್ ಝಕಾತನ್ನು ಕಡ್ಡಾಯಗೊಳಿಸಿದರು. ಯಾರಾದರೂ ಈದ್ ನಮಾಝ್ಗಿಂತ ಮುಂಚೆ ಅದನ್ನು ನೀಡಿದರೆ ಅದು ಸ್ವೀಕಾರಾರ್ಹ ಝಕಾತ್ತಾಗಿರುತ್ತದೆ. ಇನ್ನು ಯಾರಾದರೂ ಈದ್ ನಮಾಝ್ನ ಬಳಿಕ ನೀಡುವುದಾದರೆ ಅದು ಕೇವಲ ದಾನ ಮಾತ್ರವಾಗಿದೆ” (ಅಬೂ ದಾವೂದ್: 1609). ಅಥವಾ ಅದು ಝಕಾತ್ತುಲ್ ಫಿತ್ರ್ ಆಗಿ ಪರಿಗಣಿಸಲ್ಪಡುವುದಿಲ್ಲ ಎಂದರ್ಥ. “ಆ ದಿವಸವಾದರೂ ಬಡವರು ಅಲೆದಾಡದೆ ಸುಭಿಕ್ಷೆ ಖಾತ್ರಿ ಪಡಿಸಿಕೊಳ್ಳಿರಿ.” (ದಾರುಕುತ್ನಿ, 2157, ಬೈಹಕಿ 7990)
ನಮ್ಮ ನಾಡುಗಳಲ್ಲಿ ಹಲವು ಮೊಹಲ್ಲಗಳಲ್ಲಿ ಈದ್ನ ದಿನ ಹಸಿವಿನಿಂದಿರುವವರು ಅಥವಾ ಔತಣ ಮಾಡಲು ಸಾಧ್ಯವಿಲ್ಲದವರು, ಪ್ರಶ್ನೆಯಲ್ಲಿ ಸೂಚಿಸಿದಂತೆ ಅತ್ಯಂತ ಕಡಿಮೆ ಮಂದಿಯಷ್ಟೇ ಇರುವರು. ಅಂತಹವರೇ ಇಲ್ಲದ ಮೊಹಲ್ಲಗಳೂ ಇವೆ. ಉತ್ತರ ಭಾರತದಲ್ಲಿ ಒಂದು ಹೊತ್ತಿನ ತುತ್ತಿಗೂ ಗತಿ ಇಲ್ಲದ, ತೊಡಲು ಬಟ್ಟೆ ಇಲ್ಲದ ಸಾವಿರಾರು ಮಂದಿ ಇದ್ದಾರೆ ಎಂಬುದು ಒಂದು ವಾಸ್ತವಿಕತೆಯಾಗಿದೆ. ಇದರಲ್ಲಿ ದೊಡ್ಡ ವಿಭಾಗವು ಮುಸ್ಲಿಮರದ್ದಾಗಿದೆ. ಇಂತಹ ಕುಟುಂಬಗಳಿಗೂ ವ್ಯಕ್ತಿಗಳಿಗೂ ಝಕಾತುಲ್ ಫಿತ್ರ್ ತಲುಪಿಸುವುದು ಯಾವ ಉದ್ದೇಶಕ್ಕಾಗಿ ಅದನ್ನು ಕಡ್ಡಾಯಗೊಳಿಸಲಾಗಿದೆಯೋ ಆ ಉದ್ದೇಶ ಪೂರ್ತಿಗೊಳಿಸುವುದರ ಅತ್ಯಂತ ಉತ್ತಮ ರೂಪವಾಗಿರುತ್ತದೆ. ಇಲ್ಲಿ ಹದೀಸ್ನಲ್ಲಿ ಪ್ರವಾದಿಯವರು(ಸ) ಬಡವರು ಎಂದು ಕಲಿಸಿದ್ದಾರೆ. ಇಂತಿಂತಹ ಮೇರೆಗಳನ್ನು ನಿರ್ಣಯಿಸಲಿಲ್ಲ.
ಮಾತ್ರವಲ್ಲ, ಮುಸ್ಲಿಮ್ ಸಮು ದಾಯವು ನಮ್ಮ ಗಮನದಲ್ಲೂ ಪರಿಸರದಲ್ಲೂ ಹಸಿವಿನಿಂದಿರುವವರು ಇದ್ದಾರೆ ಎಂದು ಖಾತ್ರಿಯಾಗಿಯೂ ಅವರನ್ನು ಗಮನಿಸದೆ ಹೊಟ್ಟೆ ತುಂಬಾ ಉಣ್ಣುವ ವನು ವಿಶ್ವಾಸಿಯಲ್ಲ ಎಂದು ಕಲಿಸಲಾದ ಸಮುದಾಯವಾಗಿದೆ. (ಬುಖಾರಿ, ಅದಬುಲ್ ಮುಫ್ರದ್: 112) ಹದೀಸ್ ನಲ್ಲಿರುವ ‘ನೆರೆಯವನು’ ಎಂಬ ಪದ, ನೆರೆಮನೆಯವರ ವ್ಯಾಪ್ತಿಯನ್ನು ಸಂಕುಚಿತಗೊಳಿಸದೆ ಇರುವುದು ಚಿಂತಿಸಿದರೆ ವಿಷಯವು ವ್ಯಕ್ತವಾಗುತ್ತದೆ.
ಪರಸ್ಪರ ಸ್ನೇಹದಲ್ಲೂ ವಾತ್ಸಲ್ಯದಲ್ಲೂ ಕರುಣೆಯಲ್ಲೂ ವಿಶ್ವಾಸಿಗಳ ಉದಾಹರಣೆಯು ಒಂದು ಶರೀರದಂತಾಗಿದೆ. ಶರೀರದ ಒಂದು ಅವಯವಕ್ಕೆ ರೋಗ ತಗಲಿದರೆ ಉಳಿದ ಅವಯವಗಳು ಅದಕ್ಕಾಗಿ ಜ್ವರವನ್ನು ತಾಳಿ ನಿದ್ದೆಗೆಟ್ಟು ಕಷ್ಟ ಅನುಭವಿಸುತ್ತವಷ್ಟೇ. (ಬುಖಾರಿ 6011, ಮುಸ್ಲಿಮ್: 4685) ನಿರಾಶ್ರಿತರೂ ಸಂಕಷ್ಟ ಅನುಭವಿಸುವವರು ಇದ್ದಾರೆ ಎಂದರಿತೂ ನಿಷ್ಕ್ರಿಯವಾಗಿ ವರ್ತಿಸುವವರು ಪಾಪಿಗಳಾಗಿದ್ದಾರೆ ಮತ್ತು ಅಂತ್ಯ ದಿನದಲ್ಲೂ ಅಲ್ಲಾಹನು ಅವರನ್ನು ಪ್ರಶ್ನಿಸುವನೆಂದೂ ಇಮಾಮ್ ಅಲ್ ಜುವೈನಿ ಬರೆದಿದ್ದಾರೆ. “ವಿಶ್ವಾಸಿಗಳು ಯುದ್ಧ ಕೈದಿಗಳಾಗಿ ಬಂಧಿಸಲ್ಪಟ್ಟವರಿಗೂ ಅನ್ನ ನೀಡುವವರಾಗಿದ್ದಾರೆ” ಮತ್ತು “ಅಲ್ಲಾಹನ ಮೇಲಿನ ಪ್ರೇಮದಿಂದ ದರಿದ್ರರಿಗೂ, ಅನಾಥರಿಗೂ, ಸೆರೆಯಾಳುಗಳಿಗೂ ಊಟ ಕೊಡುತ್ತಾರೆ.” (ಅದ್ದಹ್ರ್: 8) ಮಾತ್ರವಲ್ಲ ಬಾಯಾರಿಕೆಯಿಂದ ಬಳಲಿ ಬೆಂಡಾಗಿದ್ದ ನಾಯಿಗೆ ನೀರು ಕುಡಿಸಿದ್ದಕ್ಕಾಗಿ ಓರ್ವ ಪಾಪಿ ಮಹಿಳೆಯು ಸ್ವರ್ಗಕ್ಕೆ ಹಕ್ಕುದಾರಳಾಗಿದ್ದಾಳೆ ಎಂದೂ ಪ್ರವಾದಿಯವರು(ಸ) ಕಲಿಸಿದ್ದಾರೆ. (ಮುಸ್ಲಿಮ್: 5997)
ಹೀಗಿರುವಾಗ, ಸ್ವಂತ ಆದರ್ಶ ವನ್ನು ಪಾಲಿಸುವ ಸಹೋದರ ಸಹೋದರಿಯರ ವಿಚಾರ ಪ್ರತ್ಯೇಕ ಹೇಳಬೇಕೆ?
ಸ್ವಂತ ಊರಿನಲ್ಲಿ ಝಕಾತ್ ಪಡೆಯಲು ಅರ್ಹರಾದವರಿಲ್ಲದ ಪರಿಸ್ಥಿತಿಯಲ್ಲಿ ಬೇರೆ ಊರಿನವರಿಗೆ ಝಕಾತ್ ನೀಡಬಹುದು ಎಂಬ ವಿಷಯದಲ್ಲಿ ವಿದ್ವಾಂಸರು ಒಮ್ಮತಾಭಿಪ್ರಾಯ ಹೊಂದಿದ್ದಾರೆ. ಆದರೆ ಸ್ವಂತ ಊರಿನಲ್ಲಿ ಅದಕ್ಕೆ ಅರ್ಹರಾದವರು ಇದ್ದು ಅದನ್ನು ಹೊರ ಊರಿನವರಿಗೆ ನೀಡುವುದು ಸರಿಯಲ್ಲ ಎಂದೂ ಅವರು ಅಭಿಪ್ರಾಯ ಪಟ್ಟಿದ್ದಾರೆ. (ಶರಹುಲ್ ಮಹಲ್ಲಿ: 1/3:4, ಮುಗ್ನಿ ಅಲ್ ಮುಹ್ತಾಜ್: 11/ 480, ನಿಹಾ ಯತುಲ್ ಮುಹ್ತಾಜ್: 20/21)
ಬೇರೆ ಊರಿಗೆ ಝಕಾತನ್ನು ತಲುಪಿಸಬಹುದೆಂದು ಶಾಫಿಈ ಮದ್ಹಬ್ ನಲ್ಲೇ ಒಂದು ಅಭಿಪ್ರಾಯವಿದೆ. ಈ ಅಭಿಪ್ರಾಯವು ಶಾಫಿಈ ಮದ್ಹಬ್ನ ಅಧಿಕೃತ ಗ್ರಂಥಗಳಲ್ಲೇ ಕಾಣಬಹುದಾ ಗಿದೆ. ಪವಿತ್ರ ಕುರ್ಆನ್ನಲ್ಲಿ ಝಕಾತ್ನ ಹಕ್ಕುದಾರರ ಕುರಿತು ಹೇಳಲಾದಾಗ ಫಕೀರ್, ಮಿಸ್ಕೀನ್ ಮುಂತಾದ ಸಾಮಾನ್ಯ ಶೈಲಿ ಪ್ರಯೋಗಿಸಲಾಗಿದೆಯೆಂದೂ ಅವರು ಇಂತಹ ಪ್ರದೇಶದವರಾಗಬೇಕು ಎಂದು ಸೀಮಿತಗೊಳಿಸಲಿಲ್ಲ ಎಂಬುದೂ ಅವರ ಸಮರ್ಥನೆಯಾಗಿದೆ. ಆದ್ದರಿಂದ ಮುಸ್ಲಿಮರಲ್ಲಿನ ಫಕೀರ್ಗಳೂ ಮಿಸ್ಕೀನ್ಗಳೂ ಯಾವುದೇ ಊರಿನವರಾದರೂ ಅವರಿಗೆ ತಮ್ಮ ಝಕಾತನ್ನು ವಿತರಣೆ ಮಾಡಬೇಕೆಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. (ಶರಹುಲ್ ಮಹಲ್ಲಿ: 1/3:4, ಮುಗ್ನಿ ಅಲ್ ಮುಹ್ತಾಜ್: 11/480, ನಿಹಾಯತುಲ್ ಮುಹ್ತಾಜ್: 20/21) ಝಕಾತ್ ವಸೂಲಿ ಮಾಡುವುದೂ ವಿತರಣೆ ಮಾಡುವುದೂ ಮುಸ್ಲಿಮರ ಇಮಾಮ್ (ಆಡಳಿತಾಧಿ ಕಾರಿ) ಅಥವಾ ಅವರ ಪ್ರತಿನಿಧಿಯಾದ ಕಾಝಿ ಆಗಿದ್ದರೆ ಅದನ್ನು ಯಾವ ಪ್ರದೇಶದಲ್ಲಿ ಬೇಕಾದರೂ ವಿತರಿಸಬಹುದು ಎಂಬ ವಿಷಯದಲ್ಲಿ ಎಲ್ಲರೂ ಒಮ್ಮತಾಭಿಪ್ರಾಯ ಹೊಂದಿದ್ದಾರೆ. ಆ ವಿಷಯದಲ್ಲಿ ಭಿನ್ನಾಭಿಪ್ರಾಯವಿಲ್ಲ.
ಹನಫಿ ಮದ್ಹಬ್, ಸ್ವಂತ ಊರಿನವರಿಗಿಂತ ಹೆಚ್ಚು ಅಗತ್ಯವಿರುವವರು ಹೊರ ಊರಿನವರಾಗಿದ್ದರೆ ಝಕಾತನ್ನು ಅವರ ಮಧ್ಯೆ ವಿತರಿಸುವುದರಲ್ಲಿ ಯಾವುದೇ ವಿರೋಧವಿಲ್ಲ ಎಂಬ ಧೋರಣೆಯನ್ನು ಹೊಂದಿದೆ. (ಇಬ್ನು ಆಬಿದೀನ್: 2/68,69 ಫತ್ಹುಲ್ ಕದೀರ್: 2128) (ಅಲ್ ಮೌಸೂ ಅತುಲ್ ಫಿಕ್ಹಿಯ್ಯಾ: 23/231)
ಆದ್ದರಿಂದ ಪ್ರತೀ ಊರುಗಳಲ್ಲಿ ಝಕಾತ್ತುಲ್ ಫಿತ್ರ್ ಗೆ ಅರ್ಹರಾದವರಿದ್ದರೆ ಅವರ ಪಾಲನ್ನು ಅವರಿಗೆ ನೀಡಿ ಉಳಿದದ್ದನ್ನು ಸಮೀಪ ಪ್ರದೇಶಗಳ ಹಕ್ಕುದಾರರಿಗೆ ಆಹಾರ-ಧಾನ್ಯಗಳ ರೂಪದಲ್ಲೋ, ಹಣದ ರೂಪದಲ್ಲೋ ನೀಡಬಹುದಾಗಿದೆ. ಪರಂಪರೆಯನ್ನು ತೊರೆಯಲು ಹಿಂದೇಟು ಹಾಕುವವರಿಗೆ ಈ ಅಭಿಪ್ರಾಯ ಹಿಡಿಸದಿರಬಹುದು. ಅವರ ಮೇಲೆ ಒತ್ತಡ ಹೇರಲು ಅಥವಾ ಅವರೊಂದಿಗೆ ತರ್ಕ ನಡೆಸಲು ಹೋಗಬೇಕಾಗಿಲ್ಲ. ಪವಿತ್ರ ರಮಝಾನ್ ಹಿನ್ನೆಲೆಯಲ್ಲಿ ಕುತರ್ಕಗಳಲ್ಲಿ ಭಾಗಿಯಾಗಿ ಅಮೂಲ್ಯ ಸಮಯವನ್ನು ಕಳೆಯಬಾರದು.












